ವಿಕೆಟ್ ಕಿತ್ತ ಭಾರತದ ಆಟಗಾರರ ಸಂಭ್ರಮ
– ರಾಯಿಟರ್ಸ್ ಚಿತ್ರ
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಕ್ಕು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಅಧಿಕಾರಯುತ ಜಯ ದಾಖಲಿಸಿತು. ಪಹಲ್ಗಾಮ್ ದಾಳಿ ಬಳಿಕ ಮೊದಲ ಬಾರಿ ಉಭಯ ತಂಡಗಳು ಭಾನುವಾರ ಮುಖಾಮುಖಿಯಾದವು. ಈ ಪಂದ್ಯ ಹಲವು ನಾಟಕೀಯ ಕ್ಷಣಗಳಿಗೆ ಸಾಕ್ಷಿಯಾಯಿತು.
ಟಾಸ್ ವೇಳೆ ಉಭಯ ತಂಡದ ನಾಯಕರು ಹಸ್ತಲಾಘವ ಮಾಡುವುದು ಸಂಪ್ರದಾಯ, ಆದರೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರೊಂದಿಗೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೈ ಕುಲುಕಲಿಲ್ಲ. ಜಯದ ಸಿಕ್ಸರ್ ಬಾರಿಸಿದ ಬಳಿಕ ಸೂರ್ಯಕುಮಾರ್ ಯಾದವ್, ಎದುರಾಳಿ ಆಟಗಾರರನ್ನು ತಲೆ ಎತ್ತಿಯೂ ನೋಡದೆ ಡಗೌಟ್‌ನತ್ತ ಸಾಗಿದರು. ಪಂದ್ಯದ ಬಳಿಕವೂ ಉಭಯ ತಂಡದ ಆಟಗಾರರು ಪರಸ್ಪರ ಹಸ್ತಲಾಘವ ಮಾಡಲಿಲ್ಲ.
ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ತಮ್ಮ ತಂಡದ ಆಟಗಾರರೊಂದಿಗೆ ಸಾಂಪ್ರದಾಯಿಕ ಹಸ್ತಲಾಘವಕ್ಕಾಗಿ ಸರದಿಯಲ್ಲಿ ಭಾರತದ ಡಗೌಟ್‌ನತ್ತ ಸಾಗಿದರೂ, ಭಾರತ ತಂಡದ ಆಟಗಾರರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಹಸ್ತಲಾಘವ ಮಾಡಬಾರದು ಎಂದು ಸಹಾಯಕ ಸಿಬ್ಬಂದಿಯೊಬ್ಬರ ಅಭಿಪ್ರಾಯವನ್ನು ಇಡೀ ತಂಡ ಅನುಮೋದಿಸಿತು, ಇದಕ್ಕೆ ಬಿಸಿಸಿಐಯ ಒಪ್ಪಿಗೆಯೂ ಸಿಕ್ಕಿತು.
ಹಸ್ತಲಾಘವ ನಿರಾಕರಣೆ ಆ ಕ್ಷಣದ ನಿರ್ಧಾರವಾಗಿರಲಿಲ್ಲ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
‘ಅದು ತಂಡದ ನಿರ್ಧಾರವಾಗಿತ್ತು. ನಾವು ಆಟವಾಡಲು ಇಲ್ಲಿಗೆ ಬಂದಿದ್ದೇವೆ. ನಾವು ಅವರಿಗೆ ತಕ್ಕ ಉತ್ತರ ನೀಡಿದ್ದೇವೆ. ಕೆಲವೊಂದು ವಿಷಯಗಳು ಕ್ರೀಡಾ ಸ್ಫೂರ್ತಿಗಿಂತಲೂ ಮಿಗಿಲಾದುದ್ದು. ನಾವು ನಮ್ಮ ಗೆಲುವುನ್ನು ಆಪರೇಶನ್ ಸಿಂಧೂರದಲ್ಲಿ ಭಾಗಿಯಾದ ಸೇನಾ ಪಡೆಗಳಿಗೆ ಹಾಗೂ ಪಹಲ್ಗಾಮ್ ಉಗ್ರ ದಾಳಿಯಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಕ್ಕೆ ಅರ್ಪಿಸುತ್ತೇವೆ’ ಎಂದು ಯಾದವ್ ಹೇಳಿದ್ದಾರೆ.
ಪಾಕಿಸ್ತಾನ ನಾಯಕ ಸಲ್ಮಾನ್ ಅವರು, ಪಂದ್ಯದ ಬಳಿಕ ಪ್ರಶಸ್ತಿ ವಿತರಣೆ ಸಮಾರಂಭವನ್ನು ಬಹಿಷ್ಕರಿಸಿದರು.
‘ನಾವು ಹಸ್ತಲಾಘವ ಮಾಡಬೇಕೆಂದಿದ್ದೆವು. ಆದರೆ ಎದುರಾಳಿಗಳು ಅದನ್ನು ಮಾಡಲಿಲ್ಲ. ನಮ್ಮ ಆಟದ ಬಗ್ಗೆ ನಿರಾಸೆಯಾಗಿದೆ, ಆದರೂ ನಾವು ಕೈಕುಲುಕಬೇಕೆಂದಿದ್ದೆವು. ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಸಲ್ಮಾನ್ ಬರದೇ ಇದ್ದಿದ್ದು, ಅಲ್ಲಿ ನಡೆದ ಘಟನೆಗಳ ಪರಿಣಾಮವಾಗಿತ್ತು’ ಎಂದು ಪಾಕ್ ತಂಡ ಕೋಚ್ ಮೈಕ್ ಹಸನ್ ಹೇಳಿದ್ದಾರೆ.
ಪಂದ್ಯದ ಮೊದಲು ಹಾಗೂ ನಂತರ ಇರುತ್ತಿದ್ದ ಸಂಪ್ರದಾಯಗಳನ್ನು ಪಾಲಿಸದೇ ಇರಲು ಮೊದಲೇ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.