ADVERTISEMENT

ವಿಂಡೀಸ್ ವಿರುದ್ಧ ಗೆದ್ದರಷ್ಟೇ ಭಾರತ ಸೆಮಿಫೈನಲ್‌ಗೆ; ಪಂದ್ಯ ರದ್ದಾದರೆ ಮುಂದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಫೆಬ್ರುವರಿ 2026, 5:22 IST
Last Updated 27 ಫೆಬ್ರುವರಿ 2026, 5:22 IST
<div class="paragraphs"><p>ಪಂದ್ಯದ ಬಳಿಕ ಪರಸ್ಪರ ಅಭಿನಂದಿಸಿದ&nbsp;ಭಾರತ ಹಾಗೂ ಜಿಂಬಾಬ್ವೆ ಆಟಗಾರರು</p></div>

ಪಂದ್ಯದ ಬಳಿಕ ಪರಸ್ಪರ ಅಭಿನಂದಿಸಿದ ಭಾರತ ಹಾಗೂ ಜಿಂಬಾಬ್ವೆ ಆಟಗಾರರು

   

ಕೃಪೆ: ಪಿಟಿಐ

ಭಾರತ–ಶ್ರೀಲಂಕಾ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯು ಮಹತ್ವದ ಘಟ್ಟ ತಲುಪಿದೆ.

ADVERTISEMENT

ಸೂಪರ್‌–8 ಹಂತದ ಎಂಟು ಪಂದ್ಯಗಳು ಮುಕ್ತಾಯವಾಗಿದ್ದು, ಇನ್ನು ನಾಲ್ಕಷ್ಟೇ ಬಾಕಿ ಇವೆ. ನಾಕೌಟ್‌ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಈ ಸುತ್ತಿನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌, ಕ್ರಮವಾಗಿ 'ಎ' ಮತ್ತು 'ಬಿ' ಗುಂಪಿನಿಂದ ಉಪಾಂತ್ಯಕ್ಕೇರಿವೆ.

ಉಳಿದಿರುವ ಎರಡು ಸ್ಥಾನಗಳಿಗಾಗಿ, 'ಎ' ಗುಂಪಿನಿಂದ ಭಾರತ, ವೆಸ್ಟ್‌ ಇಂಡೀಸ್‌, 'ಬಿ' ಗುಂಪಿನಿಂದ ನ್ಯೂಜಿಲೆಂಡ್, ಪಾಕಿಸ್ತಾನ ಪೈಪೋಟಿ ನಡೆಸುತ್ತಿವೆ.

ಪಂದ್ಯ ರದ್ದಾದರೆ...
ಭಾರತ ತಂಡದ ಪಾಲಿಗೆ ಗುರುವಾರ (ನಿನ್ನೆ) ಮಹತ್ವದ ದಿನ. ಸೂಪರ್‌–8 ಹಂತದಲ್ಲಿ ತಾನಾಡಿದ ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡಿದ್ದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್‌ ವಿರುದ್ಧ ದಕ್ಷಿಣ ಆಫ್ರಿಕಾ ಗೆಲ್ಲಬೇಕೆಂಬ ನಿರೀಕ್ಷೆಯಲ್ಲಿತ್ತು. ಅದರಂತೆ ಆಫ್ರಿಕಾ ಪಡೆ ಜಯ ಸಾಧಿಸಿದೆ. ಅದೇ ಉತ್ಸಾಹದೊಂದಿಗೆ, ಜಿಂಬಾಬ್ವೆ ವಿರುದ್ಧ ನಿನ್ನೆ ನಡೆದ ಸೆಣಸಾಟದಲ್ಲಿ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಉಳಿದಿರುವ ಒಂದು ಪಂದ್ಯದಲ್ಲಿ ವಿಂಡೀಸ್ ಪಡೆಯನ್ನು ಮಣಿಸಿದರೆ ನಾಕೌಟ್‌ ಪ್ರವೇಶ ಗ್ಯಾರಂಟಿ. ಹಾಗಂತ, ವಿಂಡೀಸ್‌ ಬಳಗವನ್ನು ಲಘುವಾಗಿ ಪರಿಗಣಿಸುವಂತಿಲ್ಲ.

ಒಂದು ವೇಳೆ ವಿಂಡೀಸ್ ವಿರುದ್ಧದ ಪಂದ್ಯ ರದ್ದಾದರೆ, ಭಾರತಕ್ಕೆ ನಾಕೌಟ್ ಪ್ರವೇಶದ ಬಾಗಿಲು ಬಂದ್‌ ಆಗಲಿದೆ.

ಈಗಾಗಲೇ ತಲಾ ಒಂದು ಜಯ ಮತ್ತು ಸೋಲು ಕಂಡಿರುವ ಇತ್ತಂಡಗಳಿಗೆ ಒಂದೊಂದು ಅಂಕ ಸಿಗಲಿದೆ. ಆದರೂ, ಭಾರತಕ್ಕೇನೂ ಪ್ರಯೋಜನವಾಗುವುದಿಲ್ಲ.

ಸೂರ್ಯಕುಮಾರ್ ಯಾದವ್‌ ನಾಯಕತ್ವದ ಟೀಂ ಇಂಡಿಯಾ, ಆಫ್ರಿಕಾ ಎದುರು ಭಾರಿ ಅಂತರದಿಂದ ಸೋಲು ಅನುಭವಿಸಿ ರನ್‌ ರೇಟ್‌ ಹದಗೆಡಿಸಿಕೊಂಡಿತ್ತು. ಅದನ್ನು ಜಿಂಬಾಬ್ವೆ ವಿರುದ್ಧದ ಜಯದೊಂದಿಗೆ ತುಸು ಸುಧಾರಿಸಿಕೊಂಡಿದೆಯಾದರೂ, ಜಿಂಬಾಬ್ವೆ ಎದುರು ದೊಡ್ಡ ಅಂತರದ ಜಯ ಸಾಧಿಸಿರುವ ವಿಂಡೀಸ್‌ಗಿಂತೇನೂ ಉತ್ತಮವಾಗಿಲ್ಲ.

ಹೀಗಾಗಿ, ಉಪಾಂತ್ಯಕ್ಕೇರುವ ಅವಕಾಶ ವಿಂಡೀಸ್‌ಗೆ ಸಿಗಲಿದೆ.

ಪಾಕ್ ಭವಿಷ್ಯ ಇಂಗ್ಲೆಂಡ್ ಕೈಯಲ್ಲಿ
ಸೂಪರ್‌–8 ಸುತ್ತಿನಲ್ಲಿ ಎರಡು ಪಂದ್ಯಗಳಲ್ಲಿ ಆಡಿರುವ ಪಾಕಿಸ್ತಾನ, ಒಂದನ್ನೂ ಗೆದ್ದಿಲ್ಲ. ನ್ಯೂಜಿಲೆಂಡ್‌ ವಿರುದ್ಧದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿ, ಪಾಯಿಂಟ್‌ ಹಂಚಿಕೊಂಡಿತ್ತು. ಎರಡನೆಯದರಲ್ಲಿ ಇಂಗ್ಲೆಂಡ್‌ ವಿರುದ್ಧ 2 ವಿಕೆಟ್‌ಗಳ ಸೋಲು ಅನುಭವಿಸಿತ್ತು.

ಹೀಗಾಗಿ, ನಾಳೆ (ಫೆ.28) ಶ್ರೀಲಂಕಾ ವಿರುದ್ಧ ನಡೆಯುವ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಆದರೆ, ಅದಕ್ಕೂ ಮುನ್ನ, ಇಂದು ನ್ಯೂಜಿಲೆಂಡ್‌ ಎದುರು ಇಂಗ್ಲೆಂಡ್‌ ಗೆಲ್ಲಬೇಕಿದೆ. ಹಾಗಾದರಷ್ಟೇ, ಪಾಕ್ ಪಡೆಯ ನಾಕೌಟ್‌ ಕನಸನ್ನು ಜೀವಂತವಾಗಿ ಉಳಿಯಲಿದೆ.

ಒಂದು ವೇಳೆ ನ್ಯೂಜಿಲೆಂಡ್‌ ತಂಡ ಆಂಗ್ಲರನ್ನು ಮಣಿಸಿದರೆ, ಪಾಕಿಸ್ತಾನದ ಪ್ರಯಾಣ ಅಲ್ಲಿಗೆ ಮುಕ್ತಾಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.