
ಭಾರತ ಮಹಿಳಾ ಕ್ರಿಕೆಟ್ ತಂಡದ ಮಧ್ಯಮವೇಗಿ ಅರುಂಧತಿ ರೆಡ್ಡಿ ಸಂಭ್ರಮ
–ಬಿಸಿಸಿಐ ಎಕ್ಸ್ ಖಾತೆಯ ಚಿತ್ರ
ಸಿಡ್ನಿ: ಮಧ್ಯಮವೇಗಿ ಅರುಂಧತಿ ರೆಡ್ಡಿ ಅವರ ಅಮೋಘ ಬೌಲಿಂಗ್ ಬಲದಿಂದ ಭಾರತ ಮಹಿಳಾ ತಂಡವು ಆಸ್ಟ್ರೇಲಿಯಾ ಎದುರಿನ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಜಯಿಸಿತು.
ಮಳೆಯಿಂದಾಗಿ ಅಪೂರ್ಣಗೊಂಡ ಪಂದ್ಯದಲ್ಲಿ ಭಾರತವು ಡಕ್ವರ್ಥ್–ಲೂಯಿಸ್ ನಿಯಮದಡಿಯಲ್ಲಿ 21 ರನ್‌ಗಳ ಜಯ ಸಾಧಿಸಿತು. 3 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿತು.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅರುಂಧತಿ (4–0–22–4) ಅವರ ದಾಳಿಯ ಮುಂದೆ ಆಸ್ಟ್ರೇಲಿಯಾ ತಂಡವು 18 ಓವರ್‌ಗಳಲ್ಲಿ 133 ರನ್ ಗಳಿಸಿ ಕುಸಿಯಿತು. ಜಾರ್ಜಿಯಾ ವೆರ್‌ಹಾಮ್ (30; 19ಎ, 4X4) ಮತ್ತು ಫೋಬಿ ಲಿಚ್‌ಫೀಲ್ಡ್ (26; 19ಎ) ಅವರ ಎಚ್ಚರಿಕೆಯ ಆಟದ ಬಲದಿಂದ ತಂಡವು ಮೂರಂಕಿ ಮೊತ್ತ ಗಳಿಸಲು ಸಾಧ್ಯವಾಯಿತು. ಆಸ್ಟ್ರೇಲಿಯಾ ಇನಿಂಗ್ಸ್‌ನಲ್ಲಿ ಒಂದೂ ಸಿಕ್ಸರ್ ದಾಖಲಾಗಲಿಲ್ಲ. 18 ಬೌಂಡರಿಗಳಿದ್ದವು.
ಅರುಂಧತಿ ಅವರು ಲಿಚ್‌ಫೀಲ್ಡ್ ಮತ್ತು ಜಾರ್ಜಿಯಾ ಅವರಿಬ್ಬರ ವಿಕೆಟ್ ಗಳಿಸುವ ಮೂಲಕ ದೊಡ್ಡ ಮೊತ್ತ ಗಳಿಸದಂತೆ ತಡೆಯೊಡ್ಡಿದರು. ಅಲ್ಲದೇ ಎಲಿಸ್ ಪೆರಿ (20 ರನ್) ಮತ್ತು ಆ್ಯಷ್ಲೆ ಗಾರ್ಡನರ್ (4 ರನ್) ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ರೇಣುಕಾ ಸಿಂಗ್ ಮತ್ತು ಸ್ಪಿನ್ನರ್ ಶ್ರೀಚರಣಿ ಅವರು ತಲಾ ಎರಡು ವಿಕೆಟ್ ಗಳಿಸಿದರು.
ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಅಮೋಘ ಆರಂಭ ದೊರೆಯಿತು. ಸ್ಮೃತಿ ಮಂದಾನ (ಔಟಾಗದೇ 16; 17ಎ, 4X2) ಮತ್ತು ಶಫಾಲಿ ವರ್ಮಾ (21; 11ಎ, 4X1, 6X2) ಅವರು ಮೊದಲ ವಿಕೆಟ್ ಜತೆಯಾಟದಲ್ಲಿ ನಾಲ್ಕು ಓವರ್‌ಗಳಲ್ಲಿ 33 ರನ್ ಹೊಡೆದರು. ಸೋಫಿ ಮಾಲಿನೆ ಅವರ ಬೌಲಿಂಗ್‌ನಲ್ಲಿ ಶಫಾಲಿ ವರ್ಮಾ ಅವರ ಕ್ಯಾಚ್ ಜಾರ್ಜಿಯಾ ಅವರಿಂದಾಗಿ ಜೊತೆಯಾಟ ಮುರಿಯಿತು. ಜೆಮಿಮಾ ರಾಡ್ರಿಗಸ್ (ಔಟಾಗದೇ 9) ಅವರು ಸ್ಮೃತಿ ಜೊತೆಗೂಡಿದರು. ಈ ಹೊತ್ತಿನಲ್ಲಿ ಮಳೆ ಸುರಿಯಲಾರಂಭಿಸಿತು.
ಸಂಕ್ಷಿಪ್ತ ಸ್ಕೋರು
ಆಸ್ಟ್ರೇಲಿಯಾ: 18 ಓವರ್‌ಗಳಲ್ಲಿ 133 (ಜಾರ್ಜಿಯಾ ವೊಲ್ 18, ಫೋಯೆಬಿ ಲಿಚ್‌ಫೀಲ್ಡ್ 26, ಎಲಿಸ್ ಪೆರಿ 29, ಜಾರ್ಜಿಯಾ ವೆರ್‌ಹಾಮ್ 30, ರೇಣುಕಾ ಸಿಂಗ್ ಠಾಕೂರ್ 14ಕ್ಕೆ2, ಅರುಂಧತಿ ರೆಡ್ಡಿ 22ಕ್ಕೆ4, ಶ್ರೀಚರಣಿ 14ಕ್ಕೆ2)
ಭಾರತ: 5.1 ಓವರ್‌ಗಳಲ್ಲಿ 1 ವಿಕೆಟ್‌ಗೆ 50 (ಸ್ಮೃತಿ ಮಂದಾನ ಔಟಾಗದೇ 16, ಶಫಾಲಿ ವರ್ಮಾ 21, ಸೋಫಿ ಮಾಲಿನೆ 13ಕ್ಕೆ1)
ಫಲಿತಾಂಶ: ಭಾರತ ಮಹಿಳಾ ತಂಡಕ್ಕೆ 21 ರನ್ ಜಯ (ಡಿಎಲ್‌ಎಸ್ ನಿಯಮ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.