ಗುಜರಾತ್ ಟೈಟನ್ಸ್ ತಂಡದ ಸಾಯಿ ಸುದರ್ಶನ್ ಹಾಗೂ ಶುಭಮನ್ ಗಿಲ್
ಪಿಟಿಐ ಚಿತ್ರ
ನವದೆಹಲಿ: ದೇಶದ ರಾಜಧಾನಿಯ ಅಂಗಳದಲ್ಲಿ ಭಾನುವಾರ ರಾತ್ರಿ ಎರಡು ಚೆಂದದ ಶತಕಗಳು ದಾಖಲಾದವು. ಅದರಲ್ಲಿ ಒಂದು ಕನ್ನಡಿಗ ಕೆ.ಎಲ್. ರಾಹುಲ್, ಮತ್ತೊಂದನ್ನು ತಮಿಳುನಾಡಿನ ಸಾಯಿ ಸುದರ್ಶನ್ ದಾಖಲಿಸಿದರು.
ಅಂತಿಮವಾಗಿ ಸಾಯಿ ಶತಕದ ಬಲದಿಂದ ಗುಜರಾತ್ ಟೈಟನ್ಸ್ ತಂಡವು 10 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯಿಸಿತು. ಡೆಲ್ಲಿ ತಂಡದ ಪಾಲಿಗೆ ರಾಹುಲ್ ಶತಕ ಮಾತ್ರ ಸಿಹಿನೆನಪಾಗಿ ದಾಖಲಾಯಿತು.
ಶುಭಮನ್ ಗಿಲ್ ನಾಯಕತ್ವದ ಬಳಗವು ಈ ಗೆಲುವಿನೊಂದಿಗೆ ಒಟ್ಟು 18 ಅಂಕಗಳಿಸಿ ಪ್ಲೇಆಫ್‌ಗೆ ಲಗ್ಗೆ ಇಟ್ಟಿತು. ತಲಾ 17 ಅಂಕ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳೂ ಪ್ಲೇಆಫ್ ಪ್ರವೇಶಿಸಿದವು. ಈ ಸುತ್ತಿಗೆ ಪ್ರವೇಶಿಸುವ ನಾಲ್ಕನೇ ತಂಡ ನಿರ್ಧಾರವಾಗಬೇಕಿದೆ. ಅದಕ್ಕಾಗಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳು ಸ್ಪರ್ಧೆಯಲ್ಲಿವೆ.
ರಾಹುಲ್ –ಸಾಯಿ ಜಿದ್ದಾಜಿದ್ದಿ: ಅರುಣ್ ಜೇಟ್ಲಿ ಕ್ರೀಡಾಂಗಣ ದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಟೈಟನ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ ರಾಹುಲ್ (ಔಟಾಗದೇ 112; 65ಎ) ಅವರ ಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುಜರಾತ್ ಟೈಟನ್ಸ್ ವಿರುದ್ಧ 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 199 ರನ್ ಗಳಿಸಿತು.
ಇದಕ್ಕುತ್ತರವಾಗಿ ಟೈಟನ್ಸ್ ತಂಡವು 19 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 205 ರನ್ ಗಳಿಸಿತು. ಸಾಯಿ (ಅಜೇಯ 108; 61ಎ, 4x12, 6x4) ಮತ್ತು ಶುಭಮನ್ ಗಿಲ್ (ಔಟಾಗದೇ 93; 53ಎ, 4x3, 6x7) ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು.
ಬ್ಯಾಟಿಂಗ್‌ಗೆ ಇಳಿದ ಆತಿಥೇಯ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಫಾಫ್ ಡುಪ್ಲೆಸಿ ಕೇವಲ 5 ರನ್ ಗಳಿಸಿ, ಅರ್ಷದ್ ಖಾನ್ ಎಸೆತದಲ್ಲಿ ಔಟಾದರು. ಈ ಸಮಯದಲ್ಲಿ ರಾಹುಲ್ ತಾಳ್ಮೆಯಿಂದ ಆಡಿದರು. ಅವರಿಗೆ ಅಭಿಷೇಕ್ ಪೊರೆಲ್ (30; 19ಎ, 4x1, 6x3) ಉತ್ತಮ ಜೊತೆ ನೀಡಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ 90 (52ಎ) ರನ್ ಕಲೆಹಾಕಿದರು.
60 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಕರ್ನಾಟಕ ತಂಡದಲ್ಲಿ ತಮ್ಮೊಂದಿಗೆ ಆಡುವ ವೇಗಿ ಪ್ರಸಿದ್ಧ ಕೃಷ್ಣ ಅವರು ಹಾಕಿದ 19ನೇ ಓವರ್‌ನಲ್ಲಿ ಬೌಂಡರಿ ಗಳಿಸಿ ಶತಕ ಪೂರೈಸಿದ್ದು ವಿಶೇಷ. ರಾಹುಲ್ ಅವರಿಗೆ ಐಪಿಎಲ್‌ನಲ್ಲಿ ಇದು 5ನೇ ಶತಕವಾಗಿದೆ. 2022ರ ಐಪಿಎಲ್‌ನಲ್ಲಿ ಅವರು ತಮ್ಮ ನಾಲ್ಕನೇ ಶತಕ ದಾಖಲಿಸಿದ್ದರು.
ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ತಮಿಳುನಾಡಿನ ಆಟಗಾರ ಸಾಯಿ ಪ್ರಸಕ್ತ ಐಪಿಎಲ್‌ನಲ್ಲಿ ತಮ್ಮ ಮೊದಲ ಶತಕ ದಾಖಲಿಸಿದರು. 56 ಎಸೆತಗಳಲ್ಲಿ 100ರ ಗಡಿ ದಾಟಿದರು. ಒಂದು ಡಜನ್ ಬೌಂಡರಿ ಹೊಡೆದ ಸಾಯಿ, ಮೂರು ಅಮೋಘ ಸಿಕ್ಸರ್‌ಗಳನ್ನೆತ್ತಿದರು. ಗಿಲ್ ಅವರು ಈ ಟೂರ್ನಿಯಲ್ಲಿ ಎರಡನೇ ಸಲ 90ಕ್ಕಿಂತ ಹೆಚ್ಚು ಮೊತ್ತವನ್ನು ದಾಖಲಿಸಿದರು.
ಸಂಕ್ಷಿಪ್ತ ಸ್ಕೋರು
ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 3ಕ್ಕೆ 199 (ಕೆ.ಎಲ್. ರಾಹುಲ್ ಔಟಾಗದೇ 112, ಅಭಿಷೇಕ್ ಪೊರೆಲ್ 30, ಅಕ್ಷರ್ ಪಟೇಲ್ 25, ಅರ್ಷದ್ ಖಾನ್ 7ಕ್ಕೆ1, ಪ್ರಸಿದ್ಧಕೃಷ್ಣ 40ಕ್ಕೆ1, ಆರ್. ಸಾಯಿಕಿಶೋರ್ 47ಕ್ಕೆ1)
ಗುಜರಾತ್ ಟೈಟನ್ಸ್: 19 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 205 (ಸಾಯಿ ಸುದರ್ಶನ್ ಔಟಾಗದೇ 108, ಶುಭಮನ್ ಗಿಲ್ ಔಟಾಗದೇ 93)
ಫಲಿತಾಂಶ: ಗುಜರಾತ್ ಟೈಟನ್ಸ್ ತಂಡಕ್ಕೆ 10 ವಿಕೆಟ್‌ಗಳ ಜಯ.
ಪಂದ್ಯದ ಆಟಗಾರ: ಸಾಯಿ ಸುದರ್ಶನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.