ಮಹೇಂದ್ರ ಸಿಂಗ್ ಧೋನಿ
ಪಿಟಿಐ ಚಿತ್ರ
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ (ಸಿಎಸ್‌ಕೆ) ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.
ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 196 ರನ್ ಕಲೆಹಾಕಿತ್ತು. ಈ ಗುರಿ ಎದುರು ಆರಂಭಿಕ ಆಘಾತಕ್ಕೆ ಒಳಗಾದ ಸಿಎಸ್‌ಕೆ, 52 ರನ್ ಗಳಿಸುವಷ್ಟರಲ್ಲೇ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
ಒಂದು ತುದಿಯಲ್ಲಿ ಆರಂಭಿಕ ರಚಿನ್ ರವೀಂದ್ರ (31 ಎಸೆತ, 41 ರನ್) ಉತ್ತಮವಾಗಿ ಆಡುತ್ತಿದ್ದರೂ, ಮತ್ತೊಂದೆಡೆ ವಿಕೆಟ್ ಉರುಳುತ್ತಾ ಸಾಗಿದ್ದವು. ಇದರಿಂದಾಗಿ ಅಗತ್ಯ ರನ್‌ರೇಟ್ ಏರುತ್ತಾ ಸಾಗಿತ್ತು.
6ನೇ ವಿಕೆಟ್ ಉರುಳಿದಾಗ, ಸಿಎಸ್‌ಕೆ ಗೆಲುವಿಗೆ 7.1 ಓವರ್‌ಗಳಲ್ಲಿ 117 ರನ್ ಬೇಕಿತ್ತು. ಆದರೆ ಆಗಲೂ, ಧೋನಿ ಕ್ರೀಸ್‌ಗಿಳಿಯಲಿಲ್ಲ. ಅವರ ಬದಲು, ಬೌಲಿಂಗ್ ಆಲ್‌ರೌಂಡರ್ ಆರ್.ಅಶ್ವಿನ್ ಬಂದರು.
ಪ್ರತಿ ಓವರ್‌ಗೆ 16ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ಬೇಕಿದ್ದಾಗಲೂ ಧೋನಿ ಡಗೌಟ್‌ನಲ್ಲೇ ಉಳಿದದ್ದು, ಕ್ರಿಕೆಟ್ ಪ್ರಿಯರ ಅಚ್ಚರಿಗೆ ಕಾರಣವಾಯಿತು.
ಅಂತಿಮವಾಗಿ ಸಿಎಸ್‌ಕೆ, ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 146 ರನ್ ಗಳಿಸಿ, 50 ರನ್ ಅಂತರದ ಸೋಲೊಪ್ಪಿಕೊಂಡಿತು.
16ನೇ ಓವರ್‌ನಲ್ಲಿ ಅಶ್ವಿನ್ ಔಟಾದ ನಂತರ ಬ್ಯಾಟಿಂಗ್‌ಗೆ ಬಂದ ಧೋನಿ, ಕೊನೇ ಓವರ್‌ನಲ್ಲಿ ಗೆಲ್ಲಲು 67 ರನ್ ಬೇಕಿದ್ದಾಗ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದರು. 16 ಎಸೆತಗಳಲ್ಲಿ 30 ರನ್ ಗಳಿಸಿ ಅಜೇಯರಾಗಿ ಉಳಿದರು.
ಇದರೊಂದಿಗೆ, ಆರ್‌ಸಿಬಿ 17 ವರ್ಷಗಳ ದೀರ್ಘ ಅವಧಿಯ ನಂತರ ಸಿಎಸ್‌ಕೆ ತಂಡವನ್ನು ಅದರದೇ ತವರಿನಲ್ಲಿ ಸೋಲಿಸಿ ಸಂಭ್ರಮಿಸಿತು.
ಆರ್‌ಸಿಬಿ ಇಲ್ಲಿ 2008ರಲ್ಲಿ ಸಿಎಸ್‌ಕೆ ವಿರುದ್ಧ ಗೆದ್ದಿತ್ತು. ಅದಾದ ನಂತರ ಆಡಿದ ಸತತ 8 ಪಂದ್ಯಗಳಲ್ಲಿ ಸೋಲು ಕಂಡಿತ್ತು.
ಮಾಜಿ ಕ್ರಿಕೆಟಿಗರ ಟೀಕೆ
ಧೋನಿ ನಡೆಯನ್ನು ಮಾಜಿ ಕ್ರಿಕೆಟಿಗರಾದ, ಮನೋಜ್ ತಿವಾರಿ, ಸುರೇಶ್ ರೈನಾ, ಆಕಾಶ್ ಚೋಪ್ರಾ ಸೇರಿದಂತೆ ಹಲವರು ಟೀಕಿಸಿದ್ದಾರೆ.
'16 ಎಸೆತಗಳಲ್ಲಿ 30 ರನ್ ಗಳಿಸಿ ಅಜೇಯರಾಗಿ ಉಳಿಯಬಲ್ಲ ಧೋನಿಯಂತಹ ಬ್ಯಾಟರ್, ಮೇಲಿನ ಕ್ರಮಾಂಕದಲ್ಲಿ ಆಡಬಾರದೇಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ' ಎಂದಿರುವ ತಿವಾರಿ, 'ನೀವು ಗೆಲ್ಲಲು ಆಡುತ್ತಿದ್ದೀರಿ ತಾನೇ?' ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
'ಮೇಲಿನ ಕ್ರಮಾಂಕದಲ್ಲಿ ಆಡುವಂತೆ ಧೋನಿಗೆ ಹೇಳುವ ಧೈರ್ಯ ಸಿಎಸ್‌ಕೆ ಕೋಚಿಂಗ್ ಸ್ಟಾಫ್‌ಗೆ ಇಲ್ಲ. ಆತ ಒಮ್ಮೆ ನಿರ್ಧರಿಸಿದರೆ ಅದೇ ಅಂತಿಮ' ಎಂದು ಟೀಕಿಸಿದ್ದಾರೆ.
'ಧೋನಿ 17–20 ಓವರ್‌ಗಳಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ್ದಾರೆ. ಹಾಗಂತ, ಅಷ್ಟು ಕೆಳ ಕ್ರಮಾಂಕದಲ್ಲಿ ಬಂದು ಬ್ಯಾಟಿಂಗ್ ಮಾಡುವುದನ್ನು ಒಪ್ಪಲಾಗದು. ತಂಡವು 197 ರನ್‌ಗಳ ಗುರಿ ಬೆನ್ನಟ್ಟುತ್ತಿರುವಾಗ, ಧೋನಿಯಂತಹ ಬ್ಯಾಟರ್ ಹೆಚ್ಚು ಎಸೆತಗಳನ್ನು ಎದುರಿಸಬೇಕು. ಧೋನಿ ಕ್ರೀಸ್‌ಗಿಳಿದಾಗ ಪಂದ್ಯವು ಸಿಎಸ್‌ಕೆ ಹಿಡಿತದಿಂದ ದೂರ ಹೋಗಿತ್ತು. ಧೋನಿ, ಅಶ್ವಿನ್‌ಗಿಂತ ಮೊದಲೇ ಬರಬೇಕಿತ್ತು' ಎಂದು ಹೇಳಿದ್ದಾರೆ.
ರೈನಾ ಸಹ ಇದೇ ಮಾತನ್ನು ಹೇಳಿದ್ದಾರೆ. 'ಧೋನಿ, ಅಶ್ವಿನ್‌ಗಿಂತ ಮೊದಲು ಕ್ರೀಸ್‌ಗಿಳಿಯಬೇಕಿತ್ತು. ಅವರು, 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ಒಪ್ಪಲಾಗದು' ಎಂದಿದ್ದಾರೆ.
ವಿಕೆಟ್ ಉರುಳುತ್ತಿದ್ದರೂ ಧೋನಿ ಡಗೌಟ್‌ನಲ್ಲಿ ಉಳಿದದ್ದನ್ನು ಪ್ರಶ್ನಿಸಿರುವ ಸಂಜಯ್ ಬಂಗಾರ್, 'ಅವರ ಬ್ಯಾಟಿಂಗ್ ಕ್ರಮಾಂಕ ಬದಲಾಗಬೇಕಿದೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.