ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ರಜತ್ ಪಾಟೀದಾರ್
ಚಿತ್ರಕೃಪೆ: X / @PunjabKingsIPL
ಶ್ರೇಯಸ್ ಅಯ್ಯರ್ ನಾಯಕರಾಗಿರುವ ಪಂಜಾಬ್ ಕಿಂಗ್ಸ್ ಮತ್ತು ರಜತ್ ಪಾಟೀದಾರ್ ಮುನ್ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿವೆ.
ಐಪಿಎಲ್ ಆರಂಭದಿಂದಲೂ (18 ವರ್ಷಗಳಿಂದ) ಆಡುತ್ತಿರುವ ಉಭಯ ತಂಡಗಳು ಈವರೆಗೆ ಒಮ್ಮೆಯೂ ಟ್ರೋಫಿ ಎತ್ತಿ ಹಿಡಿದಿಲ್ಲ. ಹೀಗಾಗಿ, ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಜ್ಜಾಗಿವೆ. ಗುಜರಾತ್ ರಾಜಧಾನಿ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಾಳೆ (ಜೂನ್ 3) ಅಂತಿಮ ಹಣಾಹಣಿ ನಡೆಯಲಿದೆ.
ಶ್ರೇಯಸ್ ಹಾಗೂ ರಜತ್ ದೇಶೀಯ ಕ್ರಿಕೆಟ್‌ನಲ್ಲಿ ಕ್ರಮವಾಗಿ ಮುಂಬೈ ಮತ್ತು ಮಧ್ಯಪ್ರದೇಶ ತಂಡಗಳನ್ನು ಮುನ್ನಡೆಸುತ್ತಾರೆ. ಈ ತಂಡಗಳು, ಕಳೆದ ವರ್ಷ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು.
2024ರ ಡಿಸೆಂಬರ್ 15ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮಧ್ಯಪ್ರದೇಶ, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 174 ರನ್ ಗಳಿಸಿತ್ತು. ರಜತ್ ಕೇವಲ 40 ಎಸೆತಗಳಲ್ಲಿ ಅಜೇಯ 81 ರನ್ ಬಾರಿಸಿದ್ದರು. ಉಳಿದ ಆಟಗಾರರೂ ಉಪಯುಕ್ತ ಆಟವಾಡಿದ್ದರೆ ಮೊತ್ತವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದಿತ್ತು.
ಗುರಿ ಬೆನ್ನತ್ತಿದ ಮುಂಬೈ, 5 ವಿಕೆಟ್ ಕಳೆದುಕೊಂಡು 17.5 ಓವರ್‌ಗಳಲ್ಲೇ 180 ರನ್ ಗಳಿಸುವ ಮೂಲಕ ಸುಲಭ ಜಯ ಸಾಧಿಸಿತ್ತು.
ಅಯ್ಯರ್ ಬಳಗ ಟ್ರೋಫಿ ಮುಡಿಗೇರಿಸಿಕೊಂಡರೆ, ರಜತ್ ಪಡೆ ನಿರಾಸೆ ಅನುಭವಿಸಿತ್ತು.
ಇದೀಗ, ಈ ಇಬ್ಬರ ನಾಯಕತ್ವದ ತಂಡಗಳೇ ಐಪಿಎಲ್ ಫೈನಲ್‌ನಲ್ಲಿ ಕಣಕ್ಕಿಳಿಯಲಿರುವುದರಿಂದ ಯಾರ ಕೈ ಮೇಲಾಗಲಿದೆ? ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಫೈನಲ್ ಸೋಲಿಗೆ ರಜತ್ ಮುಯ್ಯಿ ತೀರಿಸುವರೇ ಎಂಬುದನ್ನು ಕಾದುನೋಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.