ADVERTISEMENT

IPL 2025 | GT vs LSG: ಬಲಿಷ್ಠ ಗುಜರಾತ್ ಎದುರು ಲಖನೌಗೆ 33 ರನ್ ಜಯ

ಪಿಟಿಐ
Published 22 ಮೇ 2025, 18:16 IST
Last Updated 22 ಮೇ 2025, 18:16 IST
<div class="paragraphs"><p>ಲಖನೌ ಸೂಪರ್‌ ಜೈಂಟ್ಸ್‌ ಆಟಗಾರರು</p></div>

ಲಖನೌ ಸೂಪರ್‌ ಜೈಂಟ್ಸ್‌ ಆಟಗಾರರು

   

ರಾಯಿಟರ್ಸ್‌ ಚಿತ್ರ

ಅಹಮದಾಬಾದ್‌: ಆರಂಭಿಕ ಆಟಗಾರ ಮಿಚೆಲ್‌ ಮಾರ್ಷ್‌ (117; 64ಎ, 4x10, 6x8) ಅವರ ಅವೋಘ ಶತಕದ ಬಳಿಕ ನ್ಯೂಜಿಲೆಂಡ್‌ನ ವೇಗಿ ವಿಲ್ ಒ ರೂರ್ಕಿ (27ಕ್ಕೆ 3) ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಲಖನೌ ಸೂಪರ್‌ ಜೈಂಟ್ಸ್‌ ತಂಡವು ಗುರುವಾರ ಐಪಿಎಲ್‌ನ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ 33 ರನ್‌ಗಳ  ಸಮಾಧಾನಕರ ಗೆಲುವು ಪಡೆಯಿತು.

ADVERTISEMENT

ಈ ಸೋಲಿನ ಹೊರತಾಗಿಯೂ ಗುಜರಾತ್ ತಂಡವು ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿತು. ಪ್ಲೇ ಆಫ್‌ ರೇಸ್‌ನಿಂದ ಈಗಾಗಲೇ ಹೊರಬಿದ್ದಿರುವ ಲಖನೌ ತಂಡವು ಸತತ ನಾಲ್ಕು ಸೋಲಿನ ಬಳಿಕ ಗೆಲುವಿನ ಹಳಿಗೆ ಮರಳಿತು. ಉಭಯ ತಂಡಗಳಿಗೆ ಲೀಗ್‌ನಲ್ಲಿ ತಲಾ ಒಂದು ಪಂದ್ಯ ಬಾಕಿಯಿದೆ.

ನರೇಂದ್ರ ಮೋದಿ ಕ್ರೀಡಾಂಗಣ ದಲ್ಲಿ ನಡೆದ ಪಂದ್ಯದಲ್ಲಿ ಮಾರ್ಷ್ ಮತ್ತು ನಿಕೊಲಸ್ ಪೂರನ್ (ಅಜೇಯ 56; 27ಎ, 4X4, 6X5) ಅವರ ಉತ್ತಮ ಜೊತೆಯಾಟದ ನೆರವಿನಿಂದ ಲಖನೌ ತಂಡವು 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 235 ರನ್ ಗಳಿಸಿತು.

ಗುರಿಯನ್ನು ಬೆನ್ನಟ್ಟಿದ ಗುಜರಾತ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 202 ರನ್‌ ಗಳಿಸಿ ಹೋರಾಟ ಮುಗಿಸಿತು. ಮಧ್ಯಮ ಕ್ರಮಾಂಕದಲ್ಲಿ ಶಾರೂಕ್‌ ಖಾನ್‌ (57; 29ಎ, 4x5, 6x3) ಹೊರತುಪಪಡಿಸಿ ಉಳಿದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಹಿಂದಿನ ಪಂದ್ಯದಲ್ಲಿ ಅಜೇಯ ದ್ವಿಶತಕದ ಜೊತೆಯಾಟವಾಡಿದ್ದ ಆರಂಭಿಕ ಬ್ಯಾಟರ್‌ಗಳಾದ ಸಾಯಿ ಸುದರ್ಶನ್‌ (21) ಮತ್ತು ನಾಯಕ ಶುಭಮನ್‌ ಗಿಲ್‌ (35;20ಎ) ಅವರು ಬೇಗನೇ ನಿರ್ಗಮಿಸಿದರು. ನಂತರ ಬಂದ ಜೋಸ್‌ ಬಟ್ಲರ್‌ (33;18) ಮತ್ತು ಶೆರ್ಫೇನ್ ರುದರ್‌ಫೋರ್ಡ್ (38;22ಎ) ಕೊಂಚ ಪ್ರತಿರೋಧ ತೋರಿದರು. 

ಬಟ್ಲರ್‌ ನಿರ್ಗಮನದ ಬಳಿಕ ಶೆರ್ಫೆನ್‌ ಜೊತೆಗೂಡಿದ ಶಾರೂಕ್‌ ಗುಜರಾತ್‌ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದದರು. ಅವರಿಬ್ಬರು ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 86 (40ಎ) ಸೇರಿಸಿದರು. ಆದರೆ, 17ನೇ ಓವರ್‌ನಲ್ಲಿ ದಾಳಿಗಿಳಿದ ರೂರ್ಕಿ ಅವರು ಶೆರ್ಫೆನ್‌ ವಿಕೆಟ್‌ ಪಡೆದು ಜೊತೆಯಾಟವನ್ನು ಮುರಿದರು. ಅಲ್ಲದೆ, ಅದೇ ಓವರ್‌ನಲ್ಲಿ ರಾಹುಲ್‌ ತೆವಾಟಿಯಾ ಅವರಿಗೆ ಪೆವಿಲಿ ಯನ್ ದಾರಿ ತೋರಿಸಿದ್ದರಿಂದ ಪಂದ್ಯ ಮತ್ತೆ ಲಖನೌದತ್ತ ವಾಲಿತು. ನಂತರ ಗುಜರಾತ್‌ ತಂಡ ಚೇತರಿಸಿಕೊಳ್ಳಲಿಲ್ಲ.

ಮಾರ್ಷ್‌ ಅಬ್ಬರ: ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ ಇಳಿದ ಲಖನೌ ತಂಡಕ್ಕೆ ಆರಂಭಿಕ ಬ್ಯಾಟರ್ ಮಾರ್ಷ್ ಮತ್ತು ಏಡನ್ ಮರ್ಕರಂ (36; 24ಎ) ಆತಿಥೇಯರಿಗೆ ಭರ್ಜರಿ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ ಸೇರಿ 91 ರನ್ ಗಳಿಸಿದಾಗ ಇನ್ನೂ 10 ಓವರ್‌ಗಳು ಮುಗಿದಿರಲಿಲ್ಲ. ಸ್ಪಿನ್ನರ್ ಸಾಯಿಕಿಶೋರ್‌ ಬೌಲಿಂಗ್‌ನಲ್ಲಿ ಶಾರೂಕ್ ಖಾನ್ ಪಡೆದ ಕ್ಯಾಚ್‌ಗೆ ಮರ್ಕರಂ ಔಟಾದರು.

ಮಾರ್ಷ್ ಜೊತೆಗೂಡಿದ ಪೂರನ್ ಬೀಸಾಟ ಆರಂಭಿಸಿದರು. ರನ್‌ಗಳು ಸರಾಗವಾಗಿ ಹರಿದುಬಂದವು. ಪ್ರಸಕ್ತ ಟೂರ್ನಿಯಲ್ಲಿ ಪೂರನ್ ಐದನೇ ಅರ್ಧಶತಕ (23 ಎಸೆತಗಳಲ್ಲಿ) ದಾಖಲಿಸಿದರು. ಮಾರ್ಷ್ 56 ಎಸೆತಗಳಲ್ಲಿ ಐಪಿಎಲ್‌ನ ಚೊಚ್ಚಲ ಶತಕದ ಗಡಿ ಮುಟ್ಟಿದರು. ಇಬ್ಬರೂ ಎರಡನೇ ವಿಕೆಟ್ ಜೊತೆಯಾಟದಲ್ಲಿ 121 ರನ್ (8.3 ಓವರ್‌ಗಳಲ್ಲಿ) ಸೇರಿಸಿದರು. 

ಲಖನೌ ತಂಡದ ಬ್ಯಾಟರ್‌ಗಳು ಒಟ್ಟು 17 ಸಿಕ್ಸರ್‌ಗಳನ್ನು ಸಿಡಿಸಿದರು. ಲಖನೌ ತಂಡದ ಮಟ್ಟಿಗೆ ಇದು ಪಂದ್ಯವೊಂದರಲ್ಲಿ ಗರಿಷ್ಠ ಸಿಕ್ಸರ್‌ಗಳ ದಾಖಲೆಯಾಗಿದೆ. 

19ನೇ ಓವರ್‌ ಹಾಕಿದ ಅರ್ಷದ್ ಖಾನ್ ಅವರು ಮಾರ್ಷ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಸಾಹಸಮಯ ರೀತಿಯಲ್ಲಿ ಕ್ಯಾಚ್ ಪಡೆದ ಫೀಲ್ಡರ್‌ ಶೆರ್ಫೆನ್ ಗಮನ ಸೆಳೆದರು. ಕ್ರೀಸ್‌ಗೆ ಬಂದ ನಾಯಕ ರಿಷಭ್ 6 ಎಸೆತಗಳಲ್ಲಿ ಅಜೇಯ 16 ರನ್ ಹೊಡೆದರು. ಅದರಲ್ಲಿ ಎರಡು ಸಿಕ್ಸರ್‌ಗಳಿದ್ದವು.

ಸಂಕ್ಷಿಪ್ತ ಸ್ಕೋರು

ಲಖನೌ ಸೂಪರ್ ಜೈಂಟ್ಸ್: 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 235 (ಏಡನ್ ಮರ್ಕರಂ 36, ಮಿಚೆಲ್ ಮಾರ್ಷ್ 117, ನಿಕೊಲಸ್ ಪೂರನ್ ಔಟಾಗದೇ 56, ರಿಷಭ್ ಪಂತ್ ಔಟಾಗದೇ 16, ಅರ್ಷದ್ ಖಾನ್ 36ಕ್ಕೆ1, ಸಾಯಿಕಿಶೋರ್ 34ಕ್ಕೆ1).

ಗುಜರಾತ್‌ ಟೈಟನ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 202 (ಸಾಯಿ ಸುದರ್ಶನ್‌ 21, ಶುಭಮನ್‌ ಗಿಲ್‌ 35, ಜೋಸ್‌ ಬಟ್ಲರ್‌ 33, ಶೆರ್ಫೇನ್ ರುದರ್‌ಫೋರ್ಡ್  38, ಶಾರೂಕ್‌ ಖಾನ್‌ 57; ವಿಲ್‌ ಓ ರೂರ್ಕಿ 27ಕ್ಕೆ 3, ಆವೇಶ್‌ ಖಾನ್‌ 51ಕ್ಕೆ 2, ಅಯುಷ್‌ ಬದೋನಿ 4ಕ್ಕೆ 2).

ಪಂದ್ಯದ ಆಟಗಾರ: ಮಿಚೆಲ್‌ ಮಾರ್ಷ್‌.

ಕ್ಯಾನ್ಸರ್‌ ಜಾಗೃತಿ: ತಿಳಿನೇರಳೆ ಪೋಷಾಕು
ಕ್ಯಾನ್ಸರ್‌ ಜಾಗೃತಿಗಾಗಿ ಗುಜರಾತ್ ಟೈಟನ್ಸ್ ತಂಡದ ಆಟಗಾರರು ಲಖನೌ ಎದುರಿನ ಪಂದ್ಯದಲ್ಲಿ ತಿಳಿನೇರಳೆ ಬಣ್ಣದ ಪೋಷಾಕು ಧರಿಸಿ ಆಡಿದರು. ಕಳೆದ ಮೂರು ವರ್ಷಗಳಿಂದ ತಂಡವು ಈ ಜಾಗೃತಿ ಅಭಿಯಾನವನ್ನು ಮಾಡುತ್ತಿದೆ. ಪಂದ್ಯದ ಸಂದರ್ಭದಲ್ಲಿ ಅಭಿಮಾನಿಗಳಿಗೆ 30 ಸಾವಿರ ತಿಳಿನೇರಳೆ ಬಣ್ಣದ ಬಾವುಟಗಳು ಮತ್ತು 10 ಸಾವಿರ ಜೆರ್ಸಿಗಳನ್ನು ವಿತರಿಸಲಾಯಿತು ಎಂದು ತಂಡದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.