ವಿಕೆಟ್ ಪಡೆದ ಅಶ್ವನಿಕುಮಾರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ಸಹ ಆಟಗಾರರು ಅಭಿನಂದಿಸಿದರು
–ಪಿಟಿಐ ಚಿತ್ರ
ಮುಂಬೈ: ಮೊಹಾಲಿಯ ಎಡಗೈ ವೇಗಿ ಅಶ್ವನಿಕುಮಾರ್ ದಾಳಿಯ ಮುಂದೆ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ ಪಡೆ ನೆಲಕಚ್ಚಿತು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಮೊದಲ ಜಯದ ರುಚಿ ಉಂಡಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಮುಂಬೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪದಾರ್ಪಣೆ ಪಂದ್ಯವಾಡಿದ ಅಶ್ವನಿಕುಮಾರ್ (24ಕ್ಕೆ4) ಅವರ ಅಮೋಘ ಬೌಲಿಂಗ್ ರಂಗೇರಿತು. ಕೋಲ್ಕತ್ತ ತಂಡವು 16.2 ಓವರ್‌ಗಳಲ್ಲಿ ಕೇವಲ 116 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಪ್ರಸಕ್ತ ಟೂರ್ನಿಯಲ್ಲಿ ದಾಖಲಾದ ಅತ್ಯಂತ ಕನಿಷ್ಠ ಮೊತ್ತ ಇದಾಗಿದೆ. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡವು 8 ವಿಕೆಟ್‌ಗಳಿಂದ ಗೆದ್ದಿತು. ರಿಯಾನ್ ರಿಕೆಲ್ಟನ್ (ಔಟಾಗದೇ 62; 41ಎ, 4X4, 6X5) ಮತ್ತು ಸೂರ್ಯಕುಮಾರ್ ಯಾದವ್ (ಔಟಾಗದೇ 27; 9ಎಸೆತ, 4X3, 6X2) ಅವರ ಬ್ಯಾಟಿಂಗ್ ಬಲದಿಂದ 12.5 ಓವರ್‌ಗಳಲ್ಲಿ 2 ವಿಕೆಟ್
ಗಳಿಗೆ 121 ರನ್ ಗಳಿಸಿತು. ಮುಂಬೈ ತನ್ನ ಮೊದಲೆರಡೂ ಪಂದ್ಯಗಳಲ್ಲಿ ಸೋತಿತ್ತು.
ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿಯೇ ವೇಗಿ ಟ್ರೆಂಟ್ ಬೌಲ್ಟ್ ಹಾಕಿದ ನೇರ ಎಸೆತಕ್ಕೆ ಸುನಿಲ್ ನಾರಾಯಣ್ ಕ್ಲೀನ್‌ಬೌಲ್ಡ್ ಆದರು. ನಂತರದ ಓವರ್‌ನಲ್ಲಿ ದೀಪಕ್ ಚಾಹರ್ ಎಸೆತವನ್ನು ಹೊಡೆಯುವ ಯತ್ನದಲ್ಲಿ ಕ್ವಿಂಟನ್ ಡಿಕಾಕ್ ಅವರು ಫೀಲ್ಡಿಂಗ್ ಮಾಡುತ್ತಿದ್ದ ಅಶ್ವನಿಕುಮಾರ್‌ಗೆ ಕ್ಯಾಚ್ ಆದರು. ಇನಿಂಗ್ಸ್‌ಗೆ ಸ್ಥಿರತೆ ಒದಗಿಸುವ ಪ್ರಯತ್ನ ಮಾಡಿದ ಕೋಲ್ಕತ್ತ ತಂಡದ ನಾಯಕ ಅಜಿಂಕ್ಯ ರಹಾನೆ (11; 7ಎ, 4X1, 6X1) ಅವರ ವಿಕೆಟ್ ಗಳಿಸಿದ ಅಶ್ವನಿಕುಮಾರ್ ಖಾತೆ ತೆರೆದರು. ರಿಂಕು ಸಿಂಗ್ (17; 14ಎ), ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಕ್ರೀಸ್‌ಗೆ ಬಂದ ಮನೀಷ್ ಪಾಂಡೆ (19; 14ಎ, 4X2, 6X1) ಮತ್ತು ಸ್ಫೋಟಕಶೈಲಿಯ ಬ್ಯಾಟರ್ ಆ್ಯಂಡ್ರೆ ರಸೆಲ್ (5, 11ಎ) ಅವರ ವಿಕೆಟ್‌ಗಳನ್ನೂ ಕಬಳಿಸಿದ 23 ವರ್ಷದ ಅಶ್ವನಿಕುಮಾರ್ ಮಧ್ಯಮ ಕ್ರಮಾಂಕಕ್ಕೆ ಬಲವಾದ ಪೆಟ್ಟುಕೊಟ್ಟರು.
ತುಸು ಹೋರಾಟ ತೋರಿದ ಅಂಗಕ್ರಿಷ್ ರಘುವಂಶಿ (26; 16ಎ)ಅವರ ವಿಕೆಟ್ ಗಳಿಸುವಲ್ಲಿ ಹಾರ್ದಿಕ್ ಯಶಸ್ವಿಯಾದರು. ಕೇರಳದ ಭರವಸೆಯ ಸ್ಪಿನ್ನರ್ ವಿಘ್ನೇಷ್ ಪುತ್ತೂರ್ ಅವರೂ ಒಂದು ವಿಕೆಟ್ ಗಳಿಸಿದರು.
ಸಂಕ್ಷಿಪ್ತ ಸ್ಕೋರು; ಕೋಲ್ಕತ್ತ ನೈಟ್ ರೈಡರ್ಸ್: 16.2 ಓವರ್‌ಗಳಲ್ಲಿ 116 (ಅಜಿಂಕ್ಯ ರಹಾನೆ 11, ಅಂಗಕ್ರಿಷ್ ರಘುವಂಶಿ 26, ರಿಂಕು ಸಿಂಗ್ 17, ಮನೀಷ್ ಪಾಂಡೆ 19, ರಮಣದೀಪ್ ಸಿಂಗ್ 22, ದೀಪಕ್ ಚಾಹರ್ 19ಕ್ಕೆ2, ಅಶ್ವನಿ ಕುಮಾರ್ 24ಕ್ಕೆ4, ವಿಘ್ನೇಷ್ ಪುತ್ತೂರ್ 21ಕ್ಕೆ1, ಮಿಚೆಲ್ ಸ್ಯಾಂಟನರ್ 17ಕ್ಕೆ1, ಹಾರ್ದಿಕ್ ಪಾಂಡ್ಯ 10ಕ್ಕೆ1, ಟ್ರೆಂಟ್ ಬೌಲ್ಟ್ 23ಕ್ಕೆ1) ಮುಂಬೈ ಇಂಡಿಯನ್ಸ್: 12.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 121 (ರೋಹಿತ್ ಸರ್ಮಾ 13, ರಿಯಾನ್ ರಿಕೆಲ್ಟನ್ ಔಟಾಗದೇ 62, ವಿಲ್ ಜ್ಯಾಕ್ಸ್ 16, ಸೂರ್ಯಕುಮಾರ್ ಯಾದವ್ ಅಜೇಯ 27)
ಫಲಿತಾಂಶ:ಮುಂಬೈ ಇಂಡಿಯನ್ಸ್‌ಗೆ 8 ವಿಕೆಟ್‌ಗಳ ಜಯ.
ಪಂದ್ಯದ ಆಟಗಾರ: ಅಶ್ವನಿಕುಮಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.