ADVERTISEMENT

IPL 2025 | MI vs GT: ಮುಂಬೈ ವಿರುದ್ಧ ಗುಜರಾತ್‌ ಟೈಟನ್ಸ್‌ಗೆ ರೋಚಕ ಗೆಲುವು

ಪಿಟಿಐ
Published 6 ಮೇ 2025, 19:22 IST
Last Updated 6 ಮೇ 2025, 19:22 IST
<div class="paragraphs"><p>ವಿಲ್‌ ಜ್ಯಾಕ್ಸ್‌ ಬ್ಯಾಟಿಂಗ್‌</p></div>

ವಿಲ್‌ ಜ್ಯಾಕ್ಸ್‌ ಬ್ಯಾಟಿಂಗ್‌

   

ಮುಂಬೈ: ರೋಚಕವಾಗಿದ್ದ ಐಪಿಎಲ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ತಂಡ ಮಂಗಳವಾರ ಡಕ್ವರ್ಥ್‌ ಲೂಯಿಸ್‌ ನಿಯಮದ ಆಧಾರದಲ್ಲಿ ಮೂರು ವಿಕೆಟ್‌ಗಳಿಂದ ಮುಂಬೈ ಇಂಡಿಯನ್ಸ್‌ ತಂಡವನ್ನು ಸೋಲಿಸಿತು.‌

ಈ ಗೆಲುವಿನೊಂದಿಗೆ ಶುಭಮನ್‌ ಗಿಲ್‌ ಸಾರಥ್ಯದ ಟೈಟನ್ಸ್‌ ತಂಡವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರುವ ಜೊತೆಗೆ ಪ್ಲೇ ಆಫ್‌ಗೆ ಹತ್ತಿರವಾಯಿತು. ಮತ್ತೊಂದೆಡೆ ಮುಂಬೈ ತಂಡದ ಸತತ ಆರು ಪಂದ್ಯಗಳ ಅಜೇಯ ಓಟಕ್ಕೆ ತಡೆಯೊಡ್ಡಿತು.

ADVERTISEMENT

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 156 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್‌ ತಂಡವು ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ, ಟ್ರಂಟ್‌ ಬೌಲ್ಟ್‌ (22ಕ್ಕೆ 2) ಮತ್ತು ಜಸ್‌ಪ್ರೀತ್‌ ಬೂಮ್ರಾ (19ಕ್ಕೆ 2) ದಾಳಿಗೆ ಸಿಲುಕಿ ಒತ್ತಡಕ್ಕೆ ಒಳಗಾಯಿತು. ಎರಡು ಬಾರಿ ಬಂದ ಮಳೆಯಿಂದಾಗಿ ಪಂದ್ಯದ ಫಲಿತಾಂಶಕ್ಕಾಗಿ ಡಿಎಲ್‌ಎಸ್‌ ಮೊರೆ ಹೋಗಬೇಕಾಯಿತು. ಅದರಂತೆ, ಗುಜರಾತ್‌ ತಂಡ ಗೆಲುವಿಗೆ 147 ರನ್‌ಗಳ (19 ಓವರ್‌) ಗುರಿ ಪಡೆಯಿತು.

ಕೊನೆಯ ಓವರ್‌ನಲ್ಲಿ 15 ರನ್‌ ಬೇಕಿದ್ದ ಗುಜರಾತ್‌ಗೆ ರಾಹುಲ್‌ ತೇವಾಟಿಯಾ (ಔಟಾಗದೇ 11) ಮತ್ತು ಜೆರಾಲ್ಡ್‌ ಕೊಯ್ಜಿಯಾ (12;6ಎ) ಆಪತ್ಬಾಂಧವರಾದರು. ದೀಪಕ್‌ ಚಾಹರ್‌ ಹಾಕಿದ ಓವರ್‌ನ ಐದನೇ ಎಸೆತದಲ್ಲಿ ಜೆರಾಲ್ಡ್‌ ಔಟಾದರೂ ನಂತರ ಅರ್ಷದ್‌ ಖಾನ್‌ ಗೆಲುವಿಗೆ ಬೇಕಿದ್ದ ರನ್‌ ಗಳಿಸಿ ಸಂಭ್ರಮಿಸಿದರು.

ಶುಭಮನ್‌ ಗಿಲ್‌ (43;46ಎ) ಮತ್ತು ಜೋಸ್‌ ಬಟ್ಲರ್‌ (30;27ಎ) ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 72 (63) ರನ್‌ ಸೇರಿಸಿದ್ದರು. ನಂತರ ಶೆರ್ಫೇನ್ ರುದರ್‌ಫೋರ್ಡ್ ಬಿರುಸಿನ 28 (15) ರನ್‌ ಗಳಿಸಿದರು. ಹೀಗಾಗಿ ತಂಡವು 14 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 107 ರನ್‌ ಗಳಿಸಿ ಗೆಲುವಿನತ್ತ ಸಾಗಿತ್ತು. ನಂತರದಲ್ಲಿ ಮಳೆ ಆಟ ಆರಂಭವಾಯಿತು.

ಜಾಕ್ಸ್‌ ಅರ್ಧಶತಕ: ಇದಕ್ಕೂ ಟಾಸ್‌ ಸೋತು ಮುಂಬೈ ಬ್ಯಾಟಿಂಗ್‌ಗೆ ಇಳಿಯಿತು. ಖಾತೆ ತೆರೆಯುವ ಮೊದಲು ಮತ್ತು 29ರಲ್ಲಿದ್ದಾಗ ಜೀವದಾನ ಪಡೆದ ವಿಲ್‌ ಜಾಕ್ಸ್‌ 53, 35ಎ, 4x5, 6x3) ಈ ಆವೃತ್ತಿಯಲ್ಲಿ ಮೊದಲ ಅರ್ಧಶತಕ ಬಾರಿಸಿದರು. ಸೂರ್ಯಕುಮಾರ್ 24 ಎಸೆತಗಳಲ್ಲಿ 35 ರನ್ (4x5) ಗಳಿಸಿದರು. ಆದರೆ ನಾಯಕ ಹಾರ್ದಿಕ್‌ ಪಾಂಡ್ಯ (1), ತಿಲಕ್‌ ವರ್ಮಾ (7) ಸೇರಿದಂತೆ ಉಳಿದವರು ವಿಫಲರಾದರು.

ರೋಹಿತ್‌ ಶರ್ಮಾ (7) ಕೆಲಕಾಲ ಪರದಾಟದ ನಂತರ ಇನಿಂಗ್ಸ್‌ನ ನಾಲ್ಕನೇ ಓವರಿನಲ್ಲಿ ಅರ್ಷದ್‌ ಖಾನ್ ಬೌಲಿಂಗ್‌ನಲ್ಲಿ ಮಿಡ್‌ ಆಫ್‌ನಲ್ಲಿದ್ದ ಪ್ರಸಿದ್ಧಕೃಷ್ಣ ಅವರಿಗೆ ಕ್ಯಾಚಿತ್ತರು.

ಈ ಹಂತದಲ್ಲಿ (26ಕ್ಕೆ2) ಜಾಕ್ಸ್ ಜೊತೆಗೂಡಿದ ಸೂರ್ಯಕುಮಾರ್ ಯಾದವ್‌ 71 ರನ್ ಸೇರಿಸಿದರು. ಸೂರ್ಯ, ಪ್ರಸಿದ್ಧ ಬೌಲಿಂಗ್‌ನಲ್ಲಿ ಎರಡು ನೇರ ಡ್ರೈವ್‌ಗಳನ್ನು ಮಾಡಿದರು. ಆದರೆ ಅವರಿಗೆ ಮಿಡ್‌ವಿಕೆಟ್‌ನಲ್ಲಿದ್ದ ಸಾಯಿ ಕಿಶೋರ್ ಅವರಿಂದ ಒಮ್ಮೆ ಜೀವದಾನ ದೊರೆಯಿತು.

ಸೂರ್ಯ ದೊಡ್ಡ ಹೊಡೆತಕ್ಕೆ ಹೋಗಿ ಲಾಂಗ್‌ಆಫ್‌ನಲ್ಲಿದ್ದ ಶಾರೂಕ್‌ ಖಾನ್ ಅವರಿಗೆ ಕ್ಯಾಚ್ ನೀಡಿದರು. ಬಿಗುವಾಗಿ ಬೌಲ್‌ ಮಾಡಿದ ರಶೀದ್‌ ಅವರು ಕೊನೆಗೂ ಜಾಕ್ಸ್ ಅವರ ವಿಕೆಟ್ ಪಡೆದರು. ಅವರು ಭರ್ಜರಿ ಹೊಡೆತದ ಯತ್ನದಲ್ಲಿ ಡೀಪ್‌ ಬ್ಯಾಕ್‌ವರ್ಡ್‌ ಸ್ಕ್ವೇರ್‌ನಲ್ಲಿ ಕ್ಯಾಚಿತ್ತರು. ಕಾರ್ಬಿನ್‌ ಬಾಷ್‌, ಕೊನೆಗಳಿಗೆಯಲ್ಲಿ 27 ರನ್ ಬಾರಿಸಿದ್ದರಿಂದ ಮುಂಬೈ 8 ವಿಕೆಟ್‌ಗೆ 155 ರನ್‌ಗಳ ಮೊತ್ತ ಗಳಿಸಿತ್ತು.

 ಸಂಕ್ಷಿಪ್ತ ಸ್ಕೋರು: ಮುಂಬೈ ಇಂಡಿಯನ್ಸ್‌: 20 ಓವರುಗಳಲ್ಲಿ 8ಕ್ಕೆ 155 (ವಿಲ್‌ ಜಾಕ್ಸ್‌ 53, ಸೂರ್ಯಕುಮಾರ್ ಯಾದವ್‌ 35, ಕಾರ್ಬಿನ್‌ ಬಾಷ್‌ 27; ಸಿರಾಜ್ 29ಕ್ಕೆ1, ಅರ್ಷದ್ ಖಾನ್‌ 18ಕ್ಕೆ1, ಪ್ರಸಿದ್ಧ ಕೃಷ್ಣ 37ಕ್ಕೆ1, ಸಾಯಿ ಕಿಶೋರ್‌ 34ಕ್ಕೆ2, ರಶೀದ್‌ ಖಾನ್ 21ಕ್ಕೆ1, ಜೆರಾಲ್ಡ್‌ ಕೊಟ್ಜಿಯ 10ಕ್ಕೆ1) ಗುಜರಾತ್ ಟೈಟನ್ಸ್: ಶುಭಮನ್‌ ಗಿಲ್‌ 43, ಜೋಸ್‌ ಬಟ್ಲರ್‌ 30, ಶೆರ್ಫೇನ್ ರುದರ್‌ಫೋರ್ಡ್ 28; ಟ್ರಂಟ್‌ ಬೌಲ್ಟ್‌ 22ಕ್ಕೆ 2, ಜಸ್‌ಪ್ರೀತ್‌ ಬೂಮ್ರಾ 19ಕ್ಕೆ 2, ಅಶ್ವನಿ ಕುಮಾರ್‌ 28ಕ್ಕೆ 2). ಫಲಿತಾಂಶ: ಗುಜರಾತ್‌ ಟೈಟನ್ಸ್‌ಗೆ 3 ವಿಕೆಟ್‌ ಜಯ (ಡಿಎಲ್‌ಎಸ್ ನಿಯಮದಡಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.