ADVERTISEMENT

IPL 2025 Qualifier 2 | ಮುಂಬೈಗೆ ನಿರಾಸೆ: ಫೈನಲ್‌ಗೆ ಲಗ್ಗೆಯಿಟ್ಟ ಶ್ರೇಯಸ್ ಪಡೆ

ಪಿಟಿಐ
Published 1 ಜೂನ್ 2025, 20:15 IST
Last Updated 1 ಜೂನ್ 2025, 20:15 IST
<div class="paragraphs"><p>ಶ್ರೇಯಸ್ ಅಯ್ಯರ್ </p></div>

ಶ್ರೇಯಸ್ ಅಯ್ಯರ್

   

ಅಹಮದಾಬಾದ್: ನಾಯಕನಿಗೆ ತಕ್ಕ ಆಟವಾಡಿದ ಶ್ರೇಯಸ್ ಅಯ್ಯರ್ (ಅಜೇಯ 87; 41ಎಸೆತ, 4X5, 6X8) ಬ್ಯಾಟಿಂಗ್‌ನಿಂದ ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿತು. 

ಭಾನುವಾರ ರಾತ್ರಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ  ಎರಡನೇ ಕ್ವಾಲಿಫಯರ್‌ನಲ್ಲಿ ಕಿಂಗ್ಸ್ ತಂಡವು  ಮುಂಬೈ ಇಂಡಿಯನ್ಸ್ ಎದುರು 5 ವಿಕೆಟ್‌ಗಳಿಂದ ಗೆದ್ದಿತು. ಮಂಗಳವಾರ ಇದೇ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಪಂಜಾಬ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಮೊದಲ ಕ್ವಾಲಿಫಯರ್‌ನಲ್ಲಿ ಪಂಜಾಬ್ ತಂಡವು ಆರ್‌ಸಿಬಿ ಎದುರು ಸೋತಿತ್ತು. ಕಳೆದ 18 ವರ್ಷಗಳಿಂದ ಐಪಿಎಲ್‌ನಲ್ಲಿರುವ ಉಭಯ ತಂಡಗಳು ಇದುವರೆಗೂ ಒಂದು ಬಾರಿಯೂ ಪ್ರಶಸ್ತಿ ಜಯಿಸಿಲ್ಲ. ಆದ್ದರಿಂದ ಈ ಬಾರಿ ಟೂರ್ನಿಗೆ ಹೊಸ ಚಾಂಪಿಯನ್ ಲಭಿಸುವುದು ಖಚಿತವಾಗಿದೆ. 

ADVERTISEMENT

ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.  ಮಳೆಯಿಂದಾಗಿ ಎರಡು ತಾಸು ವಿಳಂಬವಾಗಿ ಪಂದ್ಯ ಆರಂಭವಾಯಿತು.  ಮುಂಬೈ ಇಂಡಿಯನ್ಸ್  ತಂಡವು  20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 203 ರನ್ ಗಳಿಸಿತು. ಅದಕ್ಕುತ್ತರವಾಗಿ ಪಂಜಾಬ್ ತಂಡವು  19 ಓವರ್‌ಗಳಲ್ಲಿ 5 ವಿಕೆಟ್‌ಗೆ 207 ರನ್‌ ಗಳಿಸಿ ಜಯ ಸಾಧಿಸಿತು.

ವರ್ಮಾ (44; 29ಎ, 4X2, 6X2) ಮತ್ತು ಸೂರ್ಯ (44; 26ಎ, 4X4, 6X3) ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 72 ರನ್‌ಗಳನ್ನು ಪೇರಿಸಿದರು. ಇದರಿಂದಾಗಿ ತಂಡವು ಸವಾಲಿನ ಮೊತ್ತ ಪೇರಿಸಿತು.  ಜಾನಿ ಬೆಸ್ಟೊ (38; 24ಎ,4X3, 6X1) ಮತ್ತು ನಮನ್ ಧೀರ್ (37; 18ಎ, 4X7) ಅವರೂ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು. 

ಎಲಿಮಿನೇಟರ್ ಪಂದ್ಯದಲ್ಲಿ ಅಬ್ಬರಿಸಿದ್ದ ರೋಹಿತ್ ಶರ್ಮಾ ಇಲ್ಲಿ ಕೇವಲ 8 ರನ್ ಗಳಿಸಿದರು. ಸ್ಟೊಯನಿಸ್ ಎಸೆತದಲ್ಲಿ ವೈಶಾಖ ವಿಜಯಕುಮಾರ್ ಪಡೆದ ಕ್ಯಾಚ್‌ಗೆ ಅವರು ನಿರ್ಗಮಿಸಿದರು.
ಕ್ರೀಸ್‌ನಲ್ಲಿದ್ದ ಜಾನಿ ಬೆಸ್ಟೊ ಜೊತೆಗೂಡಿದ ವರ್ಮಾ ಎರಡನೇ ವಿಕೆಟ್ ಜೊತೆಯಾಟದಲ್ಲಿ 51 ರನ್‌ ಸೇರಿಸಿದ ಇನಿಂಗ್ಸ್‌ಗೆ ಚೇತರಿಕೆ ನೀಡಿದರು. ಜಾನಿ ವಿಕೆಟ್ ಗಳಿಸಿದ ವೇಗಿ ವೈಶಾಖ ಅವರು ಜೊತೆಯಾಟ ಮುರಿದರು. 

ಕ್ರೀಸ್‌ಗೆ ಬಂದ ಸೂರ್ಯ ಆರಂಭದಲ್ಲಿ ತುಸು ನಿಧಾನವಾಗಿ ಆಡಿದರು. ವರ್ಮಾ ಮಾತ್ರ ಬೌಂಡರಿ, ಸಿಕ್ಸರ್ ಹೊಡೆಯುತ್ತಲೇ ಇದ್ದರು. ನಿಧಾನವಾಗಿ ತಮ್ಮ ನೈಜ ಆಟಕ್ಕೆ ಕುದುರಿಕೊಂಡ ಸೂರ್ಯ ರನ್‌ ಗಳಿಕೆಯ ವೇಗ ಹೆಚ್ಚಿಸಿದರು. 

ಗಾಯದಿಂದ ಚೇತರಿಸಿಕೊಂಡು ಮರಳಿದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು 14ನೇ ಓವರ್‌ನಲ್ಲಿ ಸೂರ್ಯ ಅವರ ವಿಕೆಟ್ ಗಳಿಸಿದರು. ಜೊತೆಯಾಟ ಮುರಿಯಿತು. ನಂತರದ ಓವರ್‌ನ ಮೊದಲ ಎಸೆತದಲ್ಲಿಯೇ ತಿಲಕ್ ವರ್ಮಾ  ಅವರ ವಿಕೆಟ್ ಕೈಲ್ ಜೆಮಿಸನ್ ಪಾಲಾಯಿತು. ಆಗಿನ್ನೂ ತಂಡದ ಮೊತ್ತವು 150 ಕೂಡ ಆಗಿರಲಿಲ್ಲ.

ಟೂರ್ನಿಯ ಕೆಲವು ಪಂದ್ಯಗಳಲ್ಲಿ ಅಂತಿಮ ಹಂತದ ಓವರ್‌ಗಳಲ್ಲಿ ಮಿಂಚಿದ್ದ ನಮನ್ ಧೀರ್ ಕೂಡ ಉತ್ತಮವಾಗಿ ಆಡಿದರು. 

ಮಳೆಯಿಂದ ಪಂದ್ಯ ವಿಳಂಬ: ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಐಪಿಎಲ್ ಎರಡನೇ  ಕ್ವಾಲಿಫಯರ್ ಪಂದ್ಯವು ಸುಮಾರು 2 ತಾಸು ವಿಳಂಬವಾಗಿ ಆರಂಭವಾಯಿತು.

ರಾತ್ರಿ 8.05ರ ಸುಮಾರಿಗೆ ಮಳೆ ನಿಂತ ಮೇಲೆ ಅಂಪೈರ್‌ಗಳು ಪಿಚ್ ಮತ್ತು ಮೈದಾನ ಪರಿಶೀಲಿಸಿದರು. ಆದರೆ 15 ನಿಮಿಷ ಕಳೆದ ನಂತರ ಮತ್ತೆ ಮಳೆ ಬಂದಿತು. ಆದರೆ ಜೋರಾಗಿರಲಿಲ್ಲ.

ಮಳೆ ಸ್ಥಗಿತವಾದ ನಂತರ 9,10ರ ಸುಮಾರಿಗೆ ಅಂಪೈರ್‌ಗಳು ಪಿಚ್ ಪರಿಶೀಲನೆ ಮಾಡಿದರು. 9.40ಕ್ಕೆ ಆಟ ಆರಂಭಿಸಲು ಸೂಚಿಸಿದರು. ಯಾವುದೇ ಓವರ್‌ ಕಡಿತ ಮಾಡಲಿಲ್ಲ. 

ಸಂಕ್ಷಿಪ್ತ ಸ್ಕೋರ್‌: ಮುಂಬೈ ಇಂಡಿಯನ್ಸ್‌: 20 ಓವರ್‌ಗಳಲ್ಲಿ 6ಕ್ಕೆ 203 (ಜಾನಿ ಬೆಸ್ಟೊ38, ತಿಲಕ್‌ ವರ್ಮಾ 44, ಸೂರ್ಯಕುಮಾರ್‌ ಯಾದವ್ 44, ನಮನ್‌ ಧೀರ್‌ 37; ಅಜ್ಮತ್‌ವುಲ್ಲಾ ಒಮರ್‌ಜೈ 43ಕ್ಕೆ 2). ಪಂಜಾಬ್‌ ಕಿಂಗ್ಸ್‌: 19 ಓವರ್‌ಗಳಲ್ಲಿ 5ಕ್ಕೆ 207 (ಪ್ರಿಯಾಂಶ್‌ ಆರ್ಯ 20, ಜೋಶ್‌ ಇಂಗ್ಲಿಸ್‌ 38, ಶ್ರೇಯಸ್‌ ಅಯ್ಯರ್‌ ಔಟಾಗದೇ 87, ನೇಹಲ್‌ ವಧೇರಾ 48). ಫಲಿತಾಂಶ: ಪಂಜಾಬ್‌ ಕಿಂಗ್ಸ್‌ ತಂಡಕ್ಕೆ 5 ವಿಕೆಟ್‌ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.