ರಜತ್ ಪಾಟೀದಾರ್ ಬ್ಯಾಟಿಂಗ್ ವೈಖರಿ
ಪಿಟಿಐ ಚಿತ್ರ
ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಚೆನ್ನೈನಲ್ಲಿ ಪಂದ್ಯ ಗೆದ್ದುಕೊಟ್ಟ ಎರಡನೇ ನಾಯಕ ಎಂಬ ಶ್ರೇಯ ರಜತ್ ಪಾಟೀದಾರ್ ಅವರದ್ದಾಗಿದೆ.
ಎಂ.ಎ. ಚಿದರಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ 50 ರನ್ ಅಂತರದ ಜಯ ಸಾಧಿಸಿದ ಬಳಿಕ ಮಾತನಾಡಿರುವ ರಜತ್, 'ಅಭಿಮಾನಿಗಳ ಕಾರಣದಿಂದಾಗಿ ಚೆನ್ನೈ ವಿರುದ್ಧ ಚೆಪಾಕ್‌ನಲ್ಲಿ ಆಡುವುದು ಯಾವಾಗಲೂ ವಿಶೇಷ ಸಂಗತಿಯೇ' ಎಂದು ಹೇಳಿದ್ದಾರೆ.
'ಈ ಪಿಚ್‌ನಲ್ಲಿ ಉತ್ತಮ ಮೊತ್ತ ಕಲೆಹಾಕಿದ್ದೆವು. ಚೆಂಡು ತುಸು ನಿಂತು ಬರುತ್ತಿದ್ದ ಕಾರಣ, ಬ್ಯಾಟಿಂಗ್ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ' ಎಂದಿರುವ ಅವರು, '200 ರನ್ ಗಳಿಸುವ ಯೋಜನೆ ಹಾಕಿಕೊಂಡಿದ್ದೆವು. ಏಕೆಂದರೆ ಅಷ್ಟು ರನ್ ಗುರಿ ಬೆನ್ನಟ್ಟಿ ಗೆಲ್ಲುವುದು ಸುಲಭವಲ್ಲ ಎಂಬುದು ನಮ್ಮ ಲೆಕ್ಕಾಚಾರವಾಗಿತ್ತು' ಎಂದು ತಿಳಿಸಿದ್ದಾರೆ.
32 ಎಸೆತಗಳಲ್ಲಿ 51 ರನ್ ಬಾರಿಸಿ ಪಂದ್ಯಶ್ರೇಷ್ಠ ಎನಿಸಿಕೊಂಡ ಅವರು, 'ಎಷ್ಟು ಹೊತ್ತು ಕ್ರೀಸ್‌ನಲ್ಲಿ ಇರಲು ಸಾಧ್ಯವೋ ಅಷ್ಟೂ ಹೊತ್ತು ಪ್ರತಿ ಎಸೆತವನ್ನು ಬಾರಿಸಲು ಪ್ರಯತ್ನಿಸಬೇಕೆಂಬ ನನ್ನ ಗುರಿ ಸ್ಪಷ್ಟವಾಗಿತ್ತು. ನಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಕಳೆದ ಪಂದ್ಯದಲ್ಲಿ ಆಡಿದಂತೆಯೇ ಮುಂದುವರಿದೆವು' ಎಂದಿದ್ದಾರೆ.
'ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡುತ್ತಿತ್ತು. ಹಾಗಾಗಿ, ಆರಂಭದಲ್ಲೇ ಸ್ಪಿನ್ನರ್‌ಗಳನ್ನು ಬಳಸಲು ಮುಂದಾದೆವು. ಅದರಂತೆ, ಲಿಯಾಮ್ ಲಿವಿಂಗ್‌ಸ್ಟೋನ್ (4 ಓವರ್: 28 ರನ್, 2 ವಿಕೆಟ್) ಅದ್ಭುತವಾಗಿ ಬೌಲಿಂಗ್ ಮಾಡಿದರು. ಜೋಶ್ ಹ್ಯಾಜಲ್‌ವುಡ್ ಆರಂಭದಲ್ಲೇ ವಿಕೆಟ್‌ಗಳನ್ನು ಪಡೆದದ್ದು ಪಂದ್ಯಕ್ಕೆ ತಿರುವು ನೀಡಿತು' ಎಂದು ಶ್ಲಾಘಿಸಿದ್ದಾರೆ.
17 ವರ್ಷದ ಬಳಿಕ ಜಯ
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 196 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಸಿಎಸ್‌ಕೆ, 8 ವಿಕೆಟ್‌ಗೆ 146 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದು ಚೆನ್ನೈ ಪಿಚ್‌ನಲ್ಲಿ ಆರ್‌ಸಿಬಿಗೆ ದೊರೆತ ಎರಡನೇ ಜಯ.
ಐಪಿಎಲ್‌ನ ಮೊದಲ ಆವೃತ್ತಿಯ (2008ರ) ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಗೆದ್ದಿದ್ದ ಆರ್‌ಸಿಬಿ, ನಂತರ ಆಡಿದ ಸತತ 8 ಪಂದ್ಯಗಳಲ್ಲಿ ಸೋಲು ಕಂಡಿತ್ತು. 2008ರಲ್ಲಿ ರಾಹುಲ್ ದ್ರಾವಿಡ್ ನಾಯಕರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.