ಆರ್‌ಸಿಬಿ
ಚೆನ್ನೈ: ಐಪಿಎಲ್ ಮೊದಲ ಬಾರಿ ನಡೆದಾಗ ಚೆನ್ನೈನಲ್ಲಿ ಜಯಗಳಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 17 ವರ್ಷಗಳ ದೀರ್ಘ ಅವಧಿಯ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅದರದೇ ತವರಿನಲ್ಲಿ ಸೋಲಿಸಿ ಸಂಭ್ರಮಿಸಿತು. ಶುಕ್ರವಾರ ನಡೆದ ಪಂದ್ಯದಲ್ಲಿ ಸಂಘಟಿತ ಆಟವಾಡಿದ ಆರ್‌ಸಿಬಿ 50 ರನ್‌ಗಳಿಂದ ಋತುರಾಜ್ ಗಾಯಕವಾಡ ಪಡೆಯನ್ನು ಸೋಲಿಸಿ ಸತತ ಎರಡನೇ ಗೆಲುವಿನೊಡನೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಿತು.
ಚೆಪಾಕ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಿರೀಕ್ಷೆಗೆ ಮೀರಿ ಏಕಪಕ್ಷೀಯವಾಯಿತು. ಟಾಸ್ ಸೋತು ಬ್ಯಾಟ್ ಮಾಡಿದ್ದ ಆರ್‌ಸಿಬಿ ಆರಂಭದಿಂದಲೇ ಆಕ್ರಮಣದ ಆಟಕ್ಕೆ ಒತ್ತು ನೀಡಿ 20 ಓವರುಗಳಲ್ಲಿ 7 ವಿಕೆಟ್‌ಗೆ 196 ರನ್‌ಗಳ ಉತ್ತಮ ಮೊತ್ತ ದಾಖಲಿಸಿತು. ರಜತ್ ಪಾಟೀದಾರ್ ಅರ್ಧ ಶತಕದ ಮೂಲಕ ಮಧ್ಯಮ ಹಂತದಲ್ಲಿ ಆಸರೆಯಾದರೆ, ಟಿಮ್ ಡೇವಿಡ್ (ಔಟಾಗದೇ 22, 8ಎಸೆತ, 6x3) ಕೊನೆಯಲ್ಲಿ ಮಿಂಚಿನ ಆಟವಾಡಿದ್ದರು.
ಈ ಸವಾಲಿನ ಎದುರು ಚೆನ್ನೈ ಆರಂಭ ದಿಂದಲೇ ಆಘಾತ ಅನುಭವಿಸಿತು. ತಂಡವು ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಆರ್‌ಸಿಬಿಯ ವೇಗ–ಸ್ಪಿನ್ ದಾಳಿಗೆ ಸಿಲುಕಿ 8 ವಿಕೆಟ್‌ಗೆ 146 ರನ್ ಗಳಿಸಲಷ್ಟೇ ಶಕ್ತವಾಯಿತು.
ಆರಂಭ ಆಟಗಾರ ರಚಿನ್ ರವೀಂದ್ರ (41, 31ಎಸೆತ) ಬಿಟ್ಟರೆ ಉಳಿದವರು ಪ್ರತಿರೋಧ ತೋರಲಿಲ್ಲ. ಒಂಬತ್ತನೇ ಕ್ರಮಾಂಕದಲ್ಲಿ ಆಡಲು ಬಂದ ಧೋನಿ (ಔಟಾಗದೇ 30, 16ಎ) ಬಿರುಸಿನ ಆಟವಾಡಿದರೂ ಗುರಿ ಬಹಳ ದೂರವಿತ್ತು.
ವೇಗದ ಬೌಲರ್‌ಗಳಾದ ಜೋಶ್ ಹ್ಯಾಜಲ್‌ವುಡ್ (21ಕ್ಕೆ3), ಭುವನೇಶ್ವರ ಕುಮಾರ್ (20ಕ್ಕೆ1), ಯಶ್ ದಯಾಳ್ (18ಕ್ಕೆ2) ಮತ್ತು ಆಫ್ ಸ್ಪಿನ್ನರ್ ಲಿವಿಂಗ್‌ಸ್ಟೋನ್ (28ಕ್ಕೆ2) ಅವರು ಎದುರಾಳಿ ತಂಡಕ್ಕೆ ಕಡಿವಾಣ ಹಾಕಿದರು.
ಆರ್‌ಸಿಬಿ ನೆರವಿಗೆ ಪಾಟೀದಾರ್, ಡೇವಿಡ್
ಇದಕ್ಕೆ ಮೊದಲು, ರಾಯಲ್ ಚಾಲೆಂಜರ್ಸ್ ತಂಡಕ್ಕೆ ಫಿಲ್ ಸಾಲ್ಟ್ (32, 16ಎ, 4x5, 6x1) ಮತ್ತು ದೇವದತ್ತ ಪಡಿಕ್ಕಲ್ (27, 14 ಎಸೆತ) ಉತ್ತಮ ಆರಂಭ ನೀಡಿದ್ದರು. ಅವರ ವೇಗದ ಆಟದಿಂದಾಗಿ ವಿರಾಟ್ ಕೊಹ್ಲಿ (31, 30ಎ, 4x2, 6x1) ಅವರ ಪರದಾಟ ಎದ್ದುಕಾಣಲಿಲ್ಲ.
ಸಾಲ್ಟ್ ಮತ್ತು ಕೊಹ್ಲಿ ಮೊದಲ ವಿಕೆಟ್‌ಗೆ ಐದು ಓವರುಗಳಲ್ಲಿ 45 ರನ್ ಗಳಿಸಿದರು. ಈ ಹಂತದಲ್ಲಿ ಸಾಲ್ಟ್, ಎಡಗೈ ಸ್ಪಿನ್ನರ್ ನೂರ್ ಅಹ್ಮದ್ ಬೌಲಿಂಗ್‌ನಲ್ಲಿ ಧೋನಿ ಅವರಿಂದ ಮಿಂಚಿನ ಸ್ಟಂಪಿಂಗ್‌ಗೆ ಒಳಗಾದರು. ಪಡಿಕ್ಕಲ್ (27, 14 ಎ) ಕೂಡ ಬಂದ ಹಾಗೇ ಆಕ್ರಮಣಕ್ಕೆ ತೊಡಗಿದರು.
ಪಡಿಕ್ಕಲ್ ನಿರ್ಗಮನದ ನಂತರ ಆಡಲಿಳಿದ ನಾಯಕ ರಜತ್ ಪಾಟೀದಾರ್ ಅವರಿಗೆ ಅದೃಷ್ಟವೂ ಕೈಹಿಡಿಯಿತು. ಒಂದು ಸುಲಭ ಕ್ಯಾಚಿನ ಜೊತೆಗೆ ಎರಡು ಅರೆ ಜೀವದಾನಗಳೂ ದೊರೆತವು. ಪಾಟೀದಾರ್ ನಂತರ ಆಕರ್ಷಕ ಹೊಡೆತಗಳನ್ನು ಪ್ರದರ್ಶಿಸಿದರು. ವೇಗ, ಸ್ಪಿನ್ ಬೌಲರ್‌ಗಳನ್ನು ದಂಡಿಸಿದರು.
13ನೇ ಓವರಿನಲ್ಲಿ ನೂರ್ ಅಹ್ಮದ್, ಕೊಹ್ಲಿ ಅವರ ವಿಕೆಟ್ ಕೂಡ ಪಡೆದರು. ಪಾಟೀದಾರ್ ಒಂದೆಡೆ ರನ್ ವೇಗ ಕುಸಿಯದಂತೆ ನೋಡಿಕೊಂಡರೂ, ಇನ್ನೊಂದು ಕಡೆ ವಿಕೆಟ್‌ಗಳು ಬೀಳತೊಡಗಿದವು. 19ನೇ ಓವರಿನ ನಂತರ 177 ರನ್‌ಗಳಾಗುಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು. ಆ ಓವರ್‌ನಲ್ಲಿ ಪಥಿರಾಣ ಒಂದು ವೈಡ್ ಮಾತ್ರ ಕೊಟ್ಟು 2 ವಿಕೆಟ್ ಪಡೆದಿದ್ದರು. ಆದರೆ ಅಂತಿಮ ಓವರಿನಲ್ಲಿ ಟಿಮ್ ಡೇವಿಡ್ ಪ್ರತ್ಯಾಕ್ರಮಣ ನಡೆಸಿದರು. ಸ್ಯಾಮ್ ಕರನ್ ಬೌಲಿಂಗ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್‌ಗಳನ್ನು ಸಿಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.