ವಿರಾಟ್ ಕೊಹ್ಲಿ
ಕೃಪೆ: ಪಿಟಿಐ ಹಾಗೂ (ಒಳಚಿತ್ರ) ರಾಯಿಟರ್ಸ್
ಬೆಂಗಳೂರು: ಭಾರತ–ಪಾಕಿಸ್ತಾನ ಸೇನಾ ಸಂಘರ್ಷದ ಕಾರಣ ಒಂದು ವಾರ ಮುಂದೂಡಿಕೆಯಾಗಿದ್ದ ಐಪಿಎಲ್ ಟೂರ್ನಿ ಇಂದು ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪುನರಾರಂಭಗೊಳ್ಳುತ್ತಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳೇ, ಈ ಪಂದ್ಯದಲ್ಲೂ ಸೆಣಸಾಟಕ್ಕೆ ಸಜ್ಜಾಗಿವೆ.
ನಡೆಯಲಿರುವುದು ಟಿ20 ಪಂದ್ಯವೇ ಆದರೂ, ಕ್ರೀಡಾಂಗಣದ ಸುತ್ತಲೂ 'ನಂ.18 ಟೆಸ್ಟ್ ಜೆರ್ಸಿ' ಮಾರಾಟ ಜೋರಾಗಿದೆ.
ದೀರ್ಘ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ವಿರಾಟ್ ಕೊಹ್ಲಿ ಅವರು ಕಣಕ್ಕಿಳಿಯುತ್ತಿರುವ ಮೊದಲ ಪಂದ್ಯ ಇದಾಗಿದೆ. ಹಾಗಾಗಿ, ಕೊಹ್ಲಿ ಅವರ ಗೌರವಾರ್ಥವಾಗಿ ಅಭಿಮಾನಿಗಳು ಬಿಳಿ ಪೋಷಾಕಿನೊಂದಿಗೆ ಕ್ರೀಡಾಂಗಣದತ್ತ ಹೆಜ್ಜೆ ಇಡುತ್ತಿದ್ದಾರೆ.
ಎದೆ ಮೇಲೆ ಕೊಹ್ಲಿ ಅವರ ಟ್ಯಾಟೂ ಹಾಕಿಸಿಕೊಂಡಿರುವ ಒಡಿಶಾದ ಮನೋಜ್ ಎಂಬವರು, 'ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ನಿರ್ಧಾರವನ್ನು ವಿರಾಟ್ ಕೊಹ್ಲಿ ಹಿಂಪಡೆಯಬೇಕು' ಎಂದು ಒತ್ತಾಯಿಸಿದ್ದಾರೆ.
'ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವುದರಿಂದ ನೋವಾಗಿದೆ. ಅವರು, ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವಾಸಾರ್ಹ ಆಟಗಾರ. ಅವರ ಫಿಟ್‌ನೆಸ್ ಮತ್ತು ಆಕ್ರಮಣಕಾರಿ ಆಟ ನನಗಿಷ್ಟ' ಎಂದು 'ನ.18 ಜೆರ್ಸಿ' ತೊಟ್ಟಿದ್ದ ಬಾಲಕನೊಬ್ಬ ಮಾತನಾಡಿದ್ದಾನೆ.
ಅಭಿಯಾನ ಕೈಬಿಟ್ಟ ಅಭಿಮಾನಿಗಳು
ಆರ್‌ಸಿಬಿಯ 'ಶಾಶ್ವತ' ಸದಸ್ಯ ವಿರಾಟ್, ಟೆಸ್ಟ್ ಕ್ರಿಕೆಟ್‌ಗೆ ಕಳೆದ ಸೋಮವಾರ (ಮೇ 12) ವಿದಾಯ ಹೇಳಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ 'ವೈಟ್ ಜೆರ್ಸಿ' ಮೂಲಕ ಅವರನ್ನು ಗೌರವಿಸಿ, ಅಭಿನಂದಿಸಲು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅಭಿಯಾನ ಆರಂಭಿಸಿದ್ದರು.
ಆದರೆ ತಾಂತ್ರಿಕ ಕಾರಣಗಳಿಂದಾಗಿ ಈ ಅಭಿಯಾನ ಕೈಬಿಟ್ಟಿರುವುದಾಗಿ ಆರ್‌ಸಿಬಿ ಫ್ಯಾನ್ ಕ್ಲಬ್‌ನ ಪ್ರತಿನಿಧಿಗಳು ನಂತರ ತಿಳಿಸಿದ್ದರು.
ಪಂದ್ಯವು ರಾತ್ರಿ ವೇಳೆ ನಡೆಯುವುದರಿಂದ ಮತ್ತು ಚುಟುಕು ಪಂದ್ಯದಲ್ಲಿ ಬಿಳಿ ಬಣ್ಣದ ಚೆಂಡನ್ನು ಬಳುಸುವುದರಿಂದ, ಬಿಳಿ ಪೋಷಾಕು ಧರಿಸಿದರೆ ಆಟಗಾರರಿಗೆ ತೊಂದರೆಯಾಗುತ್ತದೆ. ಪಂದ್ಯಕ್ಕೆ ಅಡಚಣೆಯಾಗದಿರಲಿ ಎಂದು ಯೋಚನೆ ಕೈಬಿಟ್ಟಿರುವುದಾಗಿ ಹೇಳಿದ್ದರು.
ಆದಾಗ್ಯೂ, ಬಿಳಿ ಜೆರ್ಸಿಗಳನ್ನು ತೊಟ್ಟ ಹಲವು ಅಭಿಮಾನಿಗಳು ಕ್ರೀಡಾಂಗಣದತ್ತ ಲಗ್ಗೆ ಹಾಕುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.