ADVERTISEMENT

IPL 2025 RCB vs MI: ‘ಹಾರ್ದಿಕ್ ಚಾಲೆಂಜ್’ ಗೆದ್ದ ಆರ್‌ಸಿಬಿ

ವಿರಾಟ್–ರಜತ್ ಅಬ್ಬರ * ವಾಂಖೆಡೆಯಲ್ಲಿ ದಶಕದ ನಂತರ ಗೆದ್ದ ಬೆಂಗಳೂರು

ಪಿಟಿಐ
Published 7 ಏಪ್ರಿಲ್ 2025, 15:56 IST
Last Updated 7 ಏಪ್ರಿಲ್ 2025, 15:56 IST
<div class="paragraphs"><p>ಹಾರ್ದಿಕ್‌ ಪಾಂಡ್ಯ ಮತ್ತು ಕೃಣಾಲ್‌ ಪಾಂಡ್ಯ</p></div>

ಹಾರ್ದಿಕ್‌ ಪಾಂಡ್ಯ ಮತ್ತು ಕೃಣಾಲ್‌ ಪಾಂಡ್ಯ

   

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಐಪಿಎಲ್ ಪಂದ್ಯದ ಕೊನೆಯ ಮೂರು ಓವರ್‌ಗಳು ರೋಚಕ ರಸದೌತಣ ನೀಡಿದವು. 

ವೇಗದ ಜೋಡಿ ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್ ಮತ್ತು ಸ್ಪಿನ್ನರ್ ಕೃಣಾಲ್ ಪಾಂಡ್ಯ ಅವರ ಚಾಣಾಕ್ಷ ಬೌಲಿಂಗ್‌ನಿಂದಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಹತ್ತು ವರ್ಷಗಳ ನಂತರ ಮುಂಬೈನಲ್ಲಿ ಜಯಗಳಿಸಿತು.  

ADVERTISEMENT

222 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಮುಂಬೈ ತಂಡವು 99 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಾಗ ಆರ್‌ಸಿಬಿ ಸುಲಭ ಜಯದ ಕನಸು ಕಂಡಿತು. ಆದರೆ ನಾಯಕ ಹಾರ್ದಿಕ್ ಪಾಂಡ್ಯ (42; 15ಎ) ಮತ್ತು ತಿಲಕ್ ವರ್ಮಾ (56; 29ಎ) ಅವರಿಬ್ಬರೂ ಕೇವಲ 34 ಎಸೆತಗಳಲ್ಲಿ ಸಿಡಿಸಿದ 89 ರನ್‌ಗಳನ್ನು ಸೇರಿಸಿದರು. ಎದುರಾಳಿಗಳಿಗೆ ಸೋಲಿನ ಆತಂಕ ಮೂಡಿಸಿದರು. 

ತಿಲಕ್ ಮತ್ತು ಹಾರ್ದಿಕ್ ಅವರು ಬೌಂಡರಿ, ಸಿಕ್ಸರ್‌ಗಳ ಮಳೆಗರೆದರು. ಅದರಲ್ಲೂ ಹಾರ್ದಿಕ್ ತಮ್ಮ ಸಹೋದರ, ಸ್ಪಿನ್ನರ್ ಕೃಣಾಲ್ ಪಾಂಡ್ಯ ಅವರ ಬೌಲಿಂಗ್‌ನಲ್ಲಿಯೇ ಎರಡು ಸಿಕ್ಸರ್ ಹೊಡೆದರು. ಇದರಿಂದಾಗಿ ಮುಂಬೈ ತಂಡಕ್ಕೆ ಗೆಲುವಿಗಾಗಿ ಕೊನೆಯ 3 ಓವರ್‌ಗಳಲ್ಲಿ  41 ರನ್‌ಗಳ ಅಗತ್ಯವಿತ್ತು. 

ನಾಯಕ ರಜತ್ ಅವರು 18ನೇ ಓವರ್ ಬೌಲಿಂಗ್ ಮಾಡಲು ಭುವನೇಶ್ವರ್‌ಗೆ ಚೆಂಡುಕೊಟ್ಟರು. ಭುವಿ ನಿರೀಕ್ಷೆ ಹುಸಿ ಮಾಡಲಿಲ್ಲ. ಮೂರನೇ ಎಸೆತದಲ್ಲಿ ವರ್ಮಾ ವಿಕೆಟ್ ಪಡೆದು, ಜೊತೆಯಾಟ ಮುರಿದರು. ಆದರೆ ಹಾರ್ದಿಕ್ ಮಾತ್ರ ತಮ್ಮ ಆಟವನ್ನು ಮುಂದುವರಿಸಿದರು. ಅವರೊಂದಿಗೆ ನಮನ್ ಧೀರ್ ಕೂಡ ಸೇರಿಕೊಂಡರು. ಕೊನೆಯ ಎರಡು ಓವರ್‌ಗಳಲ್ಲಿ 28 ರನ್‌ ಅಗತ್ಯವಿತ್ತು. 

ಹ್ಯಾಜಲ್‌ವುಡ್ 19ನೇ ಓವರ್‌ನ ಮೊದಲ ಎಸೆತ ದಲ್ಲಿಯೇ ಪಾಂಡ್ಯ ವಿಕೆಟ್ ಗಳಿಸಿದರು. ಫೀಲ್ಡರ್ ಲಿವಿಂಗ್‌ಸ್ಟೋನ್ ಪಡೆದ ಅಮೋಘ ಕ್ಯಾಚ್‌ಗೆ ಹಾರ್ದಿಕ್ ನಿರ್ಗಮಿಸಬೇ ಕಾಯಿತು. ಪಂದ್ಯಕ್ಕೆ ಇದು ಪ್ರಮುಖ ತಿರುವಾಯಿತು. ಈ ಓವರ್‌ನಲ್ಲಿ ಮಿಚೆಲ್‌ ಸ್ಯಾಂಟನರ್ ಒಂದು ಸಿಕ್ಸರ್ ಹೊಡೆದರು. ಆದರೂ ಕೊನೆ ಓವರ್‌ನಲ್ಲಿ 19 ರನ್‌ ಗಳಿಸುವ ಸವಾಲು ಮುಂಬೈಗಿತ್ತು. 

ಕೊನೆಯ ಓವರ್ ಹಾಕಿದ ಕೃಣಾಲ್ ಮೊದಲ ಎಸೆತದಲ್ಲಿ ಸ್ಯಾಂಟನರ್ ವಿಕೆಟ್ ಪಡೆದರು. ಎರಡನೇ ಎಸೆತದಲ್ಲಿ ದೀಪಕ್ ಚಾಹರ್ ಸಿಕ್ಸರ್‌ಗೆತ್ತಿದ ಚೆಂಡನ್ನು ಬೌಂಡರಿ ಲೈನ್‌ನಲ್ಲಿ ಫಿಲ್ ಸಾಲ್ಟ್ ಚಾಕಚಕ್ಯತೆಯ ಫೀಲ್ಡಿಂಗ್  ಸಹಕಾರದಿಂದ ಟಿಮ್ ಡೇವಿಡ್  ಕ್ಯಾಚ್ ಪಡೆದರು. ಇದೆ ಓವರ್‌ ನಲ್ಲಿ ನಮನ್  ವಿಕೆಟ್ ಕೂಡ ಕೃಣಾಲ್ ಪಾಲಾಯಿತು. ಮುಂಬೈ 9 ವಿಕೆಟ್‌ಗೆ 209 ರನ್‌ಗಳೊಂದಿಗೆ ಹೋರಾಟ ಮುಗಿಸಿ, 12 ರನ್‌ಗಳಿಂದ ಸೋತಿತು. ಮುಂಬೈಗೆ ಇದು ಟೂರ್ನಿಯಲ್ಲಿ ನಾಲ್ಕನೇ ಸೋಲು.

 ವಿರಾಟ್–ರಜತ್ ಬೀಸಾಟ: ಟಾಸ್ ಗೆದ್ದ ಮುಂಬೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರ್‌ಸಿಬಿ  20 ಓವರ್‌‌ಗಳಲ್ಲಿ 5 ವಿಕೆಟ್‌ಗಳಿಗೆ 221 ರನ್‌ಗಳ ದೊಡ್ಡ ಮೊತ್ತ ಗಳಿಸಲು  ವಿರಾಟ್ ಕೊಹ್ಲಿ (67; 42ಎ, 4X8, 6X2) ಹಾಗೂ ರಜತ್ (64; 32ಎ, 4X5, 6X4) ಅವರ ಬೀಸಾಟ ಕಾರಣವಾಯಿತು. 

ಅಗ್ರಮಾನ್ಯ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ತಂಡಕ್ಕೆ ಮರಳಿದ್ದರಿಂದ ಮುಂಬೈ ತಂಡವು ಅಪಾರ ಆತ್ಮವಿಶ್ವಾಸದಲ್ಲಿತ್ತು. ಎಡಗೈ ವೇಗಿ ಟ್ರೆಂಟ್‌ ಬೌಲ್ಟ್‌ ಇನಿಂಗ್ಸ್‌ನ ಎರಡನೇ ಎಸೆತದಲ್ಲಿಯೇ ಫಿಲ್ ಸಾಲ್ಟ್‌ ಅವರ ವಿಕೆಟ್ ಕಿತ್ತರು. ಆದರೆ ಇದರಿಂದ ತಂಡಕ್ಕೆ ಹೆಚ್ಚಿನ ಹಾನಿಯಾಗದಂತೆ ವಿರಾಟ್ ಮತ್ತು ದೇವದತ್ತ ಪಡಿಕ್ಕಲ್ (37; 22ಎ) ನೋಡಿಕೊಂಡರು. 

ಎಡಗೈ ಮಣಿಕಟ್ಟಿನ ಸ್ಪಿನ್ನರ್ ವಿಘ್ನೇಷ್ ಪುತ್ತೂರ್ ಅವರಿಗೆ 9ನೇ ಓವರ್ ಬೌಲಿಂಗ್ ಮಾಡಲು ಚೆಂಡು ಕೊಟ್ಟ ಪಾಂಡ್ಯ ತಂತ್ರಗಾರಿಕೆ ಫಲಿಸಿತು. ದೊಡ್ಡ ಹೊಡೆತಕ್ಕೆ ಯತ್ನಿಸಿದ ಪಡಿಕ್ಕಲ್, ವಿಲ್‌ ಜಾಕ್ಸ್‌ಗೆ ಕ್ಯಾಚ್ ಆದರು. 

ಕ್ರೀಸ್‌ಗೆ ಬಂದ ರಜತ್ ಅವರು ಕೊಹ್ಲಿಯೊಂದಿಗೆ ರನ್‌ ಬೇಟೆಯಾಡಿದರು. ಇಬ್ಬರೂ 200ರ ಸ್ಟ್ರೈಕ್‌ರೇಟ್‌
ನಲ್ಲಿ ರನ್‌ ಸೂರೆ ಮಾಡಿದರು. 15ನೇ ಓವರ್‌ನಲ್ಲಿ  ಹಾರ್ದಿಕ್ ಅವರು ವಿರಾಟ್ ವಿಕೆಟ್ ಗಳಿಸಿದರು. ಅದೇ ಓವರ್‌ನಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್‌ ಕೂಡ ವಿಕೆಟ್‌ ಒಪ್ಪಿಸಿದರು. ಈ ಹಂತದಲ್ಲಿಯೂ ರಜತ್ ಆಟದ ವೇಗ ಜೋರಾಗಿಯೇ ಇತ್ತು. ಅವರೊಂದಿಗೆ ಜಿತೇಶ್ ಶರ್ಮಾ ಸೇರಿಕೊಂಡರು. ‘ಡೆತ್ ಓವರ್‌’ಗಳಲ್ಲಿ ಅಗತ್ಯವಿದ್ದ ಸ್ಫೋಟಕ ಶೈಲಿಯ ಬ್ಯಾಟಿಂಗ್‌ ಮಾಡಿದ ಜಿತೇಶ್ 19 ಎಸೆತಗಳಲ್ಲಿ ಅಜೇಯ 40 ರನ್‌ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.