ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿರುವುದು
ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.
ಒಂದು ವಾರದ ನಂತರ ಐಪಿಎಲ್ ಪುನರಾರಂಭ ಇಂದು | ಹೇಜಲ್‌ವುಡ್, ಭುವನೇಶ್ವರ್ ಕುಮಾರ್ ಮೇಲೆ ನಿರೀಕ್ಷೆ | ರಜತ್ ಪಾಟೀದಾರ್ ಕಣಕ್ಕಿಳಿಯುವ ಭರವಸೆ
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರ ಚಿತ್ರಗಳಿರುವ ಬಸ್ ಶುಕ್ರವಾರ ಮಧ್ಯಾಹ್ನ ಚಿನ್ನಸ್ವಾಮಿ ಕ್ರೀಡಾಂಗಣದ ಮುಖ್ಯದ್ವಾರವನ್ನು ಪ್ರವೇಶಿಸುತ್ತಿದ್ದಂತೆಯೇ ಅಲ್ಲಿದ್ದ ಅಭಿಮಾನಿಗಳ ಗುಂಪುಗಳಲ್ಲಿ ಮಿಂಚಿನ ಸಂಚಲನವಾಯಿತು. ‘ವಿರಾಟ್..ವಿರಾಟ್..ಕಿಂಗ್ ಕೊಹ್ಲಿ.. ಆರ್‌ಸಿಬಿ..ಆರ್‌ಸಿಬಿ..’ ಎಂಬ ಕೂಗುಗಳು ಕಬ್ಬನ್ ಉದ್ಯಾನದಿಂದ ಬೀಸುತ್ತಿದ್ದ ತಂಪುಗಾಳಿಗೂ ಕಾವೇರಿಸಿದವು.
ಸಿಲಿಕಾನ್ ಸಿಟಿಯ ಕ್ರಿಕೆಟ್‌ಪ್ರೇಮಿಗಳಿಗೆ ಆರ್‌ಸಿಬಿ ಮತ್ತು ವಿರಾಟ್ ಎಂದರೆ ಮೊದಲೇ ಅಚ್ಚುಮೆಚ್ಚು. ಕೆಲ ದಿನಗಳ ಹಿಂದಷ್ಟೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿ ಬಂದಿರುವ ವಿರಾಟ್ ಬಗೆಗಿನ ಆಕರ್ಷಣೆ ಹೆಚ್ಚಿದೆ. ಶನಿವಾರ ಇಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ನಡುವಣ ಪಂದ್ಯದಲ್ಲಿ ಅವರ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳೂ ತುದಿಗಾಲಿನಲ್ಲಿ ನಿಂತಿದ್ದಾರೆ.
‘ವಿರಾಟ್ ಕೊಹ್ಲಿ ಅವರ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಮೊದಲಿನಂತೆಯೇ ಇದ್ದಾರೆ. ಈ ವರ್ಷ ಆರ್‌ಸಿಬಿಗಾಗಿ ಏನನ್ನು ಸಾಧಿಸಬೇಕು ಎಂಬುದರ ಬಗ್ಗೆ ಅಷ್ಟೇ ಅವರ ಗಮನ ಕೇಂದ್ರಿಕೃತವಾಗಿದೆ. ಅವರಿಗೆ ತಮ್ಮ ನಿರ್ಧಾರಗಳು ಮತ್ತು ಭವಿಷ್ಯದ ಯೋಜನೆಗಳ ಕುರಿತು ಸ್ಪಷ್ಟತೆ ಇದೆ. ಆದ್ದರಿಂದ ಅವರು ಭಾವೋದ್ವೇಗಕ್ಕೆ ಒಳಗಾಗುವವರಲ್ಲ’ ಎಂದು ಆರ್‌ಸಿಬಿ ತಂಡದ ನಿರ್ದೇಶಕ ಮೊ ಬೊಬಾಟ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ತಂಡವು ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಪ್ಲೇ ಆಫ್ ಪ್ರವೇಶಿಸುವ ಸುಲಭ ಅವಕಾಶ ಇದೆ. ರಜತ್ ಪಾಟೀದಾರ್ ನಾಯಕತ್ವದ ಬಳಗವು ಸಮತೋಲನದಿಂದ ಕೂಡಿರುವುದರಿಂದ ಪ್ರಶಸ್ತಿ ಕನಸು ನನಸಾಗುವ ಆಸೆಯೂ ಚಿಗುರಿದೆ. ಹಾಲಿ ಚಾಂಪಿಯನ್ ಕೋಲ್ಕತ್ತ ತಂಡವು ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಆಡಿಲ್ಲ. ಪ್ಲೇ ಆಫ್ ಹಾದಿಯಿಂದ ಬಹುತೇಕ ಹೊರಬಿದ್ದಿದೆ. ತಂಡದ ಪ್ರಮುಖ ಆಟಗಾರರಾದ ಸುನಿಲ್ ನಾರಾಯಣ್, ಆ್ಯಂಡ್ರೆ ರಸೆಲ್, ರಿಂಕು ಸಿಂಗ್, ಕ್ವಿಂಟನ್ ಡಿ ಕಾಕ್, ರಮಣದೀಪ್ ಸಿಂಗ್, ಬೌಲರ್ ವರುಣ್ ಚಕ್ರವರ್ತಿ, ವೈಭವ್ ಅರೋರಾ, ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರ ಫಾರ್ಮ್ ಸ್ಥಿರವಾಗಿಲ್ಲ. ಇದರ ಲಾಭವನ್ನು ಪಡೆಯಲು ಆರ್‌ಸಿಬಿ ಸಿದ್ಧವಾಗಿದೆ.
ಆತಿಥೇಯ ತಂಡದ ನಾಯಕ ರಜತ್ ಬೆರಳಿನ ಗಾಯದಿಂದ ಬಹುತೇಕ ಚೇತರಿಸಿಕೊಂಡಿದ್ದಾರೆ. ಆದರೆ ಅವರು ಕಣಕ್ಕಿಳಿಯುವ ಬಗ್ಗೆ ಪಂದ್ಯದ ದಿನ ಸ್ಪಷ್ಟವಾಗಲಿದೆ. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ರೊಮೆರಿಯೊ ಶೇಫರ್ಡ್, ದಕ್ಷಿಣ ಆಫ್ರಿಕಾದ ಬೌಲರ್ ಲುಂಗಿ ಗಿಡಿ, ಜೋಷ್ ಹೇಜಲ್‌ವುಡ್, ಆಲ್‌ರೌಂಡರ್ ಟಿಮ್ ಡೇವಿಡ್, ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್, ವಿಕೆಟ್‌ಕೀಪರ್ ಜಿತೇಶ್ ಶರ್ಮಾ ಅವರು ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ.
ಭಾರತ ಮತ್ತು ಪಾಕ್ ನಡುವಣ ಸೇನಾ ಸಂಘರ್ಷದಿಂದಾಗಿ ಒಂದು ವಾರ ಟೂರ್ನಿಗೆ ಬಿಡುವು ಲಭಿಸಿತ್ತು. ಆರ್‌ಸಿಬಿಯಲ್ಲಿದ್ದ ವಿದೇಶಿ ಆಟಗಾರರು ಈ ಅವಧಿಯಲ್ಲಿ ತಮ್ಮ ತವರಿಗೆ ಹೋಗಿ ಮರಳಿ ಬಂದಿದ್ದಾರೆ. ಇದರಿಂದಾಗಿ ಆರ್‌ಸಿಬಿ ಬಳಗದ ಆತ್ಮವಿಶ್ವಾಸ ವೃದ್ಧಿಸಿದೆ. ತನ್ನ ಪಾಲಿನಲ್ಲಿ ಉಳಿದಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಶನಿವಾರವೇ ಆ ಸಿಹಿಸುದ್ದಿಯನ್ನು ತನ್ನ ಅಭಿಮಾನಿಗಳಿಗೆ ನೀಡಲು ಆರ್‌ಸಿಬಿ ಸಿದ್ಧವಾಗಿದೆ.
ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ
ಒಂದು ವಾರ ಬಿಡುವಿನ ನಂತರ ಮತ್ತೆ ಐಪಿಎಲ್ ಶುರುವಾಗುವ ಭರವಸೆ ನಮಗಿತ್ತು. ಆದ್ದರಿಂದ ತರಬೇತಿಯನ್ನು ನಿಲ್ಲಿಸಿರಲಿಲ್ಲ. ಸೋಲು ಗೆಲುವುಗಳು ಆಟದಲ್ಲಿ ಸಾಮಾನ್ಯ ಸಂಗತಿ. ಆದರೆ ಪ್ರತಿ ಪಂದ್ಯದಲ್ಲಿ ಜಯಿಸುವ ಉತ್ಸಾಹದಿಂದಲೇ ಆಡುತ್ತೇವೆಮನೀಷ್ ಪಾಂಡೆ ಕೋಲ್ಕತ್ತ ನೈಟ್ ರೈಡರ್ಸ್ ಆಟಗಾರ
ಹೇಜಲ್‌ವುಡ್ ಗೈರು?
ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಅವರು ತಮ್ಮ ತವರು ಆಸ್ಟ್ರೇಲಿಯಾದಲ್ಲಿ ಭುಜದ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ಅವರಿನ್ನೂ ಆರ್‌ಸಿಬಿ ತಂಡಕ್ಕೆ ಮರಳಿಬಂದಿಲ್ಲ.
‘ನಮ್ಮ ವಿದೇಶಿ ಆಟಗಾರರಲ್ಲಿ ಹೇಜಲ್‌ವುಡ್ ಒಬ್ಬರೇ ಇನ್ನೂ ಮರಳಿಬಂದಿಲ್ಲ. ಅವರು ಭುಜದ ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ವೈದ್ಯಕೀಯ ತಂಡ ಆರೈಕೆ ಮಾಡುತ್ತಿದೆ. ಆರ್‌ಸಿಬಿ ವೈದ್ಯಕೀಯ ಬಳಗ ಮತ್ತು ಆಸ್ಟ್ರೇಲಿಯಾ ವೈದ್ಯರು ಸಂಪರ್ಕದಲ್ಲಿದ್ದಾರೆ. ಹೇಜಲ್‌ವುಡ್ ಅವರ ಚೇತರಿಕೆ ಕುರಿತ ಮಾಹಿತಿಗಳನ್ನು ಪಡೆಯಲಾಗುತ್ತಿದೆ’ ಎಂದು ಆರ್‌ಸಿಬಿ ನಿರ್ದೇಶಕ ಮೊ ಬೊಬಾಟ್ ತಿಳಿಸಿದರು.
ಮಳೆನೀರಲ್ಲಿ ಈಜಾಡಿದ ಟಿಮ್ ಡೇವಿಡ್
ಗುರುವಾರ ಸಂಜೆ ಆರ್‌ಸಿಬಿ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದಾಗಲೇ ಮಳೆ ಸುರಿಯಿತು. ಈ ಸಂದರ್ಭದಲ್ಲಿ ಕ್ರೀಡಾಂಗಣದ ಸಿಬ್ಬಂದಿಯು ಪಿಚ್ ಮತ್ತು ಹೊರಾಂಗಣದಲ್ಲಿ ಹಾಕಿದ್ದ ಹೊದಿಕೆಯ ಮೇಲೆ ನೀರು ತುಂಬಿಕೊಂಡಿತ್ತು. ಆರ್‌ಸಿಬಿ ಆಟಗಾರ ಟಿಮ್ ಡೇವಿಡ್ ಅವರು ಈ ಹೊದಿಕೆಯ ಮೇಲೆ ನಿಂತಿದ್ದ ನೀರಿನಲ್ಲಿ ಈಜಾಡಿದರು. ಮಳೆಯಲ್ಲಿ ನೆನೆದು ಆನಂದಿಸಿದರು. ಅವರ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.