ಐಪಿಎಲ್ ಲೋಗೊ
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ ವೇಳೆ, ಯಾವುದೇ ತಂಡವು ನಿಧಾನಗತಿ ಬೌಲಿಂಗ್ ಮಾಡಿದ ಕಾರಣಕ್ಕಾಗಿ ಇನ್ನುಮುಂದೆ ನಾಯಕನಿಗೆ ಪಂದ್ಯದಿಂದ ನಿಷೇಧ ಹೇರಲಾಗುವುದಿಲ್ಲ. ಬದಲಾಗಿ ಡೀಮೆರಿಟ್ ಪಾಯಿಂಟ್ ವಿಧಿಸಲಾಗುತ್ತದೆ.
ಮುಂಬೈನಲ್ಲಿ ಗುರುವಾರ ನಡೆದ ನಾಯಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು 2024ರ ಆವೃತ್ತಿಯಲ್ಲಿ ಮೂರು ಬಾರಿ ನಿಧಾನಗತಿ ಓವರ್ ಬೌಲಿಂಗ್ ಮಾಡಿದ್ದ ಕಾರಣ, ಆ ತಂಡಗಳ ನಾಯಕರಾದ ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ಅವರಿಗೆ ಒಂದು ಪಂದ್ಯದ ಮಟ್ಟಿಗೆ ನಿಷೇಧ ಹೇರಲಾಗಿತ್ತು.
ಪಂತ್, 2024ರಲ್ಲೇ ಒಂದು ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಹಾರ್ದಿಕ್, 2025ರ ಆವೃತ್ತಿಯಲ್ಲಿ ಮುಂಬೈ ಆಡಲಿರುವ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಅವರ ಬದಲು ಸೂರ್ಯಕುಮಾರ್ ಯಾದವ್ ತಂಡ ಮುನ್ನಡೆಸಲಿದ್ದಾರೆ.
'ಲೆವಲ್ 1 ಅಪರಾಧಕ್ಕಾಗಿ ನಾಯಕರಿಗೆ ಮೂರು ಡೀಮೆರಿಟ್ ಪಾಯಿಂಟ್‌ಗಳೊಂದಿಗೆ ಪಂದ್ಯ ಶುಲ್ಕದ ಶೇ 25 ರಿಂದ 75 ರಷ್ಟು ದಂಡ ವಿಧಿಸಲಾಗುತ್ತದೆ. ಲೆವಲ್ 2 ಅಪರಾಧಕ್ಕೆ ನಾಲ್ಕು ಡೀಮೆರಿಟ್ ಪಾಯಿಂಟ್ ನೀಡಲಾಗುತ್ತದೆ. ಪ್ರತಿ ನಾಲ್ಕು ಡೀಮೆರಿಟ್ ಪಾಯಿಂಟ್‌ಗಳಿಗೆ ರೆಫರಿಯು ಪಂದ್ಯ ಶುಲ್ಕದ ಶೇ 100 ರಷ್ಟು ದಂಡ ಹಾಕಬಹುದು. ಈ ಡೀಮೆರಿಟ್ ಅಂಕಗಳೇ ಪಂದ್ಯ ನಿಷೇಧಕ್ಕೆ ದಾರಿಮಾಡಿಕೊಡಬಹುದು. ಆದರೆ, ನಿಧಾನಗತಿಯ ಬೌಲಿಂಗ್‌ಗಾಗಿ ಪಂದ್ಯ ನಿಷೇಧ ಮಾಡುವುದಿಲ್ಲ' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.