ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ
ರಾಯಿಟರ್ಸ್ ಚಿತ್ರಗಳು
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯು ಅಂತಿಮ ಹಂತಕ್ಕೆ ತಲುಪಿದೆ. ಇಂದು ಮೊದಲ ಕ್ವಾಲಿಫೈಯರ್ ನಿಗದಿಯಾಗಿದೆ. ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ ಅಗ್ರಸ್ಥಾನಗಳಲ್ಲಿ ಇರುವ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಂಡೀಗಢದ ಮುಲ್ಲನಪುರದಲ್ಲಿ ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗಲು ಸಜ್ಜಾಗಿವೆ.
ಈ ಬಾರಿ ಮಳೆಯಿಂದಾಗಿ ಮೂರು ಪಂದ್ಯಗಳು ಫಲಿತಾಂಶವಿಲ್ಲದೆ ರದ್ದಾಗಿವೆ. ಒಂದು ವೇಳೆ ಇಂದಿನ ಪಂದ್ಯ ರದ್ದಾದರೆ ಮುಂದೇನು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ.
ಸಾಮಾನ್ಯವಾಗಿ ಪ್ರಮುಖ ಟೂರ್ನಿಗಳ ನಾಕೌಟ್ ಪಂದ್ಯಗಳಿಗೆ ಮೀಸಲು ದಿನ ನಿಗದಿಮಾಡಲಾಗಿರುತ್ತದೆ. ಆದರೆ, ಭಾರತ–ಪಾಕಿಸ್ತಾನ ಸಂಘರ್ಷದ ಕಾರಣ ಟೂರ್ನಿಯು ಈಗಾಗಲೇ ಒಂದು ವಾರದ ಮಟ್ಟಿಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಕಾರಣ, ಫೈನಲ್ ಸೇರಿದಂತೆ ಯಾವುದೇ ಪಂದ್ಯವನ್ನು ಮೀಸಲು ದಿನದಂದು ನಡೆಸುವ ಬಗ್ಗೆ ಸ್ಪಷ್ಟತೆ ಇಲ್ಲ.
ಕ್ವಾಲಿಫೈಯರ್, ಫೈನಲ್ ಪಂದ್ಯಗಳು ಸ್ಥಳಾಂತರ
ಟೂರ್ನಿಯು ಒಂದು ವಾರ ಸ್ಥಗಿತಗೊಳ್ಳುವುದಕ್ಕೂ ಮುನ್ನ ಬಾಕಿ ಇದ್ದ 17 ಪಂದ್ಯಗಳ ದಿನಾಂಕ ಮತ್ತು ಸ್ಥಳಗಳನ್ನು ಮರು ನಿಗದಿ ಮಾಡಲಾಗಿದೆ. ಈಗಾಗಲೇ 13 ಪಂದ್ಯಗಳು ಮುಗಿದಿದ್ದು, ಇನ್ನು ನಾಲ್ಕು ಪಂದ್ಯಗಳಷ್ಟೇ ಬಾಕಿ ಇವೆ.
ಟೂರ್ನಿಗೆ ಅಡಚಣೆಯಾಗದಿದ್ದರೆ, ಪ್ಲೇ ಆಫ್ ಪಂದ್ಯಗಳು ಕೋಲ್ಕತ್ತ ಮತ್ತು ಹೈದರಾಬಾದ್‌ನಲ್ಲಿ ನಡೆಯಬೇಕಿತ್ತು. ಆದರೆ ಈಗ ಚಂಡೀಗಢ ಮತ್ತು ಅಹಮದಾಬಾದ್‌ಗೆ ಸ್ಥಳಾಂತರಗೊಂಡಿವೆ.
ಪಂದ್ಯ ರದ್ದಾದರೆ ಮುಂದೇನು?
ಒಂದು ವೇಳೆ ಕ್ವಾಲಿಫೈಯರ್–1 ಪಂದ್ಯ ಸಂಪೂರ್ಣ ರದ್ದಾದರೆ, ಲೀಗ್ ಹಂತದ ಪಾಯಿಂಟ್ಸ್ ಆಧಾರದಲ್ಲಿ ತಂಡಗಳ ಭವಿಷ್ಯ ನಿರ್ಧಾರವಾಗಲಿದೆ.
ಅದರಂತೆ, ಮೊದಲ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ಫೈನಲ್‌ಗೆ ಲಗ್ಗೆ ಇಡಲಿದೆ. ಎರಡನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದವರೊಂದಿಗೆ ಕ್ವಾಲಿಫೈಯರ್–2ನಲ್ಲಿ ಸೆಣಸಬೇಕಾಗುತ್ತದೆ.
ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್, ಮುಂಬೈ ಇಂಡಿಯನ್ಸ್ ಎಲಿಮಿನೇಟರ್ ಪಂದ್ಯದಲ್ಲಿ ಆಡಲಿದ್ದು, ಗೆದ್ದವರಿಗೆ ಆರ್‌ಸಿಬಿ ಸವಾಲು ಎದುರಾಗಲಿದೆ. ಕ್ವಾಲಿಫೈಯರ್–2ನಲ್ಲಿ ಸೋತವರು ಫೈನಲ್ ಟಿಕೆಟ್ ಕಳೆದುಕೊಳ್ಳಲಿದ್ದಾರೆ.
ಪ್ಲೇಆಫ್ ತಲುಪಿರುವ ತಂಡಗಳ ಸಾಧನೆ
ಪಂಜಾಬ್ ಕಿಂಗ್ಸ್: 9 ಜಯ, 4 ಸೋಲು, 1 ರದ್ದು - 19 ಪಾಯಿಂಟ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: 9 ಜಯ, 4 ಸೋಲು, 1 ರದ್ದು - 19 ಪಾಯಿಂಟ್ಸ್
ಗುಜರಾತ್ ಟೈಟನ್ಸ್: 9 ಜಯ, 5 ಸೋಲು - 18 ಪಾಯಿಂಟ್ಸ್
ಮುಂಬೈ ಇಂಡಿಯನ್ಸ್: 8 ಜಯ, 6 ಸೋಲು - 16 ಪಾಯಿಂಟ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.