ವಿರಾಟ್ ಕೊಹ್ಲಿ
ಪಿಟಿಐ ಚಿತ್ರ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ 18ನೇ ಆವೃತ್ತಿ ಆರಂಭವಾಗಿದೆ. ಎಲ್ಲ ತಂಡಗಳು (ಕನಿಷ್ಠ) ತಲಾ ಒಂದೊಂದು ಪಂದ್ಯವನ್ನು ಆಡಿದ್ದು, ಸನ್‌ರೈಸರ್ಸ್ ಹೈದರಾಬಾದ್ (ಎಸ್ಆರ್‌ಎಚ್) ತಂಡ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಪಡೆಯನ್ನು ಮಣಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ), ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಹಾಗೂ ಕೆಕೆಆರ್ ಇವೆ.
ಲಖನೌ ಸೂಪರ್‌ಜೈಂಟ್ಸ್ (ಎಲ್‌ಎಸ್‌ಜಿ), ಗುಜರಾತ್ ಟೈಟನ್ಸ್ (ಜಿಟಿ) ಮತ್ತು ಮುಂಬೈ ಇಂಡಿಯನ್ಸ್ ಮೊದಲ ಪಂದ್ಯದಲ್ಲಿ ಸೋತಿವೆ.
ರೋಹಿತ್ ಶರ್ಮಾ, ಎಂ.ಎಸ್. ಧೋನಿ, ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿ, ಶಿಖರ್ ಧವನ್ ಅವರಂತಹ ಹಿರಿಯರಿದ್ದರೂ, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ನಾಯಕರೇ ಕಾಣುತ್ತಿರುವುದು ವಿಶೇಷ.
ಭಾರತ ತಂಡದಲ್ಲಿ ಒಂದೂ ಟಿ20 ಪಂದ್ಯ ಆಡದ ರಜತ್ ಪಾಟೀದಾರ್, ಆರ್‌ಸಿಬಿ ತಂಡದ ನಾಯಕತ್ವ ವಹಿಸಿದ್ದಾರೆ. ಅಕ್ಷರ್ ಪಟೇಲ್ ಅವರಿಗೆ ಡಿಸಿ ಸಾರಥ್ಯ ಒಲಿದಿದೆ. ಈ ಹಿಂದಿನ ಋತುವಿನಲ್ಲಿ ಕೆಕೆಆರ್‌ಗೆ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಈ ಸಲ ಪಂಜಾಬ್ ಕಿಂಗ್ಸ್ ನಾಯಕ. ಅವರ ಸ್ಥಾನದಲ್ಲಿ ಅಜಿಂಕ್ಯ ರಹಾನೆ ಅವರು ಕೆಕೆಆರ್ ಮುನ್ನಡೆಸುತ್ತಿದ್ದಾರೆ. ಬೆರಳಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸಂಜು ಸ್ಯಾಮ್ಸನ್ ಬದಲು ಯುವ ಬ್ಯಾಟರ್ ರಿಯಾನ್ ಪರಾಗ್ ಮೊದಲ ಮೂರು ಪಂದ್ಯಗಳಿಗೆ ರಾಜಸ್ಥಾನ ರಾಯಲ್ಸ್ ನೇತೃತ್ವ ವಹಿಸಿದ್ದಾರೆ.
2024ರಲ್ಲಿ ಡೆಲ್ಲಿ ತಂಡದ ನಾಯಕರಾಗಿದ್ದ ರಿಷಭ್ ಪಂತ್ ಅವರು ಈ ಸಲ ಎಲ್‌ಎಸ್‌ಜಿ ಮುನ್ನಡೆಸುತ್ತಿದ್ದಾರೆ. ಶುಭಮನ್ ಗಿಲ್ ಗುಜರಾತ್ ಟೈಟನ್ಸ್‌ಗೆ, ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ, ಋತುರಾಜ್ ಗಾಯಕವಾಡ್ ಚೆನ್ನೈಗೆ ನಾಯಕರಾಗಿದ್ದಾರೆ.
ಹಲವು ಹೊಸ ನಾಯಕರು ಈ ಬಾರಿ ತಂಡಗಳನ್ನು ಮುನ್ನಡೆಸುತ್ತಿದ್ದರೂ, ಐಪಿಎಲ್‌ನಲ್ಲಿ ಸಣ್ಣ ವಯಸ್ಸಿಗೆ ತಂಡವೊಂದರ ನಾಯಕತ್ವ ವಹಿಸಿಕೊಂಡ ದಾಖಲೆ ಇರುವುದು ವಿರಾಟ್ ಕೊಹ್ಲಿ ಹೆಸರಲ್ಲಿ. ಅವರು ತಮ್ಮ 22ನೇ ವಯಸ್ಸಿನಲ್ಲೇ ಆರ್‌ಸಿಬಿ ಮುನ್ನಡೆಸುವ ಹೊಣೆ ಹೊತ್ತುಕೊಂಡಿದ್ದರು.
ನಾಯಕತ್ವ ವಹಿಸಿಕೊಂಡ ಅತಿಕಿರಿಯ ಆಟಗಾರರ ಪಟ್ಟಿ ಇಲ್ಲಿದೆ.
5. ಶ್ರೇಯಸ್ ಅಯ್ಯರ್ (ಡೆಲ್ಲಿ ಡೇರ್‌ಡೆವಿಲ್ಸ್ – 2018)
ನಾಯಕನಾಗಿ ಮೊದಲ ಪಂದ್ಯ: vs ಕೋಲ್ಕತ್ತ ನೈಟ್ ರೈಡರ್ಸ್ (ಹೈದರಾಬಾದ್)
ನಾಯಕತ್ವ ವಹಿಸಿಕೊಂಡಾಗ ವಯಸ್ಸು: 23 ವರ್ಷ, 142 ದಿನಗಳು
(ಪಿಟಿಐ ಸಂಗ್ರಹ ಚಿತ್ರ)
2018ರ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಡೆಲ್ಲಿ ಡೇರ್‌ಡೆವಿಲ್ಸ್, ಮೊದಲ ಆರು ಪಂದ್ಯಗಳಲ್ಲಿ ಐದರಲ್ಲಿ ಸೋತು ಕಂಗೆಟ್ಟಿತ್ತು. ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಲು ಪರದಾಡಿದ್ದ ಗೌತಮ್ ಗಂಭೀರ್, ನಾಯಕ ತೊರೆಯಲು ನಿರ್ಧರಿಸಿದ್ದರು. ಹೀಗಾಗಿ, ಶ್ರೇಯರ್ ಅಯ್ಯರ್ ತಂಡದ ಜವಾಬ್ದಾರಿ ಹೊತ್ತುಕೊಂಡಿದ್ದರು.
ನಂತರ ಆಡಿದ 8 ಪಂದ್ಯಗಳಲ್ಲಿ 4ರಲ್ಲಿ ಗೆದ್ದರೂ, ಡೆಲ್ಲಿ ತಂಡ ಪಾಯಿಂಟ್ ಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಕುಸಿಯಿತು. ಬಳಿಕ, 2021ರವರೆಗೆ ತಂಡದ ನಾಯಕರಾಗಿದ್ದ, 2024ರಲ್ಲಿ ಕೆಕೆಆರ್ ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಈ ಬಾರಿ, ಪಂಜಾಬ್ ಕಿಂಗ್ಸ್‌ಗೆ ನಾಯಕರಾಗಿದ್ದಾರೆ.
4. ರಿಯಾನ್ ಪರಾಗ್ (ರಾಜಸ್ಥಾನ ರಾಯಲ್ಸ್ – 2025)
ನಾಯಕನಾಗಿ ಮೊದಲ ಪಂದ್ಯ: vs ಸನ್‌ರೈಸರ್ಸ್ ಹೈದರಾಬಾದ್ (ಹೈದರಾಬಾದ್)
ನಾಯಕತ್ವ ವಹಿಸಿಕೊಂಡಾಗ ವಯಸ್ಸು: 23 ವರ್ಷ, 133 ದಿನಗಳು
ಪಿಟಿಐ ಚಿತ್ರ
ಆರು ವರ್ಷಗಳಿಂದ ಐಪಿಎಲ್‌ನಲ್ಲಿ ಆಡುತ್ತಿರುವ ರಿಯಾನ್ ಪರಾಗ್, ಈ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮೊದಲ ಮೂರು ಪಂದ್ಯಗಳಿಗೆ ಮುನ್ನಡೆಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಬೆರಳಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ನಾಯಕ ಸಂಜು ಸ್ಯಾಮ್ಸನ್, ಬ್ಯಾಟರ್ ಆಗಿಯಷ್ಟೇ ಕಣಕ್ಕಿಳಿಯುತ್ತಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲಿ ಅಸ್ಸಾಂ ತಂಡದ ನಾಯಕನಾಗಿರುವ ರಿಯಾನ್, 2024ರ ಐಪಿಎಲ್‌ನಲ್ಲಿ 573 ರನ್ ಗಳಿಸಿ ಮಿಂಚಿದ್ದರು. ಬಳಿಕ ಭಾರತ ತಂಡಕ್ಕೂ ಪದಾರ್ಪಣೆ ಮಾಡಿದ್ದರು.
3. ಸುರೇಶ್ ರೈನಾ (ಚೆನ್ನೈ ಸೂಪರ್ ಕಿಂಗ್ಸ್ – 2010)
ನಾಯಕನಾಗಿ ಮೊದಲ ಪಂದ್ಯ: vs ಡೆಲ್ಲಿ ಡೇರ್‌ಡೆವಿಲ್ಸ್ (ದೆಹಲಿ)
ನಾಯಕತ್ವ ವಹಿಸಿಕೊಂಡಾಗ ವಯಸ್ಸು: 23 ವರ್ಷ, 112 ದಿನಗಳು
(ಪಿಟಿಐ ಸಂಗ್ರಹ ಚಿತ್ರ)
2010ರ ಟೂರ್ನಿವೇಳೆ ನಾಯಕ ಎಂ.ಎಸ್.ಧೋನಿ ಅವರು ಗಾಯಗೊಂಡ ಕಾರಣ ಸುರೇಶ್ ರೈನಾ ಅವರು ಮೂರು ಪಂದ್ಯಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಮುನ್ನಡೆಸಿದ್ದರು.
2016 ಹಾಗೂ 2017ರಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಮುನ್ನಡೆಸಿದ್ದ ಅವರು, 2019ರಲ್ಲಿ ಮತ್ತೆ ಕೆಲವು ಪಂದ್ಯಗಳಿಗೆ ಸಿಎಸ್‌ಕೆಗೆ ನಾಯಕತ್ವ ವಹಿಸಿದ್ದರು.
2. ಸ್ಟೀವ್ ಸ್ಮಿತ್ (ಪುಣೆ ವಾರಿಯರ್ಸ್ – 2012)
ನಾಯಕನಾಗಿ ಮೊದಲ ಪಂದ್ಯ: vs ಆರ್‌ಸಿಬಿ (ಪುಣೆ)
ನಾಯಕತ್ವ ವಹಿಸಿಕೊಂಡಾಗ ವಯಸ್ಸು: 22 ವರ್ಷ, 344 ದಿನಗಳು
(ಪಿಟಿಐ ಸಂಗ್ರಹ ಚಿತ್ರ)
ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, 2012ರ ಆವೃತ್ತಿಯ ಒಂದು ಪಂದ್ಯದಲ್ಲಿ ಪುಣೆ ವಾರಿಯರ್ಸ್ ತಂಡವನ್ನು ಮುನ್ನಡೆಸಿದ್ದರು. ಟೂರ್ನಿಗೂ ಮುನ್ನ ನಡೆದ ಹರಾಜಿನಲ್ಲಿ ಮಾರಾಟವಾಗದೇ ಉಳಿದಿದ್ದ ಸ್ಮಿತ್ ಅವರನ್ನು, ಪುಣೆ ಪಡೆ ಟೂರ್ನಿಗೂ ಮುನ್ನ ತಂಡಕ್ಕೆ ಸೇರಿಸಿಕೊಂಡಿತ್ತು.
1. ವಿರಾಟ್ ಕೊಹ್ಲಿ (ಆರ್‌ಸಿಬಿ – 2011)
ನಾಯಕನಾಗಿ ಮೊದಲ ಪಂದ್ಯ: vs ರಾಜಸ್ಥಾನ ರಾಯಲ್ಸ್ (ಜೈಪುರ)
ನಾಯಕತ್ವ ವಹಿಸಿಕೊಂಡಾಗ ವಯಸ್ಸು: 22 ವರ್ಷ, 187 ದಿನಗಳು
(ಪಿಟಿಐ ಸಂಗ್ರಹ ಚಿತ್ರ)
ವಿರಾಟ್ ಕೊಹ್ಲಿ, 2011ರ ಐಪಿಎಲ್ ಟೂರ್ನಿ ವೇಳೆ ಮೊದಲ ಬಾರಿಗೆ ಆರ್‌ಸಿಬಿಯನ್ನು ಮುನ್ನಡೆಸಿದ್ದರು. ಆಗಿನ ನಾಯಕ ಡೆನಿಯಲ್ ವೆಟ್ಟೋರಿ ಗಾಯಗೊಂಡು ಅಲಭ್ಯರಾದ ಕಾರಣ, ಕೊಹ್ಲಿ ಹೆಗಲಿಗೆ ಹೊಣೆ ಬಿದ್ದಿತ್ತು. ಸತತ ಎರಡು ಪಂದ್ಯಗಳನ್ನು ಗೆದ್ದು, ನಾಯಕತ್ವವನ್ನು ಯಶಸ್ವಿಯಾಗಿದೆ ಆರಂಭಿಸಿದ್ದ ಕೊಹ್ಲಿ, 2013ರಲ್ಲಿ ಆರ್‌ಸಿಬಿಯ ಪೂರ್ಣಾವಧಿ ನಾಯಕರಾಗಿ ಆಯ್ಕೆಯಾದರು. ಐಪಿಎಲ್‌ನಲ್ಲಿ ಒಟ್ಟು 143 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.