ADVERTISEMENT

IPL Auction: ಒಂದೇ ಪಂದ್ಯದಲ್ಲಿ 52 ಸಿಕ್ಸರ್ ಸಿಡಿಸಿದ್ದ ಛಿಕಾರ ಅನ್‌ಸೋಲ್ಡ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2025, 5:58 IST
Last Updated 17 ಡಿಸೆಂಬರ್ 2025, 5:58 IST
<div class="paragraphs"><p>ಸ್ವಸ್ತಿಕ್ ಛಿಕಾರ</p></div>

ಸ್ವಸ್ತಿಕ್ ಛಿಕಾರ

   

ಕೃಪೆ: X / @RCBTweets

40 ಓವರ್‌ ಕ್ರಿಕೆಟ್‌ ಟೂರ್ನಿಯ ಒಂದೇ ಪಂದ್ಯದಲ್ಲಿ ಬರೋಬ್ಬರಿ 52 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಕ್ರಿಕೆಟ್‌ ಲೋಕವೇ ಹುಬ್ಬೇರುವಂತೆ ಮಾಡಿದ್ದ ಆಟಗಾರ, ಐಪಿಎಲ್‌ ಈ ಬಾರಿಯ ಮಿನಿ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದಾರೆ.

ADVERTISEMENT

ಆ ಆಟಗಾರ ಬೇರಾರು ಅಲ್ಲ ಸ್ವಸ್ತಿಕ್ ಛಿಕಾರ.

ಉತ್ತರ ಪ್ರದೇಶದ ಛಿಕಾರ, ತಮ್ಮ 14ನೇ ವಯಸ್ಸಿನಲ್ಲೇ ಈ ಸಾಧನೆ ಮಾಡಿದ್ದರು. ಮಹಿ ಕ್ರಿಕೆಟ್‌ ಅಕಾಡೆಮಿ ಪರ ಆಡಿದ್ದ ಅವರು, ಏಸ್‌ ಕ್ರಿಕೆಟ್‌ ಅಕಾಡೆಮಿ (ಗೋರಖ್‌ಪುರ) ವಿರುದ್ಧದ ಪಂದ್ಯದಲ್ಲಿ 2019ರ ಡಿಸೆಂಬರ್‌ನಲ್ಲಿ ಸ್ಪೋಟಕ ಬ್ಯಾಟಿಂಗ್‌ ನಡೆಸಿದ್ದರು.

ಕೇವಲ 167 ಎಸೆತಗಳನ್ನು ಎದುರಿಸಿದ್ದ ಅವರು, 55 ಬೌಂಡರಿ ಹಾಗೂ 52 ಸಿಕ್ಸರ್‌ ಸಹಿತ ಬರೋಬ್ಬರಿ 585 ರನ್‌ ಸಿಡಿಸಿದ್ದರು. ಅದರೊಂದಿಗೆ, ತಂಡದ ಮೊತ್ತವನ್ನು 704ಕ್ಕೆ ಏರಿಸಿದ್ದರು. ಛಿಕಾರ ಆಟದ ನೆರವಿನಿಂದ ಮಹಿ ಅಕಾಡೆಮಿ 355 ರನ್‌ ಅಂತರದಿಂದ ಗೆದ್ದು ಬೀಗಿತ್ತು.

ಛಿಕಾರ ಅಬ್ಬರ ಒಮ್ಮೆಯಷ್ಟೇ ಅಲ್ಲ!
2024ರ ಯುಪಿ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲೂ ಛಿಕಾರ ಅಬ್ಬರಿಸಿದ್ದರು. ಟೂರ್ನಿಯುದ್ದಕ್ಕೂ ಅಮೋಘ ಆಟವಾಡಿದ್ದ ಅವರು ಮೀರತ್‌ ಮಾರ್ವಿಕ್ಸ್‌ ತಂಡ ಚಾಂಪಿಯನ್‌ ಪಟ್ಟಕ್ಕೇರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

12 ಇನಿಂಗ್ಸ್‌ಗಳಲ್ಲಿ ಒಂದು ಶತಕ ಮತ್ತು 5 ಅರ್ಧಶತಕ ಸಹಿತ 499 ರನ್‌ ಗಳಿಸುವ ಮೂಲಕ ಟಾಪ್‌ ಸ್ಕೋರರ್‌ ಎನಿಸಿದ್ದರು.  185ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದ ಅವರು, ಟೂರ್ನಿಯುದ್ದಕ್ಕೂ ಸಿಡಿಸಿದ್ದು 47 ಸಿಕ್ಸರ್‌ಗಳನ್ನು. ಎರಡನೇ ಸ್ಥಾನದಲ್ಲಿದ್ದವರಿಗೂ (ಸಮೀರ್‌ ರಿಜ್ವಿ – 32) ಛಿಕಾರಗೂ 15 ಸಿಕ್ಸರ್‌ಗಳ ಅಂತರವಿತ್ತು.

2025ರ ಆವೃತ್ತಿಯಲ್ಲಿ ವಾಟರ್‌ ಬಾಯ್‌
ಛಿಕಾರ ಅವರು ಕಳೆದ ವರ್ಷ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿದ್ದರು. ಐಪಿಎಲ್‌ ಟಿ20 ಕ್ರಿಕೆಟ್‌ ಟೂರ್ನಿಯ 2025ನೇ ಆವೃತ್ತಿಯಲ್ಲಿ ಆರ್‌ಸಿಬಿ ಚಾಂಪಿಯನ್‌ ಪಟ್ಟಕ್ಕೇರಿತ್ತಾದರೂ, ಛಿಕಾರಗೆ ಒಂದೇ ಒಂದು ಪಂದ್ಯದಲ್ಲೂ ಅವಕಾಶ ಸಿಕ್ಕಿರಲಿಲ್ಲ.

ಇಡೀ ಟೂರ್ನಿಯಲ್ಲಿ ಅವರು ವಾಟರ್‌ ಬಾಯ್‌ ಆಗಿ ಕಾಣಿಸಿಕೊಂಡಿದ್ದರು. ಮಿನಿ ಹರಾಜಿಗೂ ಮುನ್ನ ಅವರನ್ನು ಆರ್‌ಸಿಬಿ ಕೈ ಬಿಟ್ಟಿತ್ತು.

2024ರಲ್ಲಿ, ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಛಿಕಾರ ಅವರನ್ನು ಖರೀದಿಸಿತ್ತು. ಆಗಲೂ, ಹನ್ನೊಂದರ ಬಳಗಕ್ಕೆ ಪ್ರವೇಶ ಸಿಕ್ಕಿಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.