
ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ ತಂಡವು ಬುಧವಾರ ತವರಿನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 7 ವಿಕೆಟ್ ಅಂತರದ ಮುಖಭಂಗ ಅನುಭವಿಸಿತು.
ಟಾಸ್ ಗೆದ್ದ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರೈಸರ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 143 ರನ್ ಗಳಿಸುವಷ್ಟೇ ಶಕ್ತವಾಯಿತು. ಈ ಗುರಿ ಬೆನ್ನತ್ತಿದ ಮುಂಬೈ, ಕೇವಲ 3 ವಿಕೆಟ್ ಕಳೆದುಕೊಂಡು 15.4 ಓವರ್‌ಗಳಲ್ಲೇ 146 ರನ್ ಗಳಿಸಿತು.
ಟೂರ್ನಿಯಲ್ಲಿ 9 ಪಂದ್ಯ ಆಡಿರುವ ಮುಂಬೈ ಪಡೆಗೆ ದಕ್ಕಿದ 5ನೇ ಗೆಲುವು ಇದು. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. 8 ಪಂದ್ಯಗಳನ್ನು ಆಡಿ ಆರರಲ್ಲಿ ಪರಾಭವಗೊಂಡಿರುವ ರೈಸರ್ಸ್ 9ನೇ ಸ್ಥಾನದಲ್ಲೇ ಉಳಿದಿದೆ.
ಉನದ್ಕತ್ ಸಾಧನೆ
ಗುರಿ ಬೆನ್ನತ್ತಿದ ಮುಂಬೈ ತಂಡದ ಆರಂಭಿಕ ಬ್ಯಾಟರ್ ರಿಯಾನ್ ರಿಕೆಲ್ಟನ್ ಅವರು 11 ರನ್ ಗಳಿಸಿದ್ದಾಗ ಜಯದೇವ್ ಉನದ್ಕತ್ ಬೌಲಿಂಗ್‌ನಲ್ಲಿ ಔಟಾದರು.
ರಿಕೆಲ್ಟನ್, ಜಯದೇವ್ ಹಾಕಿದ ಇನಿಂಗ್ಸ್‌ನ ಎರಡನೇ ಓವರ್‌ನ ಮೂರನೇ ಎಸೆತವನ್ನು ಮಿಡ್‌ವಿಕೆಟ್‌ನತ್ತ ಭಾರಿಸಲು ಯತ್ನಿಸಿದರು. ಆದರೆ, ಬ್ಯಾಟ್‌ನ ಅಂಚಿಗೆ ಬಡಿದ ಚೆಂಡು ನೇರವಾಗಿ ಬೌಲರ್‌ನತ್ತಲೇ ಮರಳಿತು. ಅದನ್ನು ಹಿಡಿಯವಲ್ಲಿ ಜಯದೇವ್ ಯಶಸ್ವಿಯಾದರು.
ಈ ಎಡಗೈ ವೇಗದ ಬೌಲರ್ ಹೀಗೆ ತಮ್ಮದೇ ಬೌಲಿಂಗ್‌ನಲ್ಲಿ ಕ್ಯಾಚ್ ಪಡೆದದ್ದು ಇದು 7ನೇ ಬಾರಿ. ವೆಸ್ಟ್ ಇಂಡೀಸ್‌ನ ಡ್ವೇನ್ ಬ್ರಾವೋ 11 ಬಾರಿ ಈ ರೀತಿಯ ಸಾಧನೆ ಮಾಡಿದ್ದಾರೆ.
ಐಪಿಎಲ್‌ನಲ್ಲಿ ತಮ್ಮದೇ ಬೌಲಿಂಗ್‌ನಲ್ಲಿ ಹೆಚ್ಚು ಕ್ಯಾಚ್ ಪಡೆದ ವೇಗದ ಬೌಲರ್‌ಗಳು
* ಡ್ವೇನ್ ಬ್ರಾವೋ (ವೆಸ್ಟ್ ಇಂಡೀಸ್) – 11 ಕ್ಯಾಚ್
* ಜಯದೇವ್ ಉನದ್ಕತ್ (ಭಾರತ) – 7 ಕ್ಯಾಚ್
* ಲಸಿತ್ ಮಾಲಿಂಗ್ (ಶ್ರೀಲಂಕಾ) – 6 ಕ್ಯಾಚ್
* ಭುವನೇಶ್ವರ್ ಕುಮಾರ್ (ಭಾರತ) – 6 ಕ್ಯಾಚ್
* ಕೀರನ್ ಪೊಲಾರ್ಡ್ (ವೆಸ್ಟ್ ಇಂಡೀಸ್) – 6 ಕ್ಯಾಚ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.