ADVERTISEMENT

ರೋಹಿತ್-ಕೊಹ್ಲಿಗೆ ಅಭಿಮಾನಿಗಳ ಎದುರು ಬೀಳ್ಕೊಡುಗೆ ನೀಡಬೇಕು: ಅನಿಲ್ ಕುಂಬ್ಳೆ

ಪಿಟಿಐ
Published 13 ಮೇ 2025, 14:33 IST
Last Updated 13 ಮೇ 2025, 14:33 IST
ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ
ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ   

ನವದೆಹಲಿ: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ದಿಢೀರ್ ನಿವೃತ್ತಿಗೆ ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಇತ್ತೀಚೆಗೆ ನಿವೃತ್ತಿ ಘೋಷಿಸಿದ ಆಫ್‌ಸ್ಪಿನ್ನರ್ ಆರ್. ಅಶ್ವಿನ್, ರೋಹಿತ್ ಮತ್ತು ಕೊಹ್ಲಿ ಅವರಿಗೆ ಸೂಕ್ತವಾದ ರೀತಿಯಲ್ಲಿ ಬೀಳ್ಕೊಡುಗೆ ನೀಡಬೇಕು ಎಂದೂ ಸ್ಪಿನ್ ಬೌಲಿಂಗ್ ದಂತಕಥೆ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

ಹೋದ ಗುರುವಾರ ರೋಹಿತ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಸೋಮವಾರ ಕೊಹ್ಲಿ ಕೂಡ ವಿದಾಯ ಘೋಷಿಸಿದರು. 

ADVERTISEMENT

‘ಇದು ಬಹಳ ದೊಡ್ಡ ಅಚ್ಚರಿ. ಇಬ್ಬರು ಮಹಾನ್ ಆಟಗಾರರು ಕೆಲವೇ ದಿನಗಳ ಅಂತರದಲ್ಲಿ ಒಬ್ಬರ ಹಿಂದೊಬ್ಬರು ನಿವೃತ್ತರಾಗಿದ್ದಾರೆ. ಇದು ನನ್ನನ್ನು ದಿಗ್ಭ್ರಮೆಗೊಳಿಸಿದೆ. ಅವರಿಗೆ ಇನ್ನೂ ಕೆಲವು ವರ್ಷಗಳವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವ ಸಾಮರ್ಥ್ಯ ಇತ್ತು’ ಎಂದು ಕುಂಬ್ಳೆ ಅವರು ಇಎಸ್‌ಪಿಎನ್‌ ಕ್ರಿಕ್‌ಇನ್ಫೊ ಡಾಟ್‌ ಕಾಮ್‌ ಗೆ ಹೇಳಿದ್ದಾರೆ. 

‘ಎಲ್ಲ ಆಟಗಾರರಿಗೂ ತಮ್ಮ ಇಚ್ಛೆಗೆ ಅನುಸಾರವಾಗಿ ನಿವೃತ್ತಿ ಕೈಗೊಳ್ಳುವ ಹಕ್ಕು ಇದೆ. ಆದರೆ ಅವರು ಕ್ರೀಡಾಂಗಣದಲ್ಲಿ (ಪಂದ್ಯ ಅಥವಾ ಸರಣಿ ಆಡಿದ ಮೇಲೆ) ವಿದಾಯ ಹೇಳುವುದು ಹೆಚ್ಚು ಸಮರ್ಪಕವಾಗುತ್ತದೆ. ಈಚೆಗೆ ಆಸ್ಟ್ರೇಲಿಯಾದಲ್ಲಿ ಸರಣಿಯ ಮಧ್ಯದಲ್ಲಿ ಅಶ್ವಿನ್ ನಿವೃತ್ತರಾಗಿದ್ದರು. ಕೆಲ ದಿನಗಳ ಹಿಂದೆ ರೋಹಿತ್ ಶರ್ಮಾ ಮತ್ತು ಈಗ ವಿರಾಟ್ ಕೊಹ್ಲಿ ಕೂಡ ನಿವೃತ್ತಿ ಹೇಳಿದ್ದಾರೆ. ಈ ಮೂವರಿಗೂ ಗೌರವಯುತವಾದ ಬೀಳ್ಕೊಡುಗೆ ನೀಡಬೇಕು. ಅವರು ತಮ್ಮ ಅಪಾರ ಸಂಖ್ಯೆಯ ಪ್ರೇಕ್ಷಕರ ಸಮ್ಮುಖದಲ್ಲಿಯೇ ವಿದಾಯ ಹೇಳಬೇಕು. ಈ ಕುರಿತು ಸಂಬಂಧಪಟ್ಟವರು ಯೋಚಿಸಬೇಕು’ ಎಂದು ಕುಂಬ್ಳೆ ಹೇಳಿದ್ದಾರೆ.

ಭಾರತ ತಂಡವು ಜೂನ್ 20ರಿಂದ ಇಂಗ್ಲೆಂಡ್‌ನಲ್ಲಿ ಐದು ಟೆಸ್ಟ್‌ಗಳ ಸರಣಿಯಲ್ಲಿ ಆಡಲಿದೆ. 

‘ರೋಹಿತ್ ಅವರು ಕೆಲವು ವರ್ಷಗಳಿಂದ ಭಾರತ ತಂಡಕ್ಕೆ ನಾಯಕರಾಗಿದ್ದರು. ವಿರಾಟ್ ಅವರು ತಂಡದ ಪರಿಪೂರ್ಣ ನಾಯಕರಾಗಿದ್ದವರು. ಅವರಲ್ಲಿ ಒಬ್ಬರಾದರೂ ಇಂಗ್ಲೆಂಡ್‌ ಸರಣಿಯಲ್ಲಿ ಆಡಬೇಕಿತ್ತು. ಐದು ಟೆಸ್ಟ್ ಸರಣಿಯು ಬಹಳ ಕಠಿಣ ಸವಾಲಾಗಿದೆ.  ಆಟಗಾರರ ನಿವೃತ್ತಿಯು ಆಯ್ಕೆ ಸಮಿತಿ ಕೂಡ ಅಚ್ಚರಿಗೊಂಡರು’ ಎಂದರು. 

ಡ್ರೆಸ್ಸಿಂಗ್ ರೂಮ್ ಮೊದಲಿನಂತಿರಲ್ಲ: ಸಿರಾಜ್

‘ಭಾರತ ತಂಡದ ಡ್ರೆಸ್ಸಿಂಗ್ ಕೋಣೆಯು ಇನ್ನು ಮುಂದೆ ಬದಲಾಗಬಹುದು’ ಎಂದು ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಎಕ್ಸ್‌ನಲ್ಲಿ ಬರೆದಿದ್ದಾರೆ. 

ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಹಿನ್ನೆಲೆಯಲ್ಲಿ ಅವರು ಈ ಸಂದೇಶ ಹಾಕಿದ್ದಾರೆ. 

‘ಕ್ರಿಕೆಟ್‌ನಲ್ಲಿ ನೀವು ಸುಂದರವಾದ ಇನಿಂಗ್ಸ್ ಕಟ್ಟಿದ್ದೀರಿ ಅಣ್ಣಾ. ಅಭಿನಂದನೆಗಳು. ಯುವ ಜನಾಂಗಗಳನ್ನು ತಾವು ಪ್ರಭಾವಿಸಿದ್ದೀರಿ. ನಿಮ್ಮ ಸಾಧನೆಗಳು ನಮಗೆ ದಾರಿದೀಪ. ನೀವಿಲ್ಲದ ಡ್ರೆಸಿಂಗ್ ರೂಮ್ ಮೊದಲಿನಂತಿರದು’ ಎಂದು ಸಿರಾಜ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.