ನವದೆಹಲಿ: ಕಳೆದ ವಾರ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ವೇಳೆ ಜಿಯೊಹಾಟ್‌ಸ್ಟಾರ್‌ನಲ್ಲಿ 540 ಕೋಟಿಗೂ ಹೆಚ್ಚು ಜನರು ನೇರ ಪ್ರಸಾರವನ್ನು ವೀಕ್ಷಿಸಿದ್ದು, 11 ಸಾವಿರ ಕೋಟಿ ನಿಮಿಷ ವೀಕ್ಷಣಾ ಸಮಯ ದಾಖಲಾಗಿದೆ ಎಂದು ಕಂಪನಿ ಹೇಳಿದೆ.
ಈ ಕುರಿತು ಜಿಯೊಸ್ಟಾರ್ ಡಿಜಿಟಲ್‌ನ ಸಿಎಒ ಕಿರಣ್ ಮಣಿ ಅವರು ಸಾಮಾಜಿಕ ಮಾಧ್ಯಮ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ‘2025ರ ಐಸಿಸಿ ಪುರುಷರ ಚಾಂಪಿಯನ್ಸ್‌ಶಿಪ್ ಎಂಥಹ ಅದ್ಭುತ ಪಯಣ, 540 ಕೋಟಿಗೂ ಹೆಚ್ಚು ಜನರ ವೀಕ್ಷಣೆ, 11 ಸಾವಿರ ಕೋಟಿ ನಿಮಿಷ ವೀಕ್ಷಣಾ ಸಮಯ, 6.12 ಕೋಟಿ ಜನರಿಂದ ಏಕಕಾಲದಲ್ಲಿ ವೀಕ್ಷಣೆ.. ಈ ಅಂಕಿ ಅಂಶಗಳು ಭಾರತದಲ್ಲಿ ಡಿಜಿಟಲ್ ಸ್ಟ್ರೀಮಿಂಗ್‌ನ ಪ್ರಮಾಣ, ಉತ್ಸಾಹ ಮತ್ತು ವಿಕಾಸದ ಯಶಸ್ಸಿನ ಕಥೆ ಹೇಳುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡದ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸಿದೆ.
2023ರ ವಿಶ್ವಕಪ್ ಫೈನಲ್‌ನಲ್ಲಿ ಡಿಸ್ನಿ ಹಾಟ್‌ಸ್ಟಾರ್(ಈಗ ಜಿಯೊ ಹಾಟ್‌ಸ್ಟಾರ್)ನಲ್ಲಿ 5.9 ಕೋಟಿ ಜನರು ವೀಕ್ಷಿಸಿ ದಾಖಲೆ ನಿರ್ಮಾಣವಾಗಿತ್ತು.
ಭಾರತ – ಆಸ್ಟ್ರೇಲಿಯಾ ನಡುವಿನ ಸೆಮಿ ಫೈನಲ್ ದಿನ ಅತಿ ಹೆಚ್ಚು ಬಳಕೆದಾರರು ಒಟಿಟಿ ಫ್ಲಾಟ್‌ಫಾರ್ಮ್ ಚಂದಾದಾರಿಕೆ ಪಡೆದಿದ್ದಾರೆ ಎಂದು ಮಣಿ ತಿಳಿಸಿದ್ದಾರೆ.
ಡಿಸ್ನಿ ಹಾಟ್‌ಸ್ಟಾರ್ ಮತ್ತು ರಿಲೈನ್ಸ್ ಇಂಡಸ್ಟ್ರೀಸ್‌ನ ವಯಕಾಮ್18 ಸಂಸ್ಥೆಗಳು ವಿಲೀನಗೊಂಡ ಬಳಿಕ ಜಿಯೊ ಹಾಟ್‌ಸ್ಟಾರ್ ಎಂದು ನಾಮಕರಣ ಮಾಡಿ, ಹೊಸ ಲೊಗೊವನ್ನೂ ಇಡಲಾಗಿದೆ. ಈ ಬದಲಾವಣೆಯಾದ ಬಳಿಕ ಪ್ರಮುಖ ಕ್ರಿಕೆಟ್ ಪಂದ್ಯ ಪ್ರಸಾರವಾಗಿದ್ದು ಚಾಂಪಿಯನ್ಸ್ ಟ್ರೋಫಿ ಆರಂಭವಾದಾಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.