ತಿರುವನಂತಪುರ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಭಾರತ ತಂಡದಿಂದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟ ವಿಷಯಕ್ಕೆ ಸಂಬಂಧಿಸಿದ ವಿವಾದದಲ್ಲಿ ತನ್ನ ವಿರುದ್ಧ ಸುಳ್ಳು ಮತ್ತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕೇರಳ ಕ್ರಿಕೆಟ್ ಸಂಸ್ಥೆಯು (ಕೆಸಿಎ) ಮಾಜಿ ವೇಗದ ಬೌಲರ್ ಎಸ್.ಶ್ರೀಶಾಂತ್ ಅವರನ್ನು ಮೂರು ವರ್ಷ ಅಮಾನತು ಮಾಡಿದೆ.
ಕೊಚ್ಚಿಯಲ್ಲಿ ಏಪ್ರಿಲ್ 30ರಂದು ನಡೆದ ವಿಶೇಷ ಸರ್ವಸದಸ್ಯರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೆಸಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಶ್ರೀಶಾಂತ್ ಅವರು ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಆಡುವ ಕೊಲ್ಲಂ ಏರೀಸ್ ಪ್ರಾಂಚೈಸಿಯ ಸಹ ಮಾಲೀಕರಾಗಿದ್ದಾರೆ. ಇದಕ್ಕೆ ಮೊದಲು ಶ್ರೀಶಾಂತ್ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿ ಕೊಲ್ಲಂ ಏರೀಸ್, ಆಲಪ್ಪುಳ ಟೀಮ್ ಲೀಡ್ ಮತ್ತು ಆಲಪ್ಪುಳ ರಿಪ್ಪಲ್ಸ್ ಫ್ರಾಂಚೈಸಿ ತಂಡಗಳಿಗೂ ನೋಟಿಸ್ ನೀಡಲಾಗಿತ್ತು. ಆದರೆ ಅವುಗಳ ಉತ್ತರ ತೃಪ್ತಿಕರವಾಗಿದ್ದ ಕಾರಣ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ.
ಸಂಜು ಸ್ಯಾಮ್ಸನ್ ಹೆಸರು ಬಳಸಿಕೊಂಡು ತನ್ನ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದಕ್ಕೆ ಸಂಜು ಅವರ ತಂದೆ ಸ್ಯಾಮ್ಸನ್ ವಿಶ್ವನಾಥ್ ಮತ್ತು ಇತರ ಇಬ್ಬರ ವಿರುದ್ಧ ಮಾನನಷ್ಟ ಪರಿಹಾರ ಕೋರಲೂ ಸಭೆಯು ನಿರ್ಧರಿಸಿದೆ.
ಮಲಯಾಳ ಟಿ.ವಿ. ಚಾನೆಲ್ ಒಂದರ ಪ್ಯಾನೆಲ್ ಚರ್ಚೆಯಲ್ಲಿ ಸ್ಯಾಮ್ಸನ್ ಅವರನ್ನು ಕೈಬಿಟ್ಟಿದ್ದಕ್ಕೆ ಕೇರಳ ಕ್ರಿಕೆಟ್ ಸಂಸ್ಥೆಯ ಹೆಸರು ತಳಕು ಹಾಕಿದ್ದಕ್ಕೆ ಕೆಸಿಎ ಶ್ರೀಶಾಂತ್‌ಗೆ ನೋಟಿಸ್ ನೀಡಿತ್ತು. ಭಾರತ ಈ ಹಿಂದೆ ಗೆದ್ದ ಎರಡು ವಿಶ್ವಕಪ್ ತಂಡಗಳಲ್ಲಿ ಸ್ಯಾಮ್ಸನ್ ಆಡಿದ್ದರು.
ಸ್ಯಾಮ್ಸನ್ ಅವರಿಗೆ ಬೆಂಬಲಿಸಿದಕ್ಕೆ ಈ ನೋಟಿಸ್ ನೀಡಿಲ್ಲ. ಅದರೆ ಸಂಸ್ಥೆಯ ವಿರುದ್ಧ ದಾರಿತಪ್ಪಿಸುವಂಥ ಮತ್ತು ಮಾನಹಾನಿಕರ ಹೇಳಿಕೆಗೆ ನೋಟಿಸ್ ನೀಡಲಾಗಿದೆ ಎಂದು ಕೆಸಿಎ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಪ್ಯಾನೆಲ್ ಚರ್ಚೆಯ ವೇಳೆ ಸಂಜು ಅವರನ್ನು ಬೆಂಬಲಿಸಿದ ಶ್ರೀಶಾಂತ್, ಅವರ ಮತ್ತು ಇತರ ಕೇರಳ ಆಟಗಾರರ ಹಿತಾಸಕ್ತಿ ರಕ್ಷಣೆಗೆ ತಾವು ಬದ್ಧ ಎಂದು ಹೇಳಿದ್ದು, ಕೇರಳ ಕ್ರಿಕೆಟ್ ಸಂಸ್ಥೆ ಆರೋಪಗಳನ್ನು ಮಾಡಿದ್ದರು.
ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವ ಕೇರಳ ತಂಡದಿಂದ ಸ್ಯಾಮ್ಸನ್ ಅವರನ್ನು ಕೆಸಿಎ ಕೈಬಿಟ್ಟಿತ್ತು. ಇದು ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ತಂಡಕ್ಕೆ ಅವರ ಆಯ್ಕೆ ಸಾಧ್ಯತೆಯ ಮೇಲೆ ಪರಿಣಾಮ ಬೀರಿತು ಎಂದು ಹೇಳಲಾಗುತ್ತಿದೆ.
2013ರ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ನಡೆಸಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಶಾಂತ್ ಬಂಧಿತರಾಗಿದ್ದರು. ಬಿಸಿಸಿಐ ಅವರ ಮೇಲೆ ನಿಷೇಧ ಹೇರಿತ್ತು.
2019ರಲ್ಲಿ ಶ್ರೀಶಾಂತ್ ಮೇಲಿನ ನಿಷೇಧವನ್ನು ಏಳು ವರ್ಷಗಳಿಗೆ ಇಳಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.