ADVERTISEMENT

U19 ಏಷ್ಯಾಕಪ್: ಭಾರತದ ಯುವ ಪಡೆ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಪಾಕಿಸ್ತಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಡಿಸೆಂಬರ್ 2025, 14:00 IST
Last Updated 21 ಡಿಸೆಂಬರ್ 2025, 14:00 IST
<div class="paragraphs"><p>ಪಾಕಿಸ್ತಾನ ತಂಡ</p></div>

ಪಾಕಿಸ್ತಾನ ತಂಡ

   

ಕೃಪೆ: X / @cricketangon

ದುಬೈ: 19 ವರ್ಷದೊಳಗಿನವರ ಏಕದಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಭಾರತದ ಎದುರು 191 ರನ್‌ ಅಂತರದ ಜಯ ಸಾಧಿಸಿರುವ ಪಾಕಿಸ್ತಾನ ತಂಡ ಚಾಂಪಿಯನ್‌ ಪಟ್ಟಕ್ಕೇರಿದೆ.

ADVERTISEMENT

ದುಬೈ ಐಸಿಸಿ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್‌ ಪಡೆ, ಆರಂಭಿಕ ಬ್ಯಾಟರ್‌ ಸಮೀರ್‌ ಮಿನ್ಹಾಸ್‌ ಬಾರಿಸಿದ ಅಮೋಘ ಶತಕದ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 347 ರನ್‌ ಕಲೆಹಾಕಿತ್ತು.

ಬೃಹತ್‌ ಗುರಿ ಬೆನ್ನತ್ತಿದ ಭಾರತ, ಅಲ್ಪಮೊತ್ತಕ್ಕೆ ಸರ್ವಪತನ ಕಂಡಿತು.

ಟೀಂ ಇಂಡಿಯಾ ಪರ ಯಾರೊಬ್ಬರೂ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶಿಸಲಿಲ್ಲ. ಮೊದಲ ಎಸೆತದಲ್ಲೇ ಸಿಕ್ಸರ್‌ ಸಿಡಿಸಿದ ವೈಭವ್‌ ಸೂರ್ಯವಂಶಿ (26) ಹತ್ತು ಎಸೆತ ಎದುರಿಸಿ ಪೆವಿಲಿಯನ್‌ ಸೇರಿಕೊಂಡರು. ಆಯುಷ್‌ ಮ್ಹಾತ್ರೆ (2) ಮತ್ತೊಮ್ಮೆ ವೈಫಲ್ಯ ಅನುಭವಿಸಿದೆ.

ಕಳೆದ ಪಂದ್ಯದಲ್ಲಿ ಮಿಂಚಿದ್ದ ಆ್ಯರನ್‌ ಜಾರ್ಜ್‌ (16) ಹಾಗೂ ವಿಹಾನ್‌ ಮಲ್ಹೋತ್ರಾ (7) ಆಟ ಪಾಕ್‌ ಎದುರು ನಡೆಯಲಿಲ್ಲ. ವೇದಾಂತ್‌ ತ್ರಿವೇದಿ (9), ಕನಿಷ್ಕ್ ಚೌಹಾನ್‌ (13), ಹೆನಿಲ್‌ ಪಟೇಲ್‌ (6) ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿಕೊಂಡರು.

ಕೆಳ ಕ್ರಮಾಂಕದ ಖಿಲಾನ್‌ ಪಟೇಲ್‌ (19) ಮತ್ತು ದೀಪೇಂದ್ರ ದೇವೇಂದ್ರನ್‌ (36) ಹೋರಾಡಲು ಪ್ರಯತ್ನಿಸಿದರಾದರೂ, ಅಷ್ಟರಲ್ಲಿ ಪಂದ್ಯ ಕೈ ಬಿಟ್ಟುಹೋಗಿತ್ತು.

ಅಂತಿಮವಾಗಿ 26.2 ಓವರ್‌ಗಳಲ್ಲಿ 156 ರನ್‌ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿಗೆ ಶರಣಾಯಿತು.

ಪಾಕ್‌ ಪರ ಅಲಿ ರಾಜಾ ನಾಲ್ಕು ವಿಕೆಟ್ ಉರುಳಿದರೆ, ಮೊಹಮ್ಮದ್‌ ಸಯ್ಯಾಮ್‌, ಅಬ್ದುಲ್‌ ಸುಭಾನ್‌, ಹುಝೈಫಾ ಅಹ್ಸಾನ್‌ ತಲಾ ಎರಡೆರಡು ವಿಕೆಟ್‌ ಹಂಚಿಕೊಂಡರು.

ಮಿನ್ಹಾಸ್‌ ಅಬ್ಬರ

ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಮ್ಹಾತ್ರೆ ಯೋಜನೆ ಕೈಗೂಡಲಿಲ್ಲ. ಟೀಂ ಇಂಡಿಯಾದ ಎಲ್ಲ ಲೆಕ್ಕಾಚಾರಗಳನ್ನು ಪಾಕ್ ಆರಂಭಿಕ ಸಮೀರ್ ಮಿನ್ಹಾಸ್ ತಲೆಕೆಳಗಾಗಿಸಿದರು.

113 ಎಸೆತಗಳನ್ನು ಎದುರಿಸಿದ ಮಿನ್ಹಾಸ್‌, 9 ಸಿಕ್ಸರ್‌ ಮತ್ತು 17 ಬೌಂಡರಿ ಸಹಿತ 172 ರನ್‌ ಬಾರಿಸಿದರು. ಅವರನ್ನು ಬಿಟ್ಟರೆ, ಉಸ್ಮಾನ್‌ ಖಾನ್‌ (35), ಅಹ್ಮದ್‌ ಹುಸೈನ್‌ (56) ಮಾತ್ರವೇ ಅಲ್ಪ ಕಾಣಿಕೆ ನೀಡಿದರು. ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಬರಲಿಲ್ಲ.

ಮಿನ್ಹಾಸ್‌, 42.5 ಓವರ್‌ನಲ್ಲಿ ಔಟಾಗುವ ಮುನ್ನ ಪಾಕ್‌, 302 ರನ್ ಗಳಿಸಿತ್ತು. ಹೀಗಾಗಿ, 360ಕ್ಕಿಂತ ಅಧಿಕ ರನ್‌ ಪೇರಿಸುವ ಸಾಧ್ಯತೆ ಇತ್ತು. ಆದರೆ, ಭಾರತದ ಬೌಲರ್‌ಗಳು ಕೊನೆಯಲ್ಲಿ ಲಯ ಕಂಡುಕೊಂಡರು. ಅಂತಿಮ 44 ಎಸೆತಗಳಲ್ಲಿ 5 ವಿಕೆಟ್‌ಗಳನ್ನು ಪಡೆದು 47 ರನ್‌ ಮಾತ್ರ ಬಿಟ್ಟುಕೊಟ್ಟು, ಎದುರಾಳಿಯನ್ನು 350ರ ಗಡಿ ದಾಟದಂತೆ ನೋಡಿಕೊಂಡರು.

ಪಂದ್ಯ ಹಾಗೂ ಸರಣಿ ಶ್ರೇಷ್ಠ ಮಿನ್ಹಾಸ್‌

ಫೈನಲ್‌ನಲ್ಲಿ ಅಮೋಘ ಶತಕ ಸಿಡಿಸಿ ಪಾಕ್‌ ಪಡೆಯನ್ನು ಚಾಂಪಿಯನ್‌ಪಟ್ಟಕ್ಕೇರಿಸಿದ ಮಿನ್ಹಾಸ್‌ ಅರ್ಹವಾಗಿಯೇ ಪಂದ್ಯಶ್ರೇಷ್ಠ ಎನಿಸಿದರು.

ಅದರೊಟ್ಟಿಗೆ, ಟೂರ್ನಿಯುದ್ದಕ್ಕೂ ಮಿಂಚಿರುವ ಅವರಿಗೆ ಸರಣಿ ಶ್ರೇಷ್ಠ ಗೌರವವೂ ಒಲಿಯಿತು. ಟೂರ್ನಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 157ರ ಸರಾರಿಯಲ್ಲಿ 471 ರನ್‌ ಕಲೆಹಾಕಿದ್ದಾರೆ. ಎರಡು ಶತಕ ಹಾಗೂ ಒಂದು ಅರ್ಧಶತಕ ಅವರ ಬ್ಯಾಟ್‌ನಿಂದ ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.