ADVERTISEMENT

ಹೇಗೆ ಆಡಬೇಕು ಎಂಬುದನ್ನು ಕೊಹ್ಲಿಯಿಂದ ಕಲಿಯಬೇಕು: ಕಿಂಗ್ಸ್‌ಗೆ ಪಾಂಟಿಂಗ್ ಸಲಹೆ

ಪಿಟಿಐ
Published 21 ಏಪ್ರಿಲ್ 2025, 4:48 IST
Last Updated 21 ಏಪ್ರಿಲ್ 2025, 4:48 IST
<div class="paragraphs"><p>ವಿರಾಟ್‌ ಕೊಹ್ಲಿ ಹಾಗೂ ಪಂಜಾಬ್‌ ಕಿಂಗ್ಸ್‌ ಆಟಗಾರರು</p></div>

ವಿರಾಟ್‌ ಕೊಹ್ಲಿ ಹಾಗೂ ಪಂಜಾಬ್‌ ಕಿಂಗ್ಸ್‌ ಆಟಗಾರರು

   

ಪಿಟಿಐ ಚಿತ್ರಗಳು

ಮುಲ್ಲನಪುರ (ಪಂಜಾಬ್): ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ವಿರುದ್ಧದ ಪಂದ್ಯದ ಬಳಿಕ ಮಾತನಾಡಿರುವ ಪಂಜಾಬ್‌ ಕಿಂಗ್ಸ್‌ ತಂಡದ ಕೋಚ್‌ ರಿಕಿ ಪಾಂಟಿಂಗ್‌, ತಮ್ಮ ತಂಡವು ಇನ್ನಷ್ಟು ರನ್‌ ಗಳಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಮುಲ್ಲನಪುರದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ತಂಡ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 157 ರನ್‌ ಕಲೆಹಾಕಿತ್ತು. ಗುರಿ ಬೆನ್ನತ್ತಿದ ಆರ್‌ಸಿಬಿ ನಿರಾಯಾಸವಾಗಿ ಗುರಿ ತಲುಪಿತು. ವಿರಾಟ್‌ ಕೊಹ್ಲಿ (ಅಜೇಯ 73 ರನ್‌) ಹಾಗೂ ದೇವದತ್ತ ಪಡಿಕ್ಕಲ್‌ (61 ರನ್‌) ಗಳಿಸಿದ ಅರ್ಧಶತಕಗಳ ಬಲದಿಂದ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು ಇನ್ನೂ 7 ಎಸೆತ ಬಾಕಿ ಇರುವಂತೆಯೇ 159 ರನ್‌ ಗಳಿಸಿ ಗೆದ್ದಿತು.

ಬಳಿಕ ಮಾತನಾಡಿರುವ ಪಾಂಟಿಂಗ್, '157ಕ್ಕಿಂತಲೂ ಹೆಚ್ಚು ಮೊತ್ತ ಕಲೆಹಾಕಬಹುದಾಗಿದ್ದ ಪಿಚ್‌ ಇದಾಗಿತ್ತು ಎಂದು ನನಗನಿಸುತ್ತದೆ. ನಮ್ಮ ಬ್ಯಾಟರ್‌ಗಳು ಉತ್ತಮ ಆರಂಭ ಕಂಡರೂ, ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. ಅದರಲ್ಲೂ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಆ ರೀತಿ ಆಡುವುದು ಟಿ20 ಕ್ರಿಕೆಟ್‌ನಲ್ಲಿ ನಿರ್ಣಾಯಕ' ಎಂದಿದ್ದಾರೆ.

ಆರಂಭದಲ್ಲಿ ಸಿಕ್ಕ ಯಶಸ್ಸನ್ನು ಕೊಹ್ಲಿ ಹೇಗೆ ಸದುಪಯೋಗ ಪಡಿಸಿಕೊಂಡರು ಎಂಬುದನ್ನು ನೋಡಿ ಕಲಿಯಬೇಕು ಎಂದು ತಮ್ಮ ತಂಡದ ಆಟಗಾರರಿಗೆ ಒತ್ತಾಯಿಸಿದ್ದಾರೆ.

ವಿರಾಟ್‌ ಇನಿಂಗ್ಸ್‌ ಉದ್ದಕ್ಕೂ ಆಡಿ, ತಮ್ಮ ತಂಡವನ್ನು ಜಯದ ದಡ ಮುಟ್ಟಿಸಿದರು ಎಂದಿರುವ ಅವರು, ಉತ್ತಮ ಆರಂಭ ಸಿಕ್ಕರೂ ಅದನ್ನು ಬಳಸಿಕೊಳ್ಳುವಷ್ಟು ಚೆನ್ನಾಗಿ ನಾವು ಆಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾವು ಬಯಸಿದಂತೆಯೇ, ಪವರ್‌ ಪ್ಲೇ ಅವಧಿಯಲ್ಲಿ 1 ವಿಕೆಟ್‌ಗೆ 62 ರನ್‌ ಗಳಿಸಿದ್ದೆವು. ಹಾಗಾಗಿ 180 ರನ್‌ ಗಳಿಸುವ ಯೋಜನೆ ಇತ್ತು. ಅದನ್ನು 200ಕ್ಕೂ ಹೆಚ್ಚಿಸಿಕೊಳ್ಳಬಹುದಿತ್ತು. ಆದರೆ, ಒಂದಾದ ನಂತರ ಒಂದು ವಿಕೆಟ್‌ಗಳನ್ನು ಕಳೆದುಕೊಂಡೆವು. ಈ ರೀತಿ ಆದದ್ದು ಟೂರ್ನಿಯಲ್ಲಿ ಇದೇ ಮೊದಲೇನಲ್ಲ ಎಂದು ಹೇಳಿದ್ದಾರೆ.

ಈ ಸೋಲಿನ ಬಳಿಕ ಪಂಜಾಬ್‌ ಕಿಂಗ್ಸ್‌ ತಂಡ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಆರ್‌ಸಿಬಿ 5ರಿಂದ ಮೂರಕ್ಕೇರಿದೆ.

ಗುಜರಾತ್ ಟೈಟನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ.

ಆರ್‌ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ (ಏಪ್ರಿಲ್‌ 24ರಂದು) ಸವಾಲು ಎದುರಿಸಲಿದೆ. ಪಂಜಾಬ್‌ಗೆ ಕೋಲ್ಕತ್ತ ನೈಟ್‌ ರೈಡರ್ಸ್‌ (ಏಪ್ರಿಲ್‌ 26ರಂದು) ಪೈಪೋಟಿ ನೀಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.