ADVERTISEMENT

T20 WC ಸೆಮಿಫೈನಲ್: ಸೋಲಿನ ಬಳಿಕ ಭಾವುಕರಾದ ರೋಹಿತ್‌ಗೆ ಕೋಚ್ ದ್ರಾವಿಡ್ ಸಾಂತ್ವನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2022, 14:07 IST
Last Updated 10 ನವೆಂಬರ್ 2022, 14:07 IST
ಭಾವುಕರಾದ ರೋಹಿತ್‌ ಶರ್ಮಾ
ಭಾವುಕರಾದ ರೋಹಿತ್‌ ಶರ್ಮಾ   

ಅಡಿಲೇಡ್‌:ಈ ಬಾರಿಯ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿಸೋಲು ಅನುಭವಿಸಿದ ಬಳಿಕ ಭಾರತ ತಂಡದ ನಾಯಕರೋಹಿತ್ ಶರ್ಮಾ ಭಾವುಕರಾದರು. ಈ ವೇಳೆ ಕೋಚ್‌ ರಾಹುಲ್‌ ದ್ರಾವಿಡ್‌ ಅವರು ರೋಹಿತ್‌ಗೆ ಸಾಂತ್ವನ ಹೇಳಿದರು.

ಇಂದು (ನವೆಂಬರ್‌ 10 ರಂದು) ಅಡಿಲೇಡ್‌ನ ಓವಲ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ,ವಿರಾಟ್‌ ಕೊಹ್ಲಿ (50) ಹಾಗೂ ಹಾರ್ದಿಕ್‌ ಪಾಂಡ್ಯ (63) ಅವರ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 169 ರನ್ ಗಳಿಸಿತ್ತು.

ಈ ಮೊತ್ತ ಬೆನ್ನತ್ತಿದ ಇಂಗ್ಲೆಂಡ್‌ ಒಂದೂ ವಿಕೆಟ್‌ ಕಳೆದುಕೊಳ್ಳದೆ ಜಯದ ನಗೆ ಬೀರಿತು. ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಅಲೆಕ್ಸ್‌ ಹೇಲ್ಸ್‌ ಮತ್ತು ಜಾಸ್‌ ಬಟ್ಲರ್‌ ಜೋಡಿ ಮುರಿಯದ ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ 170 ರನ್‌ ಕಲೆಹಾಕಿತು.

ADVERTISEMENT

ಹೇಲ್ಸ್‌ಕೇವಲ 47 ಎಸೆತಗಳಲ್ಲಿ 7ಸಿಕ್ಸರ್‌ ಮತ್ತು 4 ಬೌಂಡರಿ ಸಹಿತ 89 ರನ್‌ ಚಚ್ಚಿದರೆ, ಅವರಿಗೆ ಉತ್ತಮ ಬೆಂಬಲ ನೀಡಿದ ಬಟ್ಲರ್‌ 49 ಎಸೆತಗಳಲ್ಲಿ 3ಸಿಕ್ಸರ್‌ ಮತ್ತು 9 ಬೌಂಡರಿ ಸಹಿತ 80ರನ್‌ ಸಿಡಿಸಿದರು. ಹೀಗಾಗಿ ಇನ್ನೂ ನಾಲ್ಕು ಓವರ್‌ ಬಾಕಿ ಇರುವಂತೆಯೇ ಇಂಗ್ಲೆಂಡ್‌ ಜಯ ಸಾಧಿಸಿತು.ಇದರೊಂದಿಗೆ ನವೆಂಬರ್‌ 13ರಂದು ಪಾಕಿಸ್ತಾನ ವಿರುದ್ಧ ಮೆಲ್ಬರ್ನ್‌ನಲ್ಲಿ ನಡೆಯುವ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಪಂದ್ಯದ ಬಳಿಕ ಮಾತನಾಡಿದ ರೋಹಿತ್‌, ತಂಡದಬೌಲಿಂಗ್ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ. ಹಾಗೆಯೇ, ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರಿದ ಇಂಗ್ಲೆಂಡ್‌ನ ಆರಂಭಿಕ ಬ್ಯಾಟರ್‌ಗಳನ್ನು ಶ್ಲಾಘಿಸಿದ್ದಾರೆ.

ಸೋಲಿನಿಂದ ಕಂಗೆಟ್ಟುರೋಹಿತ್‌ ಕೆಲಕಾಲ ಭಾವುಕರಾದ ಸಂದರ್ಭದ ಹಾಗೂ ರಾಹುಲ್‌ ದ್ರಾವಿಡ್‌ ಸಾಂತ್ವನ ಹೇಳುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.