ADVERTISEMENT

T20 WC | ಹ್ಯಾಟ್ರಿಕ್ ಸೊನ್ನೆ ಸುತ್ತಿದ ಅಭಿಷೇಕ್; ದುಬೆ ಮಿಂಚು: ಭಾರತ ಅಜೇಯ ಓಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಫೆಬ್ರುವರಿ 2026, 2:21 IST
Last Updated 19 ಫೆಬ್ರುವರಿ 2026, 2:21 IST
<div class="paragraphs"><p>ಭಾರತೀಯ ಆಟಗಾರರ ಸಂಭ್ರಮ</p></div>

ಭಾರತೀಯ ಆಟಗಾರರ ಸಂಭ್ರಮ

   

(ಪಿಟಿಐ ಚಿತ್ರ)

ಅಹಮದಾಬಾದ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ 'ಎ' ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಭಾರತ ತಂಡವು ನೆದರ್ಲೆಂಡ್ಸ್ ವಿರುದ್ಧ 17 ರನ್‌ ಅಂತರದ ಪ್ರಯಾಸದ ಗೆಲುವು ದಾಖಲಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿತು.

ADVERTISEMENT

ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಶಿವಂ ದುಬೆ ಅರ್ಧಶತಕದ(66) ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 193 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ದಿಟ್ಟ ಹೋರಾಟದ ನಡುವೆಯೂ ಏಳು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಅಭಿಷೇಕ್ ಹ್ಯಾಟ್ರಿಕ್ ಶೂನ್ಯ...

ಭಾರತ ತಂಡದ ಸ್ಫೋಟಕ ಎಡಗೈ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಮೊದಲ ಓವರ್‌ನ ಮೂರನೇ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ಆ ಮೂಲಕ ಟೂರ್ನಿಯಲ್ಲಿ ತಾವು ಆಡಿದ ಎಲ್ಲ ಮೂರು ಪಂದ್ಯಗಳಲ್ಲಿಯೂ ಸೊನ್ನೆ ಸುತ್ತಿದರು. ಒಟ್ಟಾರೆಯಾಗಿ 2026ನೇ ಸಾಲಿನಲ್ಲಿ ಐದನೇ ಸಲ ಶೂನ್ಯಕ್ಕೆ ಔಟ್ ಆದರು.

ಅಭಿಷೇಕ್ ಶರ್ಮಾ

ಟಿ20 ವಿಶ್ವಕಪ್‌ನಲ್ಲಿ ಸತತ 12ನೇ ಗೆಲುವು...

ಇದರೊಂದಿಗೆ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸತತ 12ನೇ ಗೆಲುವು ದಾಖಲಿಸಿತು. ಇದು ಕೂಡ ದಾಖಲೆಯಾಗಿದೆ. 2024ರಲ್ಲಿ ಭಾರತ ಅಜೇಯವಾಗಿ ಪ್ರಶಸ್ತಿ ಗೆದ್ದಿತ್ತು. ಅದೇ ಸಾಲಿನಲ್ಲಿ ದಕ್ಷಿಣ ಆಫ್ರಿಕಾ ಸತತ ಎಂಟು ಗೆಲುವುಗಳನ್ನು ದಾಖಲಿಸಿತ್ತು.

ಭಾರತ ಅಜೇಯ ಓಟ...

'ಎ' ಗುಂಪಿನಲ್ಲಿ ಸತತ ನಾಲ್ಕನೇ ಗೆಲುವಿನೊಂದಿಗೆ ಭಾರತ ಅಜೇಯವಾಗಿ ಸೂಪರ್ 8ರ ಹಂತಕ್ಕೆ ಲಗ್ಗೆ ಇಟ್ಟಿತು. ಅಲ್ಲದೆ +2.500ರ ರನ್ ರೇಟ್ ಕಾಯ್ದುಕೊಂಡಿದೆ. ಇದೇ ಗುಂಪಿನಿಂದ ಎರಡನೇ ತಂಡವಾಗಿ ಪಾಕಿಸ್ತಾನ ತೇರ್ಗಡೆ ಹೊಂದಿತು. ನೆದರ್ಲೆಂಡ್ಸ್, ಅಮೆರಿಕ ಹಾಗೂ ನಮೀಬಿಯಾ ಹೊರಬಿದ್ದಿದೆ.

9 ಕ್ಯಾಚ್ ಕೈಚೆಲ್ಲಿದ ಭಾರತ...

ಈ ಟೂರ್ನಿಯಲ್ಲಿ ಇದುವರೆಗೆ ಭಾರತೀಯ ಆಟಗಾರರು ಒಂಬತ್ತು ಕ್ಯಾಚ್‌ಗಳನ್ನು ಕೈಚೆಲ್ಲಿದ್ದಾರೆ. ಇದು 20 ತಂಡಗಳು ಭಾಗವಹಿಸುತ್ತಿರುವ ಟೂರ್ನಿಯಲ್ಲಿ ಐರ್ಲೆಂಡ್ (10 ಕ್ಯಾಚ್) ಬಳಿಕದ ಕಳಪೆ ಸಾಧನೆಯಾಗಿದೆ.

ಶಿವಂ ದುಬೆ

12 ಬೌಲರ್‌ಗಳ ಬಳಕೆ...

ಭಾರತವು ಈ ಟೂರ್ನಿಯಲ್ಲಿ ಈವರೆಗೆ 12 ಬೌಲರ್‌ಗಳನ್ನು ಬಳಕೆ ಮಾಡಿದೆ. 2009ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಟೂರ್ನಿಯಲ್ಲಿ 11 ಬೌಲರ್‌ಗಳನ್ನು ಬಳಕೆ ಮಾಡಿತ್ತು.

ನೆದರ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಭಾರತವು ಏಳು ಬೌಲರ್‌ಗಳನ್ನು ಬಳಕೆ ಮಾಡಿತ್ತು.

ಭಾರತದ ಪಂದ್ಯಗಳ ಫಲಿತಾಂಶಗಳು:

ಅಮೆರಿಕ ವಿರುದ್ಧ 29 ರನ್ ಜಯ

ನಮೀಬಿಯಾ ವಿರುದ್ಧ 93 ರನ್ ಜಯ

ಪಾಕಿಸ್ತಾನ ವಿರುದ್ಧ 61 ರನ್ ಜಯ

ನೆದರ್ಲೆಂಡ್ಸ್ ವಿರುದ್ಧ 17 ರನ್ ಜಯ

ಸೂಪರ್ 8: ಗುಂಪುಗಳ ವಿಂಗಡನೆ

ಸೂಪರ್ 8ರ ವೇಳಾಪಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.