ವೈಭವ್ ಸೂರ್ಯವಂಶಿ
ಪಿಟಿಐ ಚಿತ್ರ
ಜೈಪುರ: ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಸಂಚಲನ ಸೃಷ್ಟಿಸಿರುವ 14ರ ಪೋರ ವೈಭವ್ ಸೂರ್ಯವಂಶಿಯ ಆಟಕ್ಕೆ ಕ್ರಿಕೆಟ್ ದಿಗ್ಗಜರರಾದ ಸಚಿನ್, ಕ್ರಿಸ್ ಶ್ರೀಕಾಂತ್, ರೋಹಿತ್ ಸೇರಿದಂತೆ ಹಲವರು ಹುಬ್ಬೇರಿಸಿ, ಬೆನ್ನು ತಟ್ಟಿದ್ದಾರೆ.
ಗುಜರಾತ್ ಟೈಟನ್ಸ್ ನೀಡಿದ 210 ರನ್‌ಗಳ ಸವಾಲನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡವನ್ನು ಕೇವಲ 15 ಓವರ್‌ಗಳಲ್ಲಿ ಗೆಲುವಿನ ದಡ ಸೇರಿಸಿದವರು ವೈಭವ್. ಕೇವಲ 38 ಎಸೆತಗಳಲ್ಲಿ 101 ರನ್‌ಗಳಿಸಲು ಅವರ ಬ್ಯಾಟ್‌ನಿಂದ ಸಿಡಿದ ಚೆಂಡುಗಳು ಬೌಂಡರಿ ಗೆರೆ ದಾಟುತ್ತಿದ್ದಂತೆ ಇಡೀ ಕ್ರೀಡಾಂಗಣ ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲೂ ಸಂಭ್ರಮ ಮನೆ ಮಾಡಿತು.
ಭಾರತದ ತಂಡಕ್ಕೆ ಭರವಸೆಯ ಬ್ಯಾಟರ್ ಒಬ್ಬ ದೊರೆತ, ವಿಡಿಯೊ ಗೇಮ್ ಆಡುವ, ಐಸ್ ಕ್ರೀಂ ಕೇಳುವ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಬೌಲರ್‌ಗಳ್ನು ದಂಡಿಸಿದ ಪರಿಗೆ ಕ್ರಿಕೆಟ್ ದಿಗ್ಗಜರೇ ಬೆರಗಾಗಿದ್ದಾರೆ. ವೈಭವ್ ಆಟವನ್ನು ಹೊಗಳಲು ಹಲವರು ಸಾಮಾಜಿಕ ಮಾಧ್ಯಮದ ಮೊರೆ ಹೋಗಿದ್ದಾರೆ.
‘ಅಂಜಿಕೆ ಇಲ್ಲದ ಬ್ಯಾಟಿಂಗ್ ಶೈಲಿ, ಬ್ಯಾಟ್ ಬೀಸುವ ವೇಗ, ಸರಿಯಾದ ಲೆಂತ್‌ನ ಬಹುಬೇಗ ಆಯ್ಕೆ, ತಮ್ಮೆಲ್ಲಾ ಬಲವನ್ನು ಪ್ರಯೋಗಿಸಿ ಚೆಂಡನ್ನು ಬೌಂಡ್ರಿ ಗೆರೆಯಾಚೆ ಅಟ್ಟುವ ಶಕ್ತಿ ಮತ್ತು ಇನ್ನಿಂಗ್ಸ್ ಕಟ್ಟುವ ಛಲ ಅದ್ಭುತ’ ಎಂದು ಸಚಿನ್ ತೆಂಡೂಲ್ಕರ್ ಬಣ್ಣಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ರೋಹಿತ್ ಶರ್ಮಾ ಹೊಗಳಿಕೆಯ ಮಳೆ ಸುರಿಸಿದ್ದಾರೆ.
‘ಸೂಪರ್‌ಸ್ಟಾರ್ ವೈಭವ್ ಸೂರ್ಯವಂಶಿ, ಇನ್ನಷ್ಟು ಶಕ್ತಿ ದೊರೆಯಲಿ ಯಂಗ್‌ಸ್ಟರ್’ ಎಂದು ಹರ್ಭಜನ್ ಸಿಂಗ್ ಹಾರೈಸಿದ್ದಾರೆ.
‘14ರ ಎಳವೆಯಲ್ಲಿ ಮಕ್ಕಳು ಐಸ್ ಕ್ರೀಂ ತಿನ್ನಬೇಕು ಎಂದು ಬಯಸುವುದು ಸಹಜ. ಆದರೆ ವೈಭವ್ ಸಾಧನೆ ಆತನ ವಯೋಮಾನವನ್ನು ಮೀರಿದ್ದು. ಇಂಥ ಒಬ್ಬ ಸ್ಟಾರ್‌ನ ಉದಯಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಭಾರತೀಯ ಕ್ರಿಕೆಟ್‌ನ ಭವಿಷ್ಯದ ಸೂಪರ್‌ಸ್ಟಾರ್’ ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದಾರೆ.
‘14ನೇ ವರ್ಷದಲ್ಲಿ ನೀವು ಏನು ಮಾಡುತ್ತಿದ್ದರಿ!! ಆದರೆ ಈ ಪೋರ ಕಣ್ಣನ್ನೂ ಮಿಟುಕಿಸದೇ ಅದ್ಭುತ ಬೌಲರ್‌ಗಳನ್ನೇ ಎದುರಿಸಿದ್ದಾನೆ. ವೈಭವ್ ಸೂರ್ಯವಂಶಿ ಎಂಬ ಹೆಸರನ್ನು ನೆನಪಿಟ್ಟುಕೊಳ್ಳಿ. ಭಯವಿಲ್ಲದ ಆಟದ ವೈಖರಿ ಈತನದ್ದು. ಭವಿಷ್ಯ ಉಜ್ವಲವಾಗಿದೆ ಎಂಬುದನ್ನು ನೋಡಲು ಹೆಮ್ಮೆ ಎನಿಸುತ್ತಿದೆ’ ಎಂದು ಯುವರಾಜ್ ಸಿಂಗ್ ಬಣ್ಣಿಸಿದ್ದಾರೆ.
ವೇಗಿ ಮೊಹಮ್ಮದ್ ಶಮಿ ಪ್ರತಿಕ್ರಿಯಿಸಿ, ‘ಎಂಥ ಅದ್ಭುತ ಪ್ರತಿಭೆ ವೈಭವ್ ಸೂರ್ಯವಂಶಿಯದ್ದು. 14ರ ಎಳೆ ವಯಸ್ಸಿನಲ್ಲೇ ಶತಕ. ಮತ್ತಷ್ಟು ಬೆಳಗು ಸೋದರ’ ಎಂದು ಹಾರೈಸಿದ್ದಾರೆ.
ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್‌ನ ಬ್ಯಾಟರ್‌ಗಳು ಅಬ್ಬರಿಸಿದ್ದರು. ಶುಭಮನ್ ಗಿಲ್ 50 ಎಸೆತಗಳಲ್ಲಿ 84 ರನ್ ಸಿಡಿಸಿದರು. ಜೋಸ್ ಬಟ್ಲರ್ 26 ಎಸೆತಗಳಲ್ಲೇ ಅರ್ಧ ಶತಕ ಪೂರೈಸಿದರು. 4 ವಿಕೆಟ್ ನಷ್ಟಕ್ಕೆ 209 ರನ್ ಪೇರಿಸಿದ ಟೈಟನ್ಸ್, ರಾಜಸ್ಥಾನ ರಾಯಲ್ಸ್ ಗೆಲುವಿಗೆ 210ರನ್‌ಗಳ ಸವಾಲನ್ನಿಟ್ಟಿತು.
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್ 40 ಎಸೆತಗಳಲ್ಲಿ 70 ಮತ್ತು ವೈಭವ್ ಸೂರ್ಯವಂಶಿ 38 ಎಸೆತಗಳಲ್ಲಿ 101 ರನ್ ಸಿಡಿಸಿ ಪಂದ್ಯವನ್ನು ತಮ್ಮತ್ತ ಸೆಳೆದರು. ರಿಯಾನ್ ಪರಾಗ್ 15 ಎಸೆತಗಳಲ್ಲಿ 32 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ದಾಟಿಸಿದರು. ಕೇವಲ 15.5 ಓವರ್‌ಗಳಲ್ಲಿ ರಾಯಲ್ಸ್ ಗೆಲುವಿನ ದಡ ದಾಟುವ ಜತೆಗೆ, ಈ ಯುವ ಕ್ರಿಕೆಟಿಗ ಐಪಿಎಲ್ ಇತಿಹಾಸದಲ್ಲೇ ದಾಖಲೆ ಬರೆದಿದ್ದು ಮಾತ್ರ ಜಗತ್ತಿನಾದ್ಯಂತ ಸುದ್ದಿಯಾಯಿತು.
12 ವರ್ಷದವನಿದ್ದಾಗಲೇ ವೈಭವ್ ಸೂರ್ಯವಂಶಿ ಬಿಹಾರ ರಣಜಿ ಕ್ರಿಕೆಟ್‌ನಲ್ಲಿ ಸ್ಥಾನ ಪಡೆದ ಬಾಲಕ. ಆ ಮೂಲಕ ಬಿಹಾರ ಕ್ರಿಕೆಟ್‌ನಲ್ಲಿ ಎರಡನೇ ಅತಿ ಕಿರಿಯ ಆಟಗಾರ ಎಂದೆನಿಸಿಕೊಂಡಿದ್ದ. ಐಪಿಎಲ್‌ನ 18ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ₹1.1 ಕೋಟಿಗೆ ಮೊತ್ತಕ್ಕೆ ಸೇರಿಕೊಂಡ ಈ ಪೋರನ ಆಟಕ್ಕೆ ರಾಯಲ್ಸ್ ಮಾತ್ರವಲ್ಲ, ಎಲ್ಲಾ ತಂಡಗಳೂ ಮೆಚ್ಚುಗೆಯ ಮಳೆ ಸುರಿಸುತ್ತಿವೆ. ತಂಡದ ಕೋಚ್ ರಾಹುಲ್ ದ್ರಾವಿಡ್ ಮತ್ತು ಇತರ ಆಟಗಾರರ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.