ವಿರಾಟ್ ಕೊಹ್ಲಿ
(ಪಿಟಿಐ ಚಿತ್ರ)
ಬೆಂಗಳೂರು: ಬ್ಯಾಟಿಂಗ್ ಚಾಂಪಿಯನ್ ವಿರಾಟ್ ಕೊಹ್ಲಿ ಅವರಿಗೂ ಬೆಂಗಳೂರಿಗೆ ವಿಶೇಷ ಸಂಬಂಧವಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂಲಕ ಅವರು ಉದ್ಯಾನನಗರಿ ಅಭಿಮಾನಿಗಳ ಕಣ್ಮಣಿಯೇ ಆಗಿದ್ದಾರೆ.
ವಿರಾಟ್ ಸೋಮವಾರ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಅದರ ನಂತರ ಅವರು ಮೊದಲ ಬಾರಿ ಕ್ರಿಕೆಟ್ ಕಣಕ್ಕೆ ಇಳಿಯಲಿರುವುದು ಬೆಂಗಳೂರಿನಲ್ಲಿಯೇ. ಇದೇ 17ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಅವರು ಆಡಲಿದ್ದಾರೆ. ಆದ್ದರಿಂದ ಅವರನ್ನು ಅಭಿನಂದಿಸಲು ‘ವೈಟ್ ಜೆರ್ಸಿ’ ಗೌರವ ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅಭಿಯಾನ ಆರಂಭಿಸಿದ್ದಾರೆ. ಆ ದಿನ ಕ್ರೀಡಾಂಗಣದಲ್ಲಿ ಸೇರುವ ಪ್ರೇಕ್ಷಕರು ಬಿಳಿ ಬಣ್ಣದ ಪೋಷಾಕು ಧರಿಸಿರಬೇಕು. ಅದರ ಮೇಲೆ ‘18’ ಎಂದು ಬರೆದಿರಬೇಕು ಎಂಬ ಅಭಿಯಾನ ನಡೆದಿದೆ.
ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಈ ವೈಟ್ ಜೆರ್ಸಿ ಅಭಿಯಾನ ಕೈಬಿಟ್ಟಿರುವುದಾಗಿ ಆರ್‌ಸಿಬಿ ಫ್ಯಾನ್ ಕ್ಲಬ್‌ನ ಪ್ರತಿನಿಧಿಗಳು ತಿಳಿಸಿದ್ದಾರೆ.
‘ಈ ರೀತಿಯಲ್ಲಿ ವಿರಾಟ್ ಅವರಿಗೆ ಅಭಿನಂದನೆ ಸಲ್ಲಿಸುವ ಕುರಿತು ಚಿಂತಿಸಲಾಗಿತ್ತು. ಆದರೆ, ಇದು ರಾತ್ರಿ ಪಂದ್ಯವಾಗಿದೆ. ಹೊನಲು ಬೆಳಕಿನಲ್ಲಿ ನಡೆಯುತ್ತದೆ. ಅಲ್ಲದೇ ಪಂದ್ಯದಲ್ಲಿ ಬಿಳಿ ಬಣ್ಣದ ಚೆಂಡು ಬಳಕೆಯಾಗುತ್ತದೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಎಲ್ಲರೂ ಬಿಳಿ ಪೋಷಾಕು ಧರಿಸಿ ಸೇರಿದರೆ ಆಟಕ್ಕೆ ತೊಂದರೆಯಾಗುತ್ತದೆ. ಬಿಳಿ ಚೆಂಡಿನ ಚಲನೆಯನ್ನು ಗುರುತಿಸುವುದು ಆಟಗಾರರಿಗೆ ಕಷ್ಟವಾಗಬಹುದು. ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಂಪು ಚೆಂಡು ಬಳಸುವುದರಿಂದ ಬಿಳಿ ಪೋಷಾಕು ಸೂಕ್ತವಾಗುತ್ತದೆ. ಪಂದ್ಯಕ್ಕೆ ತೊಂದರೆಯಾಗುವುದರಿಂದ ಸದ್ಯಕ್ಕೆ ಈ ಯೋಚನೆಯನ್ನು ಕೈಬಿಡಲಾಗಿದೆ’ ಎಂದು ಆರ್‌ಸಿಬಿ ಕ್ಲಬ್‌ನ ಪ್ರೀತಂ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಬೆಂಗಳೂರು ತಂಡವು ಆ ದಿನ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಕಣಕ್ಕಿಳಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.