
ಬೆಂಗಳೂರು: ಅಂಧ ಮಹಿಳೆಯರ ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ತಂಡದ ಆಟಗಾರ್ತಿಯರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನಿಸಿದ್ದಾರೆ.
‘ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡದ ಸದಸ್ಯರನ್ನು ಅಭಿನಂದಿಸಿ, ಮುಂದಿನ ಕ್ರೀಡಾ ಬದುಕು ಹೀಗೆಯೇ ಯಶಸ್ಸುಗಳಿಂದ ಕೂಡಿರಲಿ ಎಂದು ಶುಭ ಹಾರೈಸಿದ್ದೇನೆ. ಭಾರತ ತಂಡದ ನಾಯಕಿ, ತುಮಕೂರಿನ ಶಿರಾ ಮೂಲದ ದೀಪಿಕಾ ಅವರ ನಾಯಕತ್ವ ಮತ್ತು ಅದ್ಭುತ ಆಟ ಈ ಪಂದ್ಯಾವಳಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂಬುದನ್ನು ಇದೇ ವೇಳೆ ಸ್ಮರಿಸಿ, ಶ್ಲಾಘಿಸಿದ್ದೇನೆ’ ಎಂದು ಸಿದ್ದರಾಮಯ್ಯ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಕರ್ನಾಟಕದ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ ₹10 ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ನೀಡಲಾಗುವುದು. ಹಾಗೆಯೇ ಭಾರತ ತಂಡದ ಇತರೆ ರಾಜ್ಯಗಳನ್ನು ಪ್ರತಿನಿಧಿಸುವ ತಂಡದ ಆಟಗಾರರಿಗೆ ತಲಾ ₹2 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಇದರಿಂದ ತಂಡದಲ್ಲಿದ್ದ ಇತರೆ ರಾಜ್ಯಗಳ 13 ಆಟಗಾರ್ತಿಯರಿಗೂ ತಲಾ ₹2 ಲಕ್ಷ ನಗದು ಬಹುಮಾನ ಸಿಗಲಿದೆ’ ಎಂದು ಅವರು ತಿಳಿಸಿದ್ದಾರೆ.
ಕೊಲಂಬೊದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳಿಂದ ನೇಪಾಳ ತಂಡವನ್ನು ಮಣಿಸಿ ಚಾರಿತ್ರಿಕ ಸಾಧನೆ ಮೆರೆದಿತ್ತು. 16 ಆಟಗಾರ್ತಿಯರ ತಂಡದಲ್ಲಿ ಕರ್ನಾಟಕದ ಮೂವರು ಸ್ಥಾನ ಪಡೆದಿದ್ದರು. ತುಮಕೂರಿನ ದೀಪಿಕಾ ಟಿ.ಸಿ. (ನಾಯಕಿ), ಕಾವ್ಯ ಎನ್.ಆರ್, ಶಿವಮೊಗ್ಗದ ರಿಪ್ಪನ್‌ಪೇಟೆಯ ಕಾವ್ಯ ವಿ. ಅವರು ತಂಡದಲ್ಲಿದ್ದರು.
ಭಾರತ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ) ಅಧ್ಯಕ್ಷ ಮಹಾಂತೇಶ ಅವರ ನೇತೃತ್ವದಲ್ಲಿ ತಂಡವು ಚೆನ್ನೈ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಎರಡೂ ವಿಮಾನ ನಿಲ್ದಾಣಗಳಲ್ಲಿ ಚಾಂಪಿಯನ್ನರಿಗೆ ಅಧಿಕಾರಿಗಳು ಮತ್ತು ಅಭಿಮಾನಿಗಳಿಂದ ಭಾವನಾತ್ಮಕ ಸ್ವಾಗತ ದೊರಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.