ವಿಶ್ವಕಪ್ ಕ್ರಿಕೆಟ್‌ನಲ್ಲಿ ಚಾಂಪಿಯನ್ ಆದ ಭಾರತೀಯ ವನಿತೆಯರ ತಂಡದ ಸಂಭ್ರಮ
ಎಕ್ಸ್ ಚಿತ್ರ
ಮುಂಬೈ: ಚೊಚ್ಚಲ ವಿಶ್ವಕಪ್ ಮುಡಿಗೇರಿಸಿ ಇಡೀ ದೇಶಕ್ಕೇ ಹೆಮ್ಮೆ ತಂದ ಭಾರತದ ವನಿತೆಯರ ಕ್ರಿಕೆಟ್ ತಂಡಕ್ಕೆ ದೇಶದ ಗಣ್ಯರ ಸಹಿತ ಜಗತ್ತಿನ ವಿವಿಧ ಮೂಲೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕ ಸುಂದರ್ ಪಿಚೈ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಶುಭ ಕೋರಿದ್ದಾರೆ.
ನವಿ ಮುಂಬೈನ ಆರ್.ಡಿ. ಪಾಟೀಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಮಣಿಸಿದ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡಕ್ಕೆ ವಿಶ್ವದೆಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಂಡಕ್ಕೆ ಶುಭ ಕೋರಿ, ‘ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತದ ವನಿತೆಯರ ಅತ್ಯದ್ಭುತ ಗೆಲುವು ಇದಾಗಿದೆ. ಫೈನಲ್ ಪಂದ್ಯದಲ್ಲಿ ಭಾರತೀಯ ತಂಡದ ಆಟವು ಅತ್ಯದ್ಭುತ ಕೌಶಲ ಹಾಗೂ ಆತ್ಮವಿಶ್ವಾಸಕ್ಕೆ ಹಿಡಿದ ಕನ್ನಡಿಯಾಗಿದೆ. ಒಂದು ತಂಡವಾಗಿ ತೋರಿದ ಸಾಹಸ ಮತ್ತು ವರ್ಲ್ಡ್‌ಕಪ್ ಉದ್ದಕ್ಕೂ ತೋರಿದ ದೃಢತೆಗೆ ಅವರಿಗೆ ಅಭಿನಂದನೆಗಳು. ಈ ಐತಿಹಾಸಿಕ ಗೆಲುವು, ಭವಿಷ್ಯದಲ್ಲಿ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಇನ್ನಷ್ಟು ಸ್ಫೂರ್ತಿಯನ್ನು ತರಲಿದೆ’ ಎಂದಿದ್ದಾರೆ.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶುಭಾಶಯ ಕೋರಿ, ‘ಇದು ಹೆಮ್ಮೆಯ ಕ್ಷಣ. ನೀಲಿ ಬಣ್ಣದ ಪೋಷಾಕಿನಲ್ಲಿ ವಿಶ್ವವನ್ನೇ ಜಯಿಸಿದ ಮಹಿಳಾ ತಂಡವು ಕೋಟ್ಯಂತರ ಹೃದಯವನ್ನು ಗೆದ್ದಿದೆ. ನಿಮ್ಮ ಛಲ, ಧೈರ್ಯವು ಭಾರತಕ್ಕೆ ಕೀರ್ತಿಯನ್ನು ತಂದಿದೆ. ಆ ಮೂಲಕ ಅಸಂಖ್ಯಾತ ಯುವತಿಯರಿಗೆ ನಿರ್ಭಯವಾಗಿ ಕನಸು ಕಾಣಲು ಪ್ರೇರೇಪಿಸಿದೆ. ನೀವು ಕೇವಲ ಟ್ರೋಫಿಯನ್ನು ಎತ್ತಲಿಲ್ಲ. ಬದಲಿಗೆ ಇಡೀ ದೇಶದ ಚೈತನ್ಯವನ್ನೇ ಎತ್ತಿ ಹಿಡಿದಿದ್ದೀರಿ’ ಎಂದು ಅಭಿನಂದಿಸಿದ್ದಾರೆ.
ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಕೋರಿರುವ ಅಮಿತಾಬ್ ಬಚ್ಚನ್, ‘ಐಸಿಸಿ ವಿಶ್ವಕಪ್ ಜಯಿಸುವ ಮೂಲಕ ಭಾರತದ ಮಹಿಳಾ ತಂಡವು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ. ಶುಭಾಶಯಗಳು, ಶುಭಾಶಯಗಳು, ಶುಭಾಶಯಗಳು...!!’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗೂಗಲ್‌ನ ಸಿಇಒ ಸುಂದರ್ ಪಿಚೈ ಅವರು ಟ್ವೀಟ್ ಮಾಡಿ ಭಾರತೀಯ ಮಹಿಳಾ ತಂಡಕ್ಕೆ ಶುಭ ಕೋರಿದ್ದಾರೆ. ‘ಅತ್ಯಂತ ಕುತೂಹಲಭರಿತ ಮಹಿಳಾ ವಿಶ್ವಕಪ್ ಕ್ರಿಕೆಟ್ ಫೈನಲ್ ಅದಾಗಿತ್ತು. 1983ರ ಹಾಗೂ 2011ರ ವಿಶ್ವಕಪ್‌ನ ಫೈನಲ್ ಪಂದ್ಯಗಳ ನೆನಪುಗಳು ಹಾದುಹೋದವು. ಅಭಿನಂದನೆಗಳು ಟೀಂ ಇಂಡಿಯಾ, ನಿಮ್ಮ ಈ ಗೆಲುವು ಇಡೀ ತಲೆಮಾರಿಗೆ ಸ್ಫೂರ್ತಿಯನ್ನು ತರಲಿದೆ. ದಕ್ಷಿಣ ಆಫ್ರಿಕಾ ತಂಡದ್ದೂ ಉತ್ತಮ ಪ್ರದರ್ಶನ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.