ವಿಕೆಟ್ ಪಡೆದ ಸಂಭ್ರಮದಲ್ಲಿ ಶಫಾಲಿ ವರ್ಮಾ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್
ಚಿತ್ರ @cricbuzz
ನವಿ ಮುಂಬೈ: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಐಸಿಸಿ ಏಕದಿನ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತ ತಂಡ 52 ರನ್‌ಗಳ ರೋಚಕ ಜಯ ಸಾಧಿಸಿ, ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡಿದೆ. ಪಂದ್ಯದ ಬಳಿಕ ಮಾತನಾಡಿದ ನಾಯಕಿ ಹರ್ಮನ್‌ಪ್ರೀತ್ ಕೌರ್, ‘ಪಂದ್ಯ ಗೆಲ್ಲಲು ಶಫಾಲಿ ಬೌಲಿಂಗ್ ಕಾರಣ’ ಎಂದು ಯುವ ಆಟಗಾರ್ತಿಯನ್ನು ಕೊಂಡಾಡಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ನಾಯಕಿ ಹರ್ಮನ್‌ಪ್ರೀತ್ ಕೌರ್, ‘ಇದು ಆರಂಭ. ನಾವು ಈ ತಡೆಗೋಡೆಯನ್ನು ಮುರಿಯಲು ಬಯಸಿದ್ದೆವು ಮತ್ತು ಅದನ್ನು ಮಾಡಿದ್ದೇವೆ. ಟ್ರೋಫಿ ಗೆಲ್ಲುವುದನ್ನು ಅಭ್ಯಾಸ ಮಾಡಿಕೊಳ್ಳುವುದು ನಮ್ಮ ಮುಂದಿನ ಗುರಿಯಾಗಬೇಕು. ನಾವು ಈ ಒಂದು ಟ್ರೋಫಿಗಾಗಿ ಕಾಯುತ್ತಿದ್ದೆವು, ಆ ಕ್ಷಣ ಈಗ ನನಸಾಗಿದೆ. ಮುಂದೆ ಕೂಡ ದೊಡ್ಡ ಟೂರ್ನಿಗಳು ನಮ್ಮ ಮುಂದಿವೆ. ಅವುಗಳನ್ನು ಗೆಲ್ಲಬೇಕು. ಇದು ಅಂತ್ಯವಲ್ಲ, ಕೇವಲ ಆರಂಭ’ ಎಂದು ಹೇಳಿದ್ದಾರೆ.
‘ನಾಯಕತ್ವ ಎಂದರೆ ಪಂದ್ಯ ಗೆಲ್ಲಿಸಲು ಬೇಕಾಗುವ ಯೋಜನೆ ರೂಪಿಸುವುದು. 1983ರ ವಿಶ್ವಕಪ್ ವಿವಿಯನ್ ರಿಚರ್ಡ್ಸ್ ವಿಕೆಟ್ ಪಡೆಯಲು ಕಪಿಲ್ ದೇವ್ ಅವರು ಮದನ್ ಲಾಲ್‌ಗೆ ಇನ್ನೊಂದು ಓವರ್ ಬೌಲಿಂಗ್ ನೀಡಿ ಯಶಸ್ವಿಯಾಗಿದ್ದು ನೆನೆಪಿಗೆ ಬಂತು. ಲಾರಾ ಮತ್ತು ಸುನೆ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ನಾವು ಪಂದ್ಯ ಗೆಲ್ಲಲು ಈ ಜೋಡಿಯ ವಿಕೆಟ್ ಪಡೆಯಬೇಕಿತ್ತು. ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರಿಂದ ಇಂದು ಶಫಾಲಿ ದಿನವಾಗಬಹುದು ಎಂದುಕೊಂಡು ಆಕೆಗೆ ಬೌಲಿಂಗ್ ನೀಡಿದೆ ಮತ್ತು ಅದು ಯಶಸ್ವಿಯಾಯಿತು’ ಎಂದರು.
‘ಶಫಾಲಿಗೆ ಕನಿಷ್ಠ ಒಂದು ಓವರ್ ಬೌಲಿಂಗ್ ನೀಡಬೇಕೆಂದು ಮನಸ್ಸು ಹೇಳುತ್ತಿತ್ತು. ಅದರಂತೆ ಆಕೆ ಯಶಸ್ವಿಯಾದಳು. ಕೊನೆಗೆ ಶಫಾಲಿ ಕೊಂಚ ಭಯಭೀತರಾದರು. ಆದರೆ, ಸರಿಯಾದ ಸಮಯದಲ್ಲಿ ದೀಪ್ತಿ ಬಂದು ವಿಕೆಟ್ ಕಬಳಿಸಿದರು’ ಎಂದರು.
ಶಫಾಲಿ ತಂಡ ಸೇರಿಕೊಂಡಾಗ ಆಕೆಗೆ 2 ರಿಂದ 3 ಓವರ್ ಬೌಲಿಂಗ್ ಮಾಡಬೇಕಾಗುತ್ತದೆ ಎಂದು ಹೇಳಿದ್ದೆ. ಅದಕ್ಕೆ ಆಕೆ, ನೀವು ನನಗೆ ಬೌಲಿಂಗ್ ನೀಡಿದರೆ ನಾನು 10 ಓವರ್ ಬೇಕಿದ್ದರೂ ಮಾಡುತ್ತೇನೆ ಎಂದು ಹೇಳಿದ್ದಳು. ಹಾಗಾಗಿ ಸರಿಯಾದ ಸಮಯಕ್ಕೆ ವಿಕೆಟ್ ಕಬಳಿಸಿದ್ದರಿಂದ ಗೆಲುವಿನ ಕ್ರೆಡಿಟ್ ಆಕೆಗೆ ಸಲ್ಲಬೇಕು’ ಎಂದು ಶಫಾಲಿ ಆಟವನ್ನು ಪ್ರಶಂಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.