ಮುಂಬೈ: ಭಾರತ ಕ್ರಿಕೆಟ್ ತಂಡದ ಆಟಗಾರ ಯುಜುವೇಂದ್ರ ಚಾಹಲ್ ಮತ್ತು ನಟಿ ಧನಶ್ರೀ ವರ್ಮಾ ಅವರು ಇಲ್ಲಿನ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಿಂದ ಗುರುವಾರ ವಿಚ್ಛೇದನ ಪಡೆದುಕೊಂಡಿದ್ದಾರೆ.
ಈ ಮೂಲಕ ಅವರ ನಾಲ್ಕು ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ.
ಚಾಹಲ್ ಮತ್ತು ಧನಶ್ರೀ ಗುರುವಾರ (ಫೆ.20) ಬೆಳಗ್ಗೆ 11 ಗಂಟೆಗೆ ನ್ಯಾಯಾಲಯಕ್ಕೆ ಹಾಜರಾಗಿ ವಿಚ್ಛೇದನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ನ್ಯಾಯಾಧೀಶರು ಚಾಹಲ್ ದಂಪತಿಗೆ ಸುಮಾರು 45 ನಿಮಿಷಗಳ ಕಾಲ ಆಪ್ತಸಮಾಲೋಚನೆ ನಡೆಸಿದರು. ಈ ವೇಳೆ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇವೆ, ನಾವು 18 ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ನಮ್ಮಲ್ಲಿ ಹೊಂದಾಣಿಕೆ ಸಮಸ್ಯೆ ಇರುವುದರಿಂದ ವಿಚ್ಛೇದನಕ್ಕೆ ನಿರ್ಧರಿಸಿದ್ದೇವೆ ಎಂದು ಅವರು ನ್ಯಾಯಾಧೀಶರಿಗೆ ತಿಳಿಸಿದರು.
ಸಂಜೆ 4.30ಕ್ಕೆ ನ್ಯಾಯಾಧೀಶರು ಅಧಿಕೃತವಾಗಿ ವಿಚ್ಛೇದನ ಮಂಜೂರು ಮಾಡಿದರು ಎಂದು ನ್ಯಾಯಾಲಯದ ವಕೀಲರೊಬ್ಬರು ವಿಚ್ಛೇದನದ ಮಾಹಿತಿ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
‘ನಾನು ಎಣಿಸುವುದಕ್ಕಿಂತ ಹೆಚ್ಚು ಬಾರಿ ದೇವರು ನನ್ನನ್ನು ರಕ್ಷಿಸಿದ್ದಾನೆ. ದೇವರೇ, ಯಾವಾಗಲೂ ನನ್ನೊಂದಿಗೆ ಇರುವುದ್ದಕ್ಕಾಗಿ ಧನ್ಯವಾದಗಳು, ನನಗೆ ತಿಳಿದಿಲ್ಲದಿದ್ದರೂ ಸಹ. ಆಮೆನ್’ ಎಂದು ವಿಚ್ಛೇದನದ ನಂತರ ಚಾಹಲ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
‘ಒತ್ತಡದಿಂದ ಆಶೀರ್ವಾದದವರೆಗೆ. ದೇವರು ನಮ್ಮ ಚಿಂತೆಗಳು ಮತ್ತು ಪ್ರಯೋಗಗಳನ್ನು ಹೇಗೆ ಆಶೀರ್ವಾದಗಳಾಗಿ ಪರಿವರ್ತಿಸಬಹುದು ಎಂಬುದು ಅದ್ಭುತವಲ್ಲವೇ? ಯಾವುದೊ ಚಿಂತೆ, ಒತ್ತಡದಲ್ಲಿದ್ದರೆ ನಿಮ್ಮಗೆ ಮುಂದೆ ಅವಕಾಶವಿದೆ ಎಂಬುದನ್ನು ಮರೆಯಬೇಡಿ. ನೀವು ಎಲ್ಲವನ್ನೂ ದೇವರಿಗೆ ಒಪ್ಪಿಸಿ ಪ್ರಾರ್ಥಿಸಿ. ದೇವರ ಮೇಲಿನ ನಂಬಿಕೆ ನಿಮಗೆ ಒಳ್ಳೆಯದು ಮಾಡುತ್ತದೆ ಎಂದು ಧನಶ್ರೀ ವರ್ಮಾ ಕೂಡ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಚಾಹಲ್ ಅಥವಾ ಧನಶ್ರೀ ವರ್ಮಾ ತಮ್ಮ ವಿಚ್ಛೇದನದ ಬಗ್ಗೆ ನೇರವಾಗಿ ಎಲ್ಲಿಯೂ ಉಲ್ಲೇಖಿಸಿಲ್ಲ.
ಲಾಕ್‌ಡೌನ್ ಸಮಯದಲ್ಲಿ ಪರಸ್ಪರ ಪರಿಚಯವಾಗಿದ್ದ ಚಹಲ್ ಮತ್ತು ಧನಶ್ರೀ, 2020ರ ಡಿಸೆಂಬರ್ 11ರಂದು ವಿವಾಹವಾಗಿದ್ದರು. 2023ರಲ್ಲಿ ಧನಶ್ರೀ ಅವರು ಇನ್‌ಸ್ಟಾಗ್ರಾಂ ಯುಸರ್ ನೇಮ್‌ನಿಂದ ‘ಚಾಹಲ್’ ಅನ್ನು ಕೈಬಿಟ್ಟ ನಂತರ ವಿಚ್ಛೇದನ ವದಂತಿಗಳು ಹರಿದಾಡಿದ್ದವು. ಆದರೆ, ಈ ವದಂತಿಯನ್ನು ಆಗ ಯಜುವೇಂದ್ರ ಚಹಲ್ ನಿರಾಕರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.