
ಬೆಂಗಳೂರು: ಈ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಯಶಸ್ವಿ ಪ್ರದರ್ಶನ ನೀಡಲು ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡ ಸಜ್ಜಾಗಿದೆ. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಸ್ಪೋರ್ಟಿಂಗ್ ಕ್ಲಬ್ ದೆಹಲಿ ಎದುರಿನ ಪಂದ್ಯದೊಂದಿಗೆ ಹಾಲಿ ರನ್ನರ್ಸ್‌ಅಪ್ ಬಿಎಫ್‌ಸಿ ಅಭಿಯಾನ ಆರಂಭಿಸಲಿದೆ.
ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಎಫ್‌ಸಿ ತಂಡದ ಮುಖ್ಯ ಕೋಚ್ ಸಿಂಗ್, ‘ನಮ್ಮ ತಂಡವು ಎಲ್ಲ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದೆ. ಟೂರ್ನಿಯುದ್ದಕ್ಕೂ ತಂಡದ ಆಟಗಾರರು ಸ್ಥಿರ ಪ್ರದರ್ಶನ ನೀಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಈ ಆವೃತ್ತಿಯಲ್ಲಿ 13 ಪಂದ್ಯಗಳು ಇರಲಿದ್ದು, ಎಲ್ಲ ಪಂದ್ಯಗಳನ್ನೂ ಗಂಭೀರವಾಗಿ ಪರಿಗಣಿಸಲಾಗುವುದು. ರಕ್ಷಣಾ ವಿಭಾಗ ಹಾಗೂ ಆಕ್ರಮಣಕಾರಿ ಆಟಗಾರರ ನಡುವೆ ಸಮತೋಲನ ಕಾಯ್ದುಕೊಳ್ಳಲಾಗುವುದು’ ಎಂದರು.
‘ಸಾಂಘಿಕ ಆಟದೊಂದಿಗೆ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಿಕೊಳ್ಳುತ್ತೇವೆ. ಆಕ್ರಮಣಕಾರಿ ಆಟವೂ ತಂಡದ ಕಾರ್ಯತಂತ್ರದ ಭಾಗವಾಗಿದೆ’ ಎಂದು ಫಾರ್ವರ್ಡ್ ಆಟಗಾರ ರಿಯಾನ್ ವಿಲಿಯಮ್ಸ್ ತಿಳಿಸಿದರು.
‘ಈ ಬಾರಿಯ ಐಎಸ್‌ಎಲ್ ಟೂರ್ನಿ ಆರಂಭವಾಗುವುದನ್ನೇ ಎದುರುನೋಡುತ್ತಿದ್ದೆ. ಅದರಲ್ಲೂ, ತಂಡದ ಅಭಿಮಾನಿಗಳಿಂದ ತುಂಬಿರುವ ತವರಿನಂಗಳದಲ್ಲಿ ಆಡಲು ಕಾತರಿಸುತ್ತಿದ್ದೇನೆ. ತಂಡದ ಆಟಗಾರರೊಂದಿಗೆ ಉತ್ತಮ ಹೊಂದಾಣಿಕೆ ಇದ್ದು, ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ವಿಶ್ವಾಸವಿದೆ’ ಎಂದರು.
2018–19ರ ಆವೃತ್ತಿಯ ಚಾಂಪಿಯನ್ ಬಿಎಫ್‌ಸಿ ತಂಡವು ತನ್ನ ಮೊದಲ ಮೂರೂ ಪಂದ್ಯಗಳನ್ನು ತವರಿನಲ್ಲಿಯೇ ಆಡಲಿದೆ. ಅನುಭವಿ ಆಟಗಾರ ಸುನಿಲ್ ಚೆಟ್ರಿ ಅವರು ಈ ಬಾರಿಯೂ ತಂಡವನ್ನು ಮುನ್ನಡೆಸಲಿದ್ದಾರೆ.
ಫೆ.15; ಸ್ಪೋರ್ಟಿಂಗ್ ಕ್ಲಬ್ ದೆಹಲಿ;ಬೆಂಗಳೂರು;ರಾತ್ರಿ 7.30
ಫೆ.22;ನಾರ್ತ್ ಈಸ್ಟ್ ಯುನೈಟೆಡ್;ಬೆಂಗಳೂರು;ಸಂಜೆ 5
ಫೆ.27;ಪಂಜಾಬ್ ಎಫ್‌ಸಿ;ಬೆಂಗಳೂರು;ರಾತ್ರಿ 7.30
ಮಾ.7;ಮೊಹಮ್ಮಡನ್ ಎಸ್‌ಸಿ;ಕೋಲ್ಕತ್ತ;ಸಂಜೆ 5
ಮಾ.14;ಮೋಹನ್ ಬಗಾನ್;ಬೆಂಗಳೂರು;ರಾತ್ರಿ 7.30
ಮಾ.22;ಇಂಟರ್ ಕಾಶಿ;–;ರಾತ್ರಿ 7.30 ಏ.4;ಎಫ್‌ಸಿ ಗೋವಾ;ಗೋವಾ;ರಾತ್ರಿ 7.30
ಏ.11;ಕೇರಳ ಬ್ಲಾಸ್ಟರ್ಸ್;ಬೆಂಗಳೂರು;ರಾತ್ರಿ 7.30
ಏ16;ಈಸ್ಟ್ ಬೆಂಗಾಲ್;ಕೋಲ್ಕತ್ತ;ರಾತ್ರಿ 7.30
ಏ.25;ಮುಂಬೈ ಸಿಟಿ ಎಫ್‌ಸಿ;ಬೆಂಗಳೂರು;ಸಂಜೆ 5
ಮೇ 4;ಒಡಿಶಾ ಎಫ್‌ಸಿ;–;ರಾತ್ರಿ 7.30
ಮೇ 9; ಜಮ್ಶೆಡ್‌ಪುರ ಎಫ್‌ಸಿ;ರಾತ್ರಿ 7.30
*ಚೆನ್ನೈಯಿನ್ ಎಫ್‌ಸಿ ವಿರುದ್ಧದ ಪಂದ್ಯ ಇನ್ನೂ ನಿಗದಿಯಾಗಿಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.