ADVERTISEMENT

ದೇಶಕ್ಕೆ ಎಂದೂ ಬೆನ್ನು ತೋರಿಸಲ್ಲ: ವಿಶ್ವಕಪ್ ಸೋಲಿನ ಬಳಿಕ ರೊನಾಲ್ಡೊ ಭಾವುಕ ಸಂದೇಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಡಿಸೆಂಬರ್ 2022, 8:48 IST
Last Updated 12 ಡಿಸೆಂಬರ್ 2022, 8:48 IST
ಕ್ರಿಸ್ಟಿಯಾನೊ ರೊನಾಲ್ಡೊ (ಚಿತ್ರಕೃಪೆ: Facebook / @CristianoRonaldo)
ಕ್ರಿಸ್ಟಿಯಾನೊ ರೊನಾಲ್ಡೊ (ಚಿತ್ರಕೃಪೆ: Facebook / @CristianoRonaldo)   

ಫುಟ್‌ಬಾಲ್‌ ಲೋಕದ ಸೂಪರ್‌ಸ್ಟಾರ್‌ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನೊಳಗೊಂಡ ಪೋರ್ಚುಗಲ್‌ ತಂಡವು ಈ ಬಾರಿ ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ.

ಸೆಪ್ಟೆಂಬರ್‌ 10ರಂದು ನಡೆದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಮೊರೊಕ್ಕೊ ಎದುರು 1–0 ಅಂತರದಲ್ಲಿ ಸೋಲು ಕಾಣುವ ಮೂಲಕ ಪೋರ್ಚುಗಲ್‌ ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿತು.

ಮೊರೊಕ್ಕೊ ವಿರುದ್ಧದ ಪಂದ್ಯರೊನಾಲ್ಡೊ ಅವರಿಗೆ 196ನೇಯದ್ದಾಗಿತ್ತು. ಆ ಮೂಲಕ ಅವರು ಅತಿಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ ಕುವೈತ್‌ನ ಬದೆರ್‌ ಅಲ್‌ ಮುತಾವ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.

ADVERTISEMENT

ಐದು ವಿಶ್ವಕಪ್‌ ಟೂರ್ನಿಗಳಲ್ಲಿ ಆಡಿರುವ ರೊನಾಲ್ಡೊ, ಒಟ್ಟು 8 ಗೋಲುಗಳನ್ನು ಬಾರಿಸಿದ್ದಾರೆ.

ಸದ್ಯ ತಮ್ಮ ತಂಡ ವಿಶ್ವಕಪ್‌ನಿಂದ ನಿರ್ಗಮಿಸಿರುವ ಬಗ್ಗೆ ರೊನಾಲ್ಡೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.

ಕ್ರಿಸ್ಟಿಯಾನೊ ರೊನಾಲ್ಡೊ ಪೋಸ್ಟ್‌
'ಪೋರ್ಚುಗಲ್‌ಗಾಗಿ ವಿಶ್ವಕಪ್‌ ಗೆಲ್ಲುವುದು ನನ್ನ ವೃತ್ತಿ ಬದುಕಿನ ಬಹುದೊಡ್ಡ ಮತ್ತು ಮಹತ್ವಾಕಾಂಕ್ಷೆಯ ಕನಸಾಗಿತ್ತು. ಅದೃಷ್ಟವಶಾತ್‌ ಪೋರ್ಚುಗಲ್‌ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದೇನೆ. ಆದರೆ, ಫುಟ್‌ಬಾಲ್‌ಕ್ರೀಡೆಯ ಅತ್ಯುನ್ನತ ಮಟ್ಟಕ್ಕೆ ದೇಶದ ಹೆಸರನ್ನು ಕೊಂಡೊಯ್ಯುವುದು ನನ್ನ ದೊಡ್ಡ ಕನಸಾಗಿತ್ತು'

'ಅದಕ್ಕಾಗಿ ನಾನು ಹೋರಾಟ ನಡೆಸಿದೆ. ಆ ಕನಸಿಗಾಗಿ ಕಠಿಣವಾಗಿಸೆಣಸಾಟ ನಡೆಸಿದೆ. 16 ವರ್ಷಗಳಿಂದಐದು ವಿಶ್ವಕಪ್‌ ಟೂರ್ನಿಗಳಲ್ಲಿ, ಶ್ರೇಷ್ಠ ಆಟಗಾರರ ಪಕ್ಕದಲ್ಲಿ ಮತ್ತು ಲಕ್ಷಾಂತರ ಪೋರ್ಚುಗೀಸರ ಬೆಂಬಲದೊಂದಿಗೆ ನನ್ನಿಂದ ಸಾಧ್ಯವಾದ ಎಲ್ಲವನ್ನೂ ಮಾಡಿದ್ದೇನೆ. ಎಲ್ಲವನ್ನೂ ಮೈದಾನದಲ್ಲಿಯೇ ಬಿಟ್ಟುಬಿಡಿ. ನಾನು ಹೋರಾಡುವುದಕ್ಕೆ ಎಂದೂ ಮುಖ ತಿರುಗಿಸಿಲ್ಲ (ಹೆದರಿಲ್ಲ) ಮತ್ತು ಕನಸು ಕಾಣುವುದನ್ನು ಬಿಡುವುದಿಲ್ಲ'

'ದುಃಖಕರವಾಗಿ ಕನಸು ನಿನ್ನೆ ಕೊನೆಗೊಂಡಿದೆ. ಅದಕ್ಕೆ ತಕ್ಷಣವೇ ಪ್ರತಿಕ್ರಿಯಿಸುವುದು ಸರಿಯಲ್ಲ. ಈಗಾಗಲೇ ಸಾಕಷ್ಟು ಹೇಳಲಾಗಿದೆ,ಬಹಳಷ್ಟು ಬರೆಯಲಾಗಿದೆ, ಹೆಚ್ಚೆಚ್ಚು ಆಲೋಚಿಸಲಾಗಿದೆ ಎಂಬುದನ್ನು ನಿಮಗೆಲ್ಲರಿಗೂ ತಿಳಿಸಬೇಕೆಂದು ಬಯಸುತ್ತೇನೆ. ಆದರೆ, ಪೋರ್ಚುಗಲ್‌ಗಾಗಿನ ನನ್ನ ಸಮರ್ಪಣಾ ಭಾವ ಒಂದು ಕ್ಷಣವೂ ಬದಲಾಗಿಲ್ಲ.ನಾನು ಯಾವಾಗಲೂ ಎಲ್ಲರಿಗಾಗಿ ಹೋರಾಡಿದ್ದೇನೆ.ಸಹ ಆಟಗಾರರು ಮತ್ತು ನನ್ನ ದೇಶಕ್ಕೆ ಎಂದಿಗೂ ಬೆನ್ನು ತೋರಿಸುವುದಿಲ್ಲ'

'ಸದ್ಯಕ್ಕೆ ಹೆಚ್ಚು ಹೇಳುವುದೇನೂ ಇಲ್ಲ. ಧನ್ಯವಾದಗಳು ಪೋರ್ಚುಗಲ್‌. ಧನ್ಯವಾದಗಳು ಕತಾರ್‌, ಆ (ವಿಶ್ವಕಪ್‌) ಕನಸು ಇದ್ದಾಗಲೂ ಸೊಗಸಾಗಿಯೇ ಇತ್ತು. ಇದೀಗ, ಪರಿಸ್ಥಿತಿಯೇ ಉತ್ತಮ ಸಲಹೆಗಾರನಾಗಿದ್ದು, ಪ್ರತಿಯೊಬ್ಬರೂ ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವುಮಾಡಿಕೊಡುತ್ತದೆ ಎಂದುಕೊಂಡಿದ್ದೇನೆ'

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.