ADVERTISEMENT

ಪ್ರೊ ಕಬಡ್ಡಿ ಲೀಗ್‌ | ದಬಂಗ್‌ ಡೆಲ್ಲಿ ಚಾಂಪಿಯನ್‌: ಪುಣೇರಿ ಪಲ್ಟನ್‌ಗೆ ನಿರಾಸೆ

ಪಿಟಿಐ
Published 31 ಅಕ್ಟೋಬರ್ 2025, 17:27 IST
Last Updated 31 ಅಕ್ಟೋಬರ್ 2025, 17:27 IST
<div class="paragraphs"><p>ಪ್ರಶಸ್ತಿ ಗೆದ್ದ ದಬಂಗ್‌ ಡೆಲ್ಲಿ ತಂಡದ ಆಟಗಾರರ ಸಂಭ್ರಮ &nbsp; ‘ಎಕ್ಸ್‌’ ಚಿತ್ರ</p></div>

ಪ್ರಶಸ್ತಿ ಗೆದ್ದ ದಬಂಗ್‌ ಡೆಲ್ಲಿ ತಂಡದ ಆಟಗಾರರ ಸಂಭ್ರಮ   ‘ಎಕ್ಸ್‌’ ಚಿತ್ರ

   

ನವದೆಹಲಿ: ತವರಿನಂಗಳದಲ್ಲಿ ಸಾಂಘಿಕ ಆಟ ಪ್ರದರ್ಶಿಸಿದ ದಬಂಗ್‌ ಡೆಲ್ಲಿ ತಂಡವು ಶುಕ್ರವಾರ ಪ್ರೊ ಕಬಡ್ಡಿ ಲೀಗ್‌ನ 12ನೇ ಆವೃತ್ತಿಯ ಫೈನಲ್‌ನಲ್ಲಿ ಪುಣೇರಿ ಪಲ್ಟನ್‌ ತಂಡವನ್ನು 31–28ರಿಂದ ಮಣಿಸಿ ಚಾಂಪಿಯನ್‌ ಪಟ್ಟಕ್ಕೇರಿತು.

ಡೆಲ್ಲಿ ತಂಡಕ್ಕೆ ಇದು ಎರಡನೇ ಪಿಕೆಎಲ್‌ ಪ್ರಶಸ್ತಿ. ತಂಡದ ಮುಖ್ಯ ಕೋಚ್ ಜೋಗಿಂದರ್ ನರ್ವಾಲ್ ಅವರು ನಾಯಕರಾಗಿದ್ದಾಗ ಎಂಟನೇ ಆವೃತ್ತಿಯಲ್ಲಿ (2021–22) ಮೊದಲ ಬಾರಿ ಕಿರೀಟ ಮುಡಿಗೇರಿಸಿಕೊಂಡಿತ್ತು. 

ADVERTISEMENT

ದಬಂಗ್‌, ತವರಿನಂಗಳದಲ್ಲಿ ಪ್ರಶಸ್ತಿ ಗೆದ್ದ ಎರಡನೇ ತಂಡ ಎನಿಸಿತು. ಎರಡನೇ ಆವೃತ್ತಿಯಲ್ಲಿ (2014) ಯು ಮುಂಬಾ ತಂಡವು ಮೊದಲ ಬಾರಿ ತನ್ನ ತವರಿನಲ್ಲೇ ಚಾಂಪಿಯನ್‌ ಆಗಿತ್ತು. 

ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಡೆಲ್ಲಿ ತಂಡವು ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಮೊದಲಾರ್ಧದಲ್ಲಿ 6 ಅಂಕಗಳ (20–14)ಮುನ್ನಡೆ ಪಡೆದ ಡೆಲ್ಲಿ ತಂಡಕ್ಕೆ ಉತ್ತರಾರ್ಧದಲ್ಲಿ ಪುಣೇರಿ ಪ್ರಬಲ ಸ್ಪರ್ಧೆಯೊಡ್ಡಿತು. ಅಂತಿಮವಾಗಿ 2023ರ ಚಾಂಪಿಯನ್‌ ಪುಣೇರಿ ತಂಡವು 3 ಅಂಕಗಳಿಂದ ಸೋತಿತು. 

ರೇಡರ್‌ಗಳಾದ ನೀರಜ್‌ ನರ್ವಾಲ್‌ (9 ಅಂಕ) ಮತ್ತು ಅಜಿಂಕ್ಯಾ ಪವಾರ್‌ (6) ಅವರು ದಬಂಗ್‌ ಗೆಲುವಿನಲ್ಲಿ ಮಿಂಚಿದರು. ಪುಣೇರಿ ಪರ ಅದಿತ್ಯ ಶಿಂಧೆ ‘ಸೂಪರ್‌ ಟೆನ್‌’ ಸಾಧನೆ ಮಾಡಿದರೂ ಗೆಲುವಿಗೆ ಸಾಕಾಗಲಿಲ್ಲ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.