
ಕೋಲ್ಕತ್ತ: ಮೂರು ದಿನಗಳ ಭಾರತದ ಪ್ರವಾಸದಲ್ಲಿರುವ ಪ್ರಸಿದ್ಧ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಕೋಲ್ಕತ್ತ ಭೇಟಿಯ ವೇಳೆ ಸಾಲ್ಟ್ ಲೇಕ್ ಮೈದಾನದಿಂದ ನಿಗದಿತ ಸಮಯಕ್ಕಿಂತ ಮುನ್ನವೇ ನಿರ್ಗಮಿಸಿದ್ದರಿಂದ, ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಆಕ್ರೋಶಗೊಂಡು ಬಾಟಲ್ ಹಾಗೂ ಕುರ್ಚಿಗಳನ್ನು ಮೈದಾನದತ್ತ ಎಸೆದಿದ್ದಾರೆ.
ಉದ್ರಿಕ್ತ ಅಭಿಮಾನಿಗಳು ಮೈದಾನದೊಳಗೆ ನುಗ್ಗಿ ದಾಂಧಲೆ ಮಾಡುತ್ತಿರುವ ಹಾಗೂ ಪೊಲೀಸರು ಲಾಠಿಚಾರ್ಜ್ ಮಾಡುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಸಾಲ್ಟ್ ಲೇಕ್ ಮೈದಾನದಲ್ಲಿ ನಡೆದ ಘಟನೆಯು, ಈ ಹಿಂದೆ ಕೋಲ್ಕತ್ತದ ಕ್ರೀಡಾಂಗಣಗಳಲ್ಲಿ ನಡೆದ ಗಲಭೆಗಳನ್ನು ನೆನಪಿಸಿದೆ.
ಅದು 1996ರ ಮಾರ್ಚ್ 13. ಭಾರತದ ಆತಿಥ್ಯದಲ್ಲಿ ನಡೆಯುತ್ತಿದ್ದ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯ ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ಆಯೋಜನೆಗೊಂಡಿತ್ತು.
ಅತಿಥೇಯ ಭಾರತ ಹಾಗೂ ಶ್ರೀಲಂಕಾ ತಂಡಗಳು ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಭಾರತ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು ಅರವಿಂದ ಡಿ ಸಿಲ್ವ (66 ರನ್) ಹಾಗೂ ರೋಷನ್ ಮಹಾನಾಮ (58 ರನ್) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 50 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿತ್ತು.
252 ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ ತಂಡವು ಸಚಿನ್ ತೆಂಡೂಲ್ಕರ್ (65 ರನ್) ಆಟದ ನೆರವಿನಿಂದ ಮೊದಲ ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿತ್ತು.
ಆದರೆ, ತೆಂಡೂಲ್ಕರ್ ವಿಕೆಟ್ ಒಪ್ಪಿಸುತ್ತಿದ್ದಂತೆ, ನಾಟಕೀಯ ಕುಸಿತ ಕಂಡಿತ್ತು. ಕೇವಲ 22 ರನ್‌ಗಳ ಅಂತರದಲ್ಲಿ 7 ವಿಕೆಟ್ ಕಳೆದುಕೊಂಡಿತ್ತು.
34.1 ಓವರ್‌ಗಳ ಅಂತ್ಯಕ್ಕೆ 120 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.
ಭಾರತವು ಪಂದ್ಯವನ್ನು ಸೋಲುತ್ತದೆ ಎನ್ನುವ ನಿರಾಸೆಯಲ್ಲಿ ಕ್ರೀಡಾಂಗಣದಲ್ಲಿದ್ದ ಒಂದು ಲಕ್ಷಕ್ಕೂ ಅಭಿಮಾನಿಗಳು ಆಕ್ರೋಶಗೊಂಡು ಮೈದಾನದತ್ತ ಬಾಟಲ್, ಕುರ್ಚಿ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ಬಿಸಾಡತೊಡಗಿದರು.
ಇದೇ ವೇಳೆ ಕ್ರೀಡಾಂಗಣದ ಸ್ಟಾಂಡ್‌ಗಳಲ್ಲಿ ಬೆಂಕಿ ಕೂಡ ಕಾಣಿಸಿಕೊಂಡ ಕಾರಣ, ಪಂದ್ಯವನ್ನು 20 ನಿಮಿಷಗಳ ಕಾಲ ಸ್ಥಗಿತಗೊಳಿಸಲಾಗಿತ್ತು.
ಆದರೆ, ಅಧಿಕಾರಿಗಳು ಅಪಾರ ಸಂಖ್ಯೆಯಲ್ಲಿದ್ದ ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾದ ಕಾರಣ, ಮ್ಯಾಚ್ ರೆಫ್ರಿ ಕ್ಲೈವ್ ಲಾಯ್ಡ್ ಪಂದ್ಯವನ್ನು ಶ್ರೀಲಂಕಾ ಗೆದ್ದಿದೆ ಎಂದು ಘೋಷಿಸಿದರು. ಫೈನಲ್‌ನಲ್ಲಿ ಆಸ್ಟೇಲಿಯಾ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದ ಶ್ರೀಲಂಕಾ ತಂಡವು ವಿಶ್ವಕಪ್ ಮುಡಿಗೇರಿಸಿಕೊಂಡಿತು.
1996ರ ವಿಶ್ವಕಪ್ ಸೆಮಿಫೈನಲ್ ಘಟನೆಯು ಭಾರತದ ಕ್ರಿಕೆಟ್ ಇತಿಹಾಸದ ಕರಾಳ ಘಟನೆಗಳಲ್ಲಿ ಒಂದಾಗಿದೆ.
1980ರಲ್ಲಿ ಆ.16ರಂದು ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ಫುಟ್‌ಬಾಲ್ ಅಂಗಳದ ಬದ್ಧವೈರಿಗಳಾದ ಈಸ್ಟ್ ಬೆಂಗಾಲ್ ಮತ್ತು ಮೋಹನ್ ಬಾಗನ್ ನಡುವಿನ ಫುಟ್‌ಬಾಲ್ ಪಂದ್ಯದ ವೇಳೆ ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾದ ಕಾರಣ ಜರುಗಿದ ಕಾಲ್ತುಳಿತದಲ್ಲಿ 16 ಜನರು ಮೃತಪಟ್ಟಿದ್ದರು.
ಭಾರತದಲ್ಲಿ ಫುಟ್‌ಬಾಲ್ ಪಂದ್ಯದ ವೇಳೆ ನಡೆದ ಅತಿ ದೊಡ್ಡ ದುರಂತ ಇದಾಗಿದೆ. ಈ ಘಟನೆಯ ನೆನಪಿಗಾಗಿ ಆ.16 ಅನ್ನು ‘ಫುಟ್‌ಬಾಲ್ ಪ್ರೇಮಿಗಳ ದಿನ’ ಎಂದು ಗುರುತಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.