ADVERTISEMENT

ಅಮೆರಿಕ ಓಪನ್ ಟೆನಿಸ್‌: ಜೊಕೊವಿಚ್‌–ಅಲ್ಕರಾಜ್ ಹಣಾಹಣಿಗೆ ವೇದಿಕೆ ಸಜ್ಜು

ಏಜೆನ್ಸೀಸ್
Published 3 ಸೆಪ್ಟೆಂಬರ್ 2025, 23:30 IST
Last Updated 3 ಸೆಪ್ಟೆಂಬರ್ 2025, 23:30 IST
<div class="paragraphs"><p>ಯೀರಿ ಲೆಹೆಸ್ಕಾ ವಿರುದ್ಧ ಎಂಟರ ಘಟ್ಟದ ಪಂದ್ಯದ ವೇಳೆ ಚೆಂಡನ್ನು ರಿಟರ್ನ್‌ ಮಾಡಲು ಕಾರ್ಲೊಸ್‌ ಅಲ್ಕರಾಜ್ ಪ್ರಯತ್ನಿಸಿದ್ದು ಹೀಗೆ... &nbsp;</p></div>

ಯೀರಿ ಲೆಹೆಸ್ಕಾ ವಿರುದ್ಧ ಎಂಟರ ಘಟ್ಟದ ಪಂದ್ಯದ ವೇಳೆ ಚೆಂಡನ್ನು ರಿಟರ್ನ್‌ ಮಾಡಲು ಕಾರ್ಲೊಸ್‌ ಅಲ್ಕರಾಜ್ ಪ್ರಯತ್ನಿಸಿದ್ದು ಹೀಗೆ...  

   

ನ್ಯೂಯಾರ್ಕ್: ಎಂಟರ ಘಟ್ಟದ ಪಂದ್ಯವನ್ನು ನಾಲ್ಕು ಸೆಟ್‌ಗಳಲ್ಲಿ ಗೆದ್ದ ಹಳೆಹುಲಿ ನೊವಾಕ್‌ ಜೊಕೊವಿಚ್‌, ಯುವ ತಾರೆ ಕಾರ್ಲೋಸ್‌ ಅಲ್ಕರಾಜ್ ಜೊತೆ ಬ್ಲಾಕ್‌ಬಸ್ಟರ್ ಸೆಣಸಾಟಕ್ಕೆ ವೇದಿಕೆ ಸಜ್ಜುಗೊಳಿಸಿದರು. ಅಗ್ರ ಶ್ರೇಯಾಂಕದ ಅರಿನಾ ಸಬಲೆಂಕಾ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ‘ರ‍್ಯಾಕೆಟ್‌ ಬಳಸದೇ’ ಸೆಮಿಫೈನಲ್‌ಗೆ ಜಿಗಿದರು.

38 ವರ್ಷ ವಯಸ್ಸಿನ ಸರ್ಬಿಯಾದ ಆಟಗಾರ ಆರ್ಥರ್‌ ಆ್ಯಷ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ 6–3, 7–5, 3–6, 6–4 ರಿಂದ ನಾಲ್ಕನೇ ಶ್ರೇಯಾಂಕದ ಟೇಲರ್‌ ಫ್ರಿಟ್ಝ್‌ ಅವರನ್ನು ಮಣಿಸಿದರು. ಆ ಮೂಲಕ 2003ರ ನಂತರ ಇಲ್ಲಿ ಪ್ರಶಸ್ತಿ ಗೆದ್ದ ಅಮೆರಿಕದ ಮೊದಲ ಆಟಗಾರನಾಗುವ ಟೇಲರ್ ಕನಸನ್ನು ನುಚ್ಚುನೂರುಗೊಳಿಸಿದರು.

ADVERTISEMENT

ಇದರೊಂದಿಗೆ ಏಳನೇ ಶ್ರೇಯಾಂಕದ ಜೊಕೊ ಮತ್ತು ಎರಡನೇ ಶ್ರೇಯಾಂಕದ ಕಾರ್ಲೋಸ್‌ ಅಲ್ಕರಾಜ್‌ ನಡುವಣ ಕುತೂಹಲಕಾರಿ ಮುಖಾಮುಖಿಗೆ ವೇದಿಕೆ ಅಣಿಯಾಗಿದೆ. 

27 ವರ್ಷ ವಯಸ್ಸಿನ ಟೇಲರ್‌, ನಾಲ್ಕನೇ ಸೆಟ್‌ನ ಹತ್ತನೇ ಗೇಮ್‌ನಲ್ಲಿ ಡಬಲ್‌ಫಾಲ್ಟ್‌ ಎಸಗಿದಾಗ ಜೊಕೊ ಗೆಲುವಿನ ಪಾಯಿಂಟ್‌ ಪಡೆದು ಸಂಭ್ರಮಿಸಿದರು. 

ಮೂರು ಗಂಟೆ 24 ನಿಮಿಷ ನಡೆದ ಈ ಪಂದ್ಯದ ನಿರ್ಣಾಯಕ ಸಂದರ್ಭಗಳಲ್ಲಿ ಫ್ರಿಟ್ಝ್ ಎಡವಿದರು. ಮೊದಲ ಸೆಟ್‌ನಲ್ಲಿ ಅವರು ಐದುಬಾರಿ ಬ್ರೇಕ್‌ ಪಾಯಿಂಟ್‌ ಪಡೆಯುವ ಅವಕಾಶ ಕೈಚೆಲ್ಲಿದರು. ಅವುಗಳನ್ನು ಪರಿವರ್ತಿಸಿದಲ್ಲಿ ಅವರು 5–4 ಮಹತ್ವದ ಮುನ್ನಡೆ ಪಡೆಯಬಹುದಾಗಿತ್ತು. 

ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಎರಡನೇ ಕ್ರಮಾಂಕದ ಅಲ್ಕರಾಜ್ 6–4, 6–2, 6–4 ರಿಂದ 20ನೇ ಶ್ರೇಯಾಂಕದ ಝೆಕ್ ರಿ‍ಪಬ್ಲಿಕ್‌ ಆಟಗಾರ ಯೀರಿ ಲೆಹೆಸ್ಕಾ ಅವರನ್ನು ಮಣಿಸಲು ಹೆಚ್ಚೇನೂ
ಕಷ್ಟಪಡಲಿಲ್ಲ. 22 ವರ್ಷ ವಯಸ್ಸಿನ ಆಟಗಾರ ಸೆಮಿ ಫೈನಲ್‌ವರೆಗಿನ ಪಯಣದಲ್ಲಿ ಎದುರಾಳಿ ಗಳಿಗೆ ಒಂದೂ ಸೆಟ್‌ ಬಿಟ್ಟುಕೊಟಿಲ್ಲ.

ಮೇ ತಿಂಗಳ ನಂತರ ಆಡಿರುವ 36 ಪಂದ್ಯಗಳಲ್ಲಿ 35 ಅನ್ನು ಗೆದ್ದುಕೊಂಡಿರುವ ಸ್ಪೇನ್‌ನ ಆಟಗಾರ ಅತ್ಯಮೋಘ ಲಯದಲ್ಲಿದ್ದಾರೆ.

ನೊವಾಕ್‌ ಜೊಕೊವಿಚ್‌

ಸಬಲೆಂಕಾಗೆ ವಾಕ್‌ಓವರ್‌: ಮಹಿಳೆಯರ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್ ಅರಿನಾ ಸಬಲೆಂಕಾ ಅವರಿಗೆ ಬೆವರಿಳಿಸುವ ಪ್ರಮೇಯವೇ ಒದಗಲಿಲ್ಲ. ಅವರ ಎದುರಾಳಿ, ಝೆಕ್‌ ರಿಪಬ್ಲಿಕ್‌ನ ಮರ್ಕೆತಾ ವಂದ್ರುಸೋವಾ ಅವರು ಮೊಣಕಾಲು ನೋವಿನಿಂದಾಗಿ ಕ್ವಾರ್ಟರ್‌ಫೈನಲ್ ಪಂದ್ಯದಿಂದ ಹಿಂದೆಸರಿದರು.

2014ರಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್‌ ಸತತ ಮೂರು ಬಾರಿ ಗೆದ್ದ ನಂತರ ಯಾರೂ ಫ್ಲಷಿಂಗ್ ಮೆಡೊದಲ್ಲಿ ಸತತವಾಗಿ ಪ್ರಶಸ್ತಿ ಗೆದ್ದಿಲ್ಲ. 

ಬೆಲಾರಸ್‌ನ ಆಟಗಾರ್ತಿ ಸೆಮಿಫೈನಲ್‌ನಲ್ಲಿ ಅಮೆರಿಕದ ಜೆಸಿಕಾ ಪೆಗುಲಾ ಅವರನ್ನು ಎದುರಿಸ ಲಿದ್ದಾರೆ. ಕಳೆದ ಬಾರಿ ಈ ಇಬ್ಬರು ಫೈನಲ್‌ನಲ್ಲಿ ಮುಖಾಮುಖಿ ಆಗಿದ್ದರು.

ನಾಲ್ಕನೇ ಶ್ರೇಯಾಂಕದ ಪೆಗುಲಾ ಮೊದಲ ಕ್ವಾರ್ಟರ್‌ಫೈನಲ್‌ನಲ್ಲಿ 6–3, 6–3ರಿಂದ ಶ್ರೇಯಾಂಕ ರಹಿತ ಝೆಕ್ ಆಟಗಾರ್ತಿ ಬಾರ್ಬರಾ ಕ್ರಾಚಿಕೋವಾ ಅವರನ್ನು 1 ಗಂಟೆ 26 ನಿ. ಪಂದ್ಯದಲ್ಲಿ ಹಿಮ್ಮೆಟ್ಟಿಸಿದರು.

ಎಂಟರ ಘಟ್ಟ ತಲುಪಿದ ಯುಕಿ ಭಾಂಬ್ರಿ

ನ್ಯೂಯಾರ್ಕ್: ಭಾರತ ಯುಕಿ ಭಾಂಬ್ರಿ ಅವರು ನ್ಯೂಝಿಲೆಂಡ್‌ನ ಮೈಕೆಲ್‌ ವೀನಸ್ ಜೊತೆಗೂಡಿ ಅಮೆರಿಕ ಓಪನ್ ಪುರುಷರ ಡಬಲ್ಸ್‌ ಎಂಟರ ಘಟ್ಟ ತಲುಪಿದರು. ಭಾಂಬ್ರಿ ಅವರು ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರ ಡಬಲ್ಸ್ ತಲುಪಿದ್ದು ಇದೇ ಮೊದಲ ಬಾರಿ.

14ನೇ ಶ್ರೇಯಾಂಕದ ಭಾರತ– ನ್ಯೂಜಿಲೆಂಡ್‌ ಆಟಗಾರರ ಜೋಡಿ 6–4, 6–4 ರಿಂದ ಜರ್ಮನಿಯ ಕೆವಿನ್‌ ಕ್ವಾವಿಟ್ಝ್‌– ಟಿಮ್‌ ಪುಯೆಟ್ಝ್‌ ಜೋಡಿಯನ್ನು 1 ಗಂಟೆ 23 ನಿಮಿಷ ನಡೆದ ಪಂದ್ಯದಲ್ಲಿ ಸೋಲಿಸಿತು. ಜರ್ಮನಿಯ ಆಟಗಾರರು ನಾಲ್ಕನೇ ಶ್ರೇಯಾಂಕ ಪಡೆದಿದ್ದರು.

ಗ್ರ್ಯಾನ್‌ಸ್ಲಾಮ್‌ನಲ್ಲಿ ಯುಕಿ ಎಂದೂ ಮೊದಲ ಸುತ್ತು ದಾಟಿಲ್ಲ. ಆದರೆ ಡಬಲ್ಸ್‌ನಲ್ಲಿ ಸುಧಾರಿತ ಆಟವಾಡಿದ್ದಾರೆ. ಈ ವರ್ಷ ಫ್ರೆಂಚ್ ಓಪನ್– ವಿಂಬಲ್ಡನ್ ಮೂರನೇ ಸುತ್ತು ತಲುಪಿದ್ದಾರೆ.

ಮಾಯಾ ನಿರ್ಗಮನ: ಇದೇ ವೇಳೆ ಭಾರತದ ಭರವಸೆಯ ಆಟಗಾರ್ತಿ ಮಯಾ ರಾಜೇಶ್ವರನ್ ರೇವತಿ, ಬಾಲಕಿಯರ ಸಿಂಗಲ್ಸ್ ಎರಡನೇ ಸುತ್ತಿನಲ್ಲಿ ಎರಡನೇ ಶ್ರೇಯಾಂಕದ ಹನ್ನಾ ಕ್ಲುಗ್ಮನ್ ಅವರಿಗೆ ಸೋಲು ಮೊದಲು ತೀವ್ರ ಪೈಪೋಟಿ ನೀಡಿದರು. ಅಂತಿಮವಾಗಿ ಹನ್ನಾ ಎರಡು ಗಂಟೆ ಎರಡು ನಿಮಿಷಗಳ ಸೆಣಸಾಟದಲ್ಲಿ 7–6 (1), 4–6 6–3ರಲ್ಲಿ ಜಯಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.