ADVERTISEMENT

Instagram ರೀಲ್‌ ಭಾರತದ ಐದು ಭಾಷೆಗಳಿಗೆ ಅನುವಾದ, ಡಬ್ಬಿಂಗ್‌ಗೆ ಮೆಟಾ ಅವಕಾಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜನವರಿ 2026, 8:00 IST
Last Updated 19 ಜನವರಿ 2026, 8:00 IST
<div class="paragraphs"><p>ಇನ್‌ಸ್ಟಾಗ್ರಾಂ</p></div>

ಇನ್‌ಸ್ಟಾಗ್ರಾಂ

   

ಮುಂಬೈ: ಕೃತಕ ಬುದ್ಧಿಮತ್ತೆ ಆಧಾರಿತ ಧ್ವನಿ ಅನುವಾದ ಹಾಗೂ ಲಿಂಪ್ ಸಿಂಕ್‌ ಸೌಕರ್ಯವನ್ನು ಮೆಟಾದ ಇನ್‌ಸ್ಟಾಗ್ರಾಂನಲ್ಲಿ ಅಳವಡಿಸಲಾಗಿದ್ದು, ಇದನ್ನು ಈಗ ಭಾರತದ ಐದು ಭಾಷೆಗಳಿಗೆ ವಿಸ್ತರಿಸಲಾಗಿದೆ.

ಇತ್ತೀಚೆಗೆ ಕಂಪನಿಯು ಈ ಘೋಷಣೆ ಮಾಡಿದೆ. 2025ರ ನವೆಂಬರ್‌ನಲ್ಲಿ ಐದು ಭಾಷೆಗಳಿಗೆ ಇದೇ ಮಾದರಿಯ ಸೌಲಭ್ಯಗಳನ್ನು ನೀಡುವುದಾಗಿ ಕಂಪನಿ ಹೇಳಿಕೊಂಡಿತ್ತು. ಇದೀಗ ಅದನ್ನು ತನ್ನ ಬಳಕೆದಾರರಿಗೆ ಪರಿಚಯಿಸಿದೆ.

ADVERTISEMENT

ಭಾರತದಲ್ಲಿ ಇನ್‌ಸ್ಟಾಗ್ರಾಂ ರೀಲ್ ರಚಿಸುವವರು, ನೋಡುವವರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇದನ್ನು ಗಮನಿಸಿರುವ ಕಂಪನಿಯು, ಭಾರತ ಕೇಂದ್ರಿತ ಸೌಲಭ್ಯಗಳನ್ನು ನೀಡುವತ್ತ ತನ್ನ ಚಿತ್ತ ಹರಿಸಿದೆ. 

ಮುಂಬೈನಲ್ಲಿ ನಡೆದ ‘ಹೌಸ್ ಆಫ್ ಇನ್‌ಸ್ಟಾಗ್ರಾಂ’ನಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಕಂಪನಿಯು, ಹೆಚ್ಚು ಹೆಚ್ಚು ಭಾರತೀಯ ಭಾಷೆಗಳಿಗೆ ತನ್ನ ಸೌಲಭ್ಯಗಳನ್ನು ವಿಸ್ತರಿಸುವ ಇಂಗಿತ ವ್ಯಕ್ತಪಡಿಸುವುದರ ಜತೆಗೆ, ಇನ್‌–ವಿಡಿಯೊ ಅಕ್ಷರಗಳು ಭಾರತೀಯ ಭಾಷೆಯ ಲಿಪಿಗಳಲ್ಲೇ ಲಭ್ಯವಾಗುವಂತೆ ಮಾಡಿರುವುದಾಗಿ ಹೇಳಿಕೊಂಡಿದೆ. ಮೆಟಾಗೆ ಭಾರತ ಮುಖ್ಯ ಎಂಬುದಷ್ಟೇ ಅಲ್ಲ, ಬದಲಿಗೆ ಕಂಟೆಂಟ್ ಕ್ರಿಯೇಟರ್‌ಗಳು ತಮ್ಮ ಭಾಷೆಯಲ್ಲೇ ಮಾಹಿತಿ ನೀಡುವ ಮೂಲಕ ಹೆಚ್ಚು ಜನರನ್ನು ತಲುಪುವಂತಾಗಬೇಕು ಎಂಬ ಉದ್ದೇಶವೂ ಇದೆ ಎಂದಿದೆ.

ಈ ನೂತನ ಸೌಲಭ್ಯಗಳು ಕನ್ನಡವನ್ನೂ ಒಳಗೊಂಡು, ಬಂಗಾಳಿ, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗೆ ಮೆಟಾ ವಿಸ್ತರಿಸಿದೆ. ಕೃತಕ ಬುದ್ಧಿಮತ್ತೆ ಆಧಾರಿತ ಭಾಷಾಂತರ ಸೌಲಭ್ಯ ಇದಾಗಿದ್ದು, ಮೆಟಾ ಎಐ ಬಳಸಿ ತುಟಿಯ ಚಲನೆಗೆ ತಕ್ಕಂತೆ ತಮ್ಮ ಧ್ವನಿಯನ್ನು ಡಬ್‌ ಮಾಡಲು ಅವಕಾಶ ನೀಡಿದೆ. 

ಈ ಸೌಲಭ್ಯ ಬಳಕೆ ಹೇಗೆ?

ಈ ಸೌಲಭ್ಯವನ್ನು ಒಮ್ಮೆ ಆರಂಭಿಸಿದರೆ, ಭಾಷೆ ಬದಲಾವಣೆಯ ಆಯ್ಕೆ ಲಭ್ಯವಾಗುತ್ತದೆ. ಅಲ್ಲಿ ಲಭ್ಯವಿರುವ ತಮ್ಮ ಭಾಷೆಗಳನ್ನು ಬಳಕೆದಾರರು ಆಯ್ಕೆ ಮಾಡಿಕೊಳ್ಳಬಹುದು. ಜಾಗತಿಕ ಮಟ್ಟದಲ್ಲಿ ಇಂಗ್ಲಿಷ್, ಹಿಂದಿ, ಸ್ಪಾನಿಷ್ ಮತ್ತು ಪೋರ್ಚುಗೀಸ್ ಭಾಷೆಗೆ ಈ ಸೌಲಭ್ಯವನ್ನು ಮೆಟಾ ಮೊದಲಿಗೆ ಅಳವಡಿಸಿತ್ತು. ಇದೀಗ ಭಾರತೀಯ ಭಾಷೆಗಳಿಗೆ ಅಳವಡಿಸಿದೆ.

ಖಾಸಗಿ ಮಾಹಿತಿ ಸೋರಿಕೆ ಉಲ್ಲಂಘನೆಯನ್ನು ತಳ್ಳಿ ಹಾಕಿರುವ ಮೆಟಾ, ‘ಬಳಕೆದಾರರ ಖಾತೆಗಳು ಸುರಕ್ಷಿತ’ ಎಂದಿದೆ. ಇಲ್ಲಿ ಮಾಹಿತಿ ಭಾಷಾಂತರಗೊಳ್ಳುತ್ತದೆ. ಆದರೆ ರೊಬೊನಂತೆ ವಿಡಿಯೊಗಳು ಧ್ವನಿ ಹೊರಹೊಮ್ಮಿಸುವುದಿಲ್ಲ. ಕಂಟೆಂಟ್ ಕ್ರಿಯೇಟರ್‌ಗಳ ಧ್ವನಿಯನ್ನು ಸುರಕ್ಷಿತವಾಗಿ ಮತ್ತು ಭದ್ರವಾಗಿಡಲಾಗುತ್ತಿದೆ. ಅವುಗಳು ಮೂಲ ಕಂಟೆಂಟ್ ಕ್ರಿಯೇಟರ್‌ ಧ್ವನಿಯಂತೆಯೇ ಹೊರಹೊಮ್ಮಿಸುತ್ತದೆ. ಧ್ವನಿಯ ಏರಿಳಿತ, ಭಾವನೆ ಎಲ್ಲವೂ ಭಾಷಾಂತರ ಸಂದರ್ಭದಲ್ಲಿ ಪಡಿಯಚ್ಚಿನಂತೆಯೇ ಮೂಡಲಿದೆ ಎಂದು ಕಂಪನಿ ಹೇಳಿದೆ.

ರೀಲ್‌ಗಳನ್ನು ಅಪ್‌ಲೋಡ್ ಅಥವಾ ಎಡಿಟ್ ಮಾಡುವಾಗ ಕಂಟೆಂಟ್ ಕ್ರಿಯೇಟರ್‌ಗಳು ‘ಮೆಟಾ ಎಐ ಟ್ರಾನ್ಸ್‌ಲೇಷನ್‌’ ಆಯ್ಕೆ ಮಾಡಿಕೊಳ್ಳಬೇಕು. ಇದು ಸಕ್ರಿಯಗೊಂಡ ನಂತರ ಸ್ವಯಂಚಾಲಿತವಾಗಿ ಧ್ವನಿಯು ಮತ್ತೊಂದು ಭಾಷೆಗೆ ಅನುವಾದವಾಗುತ್ತದೆ. ಇಲ್ಲಿ ವಾಯ್ಸ್‌ ಮಾಡ್ಯುಲೇಷನ್‌ಗೆ ರೊಬೊಗಳ ಬಳಕೆಯಾಗದು. ಬದಲಾಗಿ ರೀಲ್‌ನ ಮೂಲ ಧ್ವನಿಯನ್ನೇ ಉಳಿಸಿಕೊಂಡು ಭಾಷಾಂತರಗೊಳ್ಳುವುದು ಇದರ ವೈಶಿಷ್ಟ್ಯ. ಹೀಗಾಗಿ ಮೂಲ ರೀಲ್ಸ್‌ನ ಧ್ವನಿಯಂತೆಯೇ ರೀಲ್‌ಗಳು ಬೇರೆ ಭಾಷೆಗೆ ಭಾಷಾಂತರಗೊಳ್ಳುವುದರಿಂದ ಹೆಚ್ಚು ಜನರನ್ನು ತಲುಪಲು ಮೆಟಾ ಅವಕಾಶ ಕಲ್ಪಿಸಿದೆ.

ಮತ್ತೊಂದೆಡೆ ಕಂಟೆಂಟ್ ರಚನಾಕಾರರ ತುಟಿ ಚಲನೆಗೆ ತಕ್ಕಂತೆ ಅವರ ಧ್ವನಿ ಡಬ್‌ ಆಗಲಿದೆ. ಇದರಿಂದ ವಿಡಿಯೊ ಇನ್ನಷ್ಟು ನೈಜವಾಗಿ ಮತ್ತು ಆಪ್ತವಾಗಿ ಮೂಡಿಬರಲಿದೆ ಎಂಬುದು ಮೆಟಾದ ಮಾತು.

ಟಿಕ್‌ಟಾಕ್‌ ಜತೆ ಸ್ಪರ್ಧೆಗೆ ದೀರ್ಘ ಸಮಯದ ವಿಡಿಯೊ ಕಂಟೆಂಟ್‌ಗಳನ್ನು ಪರಿಚಯಿಸಲು ತ್ವರಿತವಾಗಿ ಬದಲಾವಣೆ ತರಲಾಗುತ್ತಿದೆ. ಭಾರತದ ಕಂಟೆಂಟ್ ಕ್ರಿಯೇಟರ್‌ಗಳು ಭಾರತೀಯ ಭಾಷೆಗಳ ಲಿಪಿಗಳನ್ನು ಬಳಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ದೇವನಾಗರಿ ಮತ್ತು ಬಂಗಾಳಿ, ಅಸ್ಸಾಮಿ, ಹಿಂದಿ, ಕನ್ನಡ ಹಾಗೂ ಮರಾಠಿ ಲಿಪಿಗಳಲ್ಲಿ ವಿಡಿಯೊಗೆ ಅಕ್ಷರಗಳನ್ನು ಜೋಡಿಸುವ ಅಥವಾ ಒಕ್ಕಣೆ ಬರೆಯಲು ಸಾಧ್ಯ. ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿರುವ ಇನ್‌ಸ್ಟಾಗ್ರಾಂನಲ್ಲಿ ಶೀಘ್ರದಲ್ಲಿ ಈ ಸೌಲಭ್ಯ ಪರಿಚಯಗೊಳ್ಳಲಿದೆ ಎಂದು ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.