ADVERTISEMENT

ಕೊಹ್ಲಿ ಆಟ ಮೆಚ್ಚಿ ಪೋಸ್ಟ್: ಟೀಕಿಸಿದವರಿಗೆ ಖಾರವಾಗಿ ಉತ್ತರಿಸಿದ ಜಾವೇದ್ ಅಖ್ತರ್

ಪಿಟಿಐ
Published 24 ಫೆಬ್ರುವರಿ 2025, 14:10 IST
Last Updated 24 ಫೆಬ್ರುವರಿ 2025, 14:10 IST
ಜಾವೇದ್ ಅಖ್ತರ್
ಜಾವೇದ್ ಅಖ್ತರ್   

ನವದೆಹಲಿ: ಭಾನುವಾರ ನಡೆದ ಭಾರತ, ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಆಟವಾಡಿದ ಬಗೆಯನ್ನು ಮೆಚ್ಚಿ ಪೋಸ್ಟ್‌ ಹಂಚಿಕೊಂಡಿದ್ದಕ್ಕೆ ಕೋಮು ಸ್ಪರ್ಶ ನೀಡಿ ಟೀಕಿಸಿದವರಿಗೆ ಚಿತ್ರಕಥೆಗಾರ ಮತ್ತು ಗೀತರಚನೆಕಾರ ಜಾವೇದ್‌ ಅಖ್ತರ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 

ಐಸಿಸಿ ಚಾಂಪಿಯನ್‌ ಟ್ರೋಫಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಅಲ್ಲದೆ ವಿರಾಟ್ ಕೊಹ್ಲಿ 82ನೇ ಶತಕ ಬಾರಿಸಿದ್ದರು. ಇದರ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ‘ವಿರಾಟ್‌ ಕೊಹ್ಲಿ ಜಿಂದಾಬಾದ್‌! ನಾವೆಲ್ಲರೂ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇವೆ’ ಎಂದು ಅಖ್ತರ್‌ ಬರೆದುಕೊಂಡಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿ ಕಮೆಂಟ್‌ ಮಾಡಿದ ಹಲವರು ಅಖ್ತರ್‌ ಅವರು ಭಾರತ ಗೆದ್ದಿದ್ದಕ್ಕೆ ಯಾಕೆ ಸಂತಸಪಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಬಳಕೆದಾರರೊಬ್ಬರು ಕಮೆಂಟ್‌ ಮಾಡಿ, ‘ಪಾಕ್‌ ಆಟಗಾರ ಬಾಬರ್‌ಗಿಂತ ಕೊಹ್ಲಿ ದೊಡ್ಡವರು’ ಎಂದು ಹೇಳಿದ್ದರು, ಇದಕ್ಕೆ ಉತ್ತರಿಸಿದ ಅಖ್ತರ್‌, ‘ನೀವು ಎಂಥಹ ನಿಂದನೀಯ ವ್ಯಕ್ತಿ ಎಂದು ಹೇಳಲಷ್ಟೇ ಸಾಧ್ಯ, ನೀವು ಹೀಗೆಯೇ ಸಾಯುತ್ತೀರಿ, ದೇಶದ ಬಗೆಗಿನ ಪ್ರೀತಿ ಬಗ್ಗೆ ನಿಮಗೇನು ಗೊತ್ತು’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಇನ್ನೊಬ್ಬ ಬಳಕೆದಾರ, ಭಾರತದ ಗೆಲುವಿಗೆ ಅಖ್ತರ್‌ ಸಂತೋಷಪಡಬಾರದು ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿ, ‘ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಿಮ್ಮ ಅಪ್ಪ ಮತ್ತು ಅಜ್ಜಂದಿರು ಬ್ರಿಟಿಷರ ಬೂಟುಗಳನ್ನು ನೆಕ್ಕುತ್ತಿರುವಾಗ ನಮ್ಮವರು ದೇಶಕ್ಕಾಗಿ ಹೋರಾಡುತ್ತಿದ್ದರು. ನನ್ನ ರಕ್ತನಾಳಗಳಲ್ಲಿ ದೇಶಭಕ್ತರ ರಕ್ತ ಹರಿಯುತ್ತಿದೆ. ನಿಮ್ಮ ರಕ್ತನಾಳಗಳಲ್ಲಿ ಬ್ರಿಟಿಷ್‌ ಸೇವಕರ ರಕ್ತ ಹರಿಯುತ್ತಿದೆ. ಅದರ ನಡುವಿನ ವ್ಯತ್ಯಾಸ ಮರೆಯಬೇಡಿ’ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

‘ಈ ರೀತಿಯ ಕಮೆಂಟ್‌ಗಳನ್ನು ಕಡೆಗಣಿಸಿ’ ಎಂದು ಅಖ್ತರ್‌ ಬೆಂಬಲಿಗರು ಸಲಹೆ ನೀಡಿ ಕಮೆಂಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.