iOS 26 ಇರುವ ಆ್ಯಪಲ್ ಸಾಧನಗಳು
ಆ್ಯಪಲ್ ತನ್ನ ಕಾರ್ಯಾಚರಣಾ ವ್ಯವಸ್ಥೆ 'ಐಒಎಸ್" ಪರಿಷ್ಕರಣೆಗಳಿಗಾಗಿ ಹೊಸ ಕ್ರಮಾಂಕ ನಿರ್ಣಯಕ್ಕೆ ಮುಂದಾದ ಬಳಿಕ, ಐಒಎಸ್ 18ರ ಬಳಿಕ, ಮುಂದಿನ ವರ್ಷದ ಇಸವಿಯ ಸಂಖ್ಯೆಯ ಆಧಾರದಲ್ಲಿ ಐಒಎಸ್ 26ರನ್ನು ಇತ್ತೀಚೆಗೆ ತನ್ನೆಲ್ಲ ಸಾಧನಗಳಿಗೆ ಬಿಡುಗಡೆ ಮಾಡಿದೆ. ಈ ಕಾರ್ಯಾಚರಣಾ ವ್ಯವಸ್ಥೆ ಅಳವಡಿಸಿಕೊಂಡ ಬಳಿಕ ಐಒಎಸ್ ಸಾಧನಗಳು (ಐಫೋನ್, ಮ್ಯಾಕ್, ಐಪ್ಯಾಡ್, ಆ್ಯಪಲ್ ವಾಚ್, ಆ್ಯಪಲ್ ಟಿವಿ) ಹೊಸ ವಿನ್ಯಾಸ ಹಾಗೂ ನೋಟದೊಂದಿಗೆ ಗಮನ ಸೆಳೆಯುತ್ತಿವೆ. ಆದರೆ ಯಾವ ಬಟನ್ ಎಲ್ಲಿದೆ, ಹೇಗೆ ಬಳಸುವುದು ಎಂಬಿತ್ಯಾದಿಯಾಗಿ ಸಾಂಪ್ರದಾಯಿಕ ಆ್ಯಪಲ್ ಬಳಕೆದಾರರಲ್ಲಿ ಕೆಲವೊಂದು ಗೊಂದಲಗಳು ಮೂಡಿವೆ. ಅವುಗಳನ್ನು ನಿವಾರಿಸುವ ಪ್ರಯತ್ನ ಇಲ್ಲಿದೆ.
ಹೊಸ ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಮಾರುಕಟ್ಟೆಗೆ ಬಂದಿರುವ ಐಒಎಸ್ ಸಾಧನಗಳು, ವಿಶೇಷವಾಗಿ ಐಫೋನ್ 17ನೇ ಸರಣಿಯ ಸಾಧನಗಳ ಯೂಸರ್ ಇಂಟರ್ಫೇಸ್ ಬಹುತೇಕ ಬದಲಾಗಿದೆ. ವಿಶೇಷವಾಗಿ, ಸ್ಕ್ರೀನ್ ನೋಡಿದಾಗ ಲಿಕ್ವಿಡ್ ಗ್ಲಾಸ್ (ದ್ರವೀಕೃತ ಗಾಜು)ನಂತೆ ಗೋಚರಿಸುತ್ತಿದ್ದು, ಆ್ಯಪ್‌ಗಳೆಲ್ಲ ನೀರಿನಲ್ಲಿ ತೇಲುವಂತೆ ಭಾಸವಾಗುತ್ತದೆ. ಜೊತೆಗೆ, ಆ್ಯಪ್‌ಗಳ ನೋಟವನ್ನೂ ಬದಲಿಸಬಹುದಾದ ವ್ಯವಸ್ಥೆಯನ್ನು ಕಲ್ಪಿಸಿದೆ.
ನಮ್ಮ ದೈನಂದಿನ ಬಳಕೆಗೆ ಸಂಬಂಧಿಸಿದಂತೆ ಐಒಎಸ್ 26ರಲ್ಲಿ ಮುಖ್ಯವಾಗಿ ಬದಲಾಗಿದ್ದೇನು? ಪ್ರಧಾನವಾಗಿ ಮೆನುಗಳು ಸರಳೀಕೃತವಾಗಿವೆ, ಪಾರದರ್ಶಕ ಮೆನುಗಳು ಮತ್ತು ಗಮನ ಸೆಳೆಯುವ ಆನಿಮೇಶನ್‌ಗಳು, ಆ್ಯಪ್ ಐಕಾನ್‌ಗಳನ್ನು ಪಾರದರ್ಶಕವಾಗಿಸುವ ಟಿಂಟಿಂಗ್ ಆಯ್ಕೆಗಳನ್ನು ನೀಡಲಾಗಿದೆ.
ಫೋನ್ ಆ್ಯಪ್
ಫೋನ್ ಆ್ಯಪ್‌ನಲ್ಲಿ ಇತ್ತೀಚಿನ ಕರೆಗಳು ಮತ್ತು ಮಿಸ್ಡ್ ಕರೆಗಳು ಒಂದೇ ಕಡೆ ಕಾಣಿಸುತ್ತವೆ. ಆದರೆ, ಹಿಂದಿನ ಪಾರಂಪರಿಕ ನೋಟಕ್ಕೆ ಇದನ್ನು ಬದಲಾಯಿಸಿಕೊಳ್ಳುವ ಆಯ್ಕೆಯನ್ನೂ (ಬಲ ಮೇಲ್ಭಾಗದಲ್ಲಿ ಮೂರು ಗೆರೆಗಳನ್ನು ಸ್ಪರ್ಶಿಸಿದರೆ, ಅಲ್ಲಿ ಕ್ಲಾಸಿಕ್ ಹಾಗೂ ಯುನಿಫೈಡ್ ಎಂಬ ಲೇಔಟ್) ನೀಡಲಾಗಿದೆ. ಅಲ್ಲಿಂದಲೇ ಕರೆಗಳು, ಮಿಸ್ಡ್ ಕರೆಗಳು, ವಾಯ್ಸ್ ಮೇಲ್ ಆಯ್ಕೆ ಮಾಡಿಕೊಳ್ಳುವುದಕ್ಕೂ ಸಾಧ್ಯ. ಅಪರಿಚಿತ ಸಂಖ್ಯೆಗಳ ಕರೆಗಳ ಕಿರಿಕಿರಿ ತಪ್ಪಿಸಲು, ಫಿಲ್ಟರಿಂಗ್ ಆಯ್ಕೆ ನೀಡಲಾಗಿದೆ.
ಫೋನ್ ಆ್ಯಪ್‌ನಲ್ಲಿ ಹೊಸದಾದ ಯುನಿಫೈಡ್ ಲೇಔಟ್ ಆಯ್ಕೆ ಮಾಡಿಕೊಂಡರೆ, ತಳಭಾಗದಲ್ಲಿ ಕರೆಗಳು, ಸಂಪರ್ಕಗಳು ಮತ್ತು ಕೀಪ್ಯಾಡ್, ನಂತರ ಸರ್ಚ್ ಬಟನ್ ಕಾಣಿಸುತ್ತದೆ. (ಈ ಮೊದಲು ಇದು ಮೇಲ್ಭಾಗದಲ್ಲಿತ್ತು). ಇದರ ಜೊತೆಗೆ ‘ಹೋಲ್ಡ್ ಅಸಿಸ್ಟ್’ ಎಂಬ ಆಯ್ಕೆಯ ಮೂಲಕ, ನಾವು ಸಂಪರ್ಕಿಸಲು ಯತ್ನಿಸಿದವರು ಕರೆಯನ್ನು ಹೋಲ್ಡ್ ಮಾಡಿ, ಪುನಃ ಮಾತನಾಡುವ ಸಂದರ್ಭದಲ್ಲಿ ಫೋನ್ ನಮಗೆ ಸೂಚನೆ ನೀಡುತ್ತದೆ. ಸಂದೇಶಗಳಲ್ಲಿ (ಮೆಸೇಜಸ್ ಆ್ಯಪ್) ಕೂಡ, ಅಪರಿಚಿತ ಸಂಪರ್ಕ ಸಂಖ್ಯೆಗಳನ್ನು ಫಿಲ್ಟರ್ ಮಾಡುವ ಆಯ್ಕೆ ನೀಡಲಾಗಿದೆ.
ಕ್ಯಾಮೆರಾ ಮತ್ತು ಫೋಟೊ ಆ್ಯಪ್
ಹೊಸ ವಿನ್ಯಾಸದಲ್ಲಿ ಕ್ಯಾಮೆರಾ ತೆರೆದಾಗ ಪ್ರಧಾನವಾಗಿ ಎರಡೇ ಆಯ್ಕೆಗಳು - ಫೋಟೊ ಮತ್ತು ವಿಡಿಯೊ - ಮಾತ್ರ ಕಾಣಿಸುತ್ತವೆ. ಅದರಲ್ಲಿ ಪೋರ್ಟ್ರೇಟ್, ಪನೋರಮ ಅಥವಾ ಸ್ಲೋ ಮೋಷನ್ ಮುಂತಾದ ಮೋಡ್‌ಗಳು ಬೇಕೆಂದಾದರೆ, ನಾವು ಆ ಬಟನ್ ಮೇಲೆ ಸ್ವೈಪ್ ಮಾಡಬೇಕು.
ವಿಡಿಯೊ ರೆಕಾರ್ಡ್ ಮಾಡುವಾಗ, ಒಂದು ಪುಟ್ಟ ವಿಂಡೋದಲ್ಲಿ ನಮ್ಮನ್ನೂ ಕಾಣಿಸುವಂತೆ ಪ್ರಧಾನ (ಹಿಂಭಾಗ) ಕ್ಯಾಮೆರಾದ ಜೊತೆಗೆ ಮುಂಭಾಗದ (ಸ್ಕ್ರೀನ್ ಮೇಲಿರುವ) ಕ್ಯಾಮೆರಾವನ್ನೂ ಆನ್ ಮಾಡಬಹುದು. ವಿಡಿಯೊ ಬಟನ್ ಒತ್ತಿದಾಗ ಬಲ ಮೇಲ್ಭಾಗದಲ್ಲಿ ಕಂಡುಬರುವ ಆರು ಚುಕ್ಕಿಗಳ ಮೆನುವಿನ ಮೇಲೆ ಸ್ಪರ್ಶಿಸಿದಾಗ, ‘ಡ್ಯುಯಲ್ ಕ್ಯಾಪ್ಚರ್’ ಕಾಣಿಸುತ್ತದೆ. ಇದನ್ನು ಆಯ್ಕೆ ಮಾಡಿಕೊಂಡರೆ, ಎರಡೂ ಕ್ಯಾಮೆರಾಗಳಿಂದ ವಿಡಿಯೊ ಏಕಕಾಲಕ್ಕೆ ಸೆರೆಯಾಗುತ್ತದೆ.
ಇದಲ್ಲದೆ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಸಾಕಷ್ಟು ಬಳಕೆಯಾಗಿದೆ. ಬಳಕೆದಾರರು ಇಮೇಜ್ ಪ್ಲೇಗ್ರೌಂಡ್ ಅಥವಾ ಚಾಟ್‌ಜಿಪಿಟಿಯಂಥ ಇತರ ಎಐ ಮಾಡೆಲ್‌ಗಳನ್ನು ಸುಲಭವಾಗಿ ಬಳಸಬಹುದು. ಅದೇ ರೀತಿ ಇಮೇಲ್ ಅಥವಾ ಎಸ್ಎಂಎಸ್ ಸಂದೇಶದಿಂದ, ವೆಬ್ ಸೈಟುಗಳಿಂದ ಮಾಹಿತಿಯನ್ನು ನೇರವಾಗಿ ಜ್ಞಾಪನ ವ್ಯವಸ್ಥೆಗೆ (ರಿಮೈಂಡರ್ ಆ್ಯಪ್) ಸೇರಿಸಬಹುದು. ಇದಲ್ಲದೆ, ಚಿತ್ರವನ್ನು ನೋಡುತ್ತಿರುವಾಗ ಅದರಲ್ಲಿ ಪಠ್ಯವೇನಾದರೂ ಇದ್ದರೆ ಅಲ್ಲಿಂದಲೇ ಅನುವಾದಿಸುವ, ನಕಲಿಸುವ ಅಥವಾ ಫೋನ್ ಸಂಖ್ಯೆಯಿದ್ದರೆ ಕರೆ ಮಾಡುವ ಆಯ್ಕೆಗಳು ಗೋಚರಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.