ADVERTISEMENT

Artificial Intelligence: ನಗರ ಸುಧಾರಣೆಗೆ ಕೃತಕ ಬುದ್ಧಿಮತ್ತೆ

ಕೃಷ್ಣ ಭಟ್ಟ
Published 8 ಜುಲೈ 2025, 23:30 IST
Last Updated 8 ಜುಲೈ 2025, 23:30 IST
   
ಮುಂದುವರಿದ ಮತ್ತು ಮುಂದುವರಿಯುತ್ತಿರುವ ದೇಶಗಳು ಡೇಟಾ ಸಂಗ್ರಹಣೆಗೂ ಸಂಗ್ರಹಗೊಂಡ ಡೇಟಾದ ವಿಶ್ಲೇಷಣೆಗೂ ಎ.ಐ. ಅನ್ನು ಬಳಸುತ್ತಿವೆ

ಕೋಟ್ಯಂತರ ಜನರು ವಾಸವಿರುವ ನಗರಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಈ ಆಧುನಿಕ ಯುಗದಲ್ಲಿ ಮನುಷ್ಯನ ಬುದ್ಧಿಮತ್ತೆಯೊಂದೇ ಸಾಲುವುದಿಲ್ಲ. ಅದರ ಜೊತೆಗೆ ಯಂತ್ರಗಳ ಕೃತಕ ಬುದ್ಧಿಮತ್ತೆಯೂ ಬೇಕೇ ಬೇಕು. ಅಷ್ಟಕ್ಕೂ, ಕೃತಕ ಬುದ್ಧಿಮತ್ತೆಯೇ ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದಿರುತ್ತದೆ. ಯಾಕೆಂದರೆ, ಮನುಷ್ಯನಲ್ಲಿ ನಡೆಯುವ ಭ್ರಷ್ಟ ಚಿಂತನೆಗಳು ಕೃತಕ ಬುದ್ಧಿಮತ್ತೆಯಲ್ಲಿ ಸದ್ಯಕ್ಕಂತೂ ನಡೆಯುತ್ತಿಲ್ಲ.

ಹೀಗಾಗಿ, ಮುಂದುವರಿದ ಮತ್ತು ಮುಂದುವರಿಯುತ್ತಿರುವ ದೇಶಗಳು ಹಲವು ವಿಷಯಗಳಲ್ಲಿ ಮಾಹಿತಿ, ಡೇಟಾ ಸಂಗ್ರಹಣೆಗೆ ಹಾಗೂ ಸಂಗ್ರಹಗೊಂಡ ಡೇಟಾದ ವಿಶ್ಲೇಷಣೆಗೆ ವಿವಿಧ ರೀತಿಯ ಎ.ಐ. ಸಲಕರಣೆಗಳನ್ನು ಬಳಸುತ್ತಿವೆ. ಕಸ ನಿರ್ವಹಣೆಯಿಂದ, ರಸ್ತೆ ಸುಧಾರಣೆ, ಟ್ರಾಫಿಕ್ ನಿರ್ವಹಣೆ ಸೇರಿದಂತೆ ಪ್ರತಿ ವಲಯದಲ್ಲೂ ಜೆನ್‌ ಎ.ಐ. ಬಳಕೆಯನ್ನೂ ನಗರಗಳು ಮಾಡುತ್ತಿವೆ. ಇದಕ್ಕಾಗಿ ಹಲವು ಮುಂದುವರಿದ ನಗರಗಳಲ್ಲಿ ಎ.ಐ. ಲೀಡರ್‌ಗಳನ್ನೇ ನೇಮಿಸಲಾಗಿದೆ ಎಂದರೆ ನೀವು ಅಚ್ಚರಿಪಡುತ್ತೀರಿ. ಕಂಪನಿಗಳಲ್ಲಿ ಎ.ಐ. ಅಳವಡಿಕೆ ವಿಭಾಗವನ್ನು ಮಾಡಿದ ಹಾಗೆ ನಗರದ ಆಡಳಿತ ಪ್ರಾಧಿಕಾರಗಳು ತಮ್ಮ ನಗರದ ವ್ಯಾಪ್ತಿಯಲ್ಲಿ ಯಾವ ಯಾವ ವಲಯದಲ್ಲಿ ಎ.ಐ. ಅಳವಡಿಕೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಯೋಚಿಸಿ, ಅದನ್ನು ಜಾರಿಗೆ ತರುವುದಕ್ಕೆ ಎ.ಐ. ಅಧಿಕಾರಿಗಳನ್ನು ನೇಮಿಸಿಕೊಂಡಿದ್ದಾರೆ. ದುಬೈ ಈ ವಿಷಯದಲ್ಲಿ ಭಾರಿ ಮುಂಚೂಣಿಯಲ್ಲಿದೆ. ಅಲ್ಲಿ 22 ಎ.ಐ. ಅಧಿಕಾರಿಗಳು ಇದ್ದಾರೆ. ಅಷ್ಟೇ ಅಲ್ಲ, ಅವರಲ್ಲಿ ದೊಡ್ಡದೊಂದು ತಂಡವೇ ಇದೆ. ಅವರು ಎ.ಐ. ಟೂಲ್‌ಗಳನ್ನು ಬಳಸಿ ನಗರವನ್ನು ಸುಧಾರಿಸುವುದು ಹೇಗೆ ಎಂಬ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಇನ್ನು ನ್ಯೂಯಾರ್ಕ್ ಹಾಗೂ ಸಿಂಗಪುರದಲ್ಲಿ ಒಬ್ಬೊಬ್ಬ ವ್ಯಕ್ತಿಯನ್ನು ಚೀಫ್ ಎ.ಐ. ಆಫೀಸರ್ ಎಂದು ನೇಮಿಸಲಾಗಿದೆ. ಕೆಲವು ಕಡೆ ನಿರ್ದೇಶಕ ಎಂಬ ಹುದ್ದೆಯನ್ನೂ ನೀಡಲಾಗಿದೆ. ಸ್ಯಾನ್‌ ಫ್ರಾನ್ಸಿಸ್ಕೋ, ಬಾರ್ಸಿಲೋನಾ, ಟೊರಾಂಟೋ ಹಾಗೂ ಆಮ್‌ಸ್ಟರ್‌
ಡ್ಯಾಮ್‌ನಲ್ಲಿ ಮುಖ್ಯ ಡೇಟಾ ಆಫೀಸರ್ ನೇಮಕ ಮಾಡಿ ಅವರಿಗೆ ಎ.ಐ.ಜವಾಬ್ದಾರಿ ನೀಡಲಾಗಿದೆ.

ಇನ್ನು ನಿರ್ದಿಷ್ಟ ಎ.ಐ. ಅಧಿಕಾರಿ ಇಲ್ಲದ ನಗರಗಳಲ್ಲೂ ಜಿಲ್ಲಾಧಿಕಾರಿಗಳ ತತ್ಸಮಾನ ಹುದ್ದೆಯ ಅಧಿಕಾರಿಗಳು ಎ.ಐ. ಬಳಸಿಕೊಂಡು ಮಹತ್ವದ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿ, ನಗರದ ಸುಧಾರಣೆಗೆ ಪ್ರಯತ್ನ ನಡೆಸುತ್ತಿದ್ದಾರೆ.

ADVERTISEMENT

ಕಸ ಪತ್ತೆಗೆ ಎ.ಐ.!

ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಿಂದ 10 ಕಿ.ಮೀ ದೂರದಲ್ಲಿ ಡ್ರ್ಯಾನ್ಸಿ ಎಂಬ ಪ್ರದೇಶವಿದೆ. ಇಲ್ಲಿ ರಸ್ತೆಯ ಮೇಲೆ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಉಗುಳುವುದು ಮತ್ತು ಕಸ ಸುರಿಯುವ ಸಮಸ್ಯೆಯನ್ನು ನಿರ್ವಹಿಸಲು ಅಧಿಕಾರಿಗಳು ಬೇಸತ್ತಿದ್ದರು. ಇದನ್ನು ನಿರ್ವಹಿಸುವುದಕ್ಕೆ ಅಲ್ಲಿನ ಸಿಐಒ ಡೇವಿಡ್ ಲಾರೋಸ್ ಎ.ಐ. ಮೊರೆ ಹೋದರು. ಈ ಪ್ರದೇಶದಲ್ಲಿ ಈಗಾಗಲೇ ವ್ಯಾಪಕ ಪ್ರಮಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅದನ್ನು ಲೈವ್ ಆಗಿ ವಿಶ್ಲೇಷಣೆ ಮಾಡುವ ಎ.ಐ. ಏಜೆಂಟ್ ಅನ್ನು ಅವರು ಅಭಿವೃದ್ಧಿಪಡಿಸಿದರು. ಈ ಸಿಸಿಟಿವಿ ವ್ಯಾಪ್ತಿಯಲ್ಲಿ ಎಲ್ಲೇ ಕಸ ಸುರಿದರೂ ಹಾಗೂ ಉಗುಳಿದರೂ ಅದನ್ನು ವಿಶ್ಲೇಷಣೆ ಮಾಡಿ ತಕ್ಷಣವೇ ಸೂಚನೆ ಬರುವ ಹಾಗೆ ವ್ಯವಸ್ಥೆ ಮಾಡಿದರು. ತಕ್ಷಣವೇ ಸ್ವಚ್ಛತೆ ತಂಡ ಅಲ್ಲಿಗೆ ಹೋಗಿ ಆ ಪ್ರದೇಶವನ್ನು ಸ್ವಚ್ಛಗೊಳಿಸುವುದಕ್ಕೆ ಇದು ಸಹಾಯ ಮಾಡಿತು.

ಕೂದಲೆಳೆ ಅಂತರದಲ್ಲಿ ತಪ್ಪಿದ ಅಪಘಾತ!

ಸಾಮಾನ್ಯವಾಗಿ ರಸ್ತೆಯಲ್ಲಿ ಒಂದು ಅಪಘಾತವಾದರೆ ಅದು ತಕ್ಷಣವೇ ಅಧಿಕಾರಿಗಳ ಗಮನಕ್ಕೆ ಬರುತ್ತದೆ. ಇದಕ್ಕೆ ಸಂಬಂಧಿಸಿದ ದೂರನ್ನು ಸಂತ್ರಸ್ತರು ಕೊಡುವುದರಿಂದ ಇದನ್ನು ನಿರ್ವಹಿಸುವುದು ಅಧಿಕಾರಿಗಳಿಗೆ ಕಷ್ಟವಾಗುವುದಿಲ್ಲ. ಆದರೆ, ಒಂದು ಅಪಘಾತದಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ ಸನ್ನಿವೇಶಗಳು ಅಧಿಕಾರಿಗಳ ಗಮನಕ್ಕೆ ಬರುವುದೇ ಇಲ್ಲ. ಉದಾಹರಣೆಗೆ, ಒಂದು ಪ್ರದೇಶದಲ್ಲಿ ಪದೇ ಪದೇ ಅಪಘಾತವಾಗುವ ಸನ್ನಿವೇಶವಿದ್ದು, ಹಲವು ಪ್ರಕರಣಗಳಲ್ಲಿ ಕೂದಲೆಳೆ ಅಂತರದಲ್ಲಿ ಅಪಘಾತವಾಗುವುದು ತಪ್ಪಿದರೆ, ಅಲ್ಲಿ ಸಮಸ್ಯೆ ಏನಿದೆ ಎಂದು ಪರಿಶೀಲಿಸಿ ಅದನ್ನು ಸರಿಪಡಿಸಲು ಅಧಿಕಾರಿಗಳಿಗೆ ಸಹಾಯವಾಗುತ್ತದೆ. ಇದನ್ನು ವಿಶ್ಲೇಷಣೆ ಮಾಡಲು ಅಮೆರಿಕದ ಉತ್ತರ ಕೆರೊಲಿನಾದ ರಲೇ ನಗರದಲ್ಲಿ ಹೊಸದೊಂದು ಪ್ರಯೋಗ ನಡೆಯುತ್ತಿದೆ. ಅಲ್ಲಿ 100ಕ್ಕೂ ಹೆಚ್ಚು ಕಡೆಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದ್ದು, ಈ ಕ್ಯಾಮೆರಾಗಳ ಫೀಡ್‌ಗಳನ್ನು ಬಳಸಿಕೊಂಡು ಎ.ಐ. ಮೂಲಕ ವಿಶ್ಲೇಷಣೆ ನಡೆಸಲಾಗುತ್ತದೆ. ವಿಷನ್ ಮಾಡೆಲ್‌ ಬಳಸಿಕೊಂಡು ಈ ವಿಡಿಯೊಗಳನ್ನು ವಿಶ್ಲೇಷಣೆ ಮಾಡಲಾಗುತ್ತದೆ.

ಜನದಟ್ಟಣೆ ನಿರ್ವಹಣೆಗೆ ಎ.ಐ. ಬಳಕೆ

ಇಟಲಿಯ ವೆನಿಸ್ ನಗರದ ಜನಸಂಖ್ಯೆ ಬರಿ 50 ಸಾವಿರವಾದರೂ ಅಲ್ಲಿಗೆ ಪ್ರವಾಸಿಗರಾಗಿ ಬರುವವರ ಸಂಖ್ಯೆ ಅಪಾರ. ವರ್ಷಕ್ಕೆ 2 ಕೋಟಿಗೂ ಹೆಚ್ಚಿನ ಜನರು ಅಲ್ಲಿಗೆ ಪ್ರವಾಸಿಗರಾಗಿ ಭೇಟಿ ನೀಡುತ್ತಾರೆ. ಹೀಗಾಗಿ, ಹಠಾತ್ ಜನದಟ್ಟಣೆ ಅಲ್ಲಿನ ಜನರಿಗೆ ಸಹಜ. ಇದನ್ನು ನಿರ್ವಹಿಸುವುದು ಅಧಿಕಾರಿಗಳಿಗೆ ಒಂದು ಸವಾಲು. ಇದಕ್ಕಾಗಿ ಅಲ್ಲಿನ ಅಧಿಕಾರಿಗಳು ಎ.ಐ. ಆಧರಿತ ಸ್ಮಾರ್ಟ್ ಕಂಟ್ರೋಲ್ ರೂಮ್ ಅಭಿವೃದ್ಧಿಪಡಿಸಿದ್ದಾರೆ. ಅಲ್ಲಿ ಅಳವಡಿಸಿರುವ ಕ್ಯಾಮೆರಾಗಳು, ಸೆನ್ಸರ್‌ಗಳು, ಸಾರಿಗೆ ವ್ಯವಸ್ಥೆಯ ಡೇಟಾಗಳನ್ನು ವಿಶ್ಲೇಷಣೆ ಮಾಡುವ ಈ ಎ.ಐ. ಸಿಸ್ಟಮ್‌ಗಳು ಯಾವ ಯಾವ ಪ್ರದೇಶದಲ್ಲಿ ಜನದಟ್ಟಣೆ ಇದೆ ಎಂಬುದನ್ನು ಊಹಿಸುತ್ತದೆ. ಅಲ್ಲದೆ, ಅದನ್ನು ಹೇಗೆ ನಿರ್ವಹಿಸಬೇಕು ಎಂಬುದರ ಸೂಚನೆಯನ್ನೂ ನೀಡುತ್ತದೆ.

ಅಧಿಕಾರಿಗಳಿಗೆ ಎ.ಐ. ತರಬೇತಿಯೇ ಆದ್ಯತೆ

ಹಲವು ನಗರಗಳು ತಮ್ಮ ಅಧಿಕಾರಿಗಳಿಗೆ ಎ.ಐ. ಬಳಕೆ ಮಾಡುವುದು ಹೇಗೆ ಎಂಬ ಬಗ್ಗೆ ತರಬೇತಿಯ ಮೇಲೆಯೇ ಹೆಚ್ಚು ಗಮನ ಕೇಂದ್ರೀಕರಿಸಿವೆ. ಎಲ್ಲ ನಗರಗಳಲ್ಲೂ ಅಧಿಕಾರಿಗಳನ್ನು ಎ.ಐ. ಕಾಲಕ್ಕೆ ಸಿದ್ಧಪಡಿಸುವುದು ಒಂದು ಸವಾಲು. ಎ.ಐ. ಕೊಟ್ಟ ವಿಶ್ಲೇಷಣೆಯನ್ನು ಅರ್ಥ ಮಾಡಿಕೊಂಡು ಮುನ್ನಡೆಯುವುದು ಒಂದು ವಿಧಾನವಾದರೆ, ಎ.ಐ. ತಂಡವು ಸಿದ್ಧಪಡಿಸಿದ ಎ.ಐ. ಏಜೆಂಟ್‌ಗಳನ್ನು ಬಳಸುವುದು ಹೇಗೆ ಎಂದು ಕೆಳ ಹಂತದ ಅಧಿಕಾರಿಗಳಿಗೆ ತರಬೇತಿ ನೀಡುವುದು ಅತ್ಯಂತ ಮಹತ್ವದ ಕೆಲಸ. ಅಧಿಕಾರಿಗಳು ಸರಿಯಾಗಿ ಎ.ಐ. ಬಳಕೆ ಮಾಡುವುದನ್ನು ಕಲಿತರೆ ಒಟ್ಟಾರೆ ಆಡಳಿತವೂ ದಕ್ಷವಾಗುತ್ತದೆ. ಈ ನಿಟ್ಟಿನಲ್ಲಿ ಹಲವು ನಗರಗಳು ಒಂದೊಂದೇ ಹೆಜ್ಜೆ ಮುಂದಿಡುತ್ತಿರುವುದು ಗಮನಾರ್ಹ ಸಂಗತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.