ADVERTISEMENT

e-Rupee: ಡಿಜಿಟಲ್ ಪರ್ಸ್‌ನಲ್ಲಿರುವ ನೋಟು ಕೊಳೆಯಾಗದು, ಕಳೆದುಹೋಗದು

ಅವಿನಾಶ್ ಬಿ.
Published 5 ಆಗಸ್ಟ್ 2025, 23:30 IST
Last Updated 5 ಆಗಸ್ಟ್ 2025, 23:30 IST
ನಗದು ರಹಿತ ವಹಿವಾಟಿನತ್ತ ಮತ್ತೊಂದು ಹೆಜ್ಜೆ - ಡಿಜಿಟಲ್ ರೂಪಾಯಿ
ನಗದು ರಹಿತ ವಹಿವಾಟಿನತ್ತ ಮತ್ತೊಂದು ಹೆಜ್ಜೆ - ಡಿಜಿಟಲ್ ರೂಪಾಯಿ   
ಭಾರತೀಯ ರಿಸರ್ವ್ ಬ್ಯಾಂಕ್ ರೂಪಿಸಿರುವ ಈ ಡಿಜಿಟಲ್ ರೂಪಾಯಿ ಅಥವಾ e-ರುಪೀ ವ್ಯವಸ್ಥೆಯು ಮುಂದೆ ಇಂಟರ್ನೆಟ್ ಇಲ್ಲದೆಯೇ ಹಣ ವರ್ಗಾವಣೆಗೆ ಅನುವು ಮಾಡಿಕೊಡಲಿದೆ. ಈಗಾಗಲೇ ಪ್ರಾಯೋಗಿಕವಾಗಿ ಡಿಜಿಟಲ್ ರೂಪಾಯಿ ಸೇವೆ ಆರಂಭವಾಗಿದೆ.

ಕಳೆದ ಆರು ಹಣಕಾಸು ವರ್ಷಗಳಲ್ಲಿ ಭಾರತೀಯರು 65 ಸಾವಿರ ಕೋಟಿ ಬಾರಿ ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ಫೇಸ್), ಸರಳವಾಗಿ ಹೇಳಬಹುದಾದರೆ, 'ಆನ್‌ಲೈನ್ ಪೇಮೆಂಟ್' ವ್ಯವಸ್ಥೆ ಬಳಸಿ ಹಣಕಾಸು ವಹಿವಾಟು ನಡೆಸಿದ್ದು, 12 ಸಾವಿರ ಟ್ರಿಲಿಯನ್ ರೂಪಾಯಿ ವ್ಯವಹಾರ ನಡೆಸಿದ್ದಾರೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ತಿಳಿಸಿತ್ತು. ಕೈಯಲ್ಲಿ ಅಥವಾ ಸಾಂಪ್ರದಾಯಿಕ ಪರ್ಸ್‌ನಲ್ಲಿ ನೋಟುಗಳಿಲ್ಲದೆಯೇ, ಡಿಜಿಟಲ್ ಪಾವತಿ ಮೂಲಕ ಈ ವಹಿವಾಟು ನಡೆಸಿದೆ. ಯುಪಿಐ ವ್ಯವಸ್ಥೆಯಲ್ಲಿ ಗೂಗಲ್ ಪೇ, ಭೀಮ್ ಆ್ಯಪ್, ಫೋನ್‌ಪೇ, ಪೇಟಿಎಂ ಮುಂತಾದ ಅದೆಷ್ಟೋ ಡಿಜಿಟಲ್ ವ್ಯಾಲೆಟ್‌ಗಳ (ಡಿಜಿಟಲ್ ಪರ್ಸ್ ಅಂತ ಹೇಳಬಹುದು) ಮೂಲಕ ಈ ವಹಿವಾಟು ನಡೆದಿದ್ದು, ಜನರು ನಗದು ಹಣವನ್ನು ಕೈಯಲ್ಲಿರಿಸಿಕೊಳ್ಳುವುದು ಕಡಿಮೆಯಾಗುತ್ತಿದೆ. ಈ ಡಿಜಿಟಲ್ ಕ್ರಾಂತಿಗೆ ಮತ್ತೊಂದು ಸೇರ್ಪಡೆ ಇ-ರುಪೀ (e-₹) ಅಥವಾ ಡಿಜಿಟಲ್ ರೂಪಾಯಿ.

ಏನಿದು ಡಿಜಿಟಲ್ ರೂಪಾಯಿ ಅಥವಾ e-₹?
ಡಿಜಿಟಲ್ ರೂಪಾಯಿ ಅಥವಾ ಇ-₹ ಎಂಬುದು ಭಾರತದ ಕೇಂದ್ರೀಯ ಬ್ಯಾಂಕಿನ ಡಿಜಿಟಲ್ ಕರೆನ್ಸಿ (ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ - CBDC). ಸರಳವಾಗಿ ಹೇಳುವುದಾದರೆ ನಮ್ಮ ಪರ್ಸಿನಲ್ಲಿ ಇರುವ ನೋಟುಗಳ ಬದಲಾಗಿ, ನಮ್ಮದೇ ಆನ್‌ಲೈನ್ ಪರ್ಸ್‌ನಲ್ಲಿ ಇರಿಸುವ ಹಣ. ಜೇಬಿನಲ್ಲಿರುವ ಹಣಕ್ಕೆ ಭೌತಿಕ ರೂಪ ಇದೆ, ಈ ಡಿಜಿಟಲ್ ಹಣಕ್ಕೆ ತಾಂತ್ರಿಕ ರೂಪವಷ್ಟೇ ಇರುವುದು. ಇದನ್ನು ಬಳಕೆದಾರರದ್ದೇ ಆದ ಡಿಜಿಟಲ್ ಪರ್ಸ್‌ನಲ್ಲಿ ಇರಿಸಿ, ಬೇಕಾದಾಗ ಎಷ್ಟು ಬೇಕೋ ಅಷ್ಟು ಹಣ ವರ್ಗಾಯಿಸಬಹುದು. ಈ ಡಿಜಿಟಲ್ ಪರ್ಸ್‌ಗೆ ಹಣವನ್ನು ನಮ್ಮ ಖಾತೆಯಿಂದ ಸೇರಿಸಬಹುದು; ಬೇರೆಯವರೂ ಈ ಪರ್ಸ್‌ಗೆ ಹಣ ಹಾಕಬಹುದು. ಆದರೆ ಗಮನಿಸಿ, ಈ ಪರ್ಸ್‌ನಲ್ಲಿರುವ ಹಣಕ್ಕೆ ಯಾವುದೇ ಬಡ್ಡಿ ದೊರೆಯುವುದಿಲ್ಲ - ನಮ್ಮ ಜೇಬಿನಲ್ಲಿರುವ ಹಣದಂತೆಯೇ. ಡಿಜಿಟಲ್ ವ್ಯಾಲೆಟ್ ತೆರೆದು ನೋಡಿದರೆ, ಅದರಲ್ಲಿ ನಾವು ಹಾಕಿದ ಹಣದ ಮೊತ್ತವು, 500, 200, 100, 20, 10, 5, 1 ರೂ. ಹೀಗೆ ನೋಟುಗಳು ಹಾಗೂ ನಾಣ್ಯಗಳ ರೂಪದಲ್ಲಿ ಗೋಚರಿಸುತ್ತದೆ.

ಇ-ರೂಪಾಯಿ ಹೇಗೆ ಕೆಲಸ ಮಾಡುತ್ತದೆ?
ಬಹುತೇಕ ಈಗಿನ ಯುಪಿಐ (ಗೂಗಲ್‌ಪೇ-ಫೋನ್‌ಪೇ) ಮಾದರಿಯಲ್ಲೇ, ಒಂದು ಆ್ಯಪ್ ಮೂಲಕ ಇದು ಕೆಲಸ ಮಾಡುತ್ತದೆ. ಪ್ರಾಯೋಗಿಕವಾಗಿ (ಪೈಲಟ್) ಇದು ಚಾಲ್ತಿಗೆ ಬಂದಿದ್ದು, ಪ್ರಮುಖ ಬ್ಯಾಂಕುಗಳು ಆಂಡ್ರಾಯ್ಡ್ ಹಾಗೂ ಐಒಎಸ್ ಫೋನ್‌ಗಳಿಗಾಗಿ ಪ್ರತ್ಯೇಕ ಆ್ಯಪ್ (ಡಿಜಿಟಲ್ ಪರ್ಸ್) ರೂಪಿಸಿವೆ. ಯಾವುದೇ ದಿನಸಿ ಸಾಮಗ್ರಿ, ತರಕಾರಿ ಖರೀದಿಗೆ ಅಥವಾ ಅನ್ಯ ಸೇವೆಗೆ ಇದರ ಮೂಲಕ ಹಣ ವರ್ಗಾಯಿಸಬಹುದು. ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ ನಿರ್ದಿಷ್ಟ ಮೊಬೈಲ್ ಸಂಖ್ಯೆಗೆ (ಈ ಸಂಖ್ಯೆಯೂ ಇ-ರೂಪಾಯಿ ಬಳಕೆಗೆ ನೋಂದಾಯಿಸಿಕೊಂಡಿರಬೇಕು) ಹಣ ವರ್ಗಾಯಿಸಬಹುದು. ಡಿಜಿಟಲ್ ಪರ್ಸ್‌ನಲ್ಲಿ ಸಂಗ್ರಹವಾಗುವ ಹೆಚ್ಚುವರಿ ಹಣವನ್ನು ಅದಕ್ಕೆ ಲಿಂಕ್ ಆಗಿರುವ ಬ್ಯಾಂಕ್ ಉಳಿತಾಯ ಖಾತೆಗೆ ವರ್ಗಾಯಿಸಬಹುದು. ಸಂಬಂಧಪಟ್ಟ ವ್ಯಾಪಾರಿಗಳು ಕೂಡ 'ಇ-ರುಪೀ' ವ್ಯಾಲೆಟ್ ಅಳವಡಿಸಿಕೊಂಡಲ್ಲಿ, ಎಲ್ಲ ವಹಿವಾಟುಗಳೂ ಸರಾಗವಾಗಿ ಆಗಲಿವೆ. ಸದ್ಯ ಇದು ಪೈಲಟ್ ಯೋಜನೆಯಾಗಿರುವುದರಿಂದ ಬೆಂಗಳೂರು ಸಹಿತ ಪ್ರಮುಖ ನಗರಗಳಲ್ಲಿ ಕೆಲಸ ಮಾಡುತ್ತಿದೆ. ವ್ಯಾಪ್ತಿ, ವಿಸ್ತಾರ ಇನ್ನಷ್ಟೇ ಆಗಬೇಕಿದೆ.

ADVERTISEMENT

ಗೂಗಲ್‌ಪೇ-ಫೋನ್‌ಪೇಗಿಂತ ಇ-ರೂಪಾಯಿ ಹೇಗೆ ಭಿನ್ನ?
ಗೂಗಲ್‌ಪೇ ಅಥವಾ ಫೋನ್‌ಪೇ ಆ್ಯಪ್‌ಗಳು ಎರಡು ಬ್ಯಾಂಕುಗಳ ನಡುವೆ ಮಧ್ಯವರ್ತಿ ರೂಪದಲ್ಲಿ ಕೆಲಸ ಮಾಡುತ್ತವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೂಪಿಸಿದ ಈ ಡಿಜಿಟಲ್ ರೂಪಾಯಿ ವ್ಯವಸ್ಥೆಯಲ್ಲಿ ಎರಡು ಬ್ಯಾಂಕುಗಳು ಪರಸ್ಪರ ನೇರವಾಗಿ ಸಂವಹನ ಮಾಡಿಕೊಳ್ಳುತ್ತವೆ. ಯುಪಿಐ ಅಥವಾ ಬ್ಯಾಂಕಿನ ಸರ್ವರ್ ಕೈಕೊಟ್ಟಾಗ, ನಡುವೆ ಸಿಲುಕಿಕೊಳ್ಳುವ ಹಣ ವಾಪಸ್ ಬರಲು ಕಾಯಬೇಕಾಗಬಹುದು. ಆದರೆ, 'ಇ-ಪರ್ಸ್'ನಲ್ಲಿ ಹಾಗಾಗದು. ಡಿಜಿಟಲ್ ರೂಪಾಯಿ ವಹಿವಾಟು ಕ್ಷಿಪ್ರವಾಗಿ ಆಗುತ್ತದೆ. ಥರ್ಡ್ ಪಾರ್ಟಿ ಆ್ಯಪ್ ಬೇಕಾಗಿರುವುದಿಲ್ಲ, ನಮ್ಮದೇ ಬ್ಯಾಂಕಿನ ಆ್ಯಪ್ ಬಳಸಿದರೆ ಸಾಕಾಗುತ್ತದೆ. ಹಣ ಲೋಡ್ ಮಾಡುವುದು (ಡಿಜಿಟಲ್ ಪರ್ಸ್‌ಗೆ ತುಂಬಿಸುವುದು) ಕೂಡ ತತ್‌ಕ್ಷಣದಲ್ಲೇ ಆಗುತ್ತದೆ. ಮುಂದಿನ ದಿನಗಳಲ್ಲಿ, ಇಂಟರ್ನೆಟ್ ಸೌಕರ್ಯದ ಅಗತ್ಯವಿಲ್ಲದೆಯೇ ಇ-ರೂಪಾಯಿ ಬಳಕೆಗೆ ಅವಕಾಶ ಮಾಡಿಕೊಡುವ ಬಗ್ಗೆ ತಂತ್ರಜ್ಞಾನದ ಅಭಿವೃದ್ಧಿ ಆಗುತ್ತಿದೆ. ಇದಕ್ಕೆ ಆಯಾ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಫೋನ್ ನಂಬರ್ ಸಾಕಾಗುತ್ತದೆ. ಈ ರೀತಿಯ ಆಫ್‌ಲೈನ್ ಬಳಕೆ ವ್ಯವಸ್ಥೆಯು ಕಾರ್ಯರೂಪಕ್ಕೆ ಬಂದರೆ ವಿಶೇಷವಾಗಿ ಗ್ರಾಮೀಣ ಹಾಗೂ ಇಂಟರ್ನೆಟ್ ತಲುಪದಿರುವ ಊರುಗಳಿಗೆ ವರದಾನವಾಗಲಿದೆ. ಜೊತೆಗೆ, ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಟ್ಟದ ಪಾವತಿಗೂ ಇ-ರುಪೀ ಅವಕಾಶ ನೀಡಲಿದೆ.

ಎಷ್ಟು ವಹಿವಾಟು ನಡೆಸಬಹುದು?
ಸದ್ಯಕ್ಕೆ ನಮ್ಮ ಡಿಜಿಟಲ್ ಪರ್ಸ್‌ನಲ್ಲಿ ಗರಿಷ್ಠ ₹1 ಲಕ್ಷ ಮಾತ್ರ ಇರಿಸಬಹುದು ಹಾಗೂ ದಿನಕ್ಕೆ ₹25,000 ವಹಿವಾಟು ನಡೆಸಬಹುದಾಗಿದೆ.

ಇ-ರೂಪಾಯಿ ಬಳಕೆ ಎಷ್ಟು ಸುರಕ್ಷಿತ?
ಇದು ಯುಪಿಐ ಆಧಾರಿತವೂ ಅಲ್ಲ, ಬಿಟ್‌ಕಾಯಿನ್‌ಗಳಂತಹಾ ಕ್ರಿಪ್ಟೋಕರೆನ್ಸಿಯೂ ಅಲ್ಲ. ನಮ್ಮಲ್ಲಿರುವ ಹಣವನ್ನು ಆನ್‌ಲೈನ್ ಪರ್ಸ್‌ನಲ್ಲಿ ಇರಿಸಲು ಅತ್ಯಂತ ಸುರಕ್ಷಿತ ಮಾದರಿ ಇದು. ನೇರವಾಗಿ ರಿಸರ್ವ್ ಬ್ಯಾಂಕ್ ಮೇಲ್ವಿಚಾರಣೆಯಲ್ಲೇ ಇರುತ್ತದೆ. ನಮ್ಮ ಜೇಬಿನಲ್ಲಿರುವ ಪರ್ಸ್ ಕಳೆದುಹೋದರೆ ಸಿಗುವುದು ಕಷ್ಟ. ಆದರೆ, ಇ-ರೂಪಾಯಿ ಆ್ಯಪ್ ಇರುವ ಫೋನ್ ಕಳೆದುಹೋದರೆ ನಮ್ಮ ಡಿಜಿಟಲ್ ಪರ್ಸ್‌ನಲ್ಲಿರುವ ಹಣಕ್ಕೇನೂ ಆಗದು. ಬೇರೆ ಸಾಧನದಲ್ಲಿ ಆ್ಯಪ್ ಅಳವಡಿಸಿ ಪುನಃ ಲಾಗಿನ್ ಆಗಬಹುದು. ಇಷ್ಟಲ್ಲದೆ, ಡಿಜಿಟಲ್ ವ್ಯಾಲೆಟ್‌ನಲ್ಲಿರುವ ಡಿಜಿಟಲ್ ರೂಪಾಯಿಯ ನೇರ ಹೊಣೆಗಾರಿಕೆಯು ಕೇಂದ್ರೀಯ ಬ್ಯಾಂಕ್‌ನದ್ದೇ ಆಗಿರುತ್ತದೆ, ಹೊರತು ಖಾಸಗಿ ಬ್ಯಾಂಕುಗಳ ಮಧ್ಯವರ್ತಿತನದ ಅಗತ್ಯ ಇರುವುದಿಲ್ಲ.

ಇ-ರೂಪಾಯಿಯ ಪ್ರಯೋಜನವೇನು?
ವಿಶೇಷತಃ ಸರ್ಕಾರಿ ನಿಧಿಗಳನ್ನು, ಸಬ್ಸಿಡಿ ಮುಂತಾದವುಗಳನ್ನು ಪಡೆಯಲು ಫಲಾನುಭವಿಗಳಿಗೆ ಇ-ರುಪೀ (ಎಲೆಕ್ಟ್ರಾನಿಕ್ ರೂಪಾಯಿ) ಅನಿವಾರ್ಯವಾಗಬಹುದು. ಬ್ಯಾಂಕ್ ಖಾತೆಯಿಂದ ಒಂದಿಷ್ಟು ಹಣವನ್ನು ಈ ಪರ್ಸ್‌ನಲ್ಲಿಟ್ಟುಕೊಂಡರೆ, ಬೇಕಾದಾಗ ಸಣ್ಣ ಮೊತ್ತವನ್ನು ವ್ಯಯಿಸಲು ಅನುಕೂಲ. ಯುಪಿಐಯಲ್ಲಿ ಆಗಿರುವಂತೆ ಸಣ್ಣಪುಟ್ಟ ವಹಿವಾಟುಗಳು ಬ್ಯಾಂಕ್ ಪಾಸ್‌ಬುಕ್‌ನಲ್ಲಿ ದಾಖಲಾಗುವ ಬದಲು, ಈ ಪರ್ಸ್‌ನಲ್ಲೇ ದಾಖಲಾಗುತ್ತವೆ. ಇದಲ್ಲದೆ, ಇ-ರೂಪಾಯಿ ಮೂಲಕ ಮಾಡುವ ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕಗಳು ಇರುವುದಿಲ್ಲ ಮತ್ತು ಈ ಪರ್ಸ್‌ನಲ್ಲಿ ಕನಿಷ್ಠ ಬ್ಯಾಲೆನ್ಸ್ ಹಣ ಇರಿಸುವ ಅಗತ್ಯವಿರುವುದಿಲ್ಲ. ಭವಿಷ್ಯದಲ್ಲಿ ಅಂತರರಾಷ್ಟ್ರೀಯ ಹಣಕಾಸು ವಹಿವಾಟಿಗೂ ಯಾವುದೇ ವಿನಿಮಯ ಶುಲ್ಕದ ಅಗತ್ಯವಿಲ್ಲದೆ ಇ-ರೂಪಾಯಿಯನ್ನು ಬಳಸುವ ಕುರಿತ ಯೋಜನೆಗಳು ರೂಪುಗೊಳ್ಳುತ್ತಿವೆ. ನೋಟುಗಳಾದರೆ ಹರಿದು ಹೋಗುತ್ತವೆ, ಕೊಳೆಯಾಗಿರುತ್ತವೆ. ಆದರೆ ಇದರಲ್ಲಿರುವ ಹಣಕ್ಕೆ ಆ ಸಮಸ್ಯೆ ಇರುವುದಿಲ್ಲ.

ಒಂದು ರೀತಿಯಲ್ಲಿ ವರ್ಡ್, ಚಿತ್ರ ಅಥವಾ ಬೇರಾವುದೇ ಫಿಸಿಕಲ್ ದಾಖಲೆಗಳ ಸ್ಥಾನದಲ್ಲಿ ಈಗ ಪಿಡಿಎಫ್ ರೂಪವೇ ಹೆಚ್ಚು ಜನಪ್ರಿಯವಾಗಿರುವಂತೆ, ನಗದು ಹಣದ ಸ್ಥಾನದಲ್ಲಿ ಇ-ರುಪೀ ಬಂದಿದೆ. ಇನ್ನೂ ಶೈಶವಾವಸ್ಥೆಯಲ್ಲಿ ಇರುವ ಹಾಗೂ ನಗದು ರಹಿತ ವಹಿವಾಟಿನತ್ತ ಮುಖ್ಯ ಹೆಜ್ಜೆಯಾಗಿರುವ ಈ ಇ-ರುಪೀ ಪರಿಕಲ್ಪನೆ ಬಗ್ಗೆ ಇನ್ನಷ್ಟೇ ಪ್ರಚಾರವಾಗಬೇಕಿದೆ. ಸದ್ಯಕ್ಕೆ ಸೀಮಿತ ನಗರಗಳಲ್ಲಿ ಮಾತ್ರ ಇದರ ಸೇವೆ ಪ್ರಾಯೋಗಿಕವಾಗಿ ದೊರೆಯುತ್ತಿದೆ. ಆದರೆ ಇದು ಯುಪಿಐಗೆ ಪರ್ಯಾಯವಾಗಬಹುದೇ ಮತ್ತು ಭಾರತದ ಆರ್ಥಿಕತೆಗೆ ಎಷ್ಟರ ಮಟ್ಟಿಗೆ ಬಲ ತುಂಬಬಹುದು ಎಂಬುದನ್ನು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.