
ಪ್ರಾತಿನಿಧಿಕ ಚಿತ್ರ
ಐಸ್ಟಾಕ್ ಚಿತ್ರ
ಬೆಂಗಳೂರು: ವರ್ಷ 2026 ಅನ್ನು ಬರಮಾಡಿಕೊಳ್ಳಲು ಕ್ಷಣಗಣನೆ ಆರಂಭಗೊಂಡಿದೆ. ಗುರುವಾರ ಮಧ್ಯರಾತ್ರಿ ಗಡಿಯಾರದ ಎರಡೂ ಮುಳ್ಳುಗಳು ಒಂದೇ ನೇರಕ್ಕೆ ಸೇರಿದ ಕ್ಷಣದಿಂದ ಮೊಬೈಲ್‌ಗಳು ಸಂದೇಶಗಳ ಹೊತ್ತು ರಿಂಗಣಿಸುತ್ತಿರುತ್ತವೆ. ಆದರೆ ಹೀಗೆ ನಿಮ್ಮವರು ನಿಮಗಾಗಿ ಕಳುಹಿಸುವ ಹೊಸ ವರ್ಷದ ಶುಭಾಶಯ ಹೊತ್ತ ಚಿತ್ರ ಡೌನ್‌ಲೋಡ್ ಮಾಡುವ ಮೊದಲು ಇದನ್ನು ಅರಿಯುವುದು ಉತ್ತಮ.
ಶುಭಾಶಯ ವಿನಿಮಯವಾಗುವ ಈ ಸಂದರ್ಭವನ್ನೇ ಕಾಯುತ್ತಿರುವ ಸೈಬರ್ ದಾಳಿಕೋರರು ಎಪಿಕೆ ಆಧಾರಿತ ಶುಭಾಶಯ ಪತ್ರವನ್ನು ಅಭಿವೃದ್ಧಿಪಡಿಸಿರುವ ಶಂಕೆ ಇದ್ದು, ಇದನ್ನು ಡೌನ್‌ಲೋಡ್ ಮಾಡಿದರೆ ಮೊಬೈಲ್‌ನಲ್ಲಿ ದಾಖಲಾಗಿರುವ ಬಳಕೆದಾರರ ಬ್ಯಾಂಕ್ ಖಾತೆಗಳ ಯೂಸರ್ ನೇಮ್ ಹಾಗೂ ಪಾಸ್‌ವರ್ಡ್ ಕಳುವಾಗಲಿದೆ ಎಂಬ ಮಾಹಿತಿ ಕಳೆದ ಕೆಲ ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಲಿದೆ.
ಇಂಥ ಕುತಂತ್ರಾಂಶ ಹೊಂದಿದ ಚಿತ್ರಗಳು ಸ್ಮಾರ್ಟ್‌ಫೋನ್‌ಗಳಲ್ಲಿ ಡೌನ್‌ಲೋಡ್ ಆಗುತ್ತಿದ್ದಂತೆ, ಫೋನ್‌ಗಳ ಆ್ಯಪ್‌ಗಳು ತನ್ನಿಂತಾನೆ ತೆರೆಯಲಿವೆ. ಅಲ್ಲಿರುವ ಸಂಪರ್ಕ ಸಂಖ್ಯೆಗಳನ್ನು ಪಡೆಯಲಿದೆ, ಬ್ಯಾಂಕ್ ಖಾತೆಗೂ ಪ್ರವೇಶಿಸುವ ಸಾಧ್ಯತೆಗಳಿವೆ ಎಂಬ ಮಾಹಿತಿಯುಳ್ಳ ರೀಲ್‌ಗಳು, ಮೀಮ್‌ಗಳು ಇನ್‌ಸ್ಟಾಗ್ರಾಂ ಸಹಿತ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದು ಹೊಸ ವರ್ಷದ ಸಂದರ್ಭದಲ್ಲಿ ಮಾತ್ರವಲ್ಲ, ಪ್ರಮುಖ ಹಬ್ಬಗಳ ಸಂದರ್ಭಗಳಲ್ಲೂ ಇಂಥ ಸುದ್ದಿ ಹರಿದಾಡುವುದು ಸಾಮಾನ್ಯ.
ಆದರೆ, ಇಂಥ ಕುತಂತ್ರಾಂಶ ಹೊಂದಿರುವ ಸಂದೇಶಗಳಿಂದ ಎಚ್ಚರ ವಹಿಸುವಂತೆ ಸೈಬರ್ ಪೊಲೀಸರೂ ಎಚ್ಚರಿಕೆ ನೀಡಿದ್ದಾರೆ. ವಾಟ್ಸ್‌ಆ್ಯಪ್, ಎಸ್‌ಎಂಎಸ್, ಇಮೇಲ್ ಮೂಲಕ ಇದು ಫೋನ್‌ವರೆಗೂ ತಲುಪಬಹುದು ಎಂದು ಶಂಕಿಸಲಾಗಿದೆ.
ಆ್ಯಂಡ್ರಾಯ್ಡ್ ಪ್ಯಾಕೇಜ್ ಕಿಟ್ ಅಥವಾ ಎಪಿಕೆ ಎಂದು ಕರೆಯಲಾಗುವ ತಂತ್ರಾಂಶಗಳು ಪ್ಲೇಸ್ಟೋರ್ ಬದಲಾಗಿ, ಅನ್ಯ ಮಾರ್ಗದ ಮೂಲಕ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಸ್ಟಾಲ್ ಆಗುವಂಥದ್ದು. ಒಂದರ್ಥದಲ್ಲಿ ವಿಂಡೋಸ್ ಕಂಪ್ಯೂಟರ್‌ಗಳಲ್ಲಿನ .exe ಫೈಲ್ ರೀತಿಯಲ್ಲೇ. ಒಂದು ತಂತ್ರಾಂಶವು ಹೇಗೆಲ್ಲಾ ಕೆಲಸ ಮಾಡಬೇಕು ಎಂಬುದನ್ನು ಇದು ನಿರ್ಧರಿಸುವಷ್ಟು ಪರಿಣಾಮಕಾರಿಯಾಗಿ ವಿನ್ಯಾಸಗೊಳಿಸಲಾಗಿರುತ್ತದೆ.
ಇಂಥ ಎಪಿಕೆ ಫೈಲ್‌ಗಳು ಪರಿಚಯವಿಲ್ಲದ ಮತ್ತು ನಂಬಲು ಸಾಧ್ಯವಿಲ್ಲದ ಮೂಲಗಳಿಂದ ಸ್ಮಾರ್ಟ್‌ಫೋನ್ ಸೇರುವುದೇ ಹೆಚ್ಚು. ಸೈಬರ್ ದಾಳಿಕೋರರು ಕುಕೃತ್ಯ ನಡೆಸಲು ಇದನ್ನೇ ತಮ್ಮ ಮಾರ್ಗವನ್ನಾಗಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ ಚಿತ್ರ ಅಥವಾ ವಿಡಿಯೊ ರೂಪದಲ್ಲಿ ಯಾವುದೇ ಎಪಿಕೆ ಫೈಲ್‌ಗಳು ಬಂದಲ್ಲಿ, ಅದರ ಕುರಿತು ಹೆಚ್ಚು ಜಾಗರೂಕರಾಗಿರುವುದು ಉತ್ತಮ.
‘ಇಂಥ ಪ್ರಯತ್ನ 2025ರ ಆರಂಭದಲ್ಲೂ ನಡೆದಿತ್ತು. ‘Happy New Year 2025! Click here to see your special greeting’ ಎಂಬ ಒಕ್ಕಣೆಯೊಂದಿಗೆ ವಾಟ್ಸ್‌ಆ್ಯಪ್, ಎಸ್‌ಎಂಎಸ್ ಹಾಗೂ ಇಮೇಲ್ ಮೂಲಕ ಇದು ಬಳಕೆದಾರರ ಫೋನ್ ಸೇರುತ್ತದೆ. ಇದನ್ನು ಪಡೆದವರು, ಶುಭಾಶಯ ಪತ್ರವೆಂದು ಭಾವಿಸಿ ತಮ್ಮ ಸ್ನೇಹಿತರು, ಕುಟುಂಬ ಸದಸ್ಯರಿಗೆ ಕಳುಹಿಸುವ ಮೂಲಕ ಇದು ಇನ್ನಷ್ಟು ಜನರಿಗೆ ತಲಪುತ್ತದೆ ಎಂದೆನ್ನುತ್ತಾರೆ’ ಎಂದು ತಜ್ಞರು ಹೇಳುತ್ತಾರೆ.
‘ಆಗಸದಲ್ಲಿ ಸಿಡಿಮದ್ದು ಸಿಡಿಸುವ ಚಿತ್ರದೊಂದಿಗೆ ಶುಭಾಶಯ ಪತ್ರ ನೋಡಲು ‘ಕ್ಲಿಕ್ ಮಾಡಿ’ ಎಂಬ ಒಕ್ಕಣೆ ಇರುತ್ತದೆ. ಇದನ್ನು ಕ್ಲಿಕ್ಕಿಸಿದರೆ ಕುತಂತ್ರಾಂಶ ಮೊಬೈಲ್ ಅಥವಾ ಕಂಪ್ಯೂಟರ್ ಸೇರುತ್ತದೆ. ಇದು ವೈರಸ್, ವರ್ಮ್ಸ್, ಟ್ರೋಜನ್ ವೈರಸ್, ಸ್ಪೈವೇರ್, ಆ್ಯಡ್‌ವೇರ್, ರ್ಯಾನ್ಸಮ್ವೇರ್ ಇತ್ಯಾದಿಗಳೂ ಆಗಿರಬಹುದು. ಕ್ಲಿಕ್ ಮೂಲಕ ಇವುಗಳು ಮೊಬೈಲ್‌ನಲ್ಲಿ ಕ್ಷಣ ಮಾತ್ರದಲ್ಲಿ ಇನ್‌ಸ್ಟಾಲ್ ಆಗುತ್ತದೆ. ನಂತರ ಎಸ್‌ಎಂಎಸ್ ಓದಲು, ಮೊಬೈಲ್‌ಗೆ ಬರುವ ಎಲ್ಲಾ ನೋಟಿಫಿಕೇಷನ್‌ಗಳನ್ನು ಓದಲು, ದಾಖಲಾಗಿರುವ ಸಂಪರ್ಕ ಸಂಖ್ಯೆ ಮತ್ತು ಮೊಬೈಲ್‌ನ ಸ್ಮೃತಿಕೋಶವನ್ನು ಪ್ರವೇಶಿಸಲು ಸಂಪೂರ್ಣ ಅನುಮತಿ ಅದಕ್ಕೆ ಸಿಗುತ್ತದೆ.
ಹೀಗಾಗಿ ಬ್ಯಾಂಕ್ ವ್ಯವಹಾರಗಳಿಗೆ ಕಳುಹಿಸಲಾಗುವ ಒಟಿಪಿಗಳನ್ನು ಇದು ಓದಲಿದೆ. ಪರದೆ ಮೂಡುವ ಪ್ರತಿಯೊಂದನ್ನೂ ಇದು ದಾಖಲಿಸಿಕೊಳ್ಳಲಿದೆ.
ಮೊಬೈಲ್‌ಗಳಲ್ಲಿ ಇರಬಹುದಾದ ವಾಟ್ಸ್‌ಆ್ಯಪ್ ಅಪ್ಲಿಕೇಷನ್‌ನ ಸೆಟ್ಟಿಂಗ್‌ನಲ್ಲಿ ‘ಸ್ಟೋರೇಜ್ ಅಂಡ್ ಡ್ಯಾಟಾ’ ಎಂಬ ವಿಭಾಗವಿದೆ. ಅದರಲ್ಲಿ ‘ಮೀಡಿಯಾ ಆಟೊ ಡೌನ್‌ಲೋಡ್’ ಎಂಬ ಆಯ್ಕೆಯಲ್ಲಿ ಎಲ್ಲವೂ ‘ಆಫ್’ ಎಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಇಂಥ ಕುತಂತ್ರಾಂಶವುಳ್ಳವು ಇನ್‌ಸ್ಟಾಲ್ ಆಗದ ಹೊರತೂ ಶುಭಾಶಯ ಸಾಲುಗಳನ್ನು ಓದಲಾಗದು. ಹೀಗಾಗಿ ಇನ್‌ಸ್ಟಾಲ್‌ಗೆ ಕೇಳಿದರೆ ಅದನ್ನು ಕೂಡಲೇ ಡಿಲೀಟ್ ಮಾಡಿ.
ಎಸ್‌ಎಂಎಸ್ ರೂಪದಲ್ಲಿ ಬಂದರೂ, ನೋಡಲು ತೆರೆಯಿರಿ ಎಂದಿದ್ದರೆ ಅದನ್ನು ಆಯ್ಕೆ ಮಾಡಬೇಡಿ.
ಸಂಶಯಾಸ್ಪದ ಗ್ರೀಟಿಂಗ್ ಆಗಿದ್ದಲ್ಲಿ ಅದನ್ನು ಕೂಡಲೇ ಅನ್‌ಇನ್‌ಸ್ಟಾಲ್ ಮಾಡಿ
ವಾಟ್ಸ್‌ಆ್ಯಪ್, ಇಮೇಲ್ ಮತ್ತು ಬ್ಯಾಂಕ್ ಖಾತೆಗಳ ಪಾಸ್‌ವರ್ಡ್ ಅನ್ನು ತಕ್ಷಣ ಬದಲಿಸಿ
ಬ್ಯಾಂಕ್‌ಗಳಿಗೆ ಕೂಡಲೇ ಮಾಹಿತಿ ನೀಡಿ ವ್ಯವಹಾರಗಳ ಕುರಿತು ನಿಗಾ ವಹಿಸುವಂತೆ ತಿಳಿಸಿ
ನಿಮ್ಮ ಸಂಪರ್ಕದಲ್ಲಿರುವವರಿಗೂ ಈ ಕುರಿತು ಮಾಹಿತಿ ನೀಡಿ, ನಿಮ್ಮ ಸಂಖ್ಯೆಯಿಂದ ಅವರಿಗೆ ಸಂದೇಶ ಹೋಗಿದ್ದರೆ ಎಚ್ಚರ ವಹಿಸುವಂತೆ ತಿಳಿಸಿದೆ.
cybercrime.gov.in ಅಥವಾ ಸೈಬರ್ ಅಪರಾಧ ಸಹಾಯವಾಣಿ 1930 ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.