ಸೌಂದರ್ಯವನ್ನು ಆಸ್ವಾದಿಸದವರು ಬಹುಶಃ ಯಾರೂ ಇರಲಾರರು. ಅದಕ್ಕೆಂದೇ ಸೌಂದರ್ಯ ಸ್ಪರ್ಧೆಗಳಿಗೆ ವಿಶೇಷ ಮನ್ನಣೆ ಇದೆ. ಇತ್ತೀಚಿನ ವರ್ಷಗಳಲ್ಲಿ, ಬಾಹ್ಯ ಸೌಂದರ್ಯದ ಜೊತೆಗೆ ಆಂತರಿಕ ಸೌಂದರ್ಯಕ್ಕೂ ಮಹತ್ವ ನೀಡುತ್ತಿರುವ ‘ವಿಶ್ವ ಸುಂದರಿ’, ‘ಭುವನ ಸುಂದರಿ’ಯಂತಹ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು ಗಮನ ಸೆಳೆಯುತ್ತಿವೆ
‘ಹೂವೂ ಚೆಲುವೆಲ್ಲಾ ನಂದೆಂದಿತು, ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು...’ ಆರ್.ಎನ್.ಜಯಗೋಪಾಲ್ ಅವರ ಈ ಗೀತೆ, ಜಗತ್ತಿನ ಸೊಬಗೆಲ್ಲಾ ತನ್ನ ಉಡಿಯಲ್ಲೇ ಇದೆ ಎಂಬಂತೆ ಬೀಗುವ ಸೌಂದರ್ಯ ಕನ್ನಿಕೆಯರಿಗೆಂದೇ ಹೇಳಿ ಬರೆಸಿದಂತಿದೆ. ‘ಸೌಂದರ್ಯ ಇರುವುದು ನೋಡುಗರ ಕಣ್ಣಲ್ಲಿ’ ಎಂಬುದು ನಿಜವೇ ಆದರೂ ಕಣ್ಣು ಕೋರೈಸುವಂತಿರುವ ಚೆಲುವೆಯರು ತಮ್ಮೆಲ್ಲಾ ಸೊಬಗನ್ನು ಒರೆಗಿಟ್ಟು ಪರಸ್ಪರ ಪೈಪೋಟಿಗೆ ನಿಂತರೆ? ನೋಡುವ ಆ ಕಂಗಳ ಎದೆಯಂಗಳದಲ್ಲಿ ಒಂದು ಝಲಕ್ ಮೂಡದೇ ಇರದೇ?
ಅನ್ಯ ಸಂಗತಿಗಳಂತೆ ಅಂದಗಾತಿಯರ ಚೆಲುವೂ ಸ್ಪರ್ಧೆಯಿಂದ ಹೊರತಲ್ಲ. ವಿವಿಧ ಸೌಂದರ್ಯ ಸ್ಪರ್ಧೆಗಳು ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿವೆ. ಇದೀಗಷ್ಟೇ ಹೈದರಾಬಾದ್‌ನಲ್ಲಿ ನಡೆದ 72ನೇ ವಿಶ್ವಸುಂದರಿ ಸ್ಪರ್ಧೆಯಲ್ಲಿ ಥಾಯ್ಲೆಂಡಿನ ಬೆಡಗಿ ಒಪಾಲ್ ಸುಚಾತಾ ಚೌಂಗಶ್ರೀ ‘ಮಿಸ್ ವರ್ಲ್ಡ್’ ಕಿರೀಟ ತೊಟ್ಟು ಬೀಗಿದ್ದಾರೆ. ಇದುವರೆಗೆ ಭಾರತದ ಆರು ಲಲನೆಯರಿಗೆ ಈ ಕಿರೀಟ ತೊಡುವ ಅದೃಷ್ಟ ಒಲಿದಿದೆ.
ಅಂದಹಾಗೆ, ಇಂತಹ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಹತ್ತಾರು ದೇಶಗಳ ಸುರಸುಂದರಿಯರ ನಡುವೆ ಸೆಣಸಿ, ‘ಅತಿಲೋಕ ಸುಂದರಿ’ ಎನಿಸಿಕೊಳ್ಳುವುದು ಸುಲಭದ ಮಾತೇನಲ್ಲ. ಅತಿಯಾದ ಶಿಸ್ತು ಮತ್ತು ಅತೀವ ಪರಿಶ್ರಮ ಬೇಕೇಬೇಕು. ಬಹಳಷ್ಟು ದೈಹಿಕ, ಮಾನಸಿಕ ಸಿದ್ಧತೆಯಂತೂ ಇರಲೇಬೇಕು. ಝಗಮಗಿಸುವ ರ‍್ಯಾಂಪ್‌ನಲ್ಲಿ ಬಳುಕುತ್ತಾ ಬರುವ ಈ ಲಲನೆಯರನ್ನು ನೋಡಿ ಕಣ್ತುಂಬಿಕೊಳ್ಳುವ ಮಂದಿ ಒಂದೆಡೆಯಾದರೆ, ಸೌಂದರ್ಯಕ್ಕೊಂದು ಸ್ಪರ್ಧೆಯೇ ಎಂದು ಕೊಂಕು ನುಡಿದರೂ ವಾರೆಗಣ್ಣಿನಿಂದಲೇ ಈ ಬೆಡಗಿಯರ ಮೈಮಾಟ ಆಸ್ವಾದಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ.
ಬಾಹ್ಯ ಸೌಂದರ್ಯದ ಜೊತೆಗೆ ಬುದ್ಧಿಮತ್ತೆ ಮತ್ತು ಆಂತರಿಕ ಸೌಂದರ್ಯಕ್ಕೂ ಸಾಣೆ ಹಿಡಿಯುವ ಕೆಲಸ ಇತ್ತೀಚಿನ ವರ್ಷಗಳಲ್ಲಿ ಆದ್ಯತೆ ಪಡೆದಿರುವುದು ಸೌಂದರ್ಯ ಸ್ಪರ್ಧೆಗಳ ಕಿಮ್ಮತ್ತು ಹೆಚ್ಚಿಸಿದೆ. ಮೊದಲೆಲ್ಲಾ ಸ್ಪರ್ಧೆಯ ಒಂದು ಸುತ್ತಿನಲ್ಲಿ ಚೆಲುವೆಯರು ಬಿಕಿನಿ ಧರಿಸುವುದು ಕಡ್ಡಾಯವಾಗಿತ್ತು. ಸಂಪ್ರದಾಯವಾದಿಗಳ ಕೆಂಗಣ್ಣಿನ ಬಿಸಿ ಹೆಚ್ಚಾದಾಗ ಅದನ್ನು ಈಜುಡುಗೆಗೆ ಬದಲಾಯಿಸಲಾಯಿತು. 2014ರ ನಂತರ ಈ ಪರಿಪಾಟವನ್ನೂ ನಿಲ್ಲಿಸಲಾಗಿದೆ. ಇದರ ಬದಲಾಗಿ ಸ್ಪರ್ಧಿಯ ವ್ಯಕ್ತಿತ್ವ, ಪ್ರತಿಭೆ ಮತ್ತು ಕೌಶಲ ಜೊತೆಗೂಡಿ, ಸೌಂದರ್ಯ ಮಾನದಂಡದ ತಕ್ಕಡಿ ಮೇಲೇರಿದೆ. ಅಂತಿಮ ಸುತ್ತಿನಲ್ಲಿ ತೀರ್ಪುಗಾರರು ಕೇಳುವ ಪ್ರಶ್ನೆಗಳಿಗೆ, ತಮ್ಮತ್ತಲೇ ನೆಟ್ಟ ಲಕ್ಷಾಂತರ ಕಣ್ಣೋಟಗಳನ್ನು ಎದುರಿಸುತ್ತಾ ತಡವರಿಸದೆ ಆತ್ಮಸ್ಥೈರ್ಯದಿಂದ ನೀಡುವ ಉತ್ತರವು ಸ್ಪರ್ಧಿಗಳ ಗೆಲುವಿಗೆ ರತ್ನಗಂಬಳಿ ಹಾಸುತ್ತದೆ. ಕೆಲವೊಮ್ಮೆ ತೀರ್ಪುಗಾರರು ಕೇಳುವ ವಿಚಿತ್ರ ಹಾಗೂ ಗೊಂದಲಮಯ ಪ್ರಶ್ನೆಗಳಿಗೆ ಚೆಲುವೆಯರು ಕಕ್ಕಾಬಿಕ್ಕಿಯಾಗುವುದೂ ಉಂಟು. ಹಾಗೆಯೇ ಈ ‘ಬ್ಯೂಟಿ ವಿತ್ ಬ್ರೇನ್’ಗಳು ತೀರ್ಪುಗಾರರ ಪ್ರಶ್ನೆಗೆ ಬ್ರೇನ್‌ಲೆಸ್ ಉತ್ತರ ಕೊಟ್ಟು ನಗೆಪಾಟಲಿಗೆ ಈಡಾಗಿರುವುದೂ ಇದೆ!
ಅಂತಿಮವಾಗಿ, ಕಿರೀಟಕ್ಕೆ ಮುತ್ತಿಕ್ಕಿದವಳಿಗೆ ಅಂತರರಾಷ್ಟ್ರೀಯ ಮನ್ನಣೆ, ರತ್ನಖಚಿತ ಕಿರೀಟ, ನಗದು ಬಹುಮಾನ, ನಾನಾ ದೇಶಗಳಿಗೆ ಉಚಿತ ಪ್ರವಾಸದ ಜೊತೆಗೆ ಉಡುಗೆ– ತೊಡುಗೆ, ಸೌಂದರ್ಯಸಾಧನ, ಚಿನ್ನಾಭರಣಗಳ ಕೊಡುಗೆಯ ಸುರಿಮಳೆಯೇ ಆಗುತ್ತದೆ. ವೃತ್ತಿಪರ ಸ್ಟೈಲಿಸ್ಟ್ ಮತ್ತು ನ್ಯೂಟ್ರಿಷನಿಸ್ಟ್ ಜೊತೆ ಒಡನಾಟ ಕಲ್ಪಿಸಲಾಗುತ್ತದೆ. ವರ್ಷಪೂರ್ತಿ ಆಕೆ ಇರಿಸುವ ಪ್ರತಿ ಹೆಜ್ಜೆಯಲ್ಲೂ ಅತ್ಯುತ್ತಮ ಛಾಯಾಗ್ರಾಹಕರು ಮತ್ತು ವಸ್ತ್ರವಿನ್ಯಾಸಕರ ಛಾಪಿರುತ್ತದೆ. ಮಾನವೀಯ ಕಾರ್ಯ, ಆರೋಗ್ಯದ ಜನಜಾಗೃತಿಗಾಗಿ ಇಡೀ ಜಗತ್ತನ್ನು ಸುತ್ತುತ್ತಾಳೆ ಈ ಚೆಲುವಿನ ಖನಿ. ‘ಮಿಸ್ ಅರ್ಥ್’ ಆದ ಸುಂದರಿಯಂತೂ ಪರಿಸರ ಜಾಗೃತಿಗಾಗಿ ಶ್ರಮಿಸುತ್ತಾಳೆ. ಹೀಗೆ ಹೊಣೆಗಾರಿಕೆಯೂ ಕಿರೀಟದ ಜೊತೆಗೂಡುವುದರಿಂದ ತಾನಿಡುವ ಪ್ರತಿ ಹೆಜ್ಜೆಯನ್ನೂ ಈ ಚಿತ್ತಚಂಚಲೆ ಎಚ್ಚರದಿಂದಲೇ ಇರಿಸಬೇಕಾಗುತ್ತದೆ. ಪ್ರತಿ ನಡೆಗೂ ಉತ್ತರದಾಯಿ ಆಗಬೇಕಾಗುತ್ತದೆ.
ಕೈಗವಸಾಯ್ತು ಕಾಲುಚೀಲ!
ಸೌಂದರ್ಯ ಸ್ಪರ್ಧೆ ಬೇಡುವ ಸೃಜನಶೀಲತೆ ಮತ್ತು ಆತ್ಮಸ್ಥೈರ್ಯಕ್ಕೆ ಅತ್ಯುತ್ತಮ ಉದಾಹರಣೆ, 1994ರಲ್ಲಿ ‘ಮಿಸ್ ಯೂನಿವರ್ಸ್’ ಪಟ್ಟ ಮುಡಿಗೇರಿಸಿಕೊಂಡ ಸುಶ್ಮಿತಾ ಸೇನ್. ಆರ್ಥಿಕ ಕೊರತೆಯಿಂದ ಡಿಸೈನರ್ ಗೌನಿಗೆ ಹೆಚ್ಚು ವ್ಯಯಿಸಲಾರದೆ, ನವದೆಹಲಿಯ ಬಜಾರೊಂದರಲ್ಲಿ ಖರೀದಿಸಿದ ಬಟ್ಟೆಯಿಂದ ಸ್ಥಳೀಯ ಟೇಲರ್ ಕೈಯಲ್ಲಿ ಗೌನ್ ಹೊಲಿಸಿಕೊಂಡು, ಒಂದು ಜೊತೆ ಕಪ್ಪು ಕಾಲುಚೀಲವನ್ನೇ ಕೈಗವಸನ್ನಾಗಿ ಧರಿಸಿಕೊಂಡು ರ್‍ಯಾಂಪ್ ಏರಿದವರು ಈ ದಿಟ್ಟೆ.
ಹೀಗಿರಬೇಕು ಸ್ಪರ್ಧಿಗಳು
5.5 ಇಂಚಿಗಿಂತ ಎತ್ತರ
‘ಪಾಸಿಟಿವ್ ಬಾಡಿ’ ಇಮೇಜಿನ ಮನಃಸ್ಥಿತಿ
ಆಹಾರ ಸೇವನೆ, ನಡಿಗೆ, ಕೂರುವ, ನಿಲ್ಲುವ ಭಂಗಿ, ಮಾತಿನ ಶೈಲಿ, ಆತ್ಮವಿಶ್ವಾಸದ ನಗು ಎಲ್ಲವೂ ಶಿಸ್ತುಬದ್ಧ
ಚರ್ಮ, ಕೂದಲ ಸೌಂದರ್ಯಕ್ಕೆ ಮನ್ನಣೆ
ಉಡುಗೆ-ತೊಡುಗೆಗೆ ವಿಶೇಷ ಗಮನ
ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಆಕರ್ಷಕ ವ್ಯಕ್ತಿತ್ವ
ತೀರ್ಪುಗಾರರು ಕೇಳಿದ ಕೆಲವು ಸವಾಲಿನ ಪ್ರಶ್ನೆಗಳು
ಈ ಜೀವನ ಯಾರಿಗೆ ಅತಿ ಸುಲಭ, ಸ್ತ್ರೀಗೋ ಪುರುಷನಿಗೋ?
ನೀನು ಒಂದು ದಿನದ ಮಟ್ಟಿಗೆ ದೇವರಾದರೆ, ಏನೆಲ್ಲ ಬದಲಾವಣೆ ಮಾಡುವೆ?
ಹೆಣ್ಣುಮಕ್ಕಳು ಮಾತ್ರ ಈ ಪ್ರಪಂಚವನ್ನು ಆಳುವಂತಾದರೆ ಹೇಗಿರುತ್ತದೆ?
ಹೀಗಿತ್ತು ಕೆಲವು ಪ್ರಶ್ನೋತ್ತರ
ಸುಶ್ಮಿತಾ ಸೇನ್– (ಮಿಸ್ ಯೂನಿವರ್ಸ್ 1994)– ನಿನ್ನ ಪ್ರಕಾರ, ಮಹಿಳೆಯ ಮೂಲತತ್ವ ಎಂದರೆ ಏನು?
ಒಂದು ಮಗುವಿನ ಮೂಲ ಎಂದರೆ ತಾಯಿ, ಆಕೆಯೂ ಹೆಣ್ಣು. ಕಾಳಜಿ ಮಾಡುವುದು, ಹಂಚುವುದು, ಪ್ರೀತಿಸುವುದನ್ನು ಆಕೆ ಗಂಡಿಗೆ ತೋರಿಸಿಕೊಡುತ್ತಾಳೆ. ಇದುವೇ ಒಬ್ಬಳು ಹೆಣ್ಣಿನ ಅಸ್ತಿತ್ವ. ಹೆಣ್ಣಾಗಿರುವುದೇ ದೇವರು ಕೊಟ್ಟಿರುವ ಬಹುದೊಡ್ಡ ಉಡುಗೊರೆ.
ಡಯಾನಾ ಹೇಡನ್ (ಮಿಸ್ ವರ್ಲ್ಡ್ 1997)- ಮಿಸ್ ವರ್ಲ್ಡ್ ಆಗಲು ಏಕೆ ಬಯಸುವೆ?
ಕವಿ ವಿಲಿಯಮ್ ಬಟ್ಲರ್ ಯೀಟ್ಸ್ ಅವರ ‘ಕನಸಿನ ಜೊತೆ ಜವಾಬ್ದಾರಿ ಶುರುವಾಗುತ್ತದೆ’ ಎಂಬ ಸಾಲು ನನಗೆ ಸ್ಫೂರ್ತಿ. ಈ ಸಾಲನ್ನು ನನಸಾಗಿಸಿಕೊಳ್ಳುವುದೇ ನನ್ನ ಕನಸು. ಆ ಮೂಲಕ, ಜವಾಬ್ದಾರಿಯುತ ವ್ಯಕ್ತಿಯಾಗಿ, ಬೇರೆಯವರು ಬೆಂಬತ್ತಿದ ಕನಸನ್ನೂ ಬೆಂಬಲಿಸುತ್ತೇನೆ.
ಮಾನುಷಿ ಚಿಲ್ಲರ್ (ಮಿಸ್ ವರ್ಲ್ಡ್ 2017)- ಯಾವ ವೃತ್ತಿ ಅತಿ ಹೆಚ್ಚು ಸಂಬಳವನ್ನು ಬೇಡುತ್ತದೆ?
ಈ ಪ್ರಪಂಚದಲ್ಲಿ ಒಬ್ಬ ತಾಯಿಗೆ ಅತ್ಯಂತ ಹೆಚ್ಚಿನ ಸಂಬಳ ಮತ್ತು ಗೌರವ ಸಿಗಬೇಕು.
ಹರ್ನಾಜ್ ಸಂಧು (ಮಿಸ್ ಯೂನಿವರ್ಸ್ 2021)- ಇಂದಿನ ಹೆಣ್ಣುಮಕ್ಕಳು ಒತ್ತಡವನ್ನು ಹೇಗೆ ನಿರ್ವಹಿಸಬೇಕು?
ಇಂದಿನ ಯುವಪೀಳಿಗೆ ಅತೀವ ಒತ್ತಡ ಎದುರಿಸುತ್ತಿದೆ. ತಾನು ಒಬ್ಬ ಅನನ್ಯ ವ್ಯಕ್ತಿ ಹಾಗೂ ಆ ಕಾರಣಕ್ಕಾಗಿಯೇ ತಾನು ಸುಂದರ ಎಂಬುದನ್ನು ಹೆಣ್ಣುಮಕ್ಕಳಿಗೆ ಮನದಟ್ಟು ಮಾಡಿಸಬೇಕು.
ಇಷ್ಟೆಲ್ಲಾ ಸ್ಪರ್ಧೆಗಳಿವೆ!
ಮಿಸ್ ಅಲ್ಲದೆ, ಮಿಸೆಸ್ ಹಾಗೂ ಟೀನ್ಸ್‌ಗಳಿಗೂ ಸೌಂದರ್ಯ ಸ್ಪರ್ಧೆಗಳಿವೆ. ಮಿಸ್ ಫೋಟೊಜೆನಿಕ್, ಮಿಸ್ ಟ್ಯಾಲೆಂಟ್, ಮಿಸ್ ಪರ್ಸನಾಲಿಟಿ, ಮಿಸ್ ಬ್ಯೂಟಿಫುಲ್ ಸ್ಮೈಲ್, ಮಿಸ್ ಬ್ಯೂಟಿಫುಲ್ ಹೇರ್ ಎಂಬಂತಹ ಕೆಲವು ವಿಶೇಷ ಶೀರ್ಷಿಕೆಗಳನ್ನೂ ಅದಕ್ಕೆ ಹೊಂದುವ ಸ್ಪರ್ಧಿಗಳಿಗೆ ನೀಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.