
ಸುಗ್ಗಿ ಕಾಲ ಬಂತೆಂದರೆ ಹಳೆ ಮೈಸೂರು ಭಾಗದ ಗ್ರಾಮಗಳಲ್ಲಿ ರಾಗಿ ಒಕ್ಕಣೆ ಮಾಡಲು ಸಾಂಪ್ರದಾಯಿಕ ಕಣಗಳು ಕಂಡು ಬರುತ್ತಿದ್ದವು. ದನಗಳ ಸಗಣಿ ಬಳಸಿ ಸಾರಿಸಿದ ಕಣ... ಆದರ ಮೇಲೆ ತೆನೆ ತುಂಬಿದ ರಾಗಿ ಹುಲ್ಲು.. ಹುಲ್ಲಿನ ಮೇಲೆ ಗುಯ್ಗುಡುತ್ತಾ ಸಾಗಿದ ಗುಂಡು... ಅದನ್ನು ಎಳೆಯೊಯ್ಯವ ಜೋಡೆತ್ತು... ಹಳ್ಳಿ ಸೊಗಡಿನ ಈ ಒಕ್ಕಣೆ ಪದ್ದತಿ ಈಗ ಸಂಪೂರ್ಣ ಬದಲಾಗಿದೆ. ಎತ್ತುಗಳಿದ್ದ ಜಾಗದಲ್ಲಿ ಟ್ರಾಕ್ಟರ್ ಬಂದಿದ್ದು, ಒಕ್ಕಣೆಗೆ ಬಳಸುತ್ತಿದ್ದ ಗುಂಡುಗಳು ಮೂಲೆ ಸೇರಿವೆ.
ಕೃಷಿ ಯಾಂತ್ರೀಕರಣಕ್ಕೆ ಒಳಗಾಗುತ್ತಿದ್ದಂತೆ ನಮ್ಮ ಪೂರ್ವಜರು ಬಳಸುತ್ತಿದ್ದ ಗ್ರಾಮೀಣ ಸೊಗಡಿನ ಕೃಷಿ ಪರಿಕರಗಳು ಕಣ್ಮರೆಯಾಗುತ್ತಿವೆ. ರಾಗಿ ಬೆಳೆಯುವ ಬಯಲು ಸೀಮೆ ಜಿಲ್ಲೆಗಳಾದ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಮಂಡ್ಯ, ಚಿತ್ರದುರ್ಗ ಜಿಲ್ಲೆಗಳ ಕಣಗಳಲ್ಲಿ ಹುಲ್ಲಿನಿಂದ ರಾಗಿ ಬೇರ್ಪಡಿಸಲು ಗುಂಡು ಅಂದರೆ ರೋಣ ಕಲ್ಲು ಬಳಸುತ್ತಿದ್ದರು. ಮರದಲ್ಲಿ ಮಾಡಿದ ಉಪಕರಣಗಳಿಗೆ ಗುಂಡನ್ನು ಜೋಡಿಸಿ, ಕಣದಲ್ಲಿ ಹದವಾಗಿ ಹುಲ್ಲು ಹರಡಿ ಅದರ ಮೇಲೆ ಎತ್ತು, ಎಮ್ಮೆಗಳಿಗೆ ಕಟ್ಟಿದ ಗುಂಡನ್ನು ಓಡಾಡಿಸುತ್ತಿದ್ದರು. ಹೀಗೆ ಕಣಗಳಲ್ಲಿ ಕೆಲಸಕ್ಕೆ ಬಂದ ಮಹಿಳೆಯರು ಜನಪದ ಗೀತೆಗಳನ್ನು ಹಾಡುತ್ತಿದ್ದರೆ, ಪುರುಷರು ರೋಣ ಹೊಡೆಯುತ್ತಿದ್ದರು. ಗುಂಡಿಗೆ ಅಳವಡಿಸಿದ್ದ ಮರದಿಂದ ಹೊಮ್ಮುತ್ತಿದ್ದ ಶಬ್ದವು ವಿಶೇಷವಾಗಿತ್ತು.
ರಾಗಿ ಕಣ
ಗುಂಡು ಕಣಕ್ಕೆ ಇಳಿಸುವ ಹಾಗೂ ಹೊರಗೆ ಬಿಡುವ ಸಮಯದಲ್ಲಿ ಹುಲ್ಲು ಹಿಡಿದುಕೊಂಡು ಕಣದ ಸುತ್ತಲೂ ಒಂದು ಕಾಲು ಗಟ್ಟುವ ಸಂಪ್ರದಾಯ ಇತ್ತು. ರಾಗಿ ಅಷ್ಟೇ ಅಲ್ಲದೆ ಭತ್ತ, ತೊಗರಿ, ಹೆಸರು, ಉದ್ದು, ಹುರುಳಿ, ಜೋಳದ ಕಾಳು ಬೇರ್ಪಡಿಸಲು ರೈತರು ಗುಂಡು ಹೊಡೆಯುತ್ತಿದ್ದರು.
1990ರ ದಶಕದ ನಂತರ ಕೃಷಿಗೆ ಟ್ರ್ಯಾಕ್ಟರ್ ಲಗ್ಗೆಯಿಟ್ಟಿತ್ತು. ರೈತರು ನಿಧಾನವಾಗಿ ಗುಂಡುಗಳನ್ನು ಕಣಕ್ಕೆ ಇಳಿಸುವುದನ್ನು ಕಡಿಮೆ ಮಾಡುತ್ತಾ ಬಂದರು. ನಾಲ್ಕೈದು ವರ್ಷಗಳಿಂದ ಈಚೆಗೆ ನೇರವಾಗಿ ಹೊಲದಲ್ಲಿಯೇ ಹುಲ್ಲು ಮತ್ತು ರಾಗಿಯನ್ನು ಬೇರ್ಪಡಿಸುವ ಬೇಲರ್ ಯಂತ್ರಗಳು ಬಂದ ಮೇಲೆ, ಒಂದು ಕಾಲದಲ್ಲಿ ರೈತನಿಗೆ ಅತಿ ಅವಶ್ಯವಾಗಿದ್ದ ಗುಂಡುಗಳು ಅನಾಥವಾಗಿ ರೈತರ ಬದು ಅಥವಾ ಹೊಲದ ಮೂಲೆ ಸೇರಿ ಪಳೆಯುಳಿಕೆಗಳಾಗುತ್ತಿವೆ.
ಕಣದಲ್ಲಿ ಕೆಲಸ ಮಾಡುತ್ತಿರುವ ರೈತರು
ಗುಂಡು ಪಕ್ಕಕ್ಕೆ ಸರಿಸಿದ ಟ್ರ್ಯಾಕ್ಟರ್...
ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ವರ್ಷ ರಾಗಿ ಬಂಪರ್ ಬೆಳೆಯಾಗಿದ್ದು, ರೈತರು ರಾಗಿ ಕಟಾವು, ಒಕ್ಕಣೆ ಮಾಡುವುದರಲ್ಲಿ ಸಂತಸದಿಂದ ತೊಡಗಿಸಿಕೊಂಡಿದ್ದಾರೆ.
ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ರಾಗಿ ಸಮೃದ್ಧವಾಗಿ ಬಂದಿದೆ. ಎಲ್ಲೆಡೆ ರಾಗಿ ಕಟಾವು, ಒಕ್ಕಣೆ ಮಾಡುವ ಯಂತ್ರಗಳು ಬೇರೆ ಬೇರೆ ರಾಜ್ಯಗಳಿಂದ ಲಗ್ಗೆ ಇಟ್ಟಿವೆ.
ಆಂಧ್ರ ಪ್ರದೇಶ, ತಮಿಳುನಾಡು ಮತ್ತಿತರ ರಾಜ್ಯಗಳಿಂದ ಬಂದಿರುವ ರಾಗಿ ಕಟಾವು ಯಂತ್ರಗಳ ಮಾಲೀಕರು ಪ್ರತಿ ಗಂಟೆಗೆ ₹3,500ರಿಂದ ₹4,000 ಸಾವಿರದವರೆಗೆ ಬಾಡಿಗೆ ನಿಗದಿಪಡಿಸಿದ್ದಾರೆ.
ರಾಗಿ ಕಟಾವು ಮಾಡುತ್ತಿರುವ ಯಂತ್ರ
ಐದಾರು ವರ್ಷಗಳ ಹಿಂದೆ ಕೂಲಿ ಕಾರ್ಮಿಕರಿಂದ ರಾಗಿ ಬೆಳೆ ಕಟಾವು ಮಾಡಿಸುತ್ತಿದ್ದರು. ಕಾರ್ಮಿಕರು ಗುಂಪು-ಗುಂಪಾಗಿ ಜಾನಪದ ಹಾಡು ಹಾಡುತ್ತಾ ಬೆಳೆ ಕೊಯ್ಲು ಮಾಡುತ್ತಿದ್ದರು. ರಾಗಿ ಮುದ್ದೆ, ಪಾಯಸ, ಅವರೆಕಾಳು ಹುಳಿ ಊಟವನ್ನು ನೀಡುತ್ತಿದ್ದರು. ರಾಗಿ ಕೊಯ್ಲಿಗೆ ಬಂದರೆ ಹಳ್ಳಿಗಳಲ್ಲಿ ಹಬ್ಬದ ವಾತಾವರಣ ಇರುತ್ತಿತ್ತು. ಕೊಯ್ಲಿನ ನಂತರ ಚೆನ್ನಾಗಿ ಒಣಗಿಸಿ ಹೊಲದಲ್ಲೇ ಕುಪ್ಪೆ ಹಾಕುತ್ತಿದ್ದರು. ನಂತರ ಎತ್ತಿನ ಗಾಡಿಗಳಲ್ಲಿ ಕಣಗಳಿಗೆ ಸಾಗಿಸಿ ಸುಗ್ಗಿಯಲ್ಲಿ ಕಣದಲ್ಲಿ ಹರಡಿ ಗುಂಡು ಹೊಡೆಯುವ ಮೂಲಕ ರಾಗಿ ಮಾಡುತ್ತಿದ್ದರು. ಯಂತ್ರಗಳು ಬಂದ ನಂತರ ಅವೆಲ್ಲ ಮರೆಯಾಗಿದ್ದು, ಸುಗ್ಗಿಯೂ ದೂರದ ಮಾತಾಗಿದೆ ಎನ್ನುತ್ತಾರೆ ಅಪ್ಪೆಗೌಡನಹಳ್ಳಿ ರೈತ ತ್ಯಾಗರಾಜು.
ಕಾರ್ಮಿಕರ ಕೊರತೆ...
ರಾಗಿ ಕೊಯ್ಲು, ಕಣ ಮಾಡಿ ರಾಗಿ ಕಾಳು ಹಸನು ಮಾಡಲು 2 ರಿಂದ 3 ತಿಂಗಳು ಬೇಕಾಗುತ್ತಿತ್ತು. ಒಮ್ಮೊಮ್ಮೆ ಕಾರ್ಮಿಕರು ಸಿಗುತ್ತಿರಲಿಲ್ಲ. ಈಗಂತೂ ಕಣ ಮಾಡಿ ಒಕ್ಕಣೆ ಮಾಡುವ ರೈತರೇ ಇಲ್ಲ. ರಾಗಿಯ ತೆನೆ ಕೊಯ್ಲು ಮಾಡುತ್ತಾರೆ. ಜಮೀನಿನಲ್ಲೇ ಒಕ್ಕಣೆ ಯಂತ್ರದಿಂದ ಕೆಲವೇ ಗಂಟೆಗಳಲ್ಲಿ ರಾಗಿ ಹಸನಾಗಿ ಮನೆಗೆ ಬರುತ್ತದೆ. ಹುಲ್ಲನ್ನು 3-4 ದಿನಗಳ ಕಾಲ ಚೆನ್ನಾಗಿ ಒಣಗಿಸಿ ಪೆಂಡಿಯಂತ್ರದ ಸಹಾಯದಿಂದ ಮನೆಗೆ ತರಲಾಗುತ್ತದೆ.
ಕೂಲಿ ಕಾರ್ಮಿಕರ ಕೊರತೆಯಿಂದ ರಾಗಿ ಕಟಾವು ಮಾಡಿ ಒಕ್ಕಣೆ ಮಾಡಿಸುವುದು ಬಹಳ ಕಷ್ಟಕರವಾಗಿತ್ತು. ಯಂತ್ರಗಳ ಸಹಾಯದಿಂದ ಅಧಿಕ ಶ್ರಮವಿಲ್ಲದೆ ರಾಗಿ ಕಟಾವು ಮಾಡಿಸಬಹುದು. ಒಕ್ಕಣೆ ಯಂತ್ರದಿಂದ ಕೆಲವೇ ಗಂಟೆಗಳಲ್ಲಿ ತೆನೆಯಿಂದ ರಾಗಿ ಮಾಡಿ ಮನೆಗೆ ಕೊಂಡೊಯ್ಯಬಹುದು ಎನ್ನುತ್ತಾರೆ ಮೇಲೂರು ಗ್ರಾಮದ ಬಸವರಾಜು.
ರೈತರು ರಸ್ತೆಯಲ್ಲಿ ಒಕ್ಕಣೆ ಮಾಡಿರುವ ದೃಶ್ಯ
ಈಗಲೂ ರಸ್ತೆಗಳಲ್ಲೇ ಒಕ್ಕಣೆ...
ಕೃಷಿಯನ್ನೇ ನಂಬಿಕೊಂಡು ಬಂದಿರುವ ರೈತರು ತಮ್ಮ ಜಮೀನುಗಳಲ್ಲಿ ಬಂದ ಫಸಲನ್ನು ಕಣದಲ್ಲಿ ಒಕ್ಕಣೆ ಮಾಡುವ ಸಂಪ್ರದಾಯ ಮರೆಯಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಒಕ್ಕಲು ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ರೈತರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಒಕ್ಕಣೆ ಮಾಡುವ ದೃಶ್ಯ ಸರ್ವೇ ಸಾಮಾನ್ಯ. ಕೆಲವು ಗ್ರಾಮದಲ್ಲಿ ದೇವಸ್ಥಾನ ಮುಂಭಾಗ, ತಮ್ಮ ಮನೆಯ ಅಂಗಳ ಸೇರಿದಂತೆ ರಸ್ತೆ ಪಕ್ಕದಲ್ಲಿ ಒಕ್ಕಣೆ ಮಾಡುತ್ತಿದ್ದಾರೆ.
ರೋಣ ಕಲ್ಲುಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.