
ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವವರು ಹೆಚ್ಚಿನ ಆದಾಯ ಪಡೆಯುವುದನ್ನು ಮತ್ತು ಬಂಡವಾಳ ವೃದ್ಧಿಯಾಗುವುದನ್ನು ಸಾಮಾನ್ಯವಾಗಿ ಬಯಸುತ್ತಾರೆ. ಆದರೆ ಎಲ್ಲ ಹೂಡಿಕೆದಾರರೂ ಇದನ್ನೇ ಬಯಸುತ್ತಾರೆ ಎನ್ನಲಾಗದು. ತೀವ್ರ ಏರಿಳಿತಗಳ ಮಾರುಕಟ್ಟೆಯನ್ನು ಎಲ್ಲರೂ ಇಷ್ಟಪಡುವುದಿಲ್ಲ. ಸ್ಥಿರವಾದ ಆದಾಯ ಬಯಸುವವರು ಹಲವರಿದ್ದಾರೆ. ಅಂಥವರಿಗೆ ಡಿವಿಡೆಂಡ್ ಹೂಡಿಕೆ ಸೂಕ್ತ.
ಈ ಹೂಡಿಕೆ ತಂತ್ರವನ್ನು ಅನುಸರಿಸುವ ಹೂಡಿಕೆದಾರರು ಷೇರುಗಳ ಮೌಲ್ಯವರ್ಧನೆಯ ಪ್ರಯೋಜನ ಮಾತ್ರವಲ್ಲದೆ ಕಂಪನಿಗಳು ಷೇರುದಾರರಿಗೆ ನೀಡುವ ಡಿವಿಡೆಂಡ್‌ಗಳ (ಲಾಭಾಂಶ) ಮೂಲಕವೂ ನಿರಂತರವಾಗಿ ಆದಾಯ ಪಡೆಯುತ್ತಾರೆ. ಸಾಂಪ್ರದಾಯಿಕ ಹೂಡಿಕೆದಾರರಿಗೆ, ನಿವೃತ್ತರಿಗೆ ಮತ್ತು ಆದಾಯದ ಜೊತೆಗೆ ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಸಲು ಬಯಸುವವರಿಗೆ ಇದು ಸೂಕ್ತ. ಆದರೆ ಡಿವಿಡೆಂಡ್ ಹೂಡಿಕೆ ಹೇಗೆ ಕೆಲಸ ಮಾಡುತ್ತದೆ? ಈ ಹೂಡಿಕೆಗೆ ಮೊದಲು ಗಮನಿಸಬೇಕಾದ ಅಂಶಗಳೇನು ಎಂಬುದರ ಬಗ್ಗೆ ನೋಟ ಹರಿಸೋಣ.
ಕಂಪನಿಗಳು ಷೇರುದಾರರಿಗೆ ತಮ್ಮ ಲಾಭದಲ್ಲಿ ನೀಡುವ ಪಾಲಿಗೆ ಲಾಭಾಂಶ ಅಥವಾ ಡಿವಿಡೆಂಡ್ ಎನ್ನುತ್ತಾರೆ. ಡಿವಿಡೆಂಡ್ ಹೂಡಿಕೆಯನ್ನು ಇಷ್ಟಪಡುವ ಹೂಡಿಕೆದಾರರು ಉತ್ತಮ ಡಿವಿಡೆಂಡ್ ನೀಡುವ ಕಂಪನಿಗಳ ಷೇರುಗಳ ಮೇಲೆ ಗಮನ ಹರಿಸುತ್ತಾರೆ. ಇಂತಹ ಕಂಪನಿಗಳು ಸಾಮಾನ್ಯವಾಗಿ ದೀರ್ಘಾವಧಿಯಿಂದ ಉತ್ತಮ ನೆಲೆ ಕಂಡುಕೊಂಡಿರುತ್ತವೆ, ಅವು ಉತ್ತಮ ಆರ್ಥಿಕ ಸಾಧನೆಯ ಇತಿಹಾಸ ಹೊಂದಿರುತ್ತವೆ.
ಉದಾಹರಣೆಗೆ ಕಂಪನಿಯೊಂದು ಒಂದು ಷೇರಿಗೆ ₹5ರಷ್ಟು ಡಿವಿಡೆಂಡ್ ಘೋಷಿಸಿದರೆ, ನೀವು ಆ ಕಂಪನಿಯ ನೂರು ಷೇರುಗಳನ್ನು ಹೊಂದಿದ್ದರೆ ₹500 ಡಿವಿಡೆಂಡ್ ಆದಾಯ ದೊರೆಯುತ್ತದೆ. ಒಂದು ಬಾರಿಗೆ ಸಿಗುವ ಡಿವಿಡೆಂಡ್ ಮೊತ್ತವು ದೊಡ್ಡದಾಗಿ ಕಾಣಲಿಕ್ಕಿಲ್ಲ. ಆದರೆ, ನೀವು ಮಾಡುವ ಹೂಡಿಕೆ ದೀರ್ಘಾವಧಿಗೆ ಆಗಿದ್ದರೆ, ಡಿವಿಡೆಂಡ್ ರೂಪದಲ್ಲಿ ಸಿಗುವ ಹಣವನ್ನು ಮರುಹೂಡಿಕೆ ಮಾಡುವುದಿದ್ದರೆ ದೀರ್ಘಾವಧಿಯಲ್ಲಿ ಈ ಮೊತ್ತ ದೊಡ್ಡದಾಗಬಹುದು.
ಡಿವಿಡೆಂಡ್ ಹೂಡಿಕೆ ತಂತ್ರವು ಏಕೆ ಜನಪ್ರಿಯವಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರವಾಗಿ ಹಲವು ಕಾರಣಗಳನ್ನು ನೀಡಬಹುದು.
1. ನಿರಂತರ ಆದಾಯ: ಡಿವಿಡೆಂಡ್ ಪಾವತಿಗಳು ಹೂಡಿಕೆದಾರರಿಗೆ ನಿರಂತರ ಆದಾಯ ಮೂಲವಾಗಿ ಒದಗಿಬರುತ್ತವೆ. ವಿಶೇಷವಾಗಿ ನಿವೃತ್ತರಿಗೆ ಅಥವಾ ಬದಲಿ ಆದಾಯವೊಂದನ್ನು ಬಯಸುವವರಿಗೆ ಇದು ಸೂಕ್ತ.
2. ಲಾಭಕ್ಕೆ ಇನ್ನಷ್ಟು ಲಾಭ: ಕಂಪನಿಯ ಇನ್ನಷ್ಟು ಷೇರುಗಳನ್ನು ಖರೀದಿಸಲು ಅದೇ ಕಂಪನಿಯ ಡಿವಿಡೆಂಡ್ ಮೊತ್ತವನ್ನು ಬಳಸಿಕೊಳ್ಳುವ ಮೂಲಕ ಹೂಡಿಕೆದಾರರು, ಠೇವಣಿ ಮೇಲಿನ ಬಡ್ಡಿಗೆ ಚಕ್ರಬಡ್ಡಿ ಪಡೆಯುವ ಬಗೆಯಲ್ಲಿ ಷೇರು ಹೂಡಿಕೆಯಿಂದಲೂ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ. ಈ ಮರು ಹೂಡಿಕೆಯು ಕಾಲಕ್ರಮೇಣ ದೊಡ್ಡ ಮೊತ್ತವಾಗಿ ಬೆಳೆಯುತ್ತದೆ.
3. ಕಡಿಮೆ ಅಪಾಯ: ಉತ್ತಮ ಡಿವಿಡೆಂಡ್ ನೀಡುವ ಕಂಪನಿಗಳು ಸಾಮಾನ್ಯವಾಗಿ ಬೃಹತ್ ಗಾತ್ರದ ಕಂಪನಿಗಳಾಗಿರುತ್ತವೆ, ಸದೃಢ ಆರ್ಥಿಕ ಹಿನ್ನೆಲೆ ಹೊಂದಿರುತ್ತವೆ. ಹಾಗಾಗಿ ಮಾರುಕಟ್ಟೆಯ ಏರಿಳಿತಗಳ ಪರಿಣಾಮವು ಇವುಗಳಿಗೆ ದೊಡ್ಡ ಪ್ರಮಾಣದಲ್ಲಿ ತಟ್ಟುವುದಿಲ್ಲ.
4. ಹಣದುಬ್ಬರದಿಂದ ರಕ್ಷಣೆ: ಸದೃಢವಾದ ಕಂಪನಿಗಳು ನಿಯಮಿತವಾಗಿ ನೀಡುವ ಡಿವಿಡೆಂಡ್ ಮೊತ್ತವು ಹಣದುಬ್ಬರದ ನಡುವೆ ಹೂಡಿಕೆದಾರರ ಕೊಳ್ಳುವ ಶಕ್ತಿಯನ್ನು ಕಾಪಾಡುತ್ತಿರುತ್ತವೆ.
ತಮ್ಮ ಆರ್ಥಿಕ ಗುರಿಗಳಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಲು ಹೂಡಿಕೆದಾರರಿಗೆ ಹಲವು ಬಗೆಯ ಡಿವಿಡೆಂಡ್ ಷೇರುಗಳು ಇವೆ
* ಬ್ಲೂ-ಚಿಪ್ ಡಿವಿಡೆಂಡ್ ಷೇರುಗಳು: ಇವು ಬೃಹತ್ ಗಾತ್ರದ ಮತ್ತು ಆರ್ಥಿಕವಾಗಿ ಸದೃಢವಾಗಿರುವ ಕಂಪನಿಗಳ ಷೇರುಗಳು. ನಿಫ್ಟಿ–50 ಅಥವಾ ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕದ ಭಾಗವಾಗಿರುವ ಕಂಪನಿಗಳ ಷೇರುಗಳು. (ಉದಾಹರಣೆಗೆ ಐಟಿಸಿ, ಹಿಂದೂಸ್ತಾನ್ ಯೂನಿಲಿವರ್ ಇತ್ಯಾದಿ)
* ಅಧಿಕ ಪ್ರಮಾಣದ ಡಿವಿಡೆಂಡ್ ನೀಡುವ ಷೇರುಗಳು: ಈ ವರ್ಗದಲ್ಲಿ ಬರುವ ಕಂಪನಿಗಳು ಸರಾಸರಿ ಪ್ರಮಾಣಕ್ಕಿಂತ ಸ್ವಲ್ಪ ಹೆಚ್ಚಿನ ಮಟ್ಟದಲ್ಲಿ ಡಿವಿಡೆಂಡ್ ಆದಾಯ ನೀಡುತ್ತವೆ. ಆದರೆ ಮಾರುಕಟ್ಟೆಯ ಅಪಾಯದ ಅಂಶಗಳು ಇಲ್ಲಿ ಹೆಚ್ಚಿನ ಮಟ್ಟದಲ್ಲಿ ಇರಬಹುದು. (ಉದಾಹರಣೆಗೆ ಸರ್ಕಾರಿ ಸ್ವಾಮ್ಯದ ಕೆಲವು ಬ್ಯಾಂಕುಗಳು).
* ಡಿವಿಡೆಂಡ್ ಮೊತ್ತ ಹೆಚ್ಚಿಸುವ ಷೇರುಗಳು: ಕೆಲವೊಂದು ಕಂಪನಿಗಳು ವರ್ಷದಿಂದ ವರ್ಷಕ್ಕೆ ಡಿವಿಡೆಂಡ್ ಮೊತ್ತವನ್ನು ಹೆಚ್ಚಿಸುತ್ತ ಇರುತ್ತವೆ. ಇದರಿಂದಾಗಿ ಹೂಡಿಕೆದಾರರಿಗೆ ಆದಾಯ ವೃದ್ಧಿ ಮತ್ತು ಬಂಡವಾಳ ಹೆಚ್ಚಳದ ಲಾಭ ದೊರೆಯುತ್ತವೆ. (ಉದಾಹರಣೆಗೆ ಏಷ್ಯನ್ ಪೇಂಟ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಇತ್ಯಾದಿ)
* ಆರ್‌ಇಐಟಿ ಮತ್ತು ಇನ್ಐಟಿಗಳು: ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳು (ಆರ್‌ಇಐಟಿ) ಮತ್ತು ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳು (ಇನ್ವ್‌ಐಟಿಸ್) ನಿರಂತರ ಆದಾಯ ಒದಗಿಸುವ ವಿಶೇಷ ಹೂಡಿಕೆಯ ಮಾರ್ಗಗಳಾಗಿವೆ.
ಡಿವಿಡೆಂಡ್ ನೀಡುವ ಎಲ್ಲ ಷೇರುಗಳೂ ಹೂಡಿಕೆಗೆ ಯೋಗ್ಯವಲ್ಲ. ಹೂಡಿಕೆಗೆ ಮೊದಲು ಗಮನಿಸಬೇಕಾದ ಕೆಲವೊಂದು ಅಂಶಗಳು ಇಲ್ಲಿವೆ.
1. ಡಿವಿಡೆಂಡ್ ಪ್ರಮಾಣ: ಇದನ್ನು ಲೆಕ್ಕಹಾಕಲು ಒಂದು ಸೂತ್ರ ಇದೆ. ಪ್ರತಿ ಷೇರಿನ ಮೇಲಿನ ಡಿವಿಡೆಂಡ್ ಮೊತ್ತವನ್ನು ಪ್ರಸ್ತುತ ಷೇರು ಮೌಲ್ಯದಿಂದ ಭಾಗಿಸಲಾಗುತ್ತದೆ. ಆಗ ಸಿಗುವ ಮೊತ್ತವನ್ನು 100ರಿಂದ ಗುಣಿಸಿದಾಗ ಸಿಗುವ ಅಂಕಿಯನ್ನು ಡಿವಿಡೆಂಡ್ ಪ್ರಮಾಣ ಎನ್ನಲಾಗುತ್ತದೆ. [(ಪ್ರತಿ ಷೇರಿಗೆ ಸಿಗುವ ಡಿವಿಡೆಂಡ್ ಮೊತ್ತ/ಷೇರಿನ ಈಗಿನ ಮಾರುಕಟ್ಟೆ ಮೌಲ್ಯ)*100].
ಹೆಚ್ಚಿನ ಪ್ರಮಾಣದ ಡಿವಿಡೆಂಡ್ ಆದಾಯ ನೀಡುವ ಷೇರುಗಳು ಆಕರ್ಷಕವಾಗಿ ಕಂಡರೂ ಅವುಗಳಲ್ಲಿ ರಿಸ್ಕ್ ಕೂಡ ಇರುತ್ತದೆ. ಹೀಗಾಗಿ ಶೇ 2ರಿಂದ 5ರವರೆಗಿನ ಸುಸ್ಥಿರ ಡಿವಿಡೆಂಡ್ ಆದಾಯ ನೀಡುವ ಷೇರುಗಳಿಂದ ಹೂಡಿಕೆ ಆರಂಭಿಸುವುದು ಒಳ್ಳೆಯದು.
2. ಪಾವತಿ ಅನುಪಾತ: ಇದು ಕಂಪನಿಯು ತನ್ನ ಲಾಭದಲ್ಲಿ ಎಷ್ಟು ಪಾಲನ್ನು ಡಿವಿಡೆಂಡ್ ರೂಪದಲ್ಲಿ ಷೇರುದಾರರಿಗೆ ಪಾವತಿ ಮಾಡುತ್ತದೆ ಎಂಬುದನ್ನು ಹೇಳುತ್ತದೆ. ಶೇ 30ರಿಂದ ಶೇ 60ರವರೆಗಿನ ಪಾವತಿ ಅನುಪಾತವನ್ನು ಸಾಮಾನ್ಯವಾಗಿ ಆರೋಗ್ಯಕರ ಮಟ್ಟ ಎಂದು ಪರಿಗಣಿಸಲಾಗುತ್ತದೆ. ಶೇ 80ಕ್ಕಿಂತ ಈ ಅನುಪಾತ ಹೆಚ್ಚಿದ್ದರೆ ಡಿವಿಡೆಂಡ್ ಕಡಿಮೆ ಆಗುವ ಅಪಾಯವೂ ಇರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಡಿವಿಡೆಂಡ್ ಮೊತ್ತವನ್ನು ಕಂಪನಿಗಳು ಮೂರು ತಿಂಗಳಿಗೆ ಒಮ್ಮೆ, ವರ್ಷಕ್ಕೆ ಎರಡು ಬಾರಿ ಅಥವಾ ವಾರ್ಷಕ್ಕೆ ಒಮ್ಮೆ ನೀಡಬಹುದು.
3. ಡಿವಿಡೆಂಡ್ ಇತಿಹಾಸ: ಕಂಪನಿಯೊಂದು ಹಲವು ವರ್ಷಗಳಿಂದ ನಿರಂತರವಾಗಿ ಡಿವಿಡೆಂಡ್ ನೀಡುತ್ತಿದ್ದರೆ, ಅದರಲ್ಲೂ ನಿಯಮಿತವಾಗಿ ಡಿವಿಡೆಂಡ್ ಮೊತ್ತವನ್ನು ಹೆಚ್ಚು ಮಾಡುತ್ತ ಇದ್ದರೆ ಅದು ವಿಶ್ವಾಸಾರ್ಹತೆಯ ದ್ಯೋತಕ.
4. ಕಂಪನಿಯ ಮೂಲಭೂತ ಅಂಶಗಳು: ಕಂಪನಿಯ ವರಮಾನದಲ್ಲಿ ಹೆಚ್ಚಳ, ಅದು ಗಳಿಸುವ ಲಾಭದ ಪ್ರಮಾಣ ಚೆನ್ನಾಗಿ ಇರುವುದು, ಕಂಪನಿಯು ಪಡೆದಿರುವ ಸಾಲದ ಮೊತ್ತವು ತೀರಾ ಹೆಚ್ಚಿಗೆ ಇಲ್ಲದಿರುವುದು, ನಗದು ಹರಿವು ಚೆನ್ನಾಗಿ ಇರುವುದು ಡಿವಿಡೆಂಡ್ ಮೊತ್ತ ಸಿಗುವುದಕ್ಕೆ ಅಗತ್ಯವಾಗಿವೆ.
5. ಉದ್ಯಮದ ಸಾಮರ್ಥ್ಯ: ಎಫ್‌ಎಂಸಿಜಿ, ಫಾರ್ಮಾದಂಥ ಕ್ಷೇತ್ರಗಳಲ್ಲಿರುವ ಕಂಪನಿಗಳು
ಮಾರುಕಟ್ಟೆಯಲ್ಲಿ ಕುಸಿತ ಕಾಣುತ್ತಿರುವ ಅವಧಿಯಲ್ಲಿಯೂ ಉತ್ತಮ ಡಿವಿಡೆಂಡ್ ನೀಡಿ ವಿಶ್ವಾಸ ಹುಟ್ಟಿಸುತ್ತವೆ.
ಡಿವಿಡೆಂಡ್ ಹೂಡಿಕೆಗಳು ಅನೇಕ ಪ್ರಯೋಜನಗಳನ್ನು ಹೊಂದಿದ್ದರೂ ಇಲ್ಲಿ ಅಪಾಯಗಳು ಇಲ್ಲವೆಂದಲ್ಲ.
* ಡಿವಿಡೆಂಡ್ ಕಡಿತಗಳು: ಕಂಪನಿಗಳು ಕಷ್ಟದ ಸಮಯದಲ್ಲಿ ಡಿವಿಡೆಂಡ್ ಮೊತ್ತವನ್ನು ಕಡಿಮೆ ಮಾಡಬಹುದು ಅಥವಾ ಡಿವಿಡೆಂಡ್ ಪಾವತಿಯನ್ನು ಅವು ಸ್ಥಗಿತಗೊಳಿಸಬಹುದು. ಹೀಗಾದಾಗ ಹೂಡಿಕೆದಾರರು ಆದಾಯ ನಷ್ಟಕ್ಕೆ ಗುರಿಯಾಗಬೇಕಾಗುತ್ತದೆ.
* ಅಧಿಕ ಲಾಭಾಂಶದ ಗುರಿ: ಅಧಿಕ ಡಿವಿಡೆಂಡ್ ಪಾವತಿ ಅನುಪಾತ ಇರುವ ಕಂಪನಿಗಳ ಬಗ್ಗೆ ಎಚ್ಚರಿಕೆ ಕೂಡ ಬೇಕು. ಇಂತಹ ಕಂಪನಿಗಳು ಕೆಲವು ಸಂದರ್ಭಗಳಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರಬಹುದು.
* ಒಂದೇ ಕಡೆ ಹೆಚ್ಚು ಹೂಡಿಕೆ ಮಾಡುವುದು: ಡಿವಿಡೆಂಡ್ ನೀಡುವ ಷೇರುಗಳಲ್ಲಿಯೇ ಹೆಚ್ಚು ಹೂಡಿಕೆ ಮಾಡುವುದರಿಂದ ನಿಮ್ಮ ಪೋರ್ಟ್‌ಫೋಲಿಯೊ ಮೌಲ್ಯ ಹೆಚ್ಚಳದ ಸಾಧ್ಯತೆಗೆ ಮಿತಿ ಹಾಕಿದಂತೆ ಆಗುತ್ತದೆ. ಹಾಗಾಗಿ ಎಲ್ಲದರ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು.
* ಮಾರುಕಟ್ಟೆ ಮೌಲ್ಯವನ್ನು ನಿರ್ಲಕ್ಷಿಸುವುದು: ಅಧಿಕ ಮೌಲ್ಯದ ಡಿವಿಡೆಂಡ್ ಷೇರುಗಳನ್ನು ಖರೀದಿಸುವುದರಿಂದ ಡಿವಿಡೆಂಡ್ ಮೊತ್ತ ನಿಯಮಿತವಾಗಿ ದೊರಕಿದರೂ ಒಟ್ಟಾರೆ ಲಾಭ ಗಳಿಕೆ ಪ್ರಮಾಣ ಕಡಿಮೆಯಾಗುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ ನಿರಂತರ ಆದಾಯದ ಅನುಕೂಲದೊಂದಿಗೆ ಬಂಡವಾಳ ವೃದ್ಧಿಯ ಲಾಭ ಕೂಡ ಡಿವಿಡೆಂಡ್ ಹೂಡಿಕೆಯಿಂದ ಸಿಗುತ್ತದೆ. ಉತ್ತಮ ಪ್ರಮಾಣದಲ್ಲಿ ಡಿವಿಡೆಂಡ್ ನೀಡುವ ಷೇರುಗಳನ್ನು ಜಾಗರೂಕವಾಗಿ ಆಯ್ಕೆ ಮಾಡಿಕೊಂಡು, ಶಿಸ್ತುಬದ್ಧವಾಗಿ ಹೂಡಿಕೆ ಮಾಡಿ, ಡಿವಿಡೆಂಡ್ ರೂಪದಲ್ಲಿ ಸಿಗುವ ಆದಾಯವನ್ನು ಮರುಹೂಡಿಕೆ ಮಾಡುತ್ತ ಸಾಗಿದರೆ ಹೂಡಿಕೆದಾರರು ದೀರ್ಘಾವಧಿಯಲ್ಲಿ ಸದೃಢವಾದ ಹಾಗೂ ಸುಸ್ಥಿರ ಆದಾಯ ನೀಡಬಲ್ಲ ಪೋರ್ಟ್‌ಫೋಲಿಯೊ ಹೊಂದಬಹುದು.
ಆದರೆ ಡಿವಿಡೆಂಡ್ ಪಾವತಿಯು ಎಲ್ಲ ಸಂದರ್ಭಗಳಲ್ಲಿಯೂ ಇದ್ದೇ ಇರುತ್ತದೆ ಎಂದು ಖಾತರಿಯಾಗಿ ಹೇಳಲು ಆಗದು. ಸಂಕೀರ್ಣ ಸಂದರ್ಭಗಳಲ್ಲಿ ಅತ್ಯುತ್ತಮ ಕಂಪನಿಗಳೂ ಡಿವಿಡೆಂಡ್ ಮೊತ್ತವನ್ನು ಕಡಿತ ಮಾಡಿದ ಉದಾಹರಣೆಗಳಿವೆ. ಡಿವಿಡೆಂಡ್ ಷೇರುಗಳನ್ನು ಮೌಲ್ಯವರ್ಧನೆಯ ಸಾಧ್ಯತೆಯು ಅಧಿಕವಾಗಿರುವ ಷೇರುಗಳೊಂದಿಗೆ ಸಮತೋಲನದಲ್ಲಿ ಹೊಂದಿ, ಕಾಲಕಾಲಕ್ಕೆ ಪೋರ್ಟ್‌ಫೋಲಿಯೊ ಅವಲೋಕನ ನಡೆಸುತ್ತಿದ್ದರೆ ಆದಾಯವೂ ಸಿಗುತ್ತದೆ, ಬಂಡವಾಳ ವೃದ್ಧಿಯ ಪ್ರಯೋಜನವೂ ದೊರೆಯುತ್ತದೆ. ಅದು ಅರ್ಥಪೂರ್ಣವಾದ ಹೂಡಿಕೆ ಪ್ರಯಾಣ ಎನಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.