ADVERTISEMENT

ಷೇರುಪೇಟೆಗೆ ಉತ್ಸಾಹ ನೀಡದ ಆರ್‌ಬಿಐ ಪ್ರಕಟಣೆ: ರಿಲಯನ್ಸ್‌ಗೆ ಹೂಡಿಕೆಯ ಚೇತರಿಕೆ

ಏಜೆನ್ಸೀಸ್
Published 22 ಮೇ 2020, 7:40 IST
Last Updated 22 ಮೇ 2020, 7:40 IST
ಕರಡಿ ಹಿಡಿತದಲ್ಲಿ ಷೇರುಪೇಟೆ–ಸಾಂಕೇತಿಕ ಚಿತ್ರ
ಕರಡಿ ಹಿಡಿತದಲ್ಲಿ ಷೇರುಪೇಟೆ–ಸಾಂಕೇತಿಕ ಚಿತ್ರ   

ಮುಂಬೈ: ಇನ್ಫೊಸಿಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌ನಂತಹ ಅಧಿಕ ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿಗಳ ಷೇರುಗಳ ಖರೀದಿಯ ನಡುವೆಯೂ ಶುಕ್ರವಾರ ಷೇರುಪೇಟೆ ಸೂಚ್ಯಂಕಗಳು ಇಳಿಕೆಯಾಗಿವೆ. ಆರ್‌ಬಿಐ ರೆಪೊ ದರ ಕಡಿತ ಪ್ರಕಟಣೆ ಸಹ ಪರಿಣಾಮ ಬೀರಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ವಹಿವಾಟು ಆರಂಭದಲ್ಲಿಯೇ 250 ಅಂಶ ಇಳಿಯಿತು. ಆರ್‌ಬಿಐ ರೆಪೊ ದರ ಕಡಿತಗೊಳಿಸಿದ ಪ್ರಕಟಣೆಗೆ ಷೇರುಪೇಟೆಯಲ್ಲಿ ನಕಾರಾತ್ಮಕ ಸ್ಪಂದನೆ ಉಂಟಾಯಿತು. 12:40ಕ್ಕೆ ಸೆನ್ಸೆಕ್ಸ್‌ 323.67 ಅಂಶ ಕಡಿಮೆಯಾಗಿ 30,609.23 ಅಂಶ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 84.65 ಅಂಶ ಇಳಿದು 9,021.60 ಅಂಶಗಳಲ್ಲಿ ವಹಿವಾಟು ನಡೆದಿದೆ.

ಅಮೆರಿಕ ಮೂಲದ ಕೆಕೆಆರ್‌ ಹೂಡಿಕೆದಾರ ಸಂಸ್ಥೆ ರಿಲಯನ್ಸ್‌ ಇಂಡಸ್ಟ್ರೀಸ್‌ನ ಡಿಜಿಟಲ್‌ ಉದ್ಯಮದಲ್ಲಿ ₹11,367 ಕೋಟಿ ಹೂಡಿಕೆ ಮಾಡುವ ಮೂಲಕ ಶೇ 2.32ರಷ್ಟು ಪಾಲುದಾರಿಕೆ ಪಡೆದಿದೆ. ಕಳೆದ ಒಂದು ತಿಂಗಳಲ್ಲಿ ರಿಲಯನ್ಸ್‌ ಐದು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ₹78,562 ಕೋಟಿ ಸಂಗ್ರಹಿಸಿದ್ದು, ಸಾಲ ಮುಕ್ತಗೊಳ್ಳುವ ಪ್ರಯತ್ನದಲ್ಲಿದೆ. ಇದರಿಂದಾಗಿ ಷೇರುಪೇಟೆಯಲ್ಲಿ ಮಾರಾಟದ ಒತ್ತಡದ ನಡುವೆಯೂ ರಿಲಯನ್ಸ್‌ ಷೇರು ಗಳಿಕೆ ಕಂಡಿದೆ.

ADVERTISEMENT

ಅಲ್ಟ್ರಾಟೆಕ್‌ ಸಿಮೆಂಟ್‌, ಎಸ್‌ಬಿಐ, ಇನ್ಫೊಸಿಸ್‌, ಟೆಕ್‌ ಮಹೀಂದ್ರಾ ಷೇರುಗಳು ಅಲ್ಪ ಮಟ್ಟಿನ ಚೇತರಿಕೆ ಕಂಡಿವೆ. ಟಾಟಾ ಸ್ಟೀಲ್‌, ಎಚ್‌ಸಿಎಲ್‌ ಟೆಕ್‌, ಪವರ್‌ಗ್ರಿಡ್‌ ಹಾಗೂ ಎನ್‌ಟಿಪಿಸಿ ಷೇರುಗಳು ನಷ್ಟ ಅನುಭವಿಸಿವೆ.

ಗುರುವಾರದ ವಹಿವಾಟಿನಲ್ಲಿ ವಿದೇಶಿ ಹೂಡಿಕೆದಾರರು ₹258.73 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಕೋವಿಡ್–19 ಪ್ರಕರಣಗಳಲ್ಲಿ ಹೆಚ್ಚಳ ಹೂಡಿಕೆದಾರರಲ್ಲಿ ಆತಂಕ ಮುಂದುವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.