
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಬಳ್ಳಾರಿ ರಸ್ತೆಯ ಹೆಬ್ಬಾಳದಲ್ಲಿ ಮೇಲ್ಸೇತುವೆ ಪ್ರವೇಶಿಸುವ ಜಾಗದಲ್ಲಿ ಇರುವೆಗಳಂತೆ ನಿಂತಿರುವ ವಾಹನಗಳು
-ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆಯ ಲೂಪ್ ರ‍್ಯಾಂಪ್‌ನಲ್ಲಿ ಸಂಚಾರ ಆರಂಭವಾದ ಬಳಿಕ ಅಲ್ಲಿ ದಟ್ಟಣೆ ಕಡಿಮೆಯಾಗಿ ಮೇಖ್ರಿ ಸರ್ಕಲ್ ಕಡೆಗೆ ವಿಸ್ತರಣೆಗೊಂಡಿದೆ. ಮೇಲ್ಸೇತುವೆಯಲ್ಲಿ ವಾಹನಗಳು ಸುಗಮವಾಗಿ ಸಾಗಿದರೂ ಇಳಿಯವ ಪ್ರದೇಶದಲ್ಲಿ ವಿಪರೀತ ದಟ್ಟಣೆ ಉಂಟಾಗುತ್ತಿದೆ. ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ ಬಸ್ ನಿಲ್ಲಿಸಲೂ ಅವಕಾಶ ಸಿಗದಷ್ಟು ದಟ್ಟಣೆ ಇದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯ ಹೆಬ್ಬಾಳ ಮೇಲ್ಸೇತುವೆ ಮೇಲೆ ನಿತ್ಯ 4 ಲಕ್ಷಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಸರ್ವಿಸ್ ರಸ್ತೆ ಮಾತ್ರವಲ್ಲ, ಮೇಲ್ಸೇತುವೆಯಲ್ಲೂ ವಾಹನಗಳು ಸಾಗುವುದು ಕಷ್ಟವಾಗಿತ್ತು. ತಿಂಗಳ ಹಿಂದೆ ಎರಡನೇ ಲೂಪ್ ರ‍್ಯಾಂಪ್ ಸಂಚಾರಕ್ಕೆ ತೆರೆದುಕೊಂಡ ಬಳಿಕ ಇಲ್ಲಿ ದಟ್ಟಣೆಯ ಪ್ರಮಾಣವು ಶೇ 25ರಷ್ಟು ಕಡಿಮೆಯಾಗಿತ್ತು.
ಯಲಹಂಕ, ಸಹಕಾರನಗರ, ಜಕ್ಕೂರು, ತುಮಕೂರು ರಸ್ತೆಯ ವಾಹನಗಳು ನಗರ ಪ್ರವೇಶಿಸಲು ಇದರಿಂದ ಅನುಕೂಲ ಆಗಿದೆ. ಅಲ್ಲದೇ ಎಸ್ಟೀಮ್ ಮಾಲ್ ಮತ್ತು ತುಮಕೂರು ರಸ್ತೆಯಿಂದ ಬರುವ ವಾಹನ ಸವಾರರಿಗೆ ಮೇಖ್ರಿ ವೃತ್ತ ಪ್ರವೇಶಕ್ಕೂ ಸಹಕಾರಿಯಾಗಿದೆ. ಆದರೆ, ಮೇಲ್ಸೇತುವೆ ಮುಕ್ತಾಯಗೊಂಡು, ಸರ್ವಿಸ್ ರಸ್ತೆ ಸಂಪರ್ಕಿಸುವ ಸಿಬಿಐ ವೃತ್ತದ ಜಂಕ್ಷನ್ ಬಳಿ ವಾಹನಗಳು ಸರಾಗವಾಗಿ ಸಂಚರಿಸಲಾಗದೇ ದಟ್ಟಣೆಯಲ್ಲಿ ಸಿಲುಕುತ್ತಿವೆ.
ಸೋಮವಾರ, ಶುಕ್ರವಾರ ವಾಹನಗಳ ಸಂಚಾರ ತುಂಬಾ ಇರುತ್ತದೆ. ಮಂಗಳವಾರ ಮತ್ತು ಶನಿವಾರ ನಂತರದ ಸ್ಥಾನದಲ್ಲಿವೆ. ಬುಧವಾರ, ಗುರುವಾರ, ಭಾನುವಾರ ಮಾತ್ರ ದಟ್ಟಣೆ ಕಡಿಮೆ ಇರುತ್ತದೆ. ಲೂಪ್ ರ್‍ಯಾಂಪ್ ಒಳಗೊಂಡಂತೆ ಮೇಲ್ಸೇತುವೆಯಲ್ಲಿ ಬರುವ ವಾಹನಗಳು ಸಿಬಿಐ ವೃತ್ತದ ಜಂಕ್ಷನ್ ಬಳಿ ಇಳಿದ ಮೇಲೆ ಸಮಸ್ಯೆ ಮುಂದುವರಿಯುತ್ತಿದೆ. ಹರಸಾಹಸಪಟ್ಟರೂ ಪಾದಚಾರಿಗಳು ರಸ್ತೆ ದಾಟಲು ಸಾಧ್ಯವಾಗುತ್ತಿಲ್ಲ. ಕಿಲೋಮೀಟರ್‌ನಷ್ಟು ನಡೆದುಕೊಂಡು ಪಾದಚಾರಿ ಮೇಲ್ಸೇತುವೆಯತ್ತ ತಲುಪಿ ದಾಟುವಂತಾಗಿದೆ.
ಬ್ಯಾಪ್ಟಿಸ್ಟ್ ಆಸ್ಪತ್ರೆ ದಾಟಿ, ಗಂಗಾನಗರ, ಮೇಖ್ರಿ ಸರ್ಕಲ್ ಕಡೆಗೆ ಬರುವಾಗ ರಸ್ತೆಯಲ್ಲಿ ವಾಹನಗಳು ಜಲಾವೃತಗೊಂಡಂತೆ ತುಂಬಿರುತ್ತವೆ. ಮೇಖ್ರಿ ವೃತ್ತದಲ್ಲಿ ಎಡ, ಬಲಕ್ಕೆ ತಿರುಗುವ ವಾಹನಗಳು ಹೆಚ್ಚಾಗಿದ್ದು, ಇಲ್ಲಿ ವಾಹನಗಳು ಸಾಲುಗಟ್ಟಿ ನಿಂತು ಸಾಗುತ್ತವೆ.
‘ಈ ರಸ್ತೆಯಲ್ಲಿ ದಟ್ಟಣೆ ಅವಧಿಯಲ್ಲಿ ಪ್ರತಿ ಗಂಟೆಗೆ 50 ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಎರಡು ಕಿ.ಮೀ. ದಾಟಲು ಅರ್ಧ ತಾಸಿಗೂ ಹೆಚ್ಚು ಸಮಯ ಹಿಡಿಯುತ್ತಿತ್ತು. ಈಗ ಎರಡೂ ಕಡೆಗೆ ಲೂಪ್ ರ‍್ಯಾಂಪ್‌ಗಳು ತೆರೆದ ಬಳಿಕ ಸಂಚಾರದಲ್ಲಿ ಹಿಂದಿನಷ್ಟು ತೊಡಕು ಇಲ್ಲ. ಸಂಚಾರದ ವೇಗ ಎರಡು ಪಟ್ಟು ಹೆಚ್ಚಾಗಿದೆ. ಆದರೆ, ಯಾವುದಾದರೂ ಒಂದು ವಾಹನ ಕೆಟ್ಟು ನಿಂತರೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಬ್ಯಾಟರಾಯನಪುರ ದಾಟಿ ಮುಂದಿನವರೆಗೆ ಬ್ಲಾಕ್ ಆಗಿ ಬಿಡುತ್ತದೆ. ನಗರದ ಕಡೆಗೆ ಮೇಖ್ರಿ ಸರ್ಕಲ್, ಪ್ಯಾಲೆಸ್ ಗುಟ್ಟಹಳ್ಳಿವರೆಗೂ ವಾಹನಗಳು ನಿಂತು ಬಿಡುತ್ತವೆ. ಜಿಕೆವಿಕೆ ಕ್ರಾಸ್ ಮೂಲಕ ಜಕ್ಕೂರು ಕಡೆಗೆ ಹಾದುಹೋಗುವ ರಸ್ತೆಯಲ್ಲೂ ಇದರ ಪರಿಣಾಮ ಉಂಟಾಗುತ್ತದೆ. ಸಾಲದೆಂಬಂತೆ ಕೆ.ವಿ.ಜಯರಾಂ ರಸ್ತೆಯ ಪಕ್ಕದಲ್ಲಿ ಶನೈಶ್ಚರಸ್ವಾಮಿ ದೇವಾಲಯದ ಸಮೀಪ ಕೋಳಿ ಸಾಗಾಣಿಕೆ ವಾಹನಗಳನ್ನು ರಸ್ತೆ ಬದಿಯಲ್ಲೇ ನಿಲ್ಲಿಸುತ್ತಿರುವುದರಿಂದ ಜಕ್ಕೂರು ರಸ್ತೆಯಲ್ಲಿಯೂ ದಟ್ಟಣೆ ಹೆಚ್ಚಾಗಿದೆ’ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.
ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಸೇರಿದಂತೆ ಹಲವು ಭಾಗಗಳಿಂದ ನಗರಕ್ಕೆ ಬರುವ ನೂರಾರು ಬಸ್‌ಗಳು, ಸಾವಿರಾರು ಕಾರುಗಳು ಆಮೆಗತಿಯಲ್ಲಿ ಸಾಗುತ್ತವೆ ಎಂದು ವಿವರಿಸಿದರು.
ರೈಲು ಮೆಟ್ರೊ ರೈಲು ಉಪನಗರ ರೈಲು ಬಿಎಂಟಿಸಿ ಬಸ್‌ಗಳು ಹಾದು ಹೋಗುವ ಹೆಬ್ಬಾಳದಲ್ಲಿ ಬಹುಮಾದರಿ ಸಾರಿಗೆ ‘ಹಬ್’ ನಿರ್ಮಿಸಲು ಬಿಎಂಆರ್‌ಸಿಎಲ್ ಪ್ರಸ್ತಾವ ಸಲ್ಲಿಸಿ ವರ್ಷಗಳೇ ಕಳೆದಿವೆ. ಬಿಎಂಆರ್‌ಸಿಎಲ್ 45 ಎಕರೆ ಜಮೀನು ಕೇಳಿದ್ದರೆ 10 ಎಕರೆ ನೀಡುವ ಬಗ್ಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿ ಚರ್ಚೆಯಾಗಿತ್ತು. ಬಳಿಕ ಈ ಪ್ರಸ್ತಾವ ಅಲ್ಲಿಗೆ ನಿಂತಿದೆ. ಹೆಬ್ಬಾಳ ಮತ್ತು ಹೆಬ್ಬಾಳ ಅಮಾನಿಕೆರೆಯಲ್ಲಿ ಬಹುಮಾದರಿ ಸಾರಿಗೆ ಸಂಪರ್ಕ ಕೇಂದ್ರ (ಹಬ್) ನಿರ್ಮಿಸಿದರೆ ವಾಹನ ದಟ್ಟಣೆ ಕಡಿಮೆಯಾಗಲಿದೆ. ಜಮೀನು ಒದಗಿಸಿಕೊಟ್ಟರೆ ಬಹು ಹಂತದ ಕಾರು ಪಾರ್ಕಿಂಗ್ ಆಧುನಿಕ ಡಿಪೊ ಮತ್ತು ಇತರ ಸಂಬಂಧಿತ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಪ್ರಸ್ತಾವದಲ್ಲಿ ತಿಳಿಸಿತ್ತು. ಆದರೆ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಸಂಚಾರ ದಟ್ಟಣೆಯ ಸಮಸ್ಯೆ ಮುಂದುವರಿದಿದೆ ಎಂದು ಸ್ಥಳೀಯರು ದೂರಿದರು.
ಸಮಸ್ಯೆ ಬಗೆಹರಿಸುವುದು ಹೇಗೆ ಎಂದು ರಾಜಕಾರಣಿಗಳು ಯೋಚಿಸುತ್ತಿಲ್ಲ. ದುಡ್ಡು ಹೇಗೆ ದೋಚಬಹುದು ಎಂದು ಯೋಚಿಸುತ್ತಾರೆ. ಹೆಬ್ಬಾಳದಿಂದ ಮೇಖ್ರಿ ಸರ್ಕಲ್‌ವರೆಗೆ ಮೇಲ್ಸೇತುವೆ ನಿರ್ಮಿಸಿದರೆ ಸಮಸ್ಯೆ ಕಡಿಮೆಯಾಗಲಿದೆ. ಆದರೆ, ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಇದು ಬೇಕಾಗಿಲ್ಲ. ಅವರು ಸುರಂಗ ಮಾರ್ಗ ಎಂದು ಜನರಿಗೆ ಉಪಯೋಗವಾಗದ ಯೋಜನೆಗಳ ಬಗ್ಗೆ ಯೋಚಿಸುತ್ತಾರೆ. ರಿಂಗ್ ರೋಡ್‌ನಿಂದಲೂ ವಾಹನಗಳು ಬರುತ್ತವೆ. ಬಸ್ ನಿಲ್ಲಲೂ ಜಾಗವಿಲ್ಲದಂತಾಗಿದೆ. ಹಿರಿಯ ನಾಗರಿಕರು ರಸ್ತೆ ದಾಟಲು ಪಾದಚಾರಿ ಮೇಲ್ಸೇತುವೆ ಎಲ್ಲಿದೆ ಎಂದು ಹುಡುಕಿಕೊಂಡು ಬರಬೇಕಿದೆ. ರಸ್ತೆ ದಾಟುವುದಕ್ಕಾಗಿ ನಾನು ಒಂದು ಕೀ. ಮೀ. ದೂರದಿಂದ ನಡೆದುಕೊಂಡು ಬಂದೆ. ಈಗಿನ ಸ್ಥಿತಿ ನೋಡಿದರೆ ದಶಕ ಕಳೆದರೂ ಸಮಸ್ಯೆಗಳು ಬಗೆಹರಿಯುವುದಿಲ್ಲ.-ಸಿದ್ದಲಿಂಗಯ್ಯ, ಶಿವಶಂಕರ ಬ್ಲಾಕ್, ಹೆಬ್ಬಾಳ
ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ನಿತ್ಯ ದಟ್ಟಣೆ ಇರುತ್ತದೆ. ಸಂಜೆ 4ರಿಂದ ರಾತ್ರಿ 9ರವರೆಗೂ ಇದೇ ರೀತಿ ಇರುತ್ತದೆ. ಇಲ್ಲಿಂದ ಮುಂದಕ್ಕೆ ಇರುವುದು ಸರ್ಕಾರಿ ಜಾಗ. ಆದರೆ ಹಿಂದೆ ಎಂಜಿನಿಯರ್‌ಗಳು ಮೇಲ್ಸೇತುವೆ ನಿರ್ಮಿಸುವ ಯೋಜನೆಯನ್ನು ರೂಪಿಸದೇ ಇದ್ದಿದ್ದರಿಂದ ಸಮಸ್ಯೆಯಾಗಿದೆ. ಮಳೆಗಾಲದಲ್ಲಿ ಇಲ್ಲಿ ನೀರು ನಿಂತು ವಾಹನಗಳು ಸಂಚರಿಸುವುದೇ ಕಷ್ಟವಾಗಿ ಬಿಡುತ್ತದೆ. ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆ ಮಾಡಿದರೆ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.-ಜಿ.ಎಂ. ಮಹಾದೇವಪ್ಪ, ಹಿರಿಯ ಕಮಾಂಡರ್ ಗೃಹರಕ್ಷಕ ದಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.