ADVERTISEMENT

ಬೆಂಗಳೂರು ಬಿಟ್ಟು ಹೋಗುವುದಿಲ್ಲ: ಬ್ಲ್ಯಾಕ್‌ಬಕ್‌ ಸಿಇಒ ರಾಜೇಶ್‌ ಯಬಾಜಿ ಸ್ಪಷ್ಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2025, 2:55 IST
Last Updated 19 ಸೆಪ್ಟೆಂಬರ್ 2025, 2:55 IST
<div class="paragraphs"><p>ರಾಜೇಶ್‌ ಯಬಾಜಿ</p></div>

ರಾಜೇಶ್‌ ಯಬಾಜಿ

   

(ಚಿತ್ರ ಕೃಪೆ: X/@YABAJI)

ಬೆಂಗಳೂರು: 'ತಮ್ಮ ಸಂಸ್ಥೆಯು ಬೆಂಗಳೂರು ಬಿಟ್ಟು ಹೋಗುವುದಿಲ್ಲ' ಎಂದು ಆನ್‌ಲೈನ್‌ ಲಾಜಿಸ್ಟಿಕ್‌ ಪ್ಲಾಟ್‌ಫಾರ್ಮ್‌ 'ಬ್ಲ್ಯಾಕ್‌ಬಕ್‌' ಸಹ ಸ್ಥಾಪಕ ಮತ್ತು ಸಿಇಒ ರಾಜೇಶ್‌ ಯಬಾಜಿ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಈ ಮೊದಲು ಬೆಂಗಳೂರಿನಲ್ಲಿ ಹದಗೆಡುತ್ತಿರುವ ಮೂಲಸೌಕರ್ಯ ಮತ್ತು ಪ್ರಯಾಣ ಸಮಸ್ಯೆಗಳ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಯಬಾಜಿ ಅಸಮಾಧಾನ ವ್ಯಕ್ತಪಡಿಸಿದ್ದರು.

'ಬೆಂಗಳೂರಿನ ಹೊರವರ್ತುಲ ರಸ್ತೆಯ (ಒಆರ್‌ಆರ್) ಬೆಳ್ಳಂದೂರಿನಲ್ಲಿ ನಮ್ಮ ಕಚೇರಿಯಿದೆ. ಗುಂಡಿ ಬಿದ್ದ ರಸ್ತೆಗಳು, ವಿಪರೀತ ದೂಳಿನಿಂದಾಗಿ ಕಚೇರಿಗೆ ಬರಲು ಸಹೋದ್ಯೋಗಿಗಳು ನಿತ್ಯ ಒಂದೂವರೆ ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕಂಪನಿಯನ್ನು ಇಲ್ಲಿಂದ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.

ಯಬಾಜಿ ಅವರ ಹೇಳಿಕೆ ಬೆನ್ನಲ್ಲೇ ಉದ್ಯಮಿ ಮೋಹನ್‌ ದಾಸ್‌ ಪೈ, ಬಯೊಕಾನ್‌ನ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಸೇರಿದಂತೆ ಪ್ರಮುಖ ಉದ್ಯಮಿಗಳು ನಗರದಲ್ಲಿನ ಮೂಲಸೌಕರ್ಯಗಳ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ್ದರು. ಅಲ್ಲದೆ ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದರು.

ಈಗ ಸ್ಪಷ್ಟನೆ ನೀಡಿರುವ ರಾಜೇಶ್ ಯಬಾಜಿ, 'ನಮ್ಮ ಕಂಪನಿ ಬೆಂಗಳೂರು ನಗರವನ್ನು ತೊರೆಯುತ್ತಿಲ್ಲ, ಸ್ಥಳಾಂತರಗೊಳ್ಳುತ್ತಿದೆ ಅಷ್ಟೇ. ನಾವು ನಗರದಲ್ಲೇ ಇನ್ನಷ್ಟು ವಿಸ್ತರಣೆ ಮಾಡಲಿದ್ದೇವೆ' ಎಂದು ಸ್ಪಷ್ಟನೆ ನೀಡಿದ್ದಾರೆ.

'2015ರಲ್ಲಿ ಕೋರಮಂಗಲದ ಸೋನಿ ಸಿಗ್ನಲ್‌ ಸಮೀಪ 'ಬ್ಲ್ಯಾಕ್‌ಬಕ್‌' ತನ್ನ ಕಚೇರಿಯನ್ನು ಆರಂಭಿಸಿತು. ನಮ್ಮ ತಂಡ ವಿಸ್ತರಿಸಿದಂತೆ ಉತ್ತಮ ಸೌಲಭ್ಯಕ್ಕಾಗಿ 2016ರಲ್ಲಿ ಬೆಳ್ಳಂದೂರಿನ ಹೊರ ವರ್ತುಲ ರಸ್ತೆಯ ಸಮೀಪಕ್ಕೆ ಸ್ಥಳಾಂತರಗೊಂಡೆವು. ಕಂಪನಿ ಬೆಳೆಯಲು ಎಲ್ಲ ಸಹಾಯವನ್ನು ಬೆಂಗಳೂರಿನ ನಗರ, ಕರ್ನಾಟಕ ಸರ್ಕಾರ ಮಾಡಿಕೊಟ್ಟಿದೆ. ಆ ಮೂಲಕ ದೇಶದ ಟ್ರಕ್ಕಿಂಗ್ ವ್ಯವಸ್ಥೆಯಲ್ಲಿ ಪರಿಣಾಮ ಬೀರಿದೆ' ಎಂದು ಉಲ್ಲೇಖಿಸಿದ್ದಾರೆ.

'ಕಳೆದೊಂದು ದಶಕದಲ್ಲಿ ಕರ್ನಾಟಕ ತಂತ್ರಜ್ಞಾನ ವ್ಯವಸ್ಥೆಯ ಫಲಾನುಭವಿಗಳಲ್ಲಿ ಒಂದಾಗಿ ನಮಗೆ ಸಾಧನೆ ಮಾಡಲು ಬೆಂಗಳೂರು ನಗರವು ಹೇಗೆ ಸಹಕಾರಿಯಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಇನ್ನು ಮುಂದೆಯೂ ನಮ್ಮ ಸಾಮರ್ಥ್ಯವನ್ನು ಅನಾವರಣ ಮಾಡಲು ನಗರದ ಮಹತ್ವವನ್ನು ಅರಿತುಕೊಂಡಿದ್ದೇವೆ. ಹಾಗಾಗಿ ಸಂಸ್ಥೆಯು ನಗರ ಬಿಟ್ಟು ಹೋಗಲು ಯೋಚಿಸುತ್ತಿದೆ ಎಂಬ ಮಾಧ್ಯಮಗಳ ವರದಿಯನ್ನು ನಿರಾಕರಿಸುತ್ತೇವೆ. ನಾವು ನಗರದಲ್ಲೇ ಬೇರೆಡೆಗೆ ಸ್ಥಳಾಂತರಗೊಳ್ಳುತ್ತೇವೆ. ಇದು ಸುಲಭವಾಗಿ ಹೋಗಿ ಬರಲು ಉದ್ಯೋಗಿಗಳಿಗೆ ನೆರವಾಗಲಿದೆ. ನಾವು ಅದನ್ನು ಮಾಡುವಾಗ ಹೆಚ್ಚಿನ ಕಾರ್ಯಾಚರಣೆಯನ್ನು ಬೆಳ್ಳಂದೂರಿನಲ್ಲೇ ಮುಂದುವರಿಯಲಿದೆ ಎಂದು ಹೇಳಲು ಬಯಸುತ್ತೇವೆ' ಎಂದು ತಿಳಿಸಿದ್ದಾರೆ.

'ಬೆಂಗಳೂರಿನಲ್ಲಿ ನಾವು ಮುಂದುವರಿಯುವುದಷ್ಟೇ ಅಲ್ಲದೆ ನಮ್ಮ ಸಾಮರ್ಥ್ಯವನ್ನು ವಿಸ್ತರಿಸಲಿದ್ದೇವೆ. ಬೆಂಗಳೂರು ಎಂದಿಗೂ ನಮ್ಮ ನೆಲೆಯಾಗಿದೆ. ನಮ್ಮ ಅಗತ್ಯಗಳು ಮತ್ತು ಸಮಸ್ಯೆಗಳನ್ನು ಸರ್ಕಾರ, ಅಧಿಕಾರಿಗಳಿಗೆ ತಿಳಿಸಿ, ಅವುಗಳನ್ನು ಬಗೆಹರಿಸಿಕೊಳ್ಳಲು ನೆರವು ಪಡೆಯುತ್ತೇವೆ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.